ನವದೆಹಲಿ : ದೇಶ ಕಂಡ ಅಪರೂಪದ ರಾಜಕಾರಣಿ ಎಂದರೆ ಅಟಲ್ ಬಿಹಾರಿ ವಾಜಪೇಯಿ. ರಾಜಕೀಯ ಮುತ್ಸದ್ದಿಯಾಗಿ, ಕವಿಯಾಗಿ, ಶ್ರೇಷ್ಟ ಪ್ರಧಾನ ಮಂತ್ರಿಯಾಗಿ ಅಟಲ್  ದೇಶಕ್ಕೆ ನೀಡಿದ ಕೊಡುಗೆ ಅಪಾರ. ಅವರ ಆದರ್ಶ ಹಾಗೂ ಪ್ರಾಮಾಣಿಕ ಜೀವನ ಇಂದಿನ ರಾಜಕಾರಣಿಗಳಿಗೆ ಮಾದರಿ.ಅವರ ದೇಶ ಪ್ರೇಮ ಮತ್ತು ನಿಷ್ಕಳಂಕ ವ್ಯಕ್ತಿತ್ವ ನಮಗೆಲ್ಲರಿಗೂ ಆದರ್ಶ.ಸುಮಾರು ನಾಲ್ಕು  ದಶಕದ ಕಾಲ ರಾಜಕಾರಣದಲ್ಲಿ ಅಜಾತ ಶತ್ರುವೆಂದೇ ಪ್ರಸಿದ್ಧರಾದ ಅಟಲ್ ಬಿಹಾರಿ ವಾಜಪೇಯಿ ಇಂದು ಅಮರರಾಗಿದ್ದಾರೆ.ಅವರು ನಡೆದು ಬಂದ ದಾರಿಯ ಬಗ್ಗೆ ಒಂದು ಕಿರು ಪರಿಚಯ.

ಬಾಲ್ಯ ಮತ್ತು ಶಿಕ್ಷಣ:

ಭಾರತ ದೇಶದ ಮಹಾನ್ ನಾಯಕ ಅಟಲ್ ಜಿ ಹುಟ್ಟಿದ್ದು ಮಧ್ಯ ಪ್ರದೇಶದ ಗ್ವಾಲಿಯರನ ಶಿಂಧೆ ದಂಡು ಪ್ರದೇಶದಲ್ಲಿ. ಅವರು ಜನಿಸಿದ್ದು 1924 ಡಿಸೆಂಬರ್ 25 ರಂದು. ತಂದೆ ಕೃಷ್ಣ ಬಿಹಾರಿ ವಾಜಪೇಯಿ, ತಾಯಿ ಕೃಷ್ಣಾ ದೇವಿ. ಕೃಷ್ಣ ಬಿಹಾರಿ ವಾಜಪೇಯಿ ಅಧ್ಯಾಪಕರಾಗಿದ್ದರು. ಹಾಗಾಗಿ ಬಹಳ ಚಿಂತೆ ಮಾಡಿ ಮಗುವಿಗೆ ‘ ಅಟಲ್ ಬಿಹಾರಿ ’ ಎಂದು ನಾಮಕರಣ ಮಾಡಿದರು. ಅಟಲ್ ಎಂದರೆ ಗಟ್ಟಿ( ಕಾರ್ಯಸಾಧಕ) ಎಂದರ್ಥ. ಬಿಹಾರಿ ಎಂದರೆ ವಿಚಾರ ಮಾಡುವವ ಎಂದರ್ಥ. ನಿಜವಾಗಿಯೂ ಒಬ್ಬ ಮಹಾನ್ ಗಟ್ಟಿ ವಿಚಾರಶೀಲ ವ್ಯಕ್ತಿ ಅಟಲ್ ಬಿಹಾರಿ ಅಟಲ್ ಜಿಗೆ ಓದಿನಲ್ಲಿ ಬಹಳ ಶ್ರದ್ದೆ. ಸ್ವತಃ ತಂದೆ ಅಧ್ಯಾಪಕರಾಗಿದ್ದರಿಂದ ಶಾಲೆಯಲ್ಲಿ ತಿಳಿಯದ ಪಾಠವನ್ನು ತಂದೆಯ ಬಳಿ ಕೇಳಿ ತಿಳಿದುಕೊಳ್ಳುತ್ತಿದ್ದರು. ಶಾಲೆಗೆ ಚಕ್ಕರ್ ಹೊಡೆಯದೆ ಓದು ಮತ್ತು ಮನೆಯ ಪಾಠಗಳಲ್ಲಿ ನಿರತರಾಗಿರುತ್ತಿದ್ದರು.

ಗ್ವಾಲಿಯರನ ಗೋರಖಿ ವಿದ್ಯಾಲಯದಲ್ಲಿ  ಅಟಲ್ ರವರು ಮಿಡಲ್ ಪರೀಕ್ಷೆ ಪಾಸು ಮಾಡಿದರು.ತಮ್ಮ ಶಾಲಾ ದಿನಗಳಲ್ಲೇ ಅಟಲ್ ಜಿ ಉತ್ತಮ ಭಾಷಣಕಾರರಾಗಿದ್ದರು. ಶಾಲೆಯಲ್ಲಿ ನಡೆಯುವ ಚರ್ಚಾ ಸ್ಪರ್ಧೆ ಭಾಗವಹಿಸಿ ಪ್ರಶಸ್ತಿ ಗಳಿಸುತ್ತಿದ್ದರು. ಯಾವುದೇ ಪರೀಕ್ಷೆಯೇ ಆಗಲಿ ಅಟಲ್ ಜಿ ಕ್ಲಾಸಿಗೆ ಪ್ರಥಮ ಸ್ಥಾನ ಬರುತ್ತಿದ್ದರು. ಅಟಲ್ ಜಿ ಗೆ ಶಾಲಾ ಪುಸ್ತಕಗಳಿಗಿಂತ ಆಧ್ಯಾತ್ಮಿಕ. ಪೌರಾಣಿಕ, ಭಾಗವತ, ರಾಮಾಯಣ ಮತ್ತು ಮಹಾಭಾರತ ಪುಸ್ತಕಗಳ ಓದಿನಲ್ಲೇ ಅವರಿಗೆ ಹೆಚ್ಚು ಆಸಕ್ತಿ. ಕಥೆ, ಕಾದಂಬರಿ ಹಾಗೂ ವಿಚಾರ ಸಾಹಿತ್ಯ ಅವರಿಗೆ ಅಚ್ಚು ಮೆಚ್ಚು.

