ಬೆಂಗಳೂರು : ವರಮಹಾಲಕ್ಷ್ಮಿ ದಿನ ಪೂಜೆ ಹೆಸರೇ ಸೂಚಿಸುವಂತೆ ಲಕ್ಷ್ಮಿದೇವಿಯನ್ನು ಪೂಜಿಸುವ ದಿನ. ಶ್ರಾವಣ ಮಾಸದ ಶುಕ್ಲ ಪಕ್ಷದ ಶುಕ್ರವಾರನ್ನು ವರಮಹಾಲಕ್ಷ್ಮಿ ದಿನ ಎಂದು ಕರೆಯುವುದುಂಟು. ವರಮಹಾಲಕ್ಷ್ಮಿ ದಿನ ಆಚರಣೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಶ್ರೇಷ್ಠತೆ ಪಡೆದುಕೊಳ್ಳುತ್ತಿದ್ದು,ಪ್ರತೀಯೊಬ್ಬ ಗೃಹಿಣಿಯೂ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುತ್ತಾರೆ.

ಲಕ್ಷ್ಮಿ ಕೂರಿಸುವುದು ಕೇವಲ ಇತರರು ನೋಡುವುದಕ್ಕಾಗಿ ಅಲ್ಲ. ನಮ್ಮ ಇಷ್ಟಾರ್ಥಗಳನ್ನು ಈಡೇರಿಸುವ ಸಲುವಾಗಿ. ರೀತಿನೀತಿ ನಿಯಮಗಳ ಮೂಲಕ ಲಕ್ಷ್ಮಿಪೂಜೆಯನ್ನು ಮಾಡಬೇಕು. ಪ್ರತಿಯೊಂದು ಪೂಜೆಗೂ ಒಂದಲ್ಲ ಒಂದು ರೀತಿಯ ನಿಯಮ ಹಾಗೂ ಪದ್ಧತಿ ಇರುತ್ತದೆ. ಹಾಗೆಯೇ ಲಕ್ಷ್ಮಿ ಪೂಜೆಗೂ ನಿಯಮಗಳಿದ್ದು, ಅವುಗಳನ್ನು ಪಾಲಿಸಿ ಪೂಜೆ ಮಾಡಿದರೆ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಬಹುದು ಎಂದು ಹಿರಿಯರು ಹೇಳುತ್ತಾರೆ.

ಲಕ್ಷ್ಮಿ ಪೂಜೆ ಮಾಡುವ ಹಿಂದಿನ ದಿನವೇ ಶುಭ್ರವಾಗಿ ಪೂಜೆಗೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ತಯಾರು ಮಾಡಿಟ್ಟುಕೊಳ್ಳಬೇಕು. ಉದಾಹರಣೆಗೆ: ಸೀರೆ, ಹಣ್ಣು, ಅಲಂಕಾರಿಕ ವಸ್ತು, ಶುದ್ಧ ನೀರು ಇತ್ಯಾದಿ.ಲಕ್ಷ್ಮಿಯನ್ನು ಉತ್ತರಾಭಿಮುಖವಾಗಿ ಪ್ರತಿಷ್ಠಾಪಿಸುವುದಾದರೆ ಹಸಿರು ಬಣ್ಣದ ಸೀರೆಯನ್ನು ತೊಡಿಸಬೇಕು. ಕೆಂಪು ಮತ್ತು ಹಳದಿ ಹೂವುಗಳನ್ನು ಬಳಸಬೇಕು. ದೀಪವನ್ನು ತುಪ್ಪದಿಂದ ಹಚ್ಚಬೇಕು.

ಪೂಜೆಯ ದಿನದಂದು ಮಹಿಳೆಯರು ಸೂರ್ಯ ಹುಟ್ಟುವುದಕ್ಕೆ ಮುಂಚೆಯೇ ಎದ್ದು, ಶುದ್ಧ ನೀರಿನಿಂದ ಸ್ನಾನ ಮಾಡಬೇಕು. ಲಕ್ಷ್ಮಿ ವ್ರತ ಮಾಡುವವರೇ ಕಲಶ ಸ್ಥಾಪನೆ ಮಾಡಬೇಕು.ಪೂಜಾ ಸ್ಥಳವನ್ನು ತುಂಬಿದ ಕೊಡದ ನೀರಿನಿಂದ ಶುದ್ಧ ಮಾಡಿ. ಸ್ಥಳದಲ್ಲಿ ಅಷ್ಟದಳದ ರಂಗೋಲಿ ಹಾಕಿ, ಬಾಳೆಕಂಬ, ಮಾವಿನ ಎಲೆಗಳಿಂದ ಸಿಂಗರಿಸಬೇಕು.

ಕಲಶಕ್ಕೆ ತುಂಬಿದ ಕೊಡದ ಶುದ್ಧ ನೀರು ಹಾಕಿ/ಶುದ್ಧ ಅಕ್ಕಿ ಹಾಕಬೇಕು. ಇದರ ಜೊತೆಗೆ ಅರಿಶಿಣದ ಕೊಂಬು, ಅಡಿಕೆ, ಬೆಳ್ಳಿ ಅಥವಾ ಯಾವುದೇ ನಾಣ್ಯ, ದ್ರಾಕ್ಷಿ, ಗೋಡಂಬಿ, ಕರ್ಜೂರ, ಬಾದಾಮಿ, ಕಲ್ಲುಸಕ್ಕರೆ ಹಾಕಬೇಕು. ನಂತರ ಒಂಬತ್ತು ಎಳೆಯ ದಾರ ತೆಗೆದುಕೊಂಡು ಇದಕ್ಕೆ ಅರಿಶಿಣ ಹಚ್ಚಿ, ಅರಿಶಿಣದ ಕೊಂಬನ್ನು ಕಟ್ಟಿ ತಾಳಿ ಮಾಡಬೇಕು. ಇದನ್ನು ಕಲಶದ ಚೊಂಬಿಗೆ ಕಟ್ಟಿದರೆ ಕಲಶ ತಯಾರಾಗುತ್ತದೆ.

