ಪುರಾಣ ಪ್ರಸಿದ್ಧವೂ, ಪವಿತ್ರವೂ ಆದ ಶ್ರೀ ಆದಿಚುಂಚನಗಿರಿ ಕ್ಷೇತ್ರವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕಿನಲ್ಲಿದೆ. ಇದು ಬೆಂಗಳೂರಿನಿಂದ 110 ಕಿಲೋಮೀಟರ್ ದೂರದಲ್ಲಿದೆ. ಬೆಂಗಳೂರಿನಿಂದ ಮಂಗಳೂರು ರಾ.ಹೆ.47 ರಲ್ಲಿ ಸಾಗಿ ಬೆಳ್ಳೂರು ಕ್ರಾಸ್‍ಗೆ ತಲುಪಿದರೆ, ಅಲ್ಲಿಂದ ಸುಮಾರು 08 ಕಿ.ಮೀ. ಅಂತರದಲ್ಲಿ ಆದಿಚುಂಚನಗಿರಿಯ ಬೆಟ್ಟ ಸಿಗುತ್ತದೆ. ಮೈಸೂರಿನಿಂದ ತುಮಕೂರಿಗೆ ಹೋಗುವ ಹೆದ್ದಾರಿಯಲ್ಲಿ ಬೆಳ್ಳೂರಿಗೆ 2 ಮೈಲಿಗಳ ದೂರದಲ್ಲಿ ಚುಂಚನಹಳ್ಳಿಯೆಂಬ ಚಿಕ್ಕ ಗ್ರಾಮವು ಚುಂಚನಗಿರಿಯ ತಪ್ಪಲಿನಲ್ಲಿದೆ. ಉತ್ತರದಕ್ಷಿಣವಾಗಿ ಹಬ್ಬಿರುವ ಕಲ್ಲು-ಬಂಡೆಗಳಿಂದ ಕೂಡಿದ ಈ ಗಿರಿಯು ಸಮುದ್ರ ಮಟ್ಟದಿಂದ ಸುಮಾರು 3221 ಅಡಿ ಎತ್ತರವಾಗಿದೆ. ಹಸಿರು ಕಾನನಗಳಿಂದ ಕೂಡಿ, ರಮಣೀಯವೂ, ಪ್ರಶಾಂತವೂ ಆದ ಈ ಕ್ಷೇತ್ರವು ಪರಶಿವನ ತಪೋಭೂಮಿಯಾಗಿದ್ದಿತೆಂದು ಪುರಾಣ ಮತ್ತು ಜನಪದ ಸಾಹಿತ್ಯದಿಂದ ತಿಳಿದುಬರುತ್ತದೆ. ಗಂಗಾಧರೇಶ್ವರನು ಇಲ್ಲಿಯ ಅಧಿದೇವತೆ. ಕಾಲಭೈರವೇಶ್ವರನು ಇಲ್ಲಿಯ ಕ್ಷೇತ್ರಪಾಲಕನು. ಮಠವು ಒಂದು ಬೆಟ್ಟದ ಮೇಲೆ ಇದ್ದು ಬೆಟ್ಟದ ಶಿಖರವನ್ನು ಆಕಾಶಭೈರವ ಎನ್ನುತ್ತಾರೆ. ಇಲ್ಲಿರುವ ಪವಿತ್ರ ಹೊಂಡವನ್ನು ಬಿಂದುಸರೋವರ ಎಂದು ಕರೆಯುತ್ತಾರೆ. ಈ ದೇವಸ್ಥಾನದಲ್ಲಿ ಕಾಲ ಭೈರವನ ವಾಹನವಾದ ಶ್ವಾನಗಳಿಗೆ ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ಎರಡು ಬಾರಿ ಪೂಜೆ ಮಾಡಲಾಗುತ್ತದೆ. ಈ ಕ್ಷೇತ್ರದ ಸುತ್ತಲೂ ಪ್ರಸಿದ್ಧ ಯಾತ್ರಾ ಸ್ಥಳಗಳಾದ ಶ್ರವಣಬೆಳಗೊಳದ ಗೊಮ್ಮಟೇಶ್ವರ ಕ್ಷೇತ್ರ, ಎಡೆಯೂರಿನ ಸಿದ್ಧಲಿಂಗೇಶ್ವರ ಕ್ಷೇತ್ರ, ಚುಂಚನಕಟ್ಟೆ ಶ್ರೀ ರಾಮಕ್ಷೇತ್ರ, ಮೇಲುಕೋಟೆ ಚೆಲುವರಾಯಸ್ವಾಮಿ ಕ್ಷೇತ್ರ, ಹಾಲ್ತಿಯ ಪರಶುರಾಮ ಕ್ಷೇತ್ರಗಳು ಪುಣ್ಯಕ್ಷೇತ್ರಗಳಾಗಿದ್ದು, ಚುಂಚನಗಿರಿ ಕ್ಷೇತ್ರವು ಮಧ್ಯಭಾಗದಲ್ಲಿರುವ, ಯಾತ್ರಾರ್ಥಿಗಳ ಪವಿತ್ರ ಪುಣ್ಯಕ್ಷೇತ್ರವಾಗಿದೆ. ಶ್ರೀ ಆದಿಚುಂಚನಗಿರಿಯು ಅತ್ಯಂತ ಪ್ರಾಚೀನವೂ, ಪವಿತ್ರವೂ ಆದ ಮಹಾ ಧರ್ಮಕ್ಷೇತ್ರ ಹಾಗೂ ತಪೋಭೂಮಿಯಾಗಿದ್ದು, ಸುಮಾರು 2000 ವರ್ಷಗಳಿಗಿಂತಲೂ ಹಿಂದಿನ ಇತಿಹಾಸ ಹೊಂದಿದೆ. ಈ ಗಿರಿಯು ಮಯೂರಗಳ ತಾಣವಾಗಿದ್ದು, ’ಮಯೂರವನ’ ಎಂದು ಕರೆಯಲ್ಪಟ್ಟು, ಪ್ರಶಾಂತ ವಾತಾವರಣದಿಂದ ಕೂಡಿದೆ. ಪ್ರಾಚೀನ ಕಾಲದಿಂದಲೂ ಸಿದ್ಧರು, ಸಂತರು, ಸಾಧುಗಳು, ಋಷಿಗಳು, ಯೋಗಿಗಳು ಮತ್ತು ತಪಸ್ವಿಗಳು ಇಲ್ಲಿ ಅನುಷ್ಠಾನ ಮಾಡಿ ಜೀವನದ ಪರಮ ಗುರಿಯನ್ನು ಸಾಸಿದ್ದಾರೆ. ಪುರಾಣದಲ್ಲಿ ಉಕ್ತವಾಗಿರುವಂತೆ ಶ್ರೀ ಪೀಠವು ಸ್ಥಾಪನೆಯಾದುದು ತ್ರೇತಾಯುಗದಲ್ಲಿ. ಪರಮೇಶ್ವರನೇ ಈ ಪೀಠದ ಸ್ಥಾಪಕ. ಆ ಪ್ರಕಾರ ಈ ಕ್ಷೇತ್ರವು ಪ್ರಾಚೀನವಾದುದೆಂದು ತಿಳಿಯಬಹುದು.