ತಂದೆ ಕೃಷ್ಣ ಬಿಹಾರಿ ವಾಜಪೇಯಿ ಕವಿತೆಗಳನ್ನು ರಚಿಸುತ್ತಿದ್ದರು.ಆ ಕವಿತೆಗಳನ್ನು ಅಟಲ್ ಕೇಳುತ್ತಿದ್ದರು. ತಂದೆಯಿಂದ ಅಟಲ್ ಜಿ ಮಾತಿನಲ್ಲಿ ಗಾದೆ, ಹೋಲಿಕೆ, ತಿಳಿಹಾಸ್ಯ, ವ್ಯಂಗ್ಯಗಳನ್ನು ಹೇಗೆ ಪ್ರಯೋಗಿಸಬೇಕೆಂಬುದನ್ನು ಕಲಿತರು. ಕೃಷ್ಣ ಬಿಹಾರಿ ಅವರ ಮನೆಗೆ ಆರ್ಯ ಸಮಾಜದ ಮುಖಂಡರು, ರಾಷ್ಟೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಬರುತ್ತಿದ್ದರು. ಈ ವಾತಾವರಣ ಅಟಲ್ ರಲ್ಲಿ ಉಜ್ವಲ ದೇಶಭಕ್ತಿ ಬೆಳೆಯಲು ಕಾರಣವಾಯಿತು ಮತ್ತು ಮುಂದೆ ದೇಶ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿತು.

ಗ್ವಾಲಿಯರ್ ದ ವಿಕ್ಟೋರಿಯಾ ಕಾಲೇಜಿನಲ್ಲಿ ಬಿ.ಎ ಪದವಿಗೆ ಸೇರಿ ಹಿಂದಿ ಸಾಹಿತ್ಯ, ಇಂಗ್ಲಿಷ್ ಸಾಹಿತ್ಯ, ಸಂಸ್ಕೃತ ಸಾಹಿತ್ಯ ಮತ್ತು ಸಾಮಾನ್ಯ ಇಂಗ್ಲಿಷ್ ವಿಷಯಗಳನ್ನು ಆರಿಸಿಕೊಂಡು ಸತತ ಅಭ್ಯಾಸದಲ್ಲಿ ತೊಡಗಿ ಬಿ.ಎ ತರಗತಿಯನ್ನು ಪ್ರಥಮ ಶ್ರೇಣಿಯಲ್ಲಿ ಪಾಸು ಮಾಡಿದರು. ಅಟಲ್ ರವರು ಮುಂದೆ ಕಾನಾಪುರದ ಡಿ.ಎ.ಬಿ. ಕಾಲೇಜಿನಿಂದ  ರಾಜ್ಯಶಾಸ್ತ್ರದಲ್ಲಿ ಎಂ.ಎ ಮುಗಿಸಿದರು. ಎಂ.ಎ ಪರೀಕ್ಷೆಯಲ್ಲಿ ತೇರ್ಗಡೆಯಾದ ಮೇಲೆ ತಮ್ಮ ಮಗ ನ್ಯಾಯಶಾಸ್ತ್ರದಲ್ಲಿ(L.L.B) ಪದವಿ ಪಡೆದುಕೊಂಡು ವಕೀಲಿ ವೃತ್ತಿ ಮಾಡಬೇಕೆಂಬು ವಾಜಪೇಯಿಯವರ ಅವರ ತಂದೆಯ ಆಸೆಯಾಗಿತ್ತು. ತಂದೆಯ ಒತ್ತಾಯಕ್ಕೆ ಮಣಿದು ಅಟಲ್ ಜಿ ಲಾ ಕಾಲೇಜಿಗೆ ಸೇರಿದರು. ಮಗನನ್ನು ಪ್ರೋತ್ಸಾಹಿಸುವ ಸಲುವಾಗಿ ಕೃಷ್ಣ ಬಿಹಾರಿ ವಾಜಪೇಯಿಯವರು ಸಹ ಲಾ ಕಾಲೇಜಿಗೆ ಸೇರಿದರು, ಆ ವೇಳೆಗೆ ಅವರು ವೃತ್ತಿಯಿಂದ ನಿವೃತ್ತರಾಗಿದ್ದರು. ಆದರೆ ಅಟಲ್ ಅವರಿಗೆ ಕಾನೂನು ಶಿಕ್ಷಣ ಹಿಡಿಸಲಿಲ್ಲ. ಮಧ್ಯ ದಲ್ಲೇ ಕಾಲೇಜನ್ನು ತ್ಯಜಿಸಿದರು. ತಂದೆ ಕೃಷ್ಣ ಬಿಹಾರಿಯವರು ಹಿಂದೆ ಬೀಳದೆ ಓದು ಮುಗಿಸಿ ಕಾನೂನು ಪದವೀಧರರಾದರು.

ಯುವಕರಾಗಿದ್ದ ಸಂದರ್ಭ

ಸಂಘದ ಪ್ರಚಾರಕರಾಗಿದ್ದರು  ಅಟಲ್ :

ಕಾನೂನು ಪದವಿ ತ್ಯಜಿಸಿದ ಅಟಲ್ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ  ಸಮಯ ನೀಡಿದರು.ಬೆಳಿಗ್ಗೆ  ಶಾಖೆ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ನಂತರ ಬಿಡುವಿನ ವೇಳೆಯಲ್ಲಿ ಕವನ ರಚಿಸುತ್ತಿದ್ದರು. ಈ ರೀತಿ ಒಂದು ವರ್ಷ ಸಂಘದ ಸೇವೆ ಸಲ್ಲಿಸಿದರು.ಆ ಬಳಿಕ ಅವರ ಗಮನ ಪತ್ರಿಕೊದ್ಯಮದತ್ತ ಹರಿಯಿತು. ರಾಷ್ಟ್ರಧರ್ಮ, ಪಾಂಚಜನ್ಯ, ಸ್ವದೇಶ, ವೀರ ಅರ್ಜುನ್ ಪತ್ರಿಕೆಗಳಲ್ಲಿ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಅಟಲ್ ಜಿ ಯವರ ಸಂಪಾದಕೀಯ ತುಂಬಾ ಹರಿತವಾಗಿರುತ್ತಿತ್ತು. ಓದುಗರ ಮೇಲೆ ಅದು ಹೆಚ್ಚು ಪರಿಣಾಮ ಬೀರುತ್ತಿತ್ತು.

ರಾಜಕೀಯ ಪ್ರವೇಶ

ಅಟಲ್ ರವರಿಗೆ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಪರಿಚಯವಾಯಿತು. ಉತ್ಸಾಹಿ ತರುಣನನ್ನು ಭೇಟಿಯಾದ ಮುಖರ್ಜಿಯವರಿಗೆ ಈತ ದೇಶದ ರಾಜಕೀಯ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲನೆಂಬ ನಂಬಿಕೆ ಹುಟ್ಟಿತು. 1951 ರಲ್ಲಿ ಭಾರತೀಯ ಜನ ಸಂಘ ಉದಯವಾಯಿತು.