ನಂತರ ಶುಭ್ರವಾಗಿ ತೊಳೆದ ತೆಂಗಿನಕಾಯಿಗೆ ಅರಿಶಿಣ ಹಚ್ಚಿಬೇಕು. ಅರಿಶಿಣ ಹಚ್ಚಿದ ತೆಂಗಿನಕಾಯಿಗೆ ಕುಂಕುಮ ಬೊಟ್ಟು ಇಡಬೇಕು. ಕಳಶದ ಬಾಯಿಗೆ ವೀಳ್ಯದೆಲೆ ಅಥವಾ ಮಾವಿನ ಎಲೆ ಇಡಬೇಕು. ನಂತರ ತಟ್ಟೆಯೊಂದಕ್ಕೆ ಅಕ್ಕಿ ಹಾಕಿ ಇದರ ಮೇಲೆ ಕಲಶವನ್ನು ಇಡಬೇಕು. ಅರಿಶಿಣವನ್ನು ಸ್ವಲ್ಪ ನೀರಿನಿಂದ ಮಿಶ್ರಣ ಮಾಡಿ ಒಂದು ನಾಣ್ಯ ತೆಗೆದುಕೊಂಡು ಅದರ ಹಿಂದೆ ಹಾಕಬೇಕು. ನಂತರ ದೇವರ ಬಳಿ ಇಚ್ಛೆಯನ್ನು ಹೇಳಿಕೊಂಡು ದೇವಿಯನ್ನು ಬೇಡಿ ಸಂಕಲ್ಪ ಮಾಡಿಕೊಳ್ಳಬೇಕು. ನಂತರ ದೇವಿಯನ್ನು ಆವಾಹನೆ ಮಾಡಬೇಕು ಅಂದರೆ ಪ್ರಾಣ ಪ್ರತಿಷ್ಠಾಪನೆ.

ಪ್ರಾಣ ಪ್ರತಿಷ್ಠಾಪನೆ

ಇಷ್ಟಾದ ನಂತರ ಲಕ್ಷ್ಮಿ ದೇವಿಗೆ ಪ್ರಾಣಪ್ರತಿಷ್ಠಾಪನೆ ಮಾಡಬೇಕು. ಇದಕ್ಕೆ ಷೋಡಶೋಪಚಾರ ಪೂಜೆಯೆಂದು ಕರೆಯಲಾಗುತ್ತದೆ. ದೇವತೆಯು ತನ್ನ ಎಲ್ಲ ಆಂಗಾಂಗ, ಪರಿವಾರ, ಆಯುಧ ಮತ್ತು ಶಕ್ತಿಸಹತಿವಾಗಿ ಬಂದು ಮೂರ್ತಿಯಲ್ಲಿ ಪ್ರತಿಷ್ಟಿತಳಾಬೇಕು ಮತ್ತು ನಮ್ಮ ಪೂಜೆಯನ್ನು ಸ್ವೀಕರಿಸಬೇಕು ಎಂದು ದೇವತೆಯಲ್ಲಿ ಸಂಪೂರ್ಣ ಶರಣಾಗತಭಾವದಿಂದ ಮಾಡುವ ಪ್ರಾರ್ಥನೆಯೆ ಪ್ರಾಣಪ್ರತಿಪ್ಠಾಪನೆ ಎಂದು ಕರೆಯಲಾಗುತ್ತದೆ.

ಪ್ರಾಣಪ್ರತಿಷ್ಠಾಪನೆ ಸಮಯದಲ್ಲಿ ಕೈಯಲ್ಲಿ ಗಂಧಾಕ್ಷತೆ, ತುಳಸೀದಳ ಅಥವಾ ಹೂವುಗಳನ್ನು ತೆಗೆದುಕೊಳ್ಳಬೇಕು. ದೇವಿಯ ಸಹಸ್ರ ನಾಮವನ್ನು ಹೇಳಿ ಕೊನೆಗೆ ನಮಃ ಎಂದು ಹೇಳಿ ಗಂಧಾಕ್ಷತೆ, ತುಳಸೀದಳ ಅಥವಾ ಹೂವನ್ನು ದೇವತೆಗೆ ಅರ್ಪಿಸಿ ನಮಸ್ಕರಿಸಬೇಕು. ಪ್ರಾಣ ಪ್ರತಿಷ್ಟಾಪನೆ ಬಳಿಕ ನಂತರ ಲಕ್ಷ್ಮಿ ದೇವಿಗೆ ಸೀರೆಯನ್ನು ಉಡಿಸಿ, ಅಲಂಕಾರ ಮಾಡಬೇಕು.

