ಬೆಂಗಳೂರು : ಲೇವಾದೇವಿ ಕಾಯ್ದೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಪ್ರಕರಣ ದಾಖಲಿಸಿದೆ. ಸಚಿವರನ್ನು ಬಂಧಿಸಿದರೆ ಮೈತ್ರಿ ಸರ್ಕಾರಕ್ಕೆ ಮುಜುಗರ ಎದುರಾಗಲಿದೆ.

ಶಿವಕುಮಾರ್ ಮತ್ತು ಅವರ ವ್ಯವಹಾರ ಪಾಲುದಾರರಾದ ಸಚಿನ್‌ ನಾರಾಯಣ್‌, ಶರ್ಮಾ ಟ್ರಾನ್ಸ್‌ಪೋರ್ಟ್‌ನ ಸುನೀಲ್‌ ಕುಮಾರ್‌ ಶರ್ಮಾ, ದೆಹಲಿ ಕರ್ನಾಟಕ ಭವನದ ನೌಕರ ಆಂಜನೇಯ ಹಾಗೂ ಅಲ್ಲಿನ ಸುಖದೇವ್‌ ವಿಹಾರದ ನಿವಾಸಿ ರಾಜೇಂದ್ರ ಅವರ ವಿರುದ್ಧವೂ ಇಸಿಐಆರ್ (ಜಾರಿ ಪ್ರಕರಣ ಮಾಹಿತಿ ವರದಿ) ಪ್ರಕರಣ ದಾಖಲಾಗಿದೆ. ನಿರೀಕ್ಷಣಾ ಜಾಮೀನಿಗೆ ಶಿವಕುಮಾರ್ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.

ಇವೇ ಆರೋಪಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಇಲ್ಲಿನ ವಿಶೇಷ ಆರ್ಥಿಕ ವಿಚಾರಣಾ ನ್ಯಾಯಾಲಯದಲ್ಲಿ ಈಗಾಗಲೇ 33 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಕಳೆದ ವಾರವಷ್ಟೇ ಎಲ್ಲರಿಗೂ ಜಾಮೀನು ದೊರೆತಿದೆ. ದೆಹಲಿಯ ಆರ್‌.ಕೆ.ಪುರಂನ ಮನೆ ಮತ್ತು ಸಫ್ದರ್‌ಜಂಗ್‌ ಎನ್‌ಕ್ಲೇವ್‌ ಫ್ಲ್ಯಾಟ್‌ಗಳಿಂದ ಐ.ಟಿ ಅಧಿಕಾರಿಗಳು ವಶಪಡಿಸಿಕೊಂಡಿರುವ  ರೂ 8.60 ಕೋಟಿ ಹಣಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

‘ಶಿವಕುಮಾರ್‌, ಅವರ ಆಪ್ತರು ಹಣದ ಮೂಲ ಕುರಿತು ವಿಭಿನ್ನ ಹೇಳಿಕೆ ನೀಡಿದ್ದಾರೆ. ಹಣ ಸಚಿವರದ್ದು ಎಂದು ಆಂಜನೇಯ ಹೇಳಿದ್ದಾರೆ. ಇದು ತಮಗೆ ಸೇರಿದ್ದು ಎಂದು ಶರ್ಮಾ ತಿಳಿಸಿದ್ದಾರೆ. ಈ ಹಣದಲ್ಲಿ ಭಾಗಶಃ ಕೃಷಿಯಿಂದ ಬಂದ ಆದಾಯ ಎಂದು ಶಿವಕುಮಾರ್‌ ವಿವರಿಸಿದ್ದಾರೆ’ ಎಂದು ಐ.ಟಿ ಸ್ಪಷ್ಟಪಡಿಸಿದೆ. ಈ ಪ್ರಕರಣ ಆಧರಿಸಿಯೇ ಇ.ಡಿ ಇಸಿಐಆರ್‌ ದಾಖಲಿಸಿದೆ.