ಅಟಲ್ ಜಿ ಇದರ ಸಂಸ್ಥಾಪಕ ಸದಸ್ಯರಲ್ಲೊಬ್ಬರು. ಜನ ಸಂಘ ಪಂಡಿತ್ ದೀನದಯಾಳ ಉಪಾಧ್ಯಾಯರ ಮಾರ್ಗ ದರ್ಶನದಲ್ಲಿ ಕಾಂಗ್ರೆಸ್ ಗೆ ಪ್ರಬಲ ವಿರೋಧ ಪಕ್ಷವಾಗಿ ಬೆಳೆಯಿತು. 1951 ರಲ್ಲಿ ಭಾರತದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದಾಗ ಅಟಲ್ ಜಿ ದೇಶದ ನಾನಾ ಭಾಗಗಳಲ್ಲಿ ಸಂಚರಿಸಿ ಚುನಾವಣಾ ಪ್ರಚಾರ ಮಾಡಿದರು. ಮುಂದೆ 1953ರಲ್ಲಿ ಲಕ್ನೋ ಕ್ಷೇತ್ರದಿಂದ ಆಯ್ಕೆಯಾಗಿ ಬಂದಿದ್ದ ಲೋಕಸಭಾ ಸದಸ್ಯೆ ವಿಜಯ ಲಕ್ಷ್ಮಿ ಪಂಡಿತ್ ರನ್ನು ಭಾರತದ ರಾಯಭಾರಿಯಾಗಿ ಸೋವಿಯತ್ ರಶಿಯಾಗೆ ಕಳುಹಿಸಲಾಯಿತು.

ಆಗ ನಡೆದ ಉಪ ಚುನಾವಣೆಯಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಪರ್ಧಿಸಿದಾಗ ಅವರಿಗೆ ಕೇವಲ 27 ವರ್ಷ. ಅಟಲ್ ಜಿ ವ್ಯಾಪಕ ಪ್ರಚಾರ ಮಾಡಿ 150ಕ್ಕೂ ಹೆಚ್ಚು ಕಡೆ ಭಾಷಣ ಮಾಡಿದರು ಆದರೆ ಕಾಂಗ್ರೇಸ್ ಅಭ್ಯರ್ಥಿಯ ವಿರುದ್ದ ಸೋತರು. ಮತ್ತೆ 1957ರ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಿಂದ ಸ್ಪರ್ಧಿಸಿದರು. ಮಥುರಾ ಮತ್ತು ಲಕ್ನೋ ಕ್ಷೇತ್ರಗಳಲ್ಲಿ ಸೋತ ಅಟಲ್ ರವರು ಬಲರಾಮ್ ಪುರ ಕ್ಷೇತ್ರದಲ್ಲಿ ವಿಜಯ ಸಾಧಿಸಿದರು.

1962 ರಲ್ಲಿ ಅಟಲ್ ಜಿ ಸೋತರು ಆದರೆ ಅವರು ಕುಗ್ಗದೆ 1967 ಮತ್ತು 1971 ರಲ್ಲಿ ಪ್ರಚಂಡ ವಿಜಯ ಸಾಧಿಸಿದರು. 1975 ರಲ್ಲಿ ಇಂದಿರಾ ಗಾಂಧಿ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿತು. ಆಗ ಅಟಲ್ ಜಿ ಇಂದಿರಾ ಗಾಂಧಿ ವಿರುದ್ದ ಹೋರಾಡಿ ಜೈಲು ಸೇರಿದರು. ಇಂದಿರಾ ಆಡಳಿತ ಕೊನೆಗೊಳ್ಳುವ ತನಕ ಜೈಲಿನಲ್ಲಿದ್ದರು. 1977 ರ ಚುನಾವಣೆ ಸಂಧರ್ಭದಲ್ಲಿ ಅಟಲ್ ಜಿ ತಮ್ಮ ಸಂಗಡಿಗರೊಂದಿಗೆ ಜನತಾ ಪಕ್ಷ ಸೇರಿದರು. ಜನ ಸಂಘವನ್ನು ಜನತಾ ಪಕ್ಷದಲ್ಲಿ ವಿಲೀನಗೊಳಿಸಿದರು. ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿ ಯಾಗಿ ಸ್ಪರ್ಧಿಸಿ ಕಾಂಗ್ರೆಸ್​ ಅಭ್ಯರ್ಥಿಯನ್ನು ಸೋಲಿಸಿದರು.

ವಿದೇಶಾಂಗ ಮಂತ್ರಿಯಾಗಿ:

1977 ರಲ್ಲಿ ಇಂದಿರಾ ಸರ್ಕಾರ ಮಣ್ಣು ಮುಕ್ಕಿತು. ಮೊರಾರ್ಜಿ ದೇಸಾಯಿ ನೇತೃತ್ವದ   ಸರ್ಕಾರ ಸ್ಥಾಪನೆಯಾಯಿತು. ಅದರಲ್ಲಿ ಅಟಲ್ ಜಿ ವಿದೇಶಾಂಗ ಸಚಿವರಾದರು.ಆ ವೇಳೆಯಲ್ಲಿ ಪಾಕಿಸ್ತಾನ. ಚೀನಾ, ರಷಿಯಾ ದೇಶಗಳೊಂದಿಗೆ ಒಳ್ಳೆಯ ಸಂಬಂಧ ಬೆಳೆಸಿದ ಕೀರ್ತಿ ಅಟಲ್ ರಿಗೆ ಸಲ್ಲುತ್ತದೆ. ವಿದೇಶಾಂಗ ಮಂತ್ರಿಯಾಗಿ ವಾಶಿಂಗ್ಟನ್ ನಲ್ಲಿ ನಡೆದ ವಿಶ್ವ ಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿ ರಾಷ್ಟ್ರದ ಗೌರವವನ್ನು ಎತ್ತಿ ಹಿಡಿದರು.