ಅಲಂಕಾರವಾದ ಬಳಿಕ ಪೂಜೆಗೆ ಯಾವುದೇ ವಿಘ್ನಗಳು ಬಾರದಿರುವುದಕ್ಕೆ, ನಮ್ಮ ಕಾರ್ಯವನ್ನು ಸಿದ್ಧಿ ಮಾಡು ಎಂದು ವಿಘ್ನೇಶ್ವರನ ಬಳಿ ಪ್ರಾರ್ಥಿಸಬೇಕು.ಗಣಪತಿಗೆ ಪೂಜೆ ಮಾಡುವಾಗ ಅಷ್ಟನಾಮ ಸಹಸ್ರ ನಾಮಾವಳಿಯನ್ನು ಮಾಡಬೇಕು. ಹೇಳಲು ಸಾಧ್ಯವಾಗದಿದ್ದರೆ ಮಾರುಕಟ್ಟೆಯಲ್ಲಿ ಗಣಪತಿಯ ಸಹಸ್ರ ನಾಮಾವಳಿಯ ಸಿಡಿಗಳು ಲಭ್ಯವಿದೆ ಇದನ್ನು ಹಾಕಬಹುದು.

ಗಣಪತಿ ಪೂಜೆಯ ಬಳಿಕ ಲಕ್ಷ್ಮಿಗೆ ಇಷ್ಟವಾಗುವ ಹಣ್ಣು, ತಿಂಡಿ, ತಿನಿಸುಗಳನ್ನು ದೇವಿಯ ಮುಂದೆ ಇಡಬೇಕು. ಮತ್ತೊಂದು ತಟ್ಟೆಯಲ್ಲಿ ಚಿಕ್ಕ ಕಳಶ, ಅರಿಶಿನದ ಕೊಂಬು, ಮರದ ಜೊತೆ / ಬಾಗಿನ, ಹಸಿರು ಬಳೆ, ಬಳೆ ಬಿಚ್ಚೋಲೆ, ಕನ್ನಡಿ, ಕಪ್ಪು, ಬಾಚಣಿಗೆ, ರವಿಕೆ ಬಟ್ಟೆ (ಬಾಗಿನದ ಸಾಮಾನು ಎಂದರೆ ಇದೀಗ ಮಾರುಕಟ್ಟೆಯ ಅಂಗಡಿಗಳಲ್ಲಿ ಸಿಗುತ್ತದೆ) ಇಡಬೇಕು.ಲಕ್ಷ್ಮಿ ಪೂಜೆ ಮಾಡುವಾಗ ಪೂಜೆಯ ತಟ್ಟೆಯೊಂದರಲ್ಲಿ 9ಸುತ್ತಿನ ದಾರ ಇಟ್ಟಿರಬೇಕು. ಪೂಜೆಯಾದ ಬಳಿಕ ಈ ದಾರವನ್ನು ಮನೆಯಲ್ಲಿರುವವರು ತಮ್ಮ ಕೈಗಳಿಗೆ ಕಟ್ಟಿಕೊಳ್ಳಬೇಕು.

ಲಕ್ಷ್ಮಿ ಪೂಜೆ ಮಾಡಿದ ಬಳಿಕ ಸುಮಂಗಲಿಯರನ್ನು ಮನೆಗೆ ಕರೆದು ದೇವಿಯ ಕಥಾ ಶ್ರವಣ ಮಾಡಬೇಕು. ನಂತರ ಸುಮಂಗಲಿಯರಿಗೆ ಅರಿಶಿನ, ಕುಂಕುಮ ರವಿಕೆ ಬಟ್ಟೆ ಹಾಗೂ ವೀಳ್ಯದೆಲೆ, ಅಡಿಕೆ, ಬಾಳೆಹಣ್ಣು ಕೊಟ್ಟು ಅವರನ್ನು ಸಂಸತದಿಂದ ಕಳುಹಿಸಿಕೊಡಬೇಕು. ಪೂಜೆಗೆ ಬಂದವರಿಗೆಲ್ಲಾ ದೇವಿಯನ್ನು ಆರಾಧನೆ ಮಾಡಿ ಆರತಿ ಕೊಡಬೇಕು.

ದೇವಿಯ ವಿಸರ್ಜನೆ

ವರಮಹಾಲಕ್ಷ್ಮಿ ದಿನ ಮುಗಿಯಿತು….ಪೂಜೆ ಮಾಡಿ ಆಯಿತೆಂದು ಹೇಗೆಂದರೆ ಹಾಗೆ ದೇವಿಯನ್ನು ತೆಗೆದುಬಿಡುವುದಲ್ಲ…ಪ್ರಾಣಪ್ರತಿಷ್ಠಾಪನೆ ಹಾಗೂ ಕಳಶವನ್ನು ಹೇಗೆ ಶ್ರದ್ಧಾ ಭಕ್ತಿ, ನೀತಿ, ನಿಯಮಗಳಿಂದ ಮಾಡುತ್ತೇವೆಯೋ ಹಾಗೆಯೇ ದೇವಿಯ ಕಳಶ ವಿಸರ್ಜನೆಯನ್ನೂ ಕ್ರಮಬದ್ಧವಾಗಿ, ಪದ್ಧತಿಯಿಂದ ಮಾಡಬೇಕು. ಸಾಮಾನ್ಯವಾಗಿ ವರಲಕ್ಷ್ಮಿಯನ್ನು ಒಂದು, ಮೂರು ಹಾಗೂ ಐದು ದಿನಗಳ ಕಾಲ ಮನೆಯಲ್ಲಿಟ್ಟು ಪೂಜಿಸುವುದುಂಟು.