‘ಸುನೀಲ್‌ ಕುಮಾರ್‌ ಶರ್ಮಾ ದೆಹಲಿ ಅಥವಾ ಸುತ್ತಮುತ್ತಲ ಸ್ಥಳಗಳಲ್ಲಿ ಯಾವುದೇ ವ್ಯವಹಾರ ನಡೆಸುತ್ತಿಲ್ಲ. ಅವರಿಗೆ ಸೇರಿದ ಫ್ಲ್ಯಾಟ್‌ನಿಂದ ವಶಪಡಿಸಿಕೊಂಡಿರುವ ರೂ  6.68 ಕೋಟಿಯನ್ನು ಬೆಂಗಳೂರಿನಿಂದ ಹವಾಲಾ ಮಾರ್ಗದಲ್ಲಿ ಸಾಗಿಸಲಾಗಿದೆ. ಹೇಗೆ ಮತ್ತು ಏಕೆ ಕಳುಹಿಸಲಾಗಿದೆ ಎಂಬ ಮಾಹಿತಿಯನ್ನು ಅವರು ನೀಡುತ್ತಿಲ್ಲ’ ಎಂದೂ ಆದಾಯ ತೆರಿಗೆ ಇಲಾಖೆ ದೂರಿದೆ.

‘ಐ.ಟಿ ದಾಳಿ ವೇಳೆ ಸಿಕ್ಕಿರುವ ಡೈರಿಯಲ್ಲಿ, ಹಣಕ್ಕೆ ಕೆ.ಜಿ ಎಂಬ ಸಂಕೇತಾಕ್ಷರ ಬಳಸಲಾಗಿದೆ’ ಎಂದೂ ಐ.ಟಿ ತಿಳಿಸಿದೆ. ಈ ಎಲ್ಲ ಅಂಶಗಳನ್ನು ಕುರಿತು ಇ.ಡಿ ತನಿಖೆ ನಡೆಸಲಿದೆ ಎಂದೂ ಮೂಲಗಳು ವಿವರಿಸಿವೆ.

ಗುಜರಾತ್‌ ವಿಧಾನಸಭೆಯಿಂದ ರಾಜ್ಯಸಭೆಗೆ ಕಳೆದ ವರ್ಷ ನಡೆದ ಚುನಾವಣೆ ಸಮಯದಲ್ಲಿ ಶಿವಕುಮಾರ್‌, ಅಲ್ಲಿನ ಕಾಂಗ್ರೆಸ್‌ ಶಾಸಕರನ್ನು ಕರೆತಂದು ಬಿಡದಿ ಬಳಿಯ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಇಟ್ಟಿದ್ದರು. ಅದೇ ಸಂದರ್ಭದಲ್ಲಿ ಐ.ಟಿ ಅಧಿಕಾರಿಗಳು ರೆಸಾರ್ಟ್‌, ಸಚಿವರ ಸದಾಶಿವ ನಗರ ಮನೆ ಮೇಲೆಯೂ ದಾಳಿ ನಡೆಸಿದ್ದರು. ಆನಂತರ ದೆಹಲಿಯ ವಿವಿಧ ಕಡೆಗಳಲ್ಲೂ ದಾಳಿ ನಡೆದಿತ್ತು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಶಿವಕುಮಾರ್ ಅವರ ಮೊಬೈಲ್‌ಗೆ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ.

ನ್ಯೂಸ್ ರೂಂ, ಮುಂದೇನಾಗಬಹುದು?