1977ರ ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಅಂದಿನ ವಿದೇಶಾಂಗ ಸಚಿವ ವಾಜಪೇಯಿ…
1977ರ ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಅಂದಿನ ವಿದೇಶಾಂಗ ಸಚಿವ ವಾಜಪೇಯಿ…

ಬಿಜೆಪಿಯ ಹುಟ್ಟು:

ಮೊರಾರ್ಜಿ ದೇಸಾಯಿಯವರ ಸರ್ಕಾರ ಕೇವಲ ಎರಡು ವರ್ಷ ಆಡಳಿತ ನಡೆಸಿತು. ನಂತರ ಸರ್ಕಾರ ಬಿದ್ದುಹೋಯಿತು. 1980ರಲ್ಲಿ ಚುನಾವಣೆ ನಡೆಯಿತು. ಆಗ ಜನತಾ ಪಕ್ಷ ತೊರೆದ ಅಟಲ್ ಜಿ ಭಾರತೀಯ ಜನತಾ ಪಕ್ಷ(ಬಿ.ಜೆ. ಪಿ) ಸ್ಥಾಪಿಸಿದರು. ಬಿಜೆಪಿಯಿಂದ ಸ್ಪರ್ಧಿಸಿ ಅಟಲ್ ಜಿ ಗೆದ್ದರು. ಪಕ್ಷವನ್ನು ಬೆಳೆಸಲು ಶ್ರಮ ಪಟ್ಟರು. ಬಿಜೆಪಿಯನ್ನು ಪ್ರಬಲ ರಾಜಕೀಯ ಪಕ್ಷವಾಗಿ ರೂಪಿಸಿದರು. 1984 ರಲ್ಲಿ ನಡೆದ ಚುನಾವಣೆಯಲ್ಲಿ ಸೋತರು.

1999ರ ಕಾರ್ಗಿಲ್‌ ಯುದ್ಧದ ಸಂದರ್ಭ, ಕದನಭೂಮಿಗೆ ತೆರಳಿದ್ದ ಪ್ರಧಾನಿ ವಾಜಪೇಯಿ ಯೋಧರಿಗೆ ಸ್ಥೈರ್ಯ ತುಂಬಿದ್ದರು.
1999ರ ಕಾರ್ಗಿಲ್‌ ಯುದ್ಧದ ಸಂದರ್ಭ, ಕದನಭೂಮಿಗೆ ತೆರಳಿದ್ದ ಪ್ರಧಾನಿ ವಾಜಪೇಯಿ ಯೋಧರಿಗೆ ಸ್ಥೈರ್ಯ ತುಂಬಿದ್ದರು.

ಆದರೆ ಮುಂದೆ ಲಕ್ನೋ ಕ್ಷೇತ್ರದಲ್ಲಿ ಸ್ಪರ್ಧಿಸಿ 1991, 1996, 1998ರಲ್ಲಿ  ಸತತವಾಗಿ ಅದೇ ಕ್ಷೇತ್ರದಿಂದ ಆಯ್ಕೆಯಾದರು. 1996 ರಲ್ಲಿ ಅಟಲ್ ಜಿ ಪ್ರಧಾನಿಯಾದರು ಆದರೆ 13 ದಿನದಲ್ಲೇ  ಬಹುಮತವಿಲ್ಲದೆ ಸರ್ಕಾರ ಬಿದ್ದುಹೋಯಿತು. ಮತ್ತೆ 1998 ರಲ್ಲಿ ಎರಡೆನೇ ಬಾರಿಗೆ ಪ್ರಧಾನಿಯಾದರು. ಆದರೆ ಆ ಸರ್ಕಾರ 13 ತಿಂಗಳಿಗೆ ಅಂತ್ಯವಾಯಿತು. ಈ ಸಂದರ್ಭದಲ್ಲಿ ಅಟಲ್ ಜಿ ಕುದುರೆ ವ್ಯಾಪಾರ ಮಾಡುವ ಹೇಯ ಕೆಲಸ ಮಾಡಲಿಲ್ಲ. ಅವರು ತಮ್ಮ ತತ್ವ ಆದರ್ಶಗಳನ್ನು ಮರೆಯಲಿಲ್ಲ ಅದನ್ನು ತಪ್ಪದೆ ಪಾಲಿಸಿದರು.

ಪೂರ್ಣ ಪ್ರಮಾಣದ ಪ್ರಧಾನಿ

1999ರಲ್ಲಿ ಮತ್ತೆ ಮೂರನೇ ಬಾರಿಗೆ ಅಟಲ್ ಜಿ ಪ್ರಧಾನಿಯಾದರು ಈ ಬಾರಿ 5 ವರ್ಷಗಳ ಕಾಲ ಸರ್ಕಾರ ನಡೆಸಿದರು. ಚಿಕ್ಕ ಚಿಕ್ಕ ಪಕ್ಷಗಳ ಬೆಂಬಲ ಪಡೆದುಕೊಂಡು ಸರ್ಕಾರ ನಡೆಸಿದ ಸಾಧನೆ ಅಮೋಘ. 1999-2004 ಈ ಐದು ವರ್ಷ ಭಾರತದ  ಸುವರ್ಣ ಯುಗವೆಂದು ಕರೆದರೆ ಅತಿಶಯೋಕ್ತಿಯಲ್ಲ ವೆನಿಸುತ್ತದೆ.

ಜನಸಂಘದ ಸಭೆಯೊಂದರಲ್ಲಿ

ಅಟಲ್ ಜಿ ಅಧಿಕಾರವಾಧಿಯಲ್ಲಿ ಭಾರತ ಅಭಿರುದ್ದಿ ಪಥದತ್ತ ಸಾಗಿತು. ಮಕ್ಕಳ ಶಿಕ್ಷಣ ಉತ್ತಮಗೊಳಿಸಲು ಸರ್ವ ಶಿಕ್ಷಣ ಅಭಿಯಾನ ಯೋಜನೆ, ಹಿಂದೂ ಮುಸ್ಲಿಂ ಸೌಹಾರ್ದತೆಗಾಗಿ ಲಾಹೋರ್ ಬಸ್ ಸಂಚಾರ ವ್ಯವಸ್ಥೆ, ದೇಶದ ಮಹಾ ನಗರಗಳನ್ನು ಜೋಡಿಸುವ ಸಲುವಾಗಿ ಕೈಗೊಂಡ ರಾಷ್ಟ್ರೀಯ ಹೆದ್ದಾರಿ ಯೋಜನೆ. ಪ್ರತಿ ಹಳ್ಳಿಗೂ ರಸ್ತೆ ನಿರ್ಮಿಸಲು ತಂದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ,ಈ ಎಲ್ಲ ಯೋಜನೆಗಳ ರೂವಾರಿ ಅಟಲ್ ಜಿ ಯವರೇ. ಅಣ್ವಸ್ತ್ರ ಪರೀಕ್ಷೆ ನಡೆಸಿ ದೇಶದಲ್ಲಿ ವೈಜ್ಞಾನಿಕ ಕ್ರಾಂತಿಯನ್ನು ಹುಟ್ಟು ಹಾಕಿ ವಿಶ್ವದ ಗಮನ ಸೆಳೆದರು.