ದೇವಿಯ ವಿಸರ್ಜನೆ ಮಾಡುವಾಗ ಸುಮಂಗಲಿಯರು ಸಂಕಲ್ಪ ಮುದ್ರೆಯಲ್ಲಿ ಕುಳಿತುಕೊಂಡು ಕೈಯ ನಡುಬೆರಳಿನಿಂದ ನೆಲದಲ್ಲಿ ಬರೆದಿರುವ ಚೌಕದ ಗೆರೆಯನ್ನು ಭಿನ್ನಗೊಳಿಸಬೇಕು. ಪ್ರತಿಷ್ಠಾಪನೆ ಉತ್ತಾರಾಭಿಮುಖವಾಗಿದ್ದರೆ ಉತ್ತರದ ಗೆರೆಯನ್ನು ಭಿನ್ನ ಮಾಡಬೇಕು. ಪೂರ್ವಾಭಿಮುಖವಾಗಿದ್ದರೆ ಪೂರ್ವದ ಗೆರೆಯನ್ನು ಭಿನ್ನಗೊಳಿಸಬೇಕು. ನಂತರ ನಿಧಾನವಾಗಿ ಕಳಶವನ್ನು ಅಲುಗಾಡಿಬೇಕು.

ಇದೆಲ್ಲಾ ಆದ ಮೇಲೆ ಒಳ್ಳೆಯ ಸಮಯ ನೋಡಿ ದೇವಿಯ ಬಳಿಯಿರುವ ಎಲ್ಲಾ ಸಾಮಾಗ್ರಿಗಳನ್ನು ನಿಧಾನವಾಗಿ ತೆಗೆಯಬೇಕು. ಕಲಶ ಪಾತ್ರೆಯಲ್ಲಿರುವ ಅಕ್ಕಿ ಹಾಗೂ ತೆಂಗಿನ ಕಾಯಿಯನ್ನು ಸಿಹಿ ಅಡುಗೆಗೆ ಉಪಯೋಗಿಸಿ ಮಕ್ಕಳಿಗೆ ಹಂಚಬೇಕು.

ಚೌಕ ಹಾಗೂ ರಂಗೋಲಿ ಬರೆದ ಪುಡಿ, ಹೂವು, ಎಲ್ಲಾ ವಸ್ತುವನ್ನು ತೆಗೆದು ಎಲ್ಲೆಂದರಲ್ಲಿ ಬಿಸಾಡದೆ ಗಲೀಜು ಮಾಡದೆ ನದಿ ದಡದಲ್ಲಿ ಇಡಬೇಕು. ನದಿಗೆ ಎಸೆಯಬಾರದು. ನದಿಗೆ ಎಸೆದರೆ ದೋಷ ಉಂಟಾಗುತ್ತದೆ. ಪೂಜೆ ಮಾಡುವುದು ಎಷ್ಟು ಮುಖ್ಯವೋ ಪೂಜೆ ನಂತರವಿರುವ ಪದ್ಧತಿಗಳನ್ನೂ ಅನುಸರಿಸುವುದೂ ಸಹ ಅಷ್ಟೇ ಮುಖ್ಯ.

ಹಬ್ಬಗಳೆಂದ ಮೇಲೆ ರುಚಿರುಚಿಯಾದ ತಿಂಡಿ ತಿನಿಸು ಇರಲೇ ಬೇಕು. ಇಲ್ಲವೆಂದರೆ ಹಬ್ಬಕ್ಕೆ ಕಳೆ ಎಲ್ಲಿ? ಬಗೆಬಗೆಯಾದ ಖಾದ್ಯಗಳಿದ್ದರೆ ಮನೆಮಂದಿಯೆಲ್ಲ ಮನ ತಣಿಯುವಂತೆ ತಿಂದು, ಬಂದ ಅತಿಥಿಗಳಿಗೂ ಉಣಬಡಿಸಿದರೆ ಆಗ ಸಮಾಧಾನ. ಅಡುಗೆಯನ್ನು ಮನಸಾರೆ ತಿಂದು ಹೊಗಳಿದರಂತೂ ಮನೆಯಾಕೆಗೆ ಮಿತಿ ಮೀರಿದ ಖುಷಿ.

ನೈವೇದ್ಯ ಎಂದರೇನು?

ದೈನ್ಯದ ಬೇಡಿಕೆ ಅರ್ಥದ ಒಂದು ಸಂಸ್ಕೃತ ಶಬ್ಧವಾದ ನೈವೇದ್ಯವು ಪೂಜಾಚರಣೆಯ ಭಾಗವಾಗಿ ತಿನ್ನುವ ಮೊದಲು ಒಬ್ಬ ಹಿಂದೂ ದೇವತೆಗೆ ಅರ್ಪಿಸಲಾದ ಆಹಾರ. ತಯಾರಿಕೆಯ ಅವಧಿಯಲ್ಲಿ ರುಚಿ ನೋಡುವುದು ಅಥವಾ ದೇವರಿಗೆ ಅರ್ಪಿಸುವ ಮೊದಲು ಆಹಾರವನ್ನು ತಿನ್ನುವುದು ನಿಷೇಧಿಸಲ್ಪಟ್ಟಿರುತ್ತದೆ. ಆಹಾರವನ್ನು ದೇವರ ಮುಂದೆ ಇಟ್ಟು ಪ್ರಾರ್ಥಿಸಲಾಗುತ್ತದೆ. ಪೂಜೆಯಲ್ಲಿ ನೈವೇದ್ಯ ಸಮರ್ಪಿಸೋದು ಅತೀ ಮುಖ್ಯ.