ಶಿವಕುಮಾರ್‌ ಅವರನ್ನು ಇ.ಡಿ ಅಧಿಕಾರಿಗಳು ಬಂಧಿಸಬಹುದು

ಬಂಧನವಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಬಹುದು

ಸಚಿವರ ವಿರುದ್ಧದ ಪ್ರಕರಣವನ್ನು ಬಿಜೆಪಿ ರಾಜಕೀಯ ಅಸ್ತ್ರವಾಗಿ ಬಳಸಬಹುದು. ಈ ಬೆಳವಣಿಗೆಯಿಂದ ಜೆಡಿಎಸ್‌– ಕಾಂಗ್ರೆಸ್‌ ಸರ್ಕಾರವೂ ಇಕ್ಕಟ್ಟಿಗೆ ಸಿಲುಕಬಹುದು

ಐ.ಟಿ, ಇ.ಡಿ ಕಿರುಕುಳ ನೀಡುವ ಸಂಸ್ಥೆಗಳಲ್ಲ: ರಾಜನಾಥ ಸಿಂಗ್

‘ಆದಾಯ ತೆರಿಗೆ (ಐಟಿ) ಇಲಾಖೆ, ಜಾರಿ ನಿರ್ದೇಶನಾಲಯ (ಇ.ಡಿ) ಯಾರಿಗೂ ಕಿರುಕುಳ ಕೊಡಲು ಇರುವ ತನಿಖಾ ಸಂಸ್ಥೆಗಳಲ್ಲ’ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಸ್ಪಷ್ಟಪಡಿಸಿದರು.

‘ಸಚಿವ ಶಿವಕುಮಾರ್‌ ಅವರಿಗೆ ಐ.ಟಿ, ಇ.ಡಿ ಮೂಲಕ ಕಿರುಕುಳ ನೀಡಲಾಗುತ್ತಿದೆ’ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ‘ಈ ರೀತಿಯ ಆರೋಪಗಳನ್ನು ಮಾಡುವುದು ಸರಿಯಲ್ಲ’ ಎಂದರು.

‘ಯಾರನ್ನು ಬಂಧಿಸಬೇಕು, ಯಾರನ್ನು ವಿಚಾರಣೆಗೆ ಒಳಪಡಿಸಬೇಕು ಎಂಬುದು ಐ.ಟಿ, ಇ.ಡಿಯಂತಹ ಸ್ವಾಯತ್ತ ಸಂಸ್ಥೆಗಳಿಗೆ ಬಿಟ್ಟ ವಿಷಯ. ಇದರಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಈ ಬಗ್ಗೆ ಕಾಂಗ್ರೆಸ್ ಸುಮ್ಮನೆ ಆರೋಪ ಮಾಡುತ್ತಿದೆ’ ಎಂದರು.

Please follow and like us:
0
http://bp9news.com/wp-content/uploads/2018/09/dk-shiva-kumar-1.pnghttp://bp9news.com/wp-content/uploads/2018/09/dk-shiva-kumar-1-150x150.pngBP9 Bureauಪ್ರಮುಖರಾಜಕೀಯರಾಷ್ಟ್ರೀಯಬೆಂಗಳೂರು : ಲೇವಾದೇವಿ ಕಾಯ್ದೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಪ್ರಕರಣ ದಾಖಲಿಸಿದೆ. ಸಚಿವರನ್ನು ಬಂಧಿಸಿದರೆ ಮೈತ್ರಿ ಸರ್ಕಾರಕ್ಕೆ ಮುಜುಗರ ಎದುರಾಗಲಿದೆ. ಶಿವಕುಮಾರ್ ಮತ್ತು ಅವರ ವ್ಯವಹಾರ ಪಾಲುದಾರರಾದ ಸಚಿನ್‌ ನಾರಾಯಣ್‌, ಶರ್ಮಾ ಟ್ರಾನ್ಸ್‌ಪೋರ್ಟ್‌ನ ಸುನೀಲ್‌ ಕುಮಾರ್‌ ಶರ್ಮಾ, ದೆಹಲಿ ಕರ್ನಾಟಕ ಭವನದ ನೌಕರ ಆಂಜನೇಯ ಹಾಗೂ ಅಲ್ಲಿನ ಸುಖದೇವ್‌ ವಿಹಾರದ ನಿವಾಸಿ ರಾಜೇಂದ್ರ ಅವರ...Kannada News Portal