ಪಾಕಿಸ್ತಾನ ವಿರುದ್ದ ನಡೆದ ಕಾರ್ಗಿಲ್ ಯುದ್ದದ ವಿಜಯದ ಶ್ರೇಯ ಅಟಲ್ ರಿಗೆ ಸಲ್ಲ ಬೇಕು. ಪ್ರಧಾನಿಯಾಗಿ ಅಟಲ್ ಜಿ ಭಾರತದ ಅರ್ಥಿಕ, ಸಾಮಾಜಿಕ, ಅಂತರಿಕ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿದರು. ಆದರೆ 2004 ರಲ್ಲಿ ಅಟಲ್ ಜಿ ಚುನಾವಣೆಯಲ್ಲಿ ಸೋತರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತು. ಅಟಲ್ ಜಿ ಮತ್ತೊಮ್ಮೆ ಭಾರತದ ಪ್ರಧಾನಿಯಾಗಿದ್ದರೆ ದೇಶ ಮತ್ತಷ್ಟು ಅಭಿರುದ್ದಿಯಾಗುತ್ತಿದ್ದರಲ್ಲಿ ಸಂಶಯವಿಲ್ಲ. ಈ ದೇಶದ ದೌರ್ಭಾಗ್ಯವೋ ಅಥವಾ ಅಟಲ್ ಜಿ ಯವರ ದುರದೃಷ್ಟವೋ ಗೊತ್ತಿಲ್ಲ. ಅವರು ಮತ್ತೊಮ್ಮೆ ಪ್ರಧಾನಿಯಾಗಲು ಸಾಧ್ಯವಾಗಲಿಲ್ಲ. ಇದೆ ಸಂದರ್ಭದಲ್ಲಿ ಅಟಲ್ ಜಿ ಯವರ ಅರೋಗ್ಯ ಕೈ ಕೊಟ್ಟಿತು. ಅವರು ರಾಜಕೀಯದಿಂದ ಹಿಂದೆ ಸರಿದರು. ಮಹಾನ್ ನಾಯಕನ ಅನುಪಸ್ಥಿತಿ ದೇಶಕ್ಕೆ ಕಾಡಿತು.

ಪ್ರಖರ ವಾಗ್ಮಿ, ಉತ್ತಮ ಸಂಸದೀಯ ಪಟು:

ಅಟಲ್ ಜಿ ಉತ್ತಮ ಭಾಷಣಕಾರರಾಗಿದ್ದರು. ತಮ್ಮ ಪ್ರಖರ ಮಾತಿನಿಂದ ಜನರನ್ನು ಸೆಳೆಯುವಂತವರಾಗಿದ್ದರು. ಅವರ ಭಾಷಣ ಕೇಳಲು ಸಹಸ್ರಾರು ಜನ ಸೇರುತ್ತಿದ್ದರು. ಅವರು ಉತ್ತಮ ಸಂಸದೀಯ ಪಟುವಾಗಿದ್ದರು. ಒಂದು ಸಮಸ್ಯೆಯ ಕುರಿತು ಚೆನ್ನಾಗಿ ಆಲೋಚಿಸಿ ತರ್ಕಬದ್ಧವಾಗಿ  ವ್ಯಾಖ್ಯಾನ ಮಾಡುತ್ತಿದ್ದರು.

ಸಂಸತ್ತಿನಲ್ಲಿ ಯಾವುದೇ ವಿಷಯ ಮಾತನಾಡುವಾಗ ಅಟಲ್ ಜಿ ತಮ್ಮ ವಾದವನ್ನು ನಿಚ್ಚಿತ ರೂಪದಲ್ಲಿ ಮಂಡಿಸುತ್ತಿದ್ದರು. ಸರಳವಾಗಿ ಎಲ್ಲರಿಗೂ ಅರ್ಥವಾಗುವ ಹಾಗೇ ಮಾತನಾಡುತ್ತಿದ್ದರು. ಕಳೆದ ನಲವತ್ತು ವರ್ಷದ ಅವಧಿಯಲ್ಲಿ ಅವರು ಲೋಕಸಭೆಯಲ್ಲಿ ಮಾಡಿದ ಭಾಷಣ ಸುಮಾರು 500 ಪುಟಗಳಿಗಿಂತಲೂ ಅಧಿಕ. ಉದ್ರಿಕ್ತ ಅಥವಾ ಉದ್ರೇಕವಾದ ಭಾವನೆ ಅವರ ಅವರ ಮಾತುಗಳಲ್ಲಿ ಕಂಡುಬರುವುದಿಲ್ಲ.

ಅವರು ಆಡಿದ ಮಾತು ಮಾತಲ್ಲ ಅದು ಮುತ್ತು. ಆ ಸರಳ ಮಾತುಗಾರಿಕೆ ಶುದ್ಧ ಸ್ವಚ್ಛ ಮಧುರ ಹಾಗೂ ಕಾವ್ಯಮಯ. ನೆಹರು ಅಟಲ್ ಜಿ ಯವರ ವಾಕ್ ಚಾತುರ್ಯ ಕಂಡು ಬೆರಗಾಗಿದ್ದರು. ಒಮ್ಮೆ ನೆಹರು ಸರ್ಕಾರದ ವಿದೇಶಾಂಗ ನೀತಿಯನ್ನು ಖಂಡಿಸುತ್ತಾ ಅಟಲ್ ಜಿ  ಹಿಂದಿಯಲ್ಲಿ ಮಾತನಾಡಿದರಂತೆ. ಆಗ ಅಟಲ್ ಜಿ ಯವರ ಮಾತನ್ನು ಆಲಿಸಿದ ನೆಹರು ಹಿಂದಿಯಲ್ಲೇ ಸಮಾಧಾನ ನೀಡಿದರಂತೆ. ನೆಹರು ಅಟಲ್ ಜಿ ಯನ್ನು ಉದಯೋನ್ಮುಖ ರಾಜಕಾರಣಿ ಎಂದು ವಿದೇಶೀ ಗಣ್ಯರಿಗೆ ಪರಿಚಯ ಮಾಡಿಕೊಡುತ್ತಿದ್ದರಂತೆ. 1994 ರಲ್ಲಿ ಅಟಲ್ ಜಿಯವರಿಗೆ ಸರ್ವ ಶ್ರೇಷ್ಟ ಸಂಸದೀಯ ಪಟು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸರಳ ಮತ್ತು  ಸ್ನೇಹ ಜೀವಿ:

ಅಟಲ್ ಜಿ ಸರಳ ಜೀವಿಯಾಗಿದ್ದರು. ಅವರ ನೆಚ್ಚಿನ ಉಡುಪು ಕುರ್ತಾ-ಪೈಜಾಮ್ ಮತ್ತು ಕುರ್ತಾ ಧೋತಿ. ಅಪರೂಪಕೊಮ್ಮೆ ಸೂಟ್ ಧರಿಸುತ್ತಿದ್ದರು. ವಿದೇಶ ಪ್ರಯಾಣದ ಸಂದರ್ಭದಲ್ಲಿ ವಿದೇಶೀ ಉಡುಪು ಧರಿಸುತ್ತಿದ್ದರು.ಅಟಲ್ ರವರು ಬಾಲ್ಯದಿಂದಲೇ ಸ್ನೇಹ ಜೀವಿಯಾಗಿದ್ದರು.ಅವರು ಯಾರನ್ನು ದ್ವೆಷಿಸಿದವರಲ್ಲ, ಯಾರೊಂದಿಗೂ ಜಗಳವಾಡಿದವರಲ್ಲ. ಎಲ್.ಕೆ ಅಡ್ವಾಣಿ, ಜಸ್ವಂತ್ ಸಿಂಗ್, ಎನ್.ಎಂ ಘಟಾಟೆ, ಬೈರೋನ್ ಸಿಂಗ್ ಷೇಕವಾತ್, ಮುಕುಂದ ಮೋದಿ ಮುಂತಾದವರು ಅಟಲ್ ರ ಆಪ್ತಮಿತ್ರರು.ಎಲ್ಲ ರಾಜಕೀಯ ಪಕ್ಷಗಳಲ್ಲೂ ಅಟಲ್ ರವರರಿಗೆ ಸ್ನೇಹಿತರಿದ್ದಾರೆ.

ವಾಜಪೇಯಿ ಅವರ ಸರಳ ವ್ಯಕ್ತಿತ್ವ ಆದರ್ಶ ವಿಚಾರಗಳಿಂದ ದೇಶ ವಿದೇಶಗಳಲ್ಲಿ ಸ್ನೇಹಜೀವಿ ಎಂದೇ ಪ್ರಸಿದ್ದರಾಗಿದ್ದಾರೆ. ಶತ್ರು ರಾಷ್ಟ್ರ ಪಾಕಿಸ್ತಾನಿಯರು ಕೂಡ ವಾಜಪೇಯಿ ಅವರ ಸ್ನೇಹಕ್ಕೆ ಪಾತ್ರರಾಗಿದ್ದಾರೆ. ಹೀಗಾಗಿಯೇ ಅವರು ಭಾರತದಿಂದ ಪಾಕಿಸ್ತಾನಕ್ಕೆ ಬಸ್ ಸಂಚಾರ ಆರಂಭಿಸಿದ್ದು. ಇದು ಅವರ ಸ್ನೇಹಕ್ಕೆ ಹಿಡಿದ ಕನ್ನಡಿಯಾಗಿದೆ.1999 ರ ಕಾರ್ಗಿಲ್ ಯುದ್ದದಲ್ಲಿ ಪಾಕಿಸ್ತಾನ ಸೋತಾಗ ಪಾಕ್ ಪ್ರಧಾನಿ ನವಾಜ್ ಷರೀಫ್ ನನ್ನು ಸೇನಾಧಿಕಾರಿ ಪ್ರವೇಜ್ ಮುಷರಫ್  ಸೆರೆಯಲ್ಲಿ ಇಟ್ಟಾಗ, ಷರೀಫ್ ಮಗ ಅಟಲ್ ಜಿ ಯವರಲ್ಲಿ ತನ್ನ ತಂದೆಯನ್ನು ಉಳಿಸಿಕೊಡಿ ಎಂದು ವಿನಂತಿಸಿದಾಗ, ಮಾನವೀಯತೆ ಆಧಾರದ ಮೇಲೆ ಆತನ ಮನವಿ ಅಟಲ್ ಬಿಹಾರಿ ವಾಜಪೇಯಿಯವರ ಹೃದಯಕ್ಕೆ ನಾಟಿತು.

ಇದು ಎಂತ ವಿಪರ್ಯಾಸ! ಯಾವ ವೈರಿ ದೇಶವು ತಮ್ಮ ವಿರುದ್ದ ಹೊರಡುತ್ತಿತ್ತೋ ಮತ್ತು ಯಾರು ಅದರ ಮುಂದಾಳು ಆಗಿದ್ದರೋ ಅವರ ಮಗನೇ ವಿನಂತಿಸಿಕೊಂಡಾಗ ಹಿಂದಿನದನ್ನು ಲೆಕ್ಕಿಸದೇ ಅವನ ತಂದೆಯನ್ನು ರಕ್ಷಿಸಲು ಅವರ ಮುಂದೆ ಬಂದರು.ಇದರಿಂದಲೇ ಅವರನನ್ನು ಭಾರತದ ಅಜಾತ ಶತ್ರು ಎಂದು ಕರೆಯುವುದು. ಅಟಲ್ ಜಿ ಸ್ನೇಹ ಜೀವಿಯಾಗಿದ್ದರಿಂದಲೇ ಅವರು ಬಹು ಪಕ್ಷಗಳನ್ನು ಕೂಡಿಸಿಕೊಂಡು ದಕ್ಷ ಆಡಳಿತ ನೀಡಲು ಸಾಧ್ಯವಾಗಿದ್ದು.

ಸ್ವಂತ ಮನೆ ಇಲ್ಲ :

ಅಟಲ್ ರವರು ಲಾಲ್ ಬಹದ್ದೂರ್ ಶಾಸ್ತ್ರೀಯವರಂತೆ ಸ್ವಂತ ಮನೆ ಹೊಂದಿರಲಿಲ್ಲ.  ಗ್ವಾಲಿಯರ್ನಲ್ಲಿ ಇದ್ದ ತಮ್ಮ ತಂದೆಯ ಮನೆಯನ್ನು ವಾಜಪೇಯಿಯವರು ಗ್ರಂಥಾಲಯವಾಗಿ ಪರಿವರ್ತಿಸಿದ್ದಾರೆ. ಈಗ ಅದು ಸಾರ್ವಜನಿಕ ಗ್ರಂಥಾಲಯ. ಇಂದಿನವರೆಗೂ ಅಟಲ್ ರವರಿಗೆ ಸ್ವಂತ ಮನೆಯಿಲ್ಲ. ರಾಜಕೀಯದಲ್ಲಿ ಯಾವುದಾದರೂ ಪದವಿ ಪಡೆದ ವರ್ಷಗಳಲ್ಲಿ ಮನೆ, ಕಾರು, ಹಣ ಮಾಡಿಕೊಳ್ಳುವ ಜನರಿದ್ದಾರೆ. ಆದರೆ ಕಳೆದ 45 ವರ್ಷಗಳಿಂದ ರಾಜಕಿಯದಲ್ಲಿದ್ದು ಇನ್ನು ಸ್ವಂತ ಮನೆ ಹೊಂದದಿರುವುದು ಅಚ್ಚರಿಯ ಸಂಗತಿ. ಅಟಲ್ ರವರು ಅನೇಕ ವರ್ಷಗಳ ಕಾಲ ಪಕ್ಷದ ಕಛೇರಿಯಲ್ಲೇ ಮಲಗುತ್ತಿದ್ದರು. ಪಕ್ಷದ ಕಾರ್ಯಾಲಯವೇ ಅವರ ಮನೆಯಾಗಿತ್ತು.