ಪ್ರತಿಯೊಂದು ದೇವತೆಗೆ ವಿಶಿಷ್ಟ ನೈವೇದ್ಯವು ನಿಶ್ಚಯಿಸಲ್ಪಟ್ಟಿರುತ್ತದೆ ಹಾಗೂ ಆ ನೈವೇದ್ಯವು ಆ ದೇವರಿಗೆ ಪ್ರಿಯವಾಗಿರುತ್ತದೆ.  ಶ್ರೀ ವಿಷ್ಣುವಿಗೆ ಖೀರು ಅಥವಾ ಶಿರಾ, ಗಣಪತಿಗೆ ಮೋದಕ, ದೇವಿಗೆ ಪಾಯಸ. ದೇವತೆಗಳಿಗೆ ನಿಶ್ಚಯಿಸಲ್ಪಟ್ಟ ನೈವೇದ್ಯದಲ್ಲಿ ಆ ದೇವತೆಯ ಶಕ್ತಿಯು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿತವಾಗುತ್ತದೆ ಎಂಬ ನಂಬಿಕೆ. ದೇವಿಗೆ ನೇವೇದ್ಯದ ನಂತರ ಪ್ರಸಾದವನ್ನು ಸೇವಿಸಿದರೆ ಆ ಶಕ್ತಿಯು ನಮಗೆ ಸಿಗುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ.

ವರಮಹಾಲಕ್ಷ್ಮಿ ನೇವೇದ್ಯಕ್ಕೆ ಇಡುವ ತಿಂಡಿ ತಿನಿಸುಗಳು

ವರಮಹಾಲಕ್ಷ್ಮಿ ಹಬ್ಬ ಹೆಸರೇ ಹೇಳುವಂತೆ ವರದಾತೆಯಾದ ಲಕ್ಷ್ಮಿಯನ್ನು ಪೂಜಿಸುವ ಹಬ್ಬವಾಗಿದೆ. ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ದೇವರಿಗೆ ಪ್ರಸಾದ ರೂಪದಲ್ಲಿ ಖಾದ್ಯಗಳನ್ನು ಅರ್ಪಿಸುವುದು ಸಾಮಾನ್ಯ. ದೇವರನ್ನು ಸಂಪ್ರೀತಗೊಳಿಸಲು ಮಾಡುವ ಖಾದ್ಯ ಶುದ್ಧವಾಗಿರಬೇಕು. ಈ ದಿನದಂದು ಸುಮಂಗಲಿಯರು ಪ್ರಾತಃ ಕಾಲದಲ್ಲೇ ಎದ್ದು ಸ್ನಾನ ಮಾಡಿ ರಂಗವಲ್ಲಿ ಹಾಕಿ ದೇವರ ಕೋಣೆಯನ್ನು ಸ್ವಚ್ಛಗೊಳಿಸಿ ದೇವರನ್ನು ಅಲಂಕರಿಸಿ ವರಮಹಾಲಕ್ಷ್ಮಿ ಪೂಜೆಯನ್ನು ನೇರವೇರಿಸುತ್ತಾರೆ.

ಹಬ್ಬದಲ್ಲಿ ಮಾಡಲಾಗುವ ಖಾದ್ಯಗಳಲ್ಲಿ ಒಂದಾದ ಪುಳಿಯೊಗರೆಗೆ  ಹುಳಿಯನ್ನ ಎಂದು ಕೂಡ ಹೇಳುತ್ತಾರೆ. ಹುಣಸೇ ಹುಳಿಯನ್ನೇ ಪ್ರಧಾನವಾಗಿರಿಸಿಕೊಂಡು ತಯಾರಿಸುವ ಈ ಅನ್ನದಲ್ಲಿ ಹುಳಿ ಮಾತ್ರವಲ್ಲದೆ ಇತರ ಎಲ್ಲಾ ಸಾಮಾಗ್ರಿಗಳನ್ನು ಸಮಾನವಾಗಿ ಬೆರೆಸಿ ತಯಾರಿಸಲಾಗುತ್ತದೆ. ಪುಳಿಯೊಗರೆ ನೇವೇದ್ಯಕ್ಕೆ ಇಟ್ಟು ಮನೆಯವರು ತಿಂದು ಇತರರಿಗೆ ಹಂಚಿದರೇ ಲಕ್ಷ್ಮಿ ಪ್ರಸನ್ನಳಾಗಿ ಮನೆಯಲ್ಲಿನ ದಾರಿದ್ರ್ಯ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ.

ಸರ್ವರಿಂದ ಪೂಜಿತವಾಗುವ ವರಮಹಾಲಕ್ಷ್ಮಿ ಹಬ್ಬದಂದು ಮಾಡಬೇಕಾದ ವಿಶೇಷ ಸಿಹಿತಿಂಡಿಗಳೆಂದರೆ ಹೋಳಿಗೆ. ಬಾಳೆ ಎಲೆತುಂಬ ಬಡಿಸಿದ ತಿನಿಸುಗಳಲ್ಲಿ ಹೋಳಿಗೆಗೆ ವಿಶೇಷ ಸ್ಥಾನ. ಇನ್ನು ವರಮಹಾಲಕ್ಷ್ಮಿಗೆ ನೇವೈದ್ಯಕ್ಕೆ ಹೋಳಿಗೆ, ಸಜ್ಜಿಗೆ, ರವೆ ಉಂಡೆ, ಶಾವಿಗೆ ಪಾಯಸ, ಕರ್ಜಿಕಾಯಿ ಮಾಡಿ ಒಟ್ಟು ಐದು ಬಗೆಯ ಸಿಹಿ ತಿನಿಸುಗಳನ್ನು ಇಟ್ಟು ಪೂಜೆ ಮಾಡುತ್ತಾರೆ.

ಹಾಗೆಯೇ ಲಕ್ಷ್ಮಿ ಪೂಜೆಗೆ ಕೋಡುಬಳೆ, ಚಕ್ಕುಲಿ, ನಿಪ್ಪಟ್ಟುಗಳನ್ನು ಮಡಿಯಿಂದ ಮಾಡಿ ಇಡುತ್ತಾರೆ. ಹಲವು ಬಗೆಯ ಖಾದ್ಯಗಳನ್ನು ಮಾಡಿ ಲಕ್ಷ್ಮಿಗೆ ಅರ್ಪಿಸುವುದರಿಂದ ದೇವಿ ಸಂತೃಪ್ತಳಾಗುತ್ತಾಳೆ ಎನ್ನುವ ಪ್ರತೀತಿಯಿದೆ.

ಹಾಗೆಯೇ ಲಕ್ಷ್ಮಿ ಪೂಜೆಗೆ ಐದು ಬಗೆಯ ಹಣ್ಣುಗಳು, ಐದು ಬಗೆಯ ಹೂವು ಮತ್ತು ಐದು ಬಗೆಯ ಡ್ರೈ ಫ್ರೂಟ್ಸ್ ಗಳನ್ನು ಕಲಶದ ಮುಂದೆ ಇಟ್ಟು ಸಮರ್ಪಿಸಲಾಗುತ್ತದೆ. ಆಡಂಬರದ ಪೂಜೆ ಮಾಡೋದಕ್ಕೆ ಆಗದೆ ಇರುವವರು ಸಾಧಾರಣವಾಗಿ ಪೂಜೆ ಸಲ್ಲಿಸಬಹುದು. ಗೃಹಿಣಿಯರು ತಮ್ಮ ಅಂತಸ್ತಿಗನುಗುಣವಾಗಿ ಲಕ್ಷಿಗೆ ಪೂಜೆಯನ್ನು ಮಾಡುತ್ತಾರೆ

ಒಟ್ಟಿನಲ್ಲಿ, ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಬರುವ ವರಮಹಾಲಕ್ಷ್ಮಿ ದಿನದಂದು ಬೆಳಿಗ್ಗೆ ಎದ್ದು ಅಭ್ಯಂಜನ ಮಾಡಿ ಭಕ್ತಿಭಾವಗಳಿಂದ ವರಮಹಾಲಕ್ಷ್ಮಿ ಪೂಜೆ ಮುಗಿಯುತ್ತಿದ್ದ ಹಾಗೆ ಬಗೆಯ ತಿಂಡಿಗಳಿಂದ ಲಕ್ಷ್ಮಿಯ ಪೂಜೆ ಮಾಡಿ ಮನೆಮಂದಿಗೆಲ್ಲ ಬಡಿಸಿ, ಬಂದವರಿಗೂ ಹಂಚಿ ಸಂತೋಷ ಪಡುತ್ತಾರೆ.

ಚಾರುಮತಿಯ ಕಥಾಶ್ರವಣ ವರಮಹಾಲಕ್ಷ್ಮಿ ಹಬ್ಬದ ವಿಶೇಷ

ಚಾರುಮತಿ ಎಂಬ ಮಹಿಳೆಯ ಕಥೆ ಈ ಪೂಜೆಗೆ ಪ್ರೇರಣೆಯಾಗಿದೆ. ಒಮ್ಮೆ ಪಾರ್ವತಿಯು ತನ್ನ ಪತಿಯಾದ ಶಿವನಲ್ಲಿ ಒಂದು ಬೇಡಿಕೆ ಇಟ್ಟಳಂತೆ. ಅಂದರೆ ವಿವಾಹವಾದ ಬಳಿಕ ಓರ್ವ ಮಹಿಳೆ ತನ್ನ ಜೀವನಕ್ಕೆ ಬೇಕಾದ ಎಲ್ಲವನ್ನೂ ಹೇಗೆ ಪಡೆಯಬಹುದು? ಅಂದರೆ ಪತಿಯ ಪ್ರೇಮ, ಮಕ್ಕಳ ಸುಖ, ಮೊಮ್ಮಕ್ಕಳ ಸುಖ ಮತ್ತು ಸಾಕಷ್ಟು ಧನಸಂಪತ್ತು ಹೇಗೆ ಪಡೆಯುವುದು ಎಂದು ಕೇಳಿದಳಂತೆ. ಅದಕ್ಕೆ ಉತ್ತರಿಸಿದ ಶಿವ ಯಾವ ಸಾಧ್ವಿ ವರಮಹಾಲಕ್ಷ್ಮಿಪೂಜೆಯನ್ನು ನೆರವೇರಿಸುತ್ತಾಳೆಯೋ ಆಕೆಗೆ ಜೀವನದಲ್ಲಿ ಎಲ್ಲಾ ಸುಖಗಳು ಲಭಿಸುತ್ತವೆ ಎಂದು ಹೇಳಿ ಚಾರುಮತಿಯ ಕಥೆಯನ್ನು ಪ್ರಾರಂಭಿಸಿದನಂತೆ.