ಬ್ರಹ್ಮಚಾರಿಯಾಗಿ :

ಅಟಲ್ ಜಿ ಬ್ರಹ್ಮಚಾರಿಯೇ?, ಅವರು ಅವಿವಾಹಿತರೇ?  ಅನೇಕರ ಮನಸ್ಸಿನಲ್ಲಿ ಈ ಪ್ರಶ್ನೆಗಳು ಸುಳಿದಾಡಿದ್ದು ಉಂಟು. ಕೆಲವರು ಇದನ್ನೇ ದೊಡ್ಡ ವಿಷಯ ಮಾಡಿದರು.ಅಟಲ್ ಬಿಹಾರಿ ವಾಜಪೇಯಿಯವರು ಮದುವೆಯಾಗದೆ ಬ್ರಹ್ಮಚಾರಿಯಾಗಿಯೇ ಉಳಿದವರು. ಅವರು ಯಾವ ಹೆಣ್ಣನ್ನೂ ಕೆಟ್ಟ ಕಣ್ಣಿನಿಂದ ನೋಡದೆ ಅವರೆಲ್ಲರೂ ನನ್ನ ಸಹೋದರಿಯರು ಎಂದು ಹೇಳುತ್ತಿದ್ದರು. ಅವರು ಜೀವನ ಪೂರ್ತಿ ಅವಿವಾಹಿತರಾಗಿ ಉಳಿದರು.

ಅಟಲ್ ರವರು ವಿದೇಶಾಂಗ ಮಂತ್ರಿಯಾಗಿದ್ದಾಗ ಪ್ರಧಾನಿ ಮೊರಾರ್ಜಿ ದೇಸಾಯಿ ಅವರೊಂದಿಗೆ ರಶಿಯಾಕ್ಕೆ ಹೋದಾಗ ಅಟಲ್ ರವರು ಭಾರತೀಯ ವಿದ್ಯಾರ್ಥಿಗಳಿಗೆ ಕುಡಿಯಲು ಪ್ರಚೋದಿಸಿದರು ಎಂದು ಅವರು ರಾಜಕೀಯ ವಿರೋಧಿಗಳು ಗಲಾಟೆ ಮಾಡಿದರು. ಆದರೆ ಅಂದು ಅಲ್ಲಿ ಅಟಲ್ ರವರು ವಿದ್ಯಾರ್ಥಿಗಳಿಗೆ ಕುಡಿಯಿರಿ ಕುಡಿಯಿರಿ ಮದ್ಯವಲ್ಲ, ಸ್ವಮೂತ್ರ ಎಂದು ಹೇಳಿದ್ದರು. ಅದನ್ನೇ ತಪ್ಪಾಗಿ ಅರ್ಥೈಸಲಾಗಿತ್ತು.

1999ರ ಲಾಹೋರ್‌ ಶೃಂಗದ ವೇಳೆ ಪಾಕ್‌ ಪ್ರಧಾನಿ ನವಾಝ್‌ ಶರೀಫ್‌ ಜತೆಯಲ್ಲಿ.
1999ರ ಲಾಹೋರ್‌ ಶೃಂಗದ ವೇಳೆ ಪಾಕ್‌ ಪ್ರಧಾನಿ ನವಾಝ್‌ ಶರೀಫ್‌ ಜತೆಯಲ್ಲಿ.

ಭಾರತ ರತ್ನ ಪ್ರಶಸ್ತಿ   ಭಾಜನರಾದ       

ಬಿಜೆಪಿ ಪಕ್ಷ ತಾವು 2014ರ ಚುನಾವಣೆಯಲ್ಲಿ ಗೆದ್ದರೆ ಅಟಲ್ ಬಿಹಾರಿ ವಾಜಪೇಯಿಯವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೇಳಿಕೆ ಕೊಟ್ಟಿತು. ಆಗ ಒಬ್ಬ ಕಾಂಗ್ರೆಸ್ ನಾಯಕರು  ಈ ರೀತಿಹೇಳಿಕೆಕೊಟ್ಟರು. ಚಲೇಜಾವ್  ಚಳುವಳಿ ಸಮಯದಲ್ಲಿ ಬಂಧನವಾದಾಗ ಅಟಲ್ ಬಿಹಾರಿ ವಾಜಪೇಯಿ ‘ ನಾನು ನಿರಪರಾಧಿ ನನನ್ನು ಬಿಟ್ಟು ಬಿಡಿ ’ ಎಂದು ಪೋಲೀಸರ ಎದುರು ಬೇಡಿಕೊಂಡಿದ್ದರು ಆಗಾಗಿ ಅವರು  ಭಾರತ ರತ್ನ ಪ್ರಶಸ್ತಿಗೆ ಅರ್ಹರಲ್ಲ ಎಂದರು.

ಭಾರತ ರತ್ನ ನೀಡುವ ಸಂದರ್ಭ

ಆದರೆ ಅಂದು ಅಟಲ್ ಜಿ ಅಪ್ಪನ ಕಣ್ಣು ತಪ್ಪಿಸಿ ಚಳುವಳಿಯಲ್ಲಿ ಭಾಗವಹಿಸಿ ಬಾಲ ಅಪರಾಧಿಯಾಗಿ 24 ದಿನ ಸೆರೆವಾಸ ಅನುಭವಿಸಿದ್ದರು. ಈ ಕುರಿತು ಅಟಲ್ ಜಿ ಒಮ್ಮೆ ತಮ್ಮ ಹಾಸ್ಯ ಮಾತಿನ ಶೈಲಿಯಿಂದ ಹೇಳಿದ್ದರು. ದೇಶಕ್ಕೆ ಅವರ ಕೊಡುಗೆ ಅಪಾರ. ಅಟಲ್ ಜಿ ಎಂದಿಗೂ ಪ್ರಶಸ್ತಿ ಬಯಸಿದವರಲ್ಲ. ಅವರು ಎಂದಿಗೂ ಪ್ರಶಸ್ತಿ ಹಿಂದೆ ಬೀಳಲಿಲ್ಲ.  ನೆಹರು, ಇಂದಿರಾಗಾಂಧಿ ತಮಗೇ ತಾವೇ ತಮ್ಮ ಹೆಸರನ್ನು ಭಾರತ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಿಕೊಂಡು ಪ್ರಶಸ್ತಿ ಪಡೆದುಕೊಂಡರು.ಆದರೆ ಅಟಲ್ ಜಿ ಹಾಗೇ ಮಾಡಲಿಲ್ಲ. ಇವರ ಮುಂದೆ ಅಟಲ್ ಜಿ ವಿಶಿಷ್ಟವಾಗಿ ಕಾಣುತ್ತದೆ. ಹಾಗಾಗಿ ಅಟಲ್ ಜಿ ಎಂದಿಗೂ 128 ಕೋಟಿ ಜನರ ಭಾರತ ರತ್ನ ಎಂಬ ಮಾತು ನೂರಕ್ಕೆ ನೂರು ಸತ್ಯ.