ಮಗಧರಾಜ್ಯದಲ್ಲಿ ಚಾರುಮತಿ ಎಂಬ ಅತಿ ದೈವಭಕ್ತೆಯಾದ ಮಹಿಳೆಯೊಬ್ಬಳಿದ್ದಳು. ತನ್ನ ಸದ್ಗುಣಗಳಿಂದ ಆಕೆ ಎಲ್ಲರಿಗೂ ಅಚ್ಚುಮೆಚ್ಚಿನವಳಾಗಿದ್ದಳು. ಆದರ್ಶ ಸತಿ, ಸೊಸೆ ಮತ್ತು ತಾಯಿಯ ಪಾತ್ರವನ್ನು ಅತಿ ನಿಷ್ಠೆಯಿಂದ ಪಾಲಿಸಿಕೊಂಡು ಬರುತ್ತಿದ್ದಳು. ಈಕೆಯ ಗುಣದಿಂದ ಪ್ರಸನ್ನಳಾದ ದೇವತೆ ಲಕ್ಷ್ಮಿ ಚಾರುಮತಿಯ ಕನಸಿನಲ್ಲಿ ಬಂದು ಶ್ರಾವಣ ಮಾಸದ ಹುಣ್ಣಿಮೆಯ ನಂತರದ ಶುಕ್ರವಾರ ತನ್ನನ್ನು ಪೂಜಿಸುವಂತೆ ಕೇಳಿಕೊಂಡಳು. ಒಂದು ವೇಳೆ ಈ ಪೂಜೆ ಪರಿಪೂರ್ಣವಾದರೆ ಆಕೆಗೆ ಜೀವನದಲ್ಲಿ ಏನು ಬೇಕೋ ಅವೆಲ್ಲಾ ಸಿಗುವ ವರ ನೀಡುತ್ತೇನೆ ಎಂದು ವಾಗ್ದಾನ ನೀಡಿದಳು.

ಈ ಕೋರಿಕೆಯನ್ನು ಪರಿಪೂರ್ಣವಾಗಿ ನೆರವೇರಿಸಿದ ಚಾರುಮತಿ ತನ್ನೊಂದಿಗೆ ತನ್ನ ನೆರೆಹೊರೆಯ ಮತ್ತು ಆಪ್ತರನ್ನೂ ಸೇರಿಸಿಕೊಂಡಳು. ಪೂಜೆ ಪೂರ್ಣವಾದ ಬಳಿಕ ಆಕೆಯ ಜೊತೆಗಿದ್ದ ಎಲ್ಲಾ ಮಹಿಳೆಯರ ಮೈ ಮೇಲೆ ಬಂಗಾರದ ಆಭರಣಗಳು ಪ್ರತ್ಯಕ್ಷವಾಗಿದ್ದು ಮಾತ್ರವಲ್ಲ ಅವರ ಮನೆಗಳೂ ಚಿನ್ನದ್ದಾದವು. ಈ ಎಲ್ಲಾ ಮಹಿಳೆಯರು ತಮ್ಮ ಜೀವಮಾನದುದ್ದಕ್ಕೂ ಪೂಜೆಯನ್ನು ನೆರವೇರಿಸುತ್ತಾ ಉತ್ತಮ ಜೀವನ ಮತ್ತು ಸೌಲಭ್ಯಗಳನ್ನು ಪಡೆದರು.

ಅಂದಿನಿಂದ ವರಮಹಾಲಕ್ಷ್ಮಿ ಪೂಜೆಯನ್ನು ವಿವಾಹಿತ ಮಹಿಳೆಯರು ನೆರವೇರಿಸುತ್ತಾ ಬಂದಿದ್ದು ಬಂಗಾರಕ್ಕೂ ಮಿಗಿಲಾದ ಆರೋಗ್ಯ ಮತ್ತು ನೆಮ್ಮದಿಗಳನ್ನು ಉಡುಗೊರೆಯಾಗಿ ಪಡೆದುಕೊಳ್ಳುತ್ತಾ ಬಂದಿದ್ದಾರೆ. ಈ ಪೂಜೆಯಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯಗಳಿಗೆ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ರಾಹುಕಾಲ ಈ ಪೂಜೆಗೆ ಪ್ರಶಸ್ತವಲ್ಲ

ಪೂಜೆಯ ದಿನದ ರಾಹುಕಾಲ ಪ್ರಶಸ್ತ ಸಮಯವಲ್ಲ. ಸಾಮಾನ್ಯವಾಗಿ ಬೆಳಿಗ್ಗೆ ಹತ್ತೂವರೆಯಿಂದ ಹನ್ನೆರಡು ಘಂಟೆಯವರೆಗೆ ರಾಹುಕಾಲವಿದ್ದು ಈ ಅವಧಿಯ ಆಚೀಚಿನ ಹೊತ್ತಿನಲ್ಲಿ ಪೂಜೆನಡೆಸುವುದು ಅತ್ಯಂತ ಶುಭವಾಗಿದೆ. ಅಂದರೆ ಬೆಳಿಗ್ಗೆ ಹತ್ತೂವರೆಗೂ ಮೊದಲು ಅಥವಾ ಮದ್ಯಾಹ್ನ ಹನ್ನೆರಡರ ಬಳಿಕ ಪೂಜೆ ನಡೆಸಿದರೆ ಅತ್ಯುತ್ತಮವಾಗಿದೆ. ಇನ್ನೂ ಹಲವೆಡೆ ಗೋಧೂಳಿಯ ಸಮಯ ಈ ಪೂಜೆಗೆ ಪ್ರಶಸ್ತ ಎಂದು ಭಾವಿಸಲಾಗಿದೆ.

ಪೂಜೆಯ ವೇಳೆ ಪಠಿಸಬೇಕಾದ ಶ್ಲೋಕಗಳು

ಈ ಪೂಜೆಯಯಲ್ಲಿ ಲಕ್ಷ್ಮಿ ಸಹಸ್ರನಾಮ ಮತ್ತು ಲಕ್ಷ್ಮಿ ಆಷ್ಟೋತ್ರಂ ಪಠಿಸುವುದು ಶ್ರೇಯಸ್ಕರವಾಗಿದೆ.

ಪೂಜೆಯ ಸಮಯದಲ್ಲಿ ಸೇವಿಸಬೇಕಾದ ಆಹಾರಗಳು

ಪೂಜೆಯ ಸಮಯದಲ್ಲಿ ಒಬ್ಬಟ್ಟು ಮತ್ತು ಇತರ ಸಿಹಿತಿಂಡಿಗಳನ್ನು ನೈವೇದ್ಯವಾಗಿ ಅರ್ಪಿಸಿ ಬಳಿಕ ಮನೆಯವರೆಲ್ಲರೂ ಪ್ರಸಾದದ ರೂಪದಲ್ಲಿ ಸೇವಿಸಬಹುದು. ಕೆಲವು ಕಡೆಗಳಲ್ಲಿ ಈ ದಿನ ಉಪವಾಸದ ದಿನವಾಗಿ ಆಚರಿಸಿ ಪೂಜೆ ಸಂಪನ್ನಗೊಂಡ ಬಳಿಕವೇ ಆಹಾರ ಸ್ವೀಕರಿಸಲಾಗುತ್ತದೆ.

ಉಪವಾಸ ಆಚರಣೆ

ಈ ದಿನ ಮುಂಜಾನೆಯಿಂದ ಮಹಿಳೆಯರು ಪೂಜೆ ಸಂಪನ್ನಗೊಳ್ಳುವವರೆಗೆ ಉಪವಾಸ ಆಚರಿಸುತ್ತಾರೆ. ಉದ್ಯೋಗಸ್ಥೆ, ಗರ್ಭಿಣಿ, ರೋಗಿ ಅಥವಾ ವೈದ್ಯಕೀಯ ಆರೈಕೆಯಲ್ಲಿರುವ ಮಹಿಳೆಯರು ಉಪವಾಸದಿಂದ ವಿನಾಯಿತಿ ಪಡೆಯಬಹುದು.

ಒಂದು ವೇಳೆ ಈ ಪೂಜೆ ತಪ್ಪಿದರೆ?

ಕಾರಣಾಂತರಗಳಿಂದ ಈ ಪೂಜೆ ನೆರವೇರಿಸಲಾಗದ ಮಹಿಳೆಯರು ಮುಂದಿನ ಶುಕ್ರವಾರ ನೆರವೇರಿಸಬಹುದು. ಅದೂ ಸಾಧ್ಯವಾಗದಿದ್ದ ಪಕ್ಷದಲ್ಲಿ ನವರಾತ್ರಿಯ ಶುಕ್ರವಾರದಂದೂ ನೆರವೇರಿಸಬಹುದು.

ಒಂಬತ್ತು ಗಂಟುಗಳ ದಾರ ಕಟ್ಟುವುದು ಅಗತ್ಯ…

ಪೂಜೆ ನೆರವೇರಿಸುವ ಮಹಿಳೆಯರು ತಮ್ಮ ಬಲಗೈ ಮಣಿಕಟ್ಟಿನಲ್ಲಿ ನಡುವೆ ಹೂವೊಂದು ಇರುವ ಹಳದಿ ದಾರವನ್ನು ಒಂಬತ್ತು ಗಂಟುಗಳಿರುವಂತೆ ಮಾಡಿ ಕಟ್ಟಿಕೊಳ್ಳಬೇಕು. ಪೂಜೆ ಸಂಪ

Please follow and like us:
0
http://bp9news.com/wp-content/uploads/2018/08/08-5varamahalakshmi.jpghttp://bp9news.com/wp-content/uploads/2018/08/08-5varamahalakshmi-150x150.jpgBP9 Bureauಆಧ್ಯಾತ್ಮಪ್ರಮುಖಬೆಂಗಳೂರು : ವರಮಹಾಲಕ್ಷ್ಮಿ ದಿನ ಪೂಜೆ ಹೆಸರೇ ಸೂಚಿಸುವಂತೆ ಲಕ್ಷ್ಮಿದೇವಿಯನ್ನು ಪೂಜಿಸುವ ದಿನ. ಶ್ರಾವಣ ಮಾಸದ ಶುಕ್ಲ ಪಕ್ಷದ ಶುಕ್ರವಾರನ್ನು ವರಮಹಾಲಕ್ಷ್ಮಿ ದಿನ ಎಂದು ಕರೆಯುವುದುಂಟು. ವರಮಹಾಲಕ್ಷ್ಮಿ ದಿನ ಆಚರಣೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಶ್ರೇಷ್ಠತೆ ಪಡೆದುಕೊಳ್ಳುತ್ತಿದ್ದು,ಪ್ರತೀಯೊಬ್ಬ ಗೃಹಿಣಿಯೂ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುತ್ತಾರೆ. ಲಕ್ಷ್ಮಿ ಕೂರಿಸುವುದು ಕೇವಲ ಇತರರು ನೋಡುವುದಕ್ಕಾಗಿ ಅಲ್ಲ. ನಮ್ಮ ಇಷ್ಟಾರ್ಥಗಳನ್ನು ಈಡೇರಿಸುವ ಸಲುವಾಗಿ. ರೀತಿನೀತಿ ನಿಯಮಗಳ ಮೂಲಕ ಲಕ್ಷ್ಮಿಪೂಜೆಯನ್ನು ಮಾಡಬೇಕು. ಪ್ರತಿಯೊಂದು ಪೂಜೆಗೂ ಒಂದಲ್ಲ ಒಂದು...Kannada News Portal