ಅಟಲ್ ಬಿಹಾರಿ ವಾಜಪೇಯಿ ಅವರು ಡಿಸೆಂಬರ್ 25 ರಂದು ಜನಿಸಿದರು. ಡಿಸೆಂಬರ್ 25  ಏಸು ಜನ್ಮ ತಾಳಿದ ದಿನವು ಹೌದು. ಆದುದರಿಂದ ಭಾರತೀಯರ ಉದ್ದಾರಕ್ಕಾಗಿ ಜನ್ಮತಾಳಿದ ಏಸು ಅಟಲ್ ಜಿ ಎಂದರೆ ತಪ್ಪಿಲ್ಲ. ಇಂದು ಪ್ರತಿಯೋಬ್ಬ ಭಾರತೀಯ ಪ್ರಜೆಯೂ ಅವರನ್ನು ನೆನೆಯಬೇಕು.  ಮಹಾನ್ ನಾಯಕ, ಕವಿ, ರಾಜಕೀಯ ಮುತ್ಸದಿ, ಸ್ನೇಹ ಜೀವಿ, ಸರಳ ಜೀವಿ. ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿಯವರ ಆದರ್ಶ ನಮಗೆ ಮಾದರಿಯಾಗಲಿ.

ವಾಜಪೇಯಿ ಜೊತೆ ಮಾಜಿ ಪ್ರದಾನಿ ಮನಮೋಹನ್​​ ಸಿಂಗ್​​
ಶಿವಸೇನಾ ಸ್ಥಾಪಕ ಬಾಳಾ ಠಾಕ್ರೆಯೊಂದಿಗೆ..
ಶಿವಸೇನಾ ಸ್ಥಾಪಕ ಬಾಳಾ ಠಾಕ್ರೆಯೊಂದಿಗೆ..
2001ರ ಆಗ್ರಾ ಶೃಂಗದ ಸಂದರ್ಭ ಪಾಕ್‌ನ ಅಂದಿನ ಅಧ್ಯಕ್ಷ ಜನರಲ್‌ ಪರ್ವೇಝ್‌ ಮುಷರಫ್‌ರೊಂದಿಗೆ.
2001ರ ಆಗ್ರಾ ಶೃಂಗದ ಸಂದರ್ಭ ಪಾಕ್‌ನ ಅಂದಿನ ಅಧ್ಯಕ್ಷ ಜನರಲ್‌ ಪರ್ವೇಝ್‌ ಮುಷರಫ್‌ರೊಂದಿಗೆ.
1998ರ ಆಪರೇಷನ್‌ ಶಕ್ತಿ ಅಣ್ವಸ್ತ್ರ ಪರೀಕ್ಷೆ ವೇಳೆ, ಮಾಜಿ ರಾಷ್ಟ್ರಪತಿ ಹಾಗು ಭಾರತದ ಅಣ್ವಸ್ತ್ರ ಪಿತಾಮಹ ಅಬ್ದುಲ್‌ ಕಲಾಂರೊಂದಿಗೆ. ಪೋಖ್ರಾಣ್‌ ಮರುಭೂಮಿ, ರಾಜಸ್ಥಾನ.
1998ರ ಆಪರೇಷನ್‌ ಶಕ್ತಿ ಅಣ್ವಸ್ತ್ರ ಪರೀಕ್ಷೆ ವೇಳೆ, ಮಾಜಿ ರಾಷ್ಟ್ರಪತಿ ಹಾಗು ಭಾರತದ ಅಣ್ವಸ್ತ್ರ ಪಿತಾಮಹ ಅಬ್ದುಲ್‌ ಕಲಾಂರೊಂದಿಗೆ. ಪೋಖ್ರಾಣ್‌ ಮರುಭೂಮಿ, ರಾಜಸ್ಥಾನ.
1978ರಲ್ಲಿ ಅಮೆರಿಕ ಅಧ್ಯಕ್ಷ ಜಿಮ್ಮಿ ಕಾರ್ಟರ್‌ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭ. ವಿದೇಶಾಂಗ ಸಚಿವ ವಾಜಪೇಯಿರೊಂದಿಗೆ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಕೂಡಾ ಚಿತ್ರದಲ್ಲಿದ್ದಾರೆ.

Please follow and like us:
0
http://bp9news.com/wp-content/uploads/2018/08/vajpayee-1482668964.jpghttp://bp9news.com/wp-content/uploads/2018/08/vajpayee-1482668964-150x150.jpgBP9 Bureauಅಂಕಣಪ್ರಮುಖರಾಜಕೀಯರಾಷ್ಟ್ರೀಯನವದೆಹಲಿ : ದೇಶ ಕಂಡ ಅಪರೂಪದ ರಾಜಕಾರಣಿ ಎಂದರೆ ಅಟಲ್ ಬಿಹಾರಿ ವಾಜಪೇಯಿ. ರಾಜಕೀಯ ಮುತ್ಸದ್ದಿಯಾಗಿ, ಕವಿಯಾಗಿ, ಶ್ರೇಷ್ಟ ಪ್ರಧಾನ ಮಂತ್ರಿಯಾಗಿ ಅಟಲ್  ದೇಶಕ್ಕೆ ನೀಡಿದ ಕೊಡುಗೆ ಅಪಾರ. ಅವರ ಆದರ್ಶ ಹಾಗೂ ಪ್ರಾಮಾಣಿಕ ಜೀವನ ಇಂದಿನ ರಾಜಕಾರಣಿಗಳಿಗೆ ಮಾದರಿ.ಅವರ ದೇಶ ಪ್ರೇಮ ಮತ್ತು ನಿಷ್ಕಳಂಕ ವ್ಯಕ್ತಿತ್ವ ನಮಗೆಲ್ಲರಿಗೂ ಆದರ್ಶ.ಸುಮಾರು ನಾಲ್ಕು  ದಶಕದ ಕಾಲ ರಾಜಕಾರಣದಲ್ಲಿ ಅಜಾತ ಶತ್ರುವೆಂದೇ ಪ್ರಸಿದ್ಧರಾದ ಅಟಲ್ ಬಿಹಾರಿ ವಾಜಪೇಯಿ ಇಂದು ಅಮರರಾಗಿದ್ದಾರೆ.ಅವರು ನಡೆದು...Kannada News Portal