ನವದೆಹಲಿ
: ಆಪರೇಷನ್ ಕಮಲದ ಆತಂಕ, ಸಚಿವ ಡಿ.ಕೆ. ಶಿವಕುಮಾರ್ ಮೇಲೆ ಇಡಿಯಲ್ಲಿ ದೂರು ದಾಖಲು, ಬಿರುಸುಗೊಂಡಿರುವ ಬಣ ರಾಜಕೀಯ ಮತ್ತು ಸಚಿವ ಸ್ಥಾನದ ಆಕಾಂಕ್ಷಿಗಳ ಅಸಮಾಧಾನಕ್ಕೆ ಪರಿಹಾರ ಕಂಡುಕೊಳ್ಳಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಾಳೆ ರಾಜ್ಯ ಕಾಂಗ್ರೆಸ್ ನಾಯಕರ ಸಭೆ ಕರೆದಿದ್ದಾರೆ. ಇಂದಿನ ಸಭೆಯಲ್ಲಿ ಏನೇನು ಚರ್ಚೆಯಾಗಬಹುದು? ‌ಕಾಂಗ್ರೆಸ್ ಹೈಕಮಾಂಡ್ ಲೆಕ್ಕಾಚಾರ ಏನಿರಬಹುದು? ರಾಹುಲ್ ಗಾಂಧಿ ರಾಜ್ಯದ ನಾಯಕರಿಗೆ ಏನು ಹೇಳಬಹುದು? ಎಂಬ ಸಂಪೂರ್ಣ ವಿವರ ಇಲ್ಲಿದೆ.

 ರಾಜ್ಯದ ನಾಯಕರನ್ನು ಕರೆದ ರಾಹುಲ್ :

ಬಂಡಾಯ, ಬಣ ರಾಜಕೀಯ ಮತ್ತು ಸ್ವಪ್ರತಿಷ್ಠೆಗಳು ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನೇ ಅಪೋಶನ ತೆಗೆದುಕೊಳ್ಳುವ ಹಂತ ತಲುಪಿದ ಹಿನ್ನೆಲೆಯಲ್ಲಿ ಈಗ ಕಾಂಗ್ರೆಸ್ ಹೈಕಮಾಂಡೇ ನೇರವಾಗಿ ಸಮಸ್ಯೆ ಬಗೆಹರಿಸಲು ಮುಂದಾಗಿದೆ. ಕಳೆದ ಹದಿನೈದು ದಿನಗಳಿಂದ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿದ್ದ ಬಿಕ್ಕಟ್ಟು ಪರಿಹರಿಸು ನಿರ್ಧರಿಸಿದೆ. ಅದರಿಂದಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಕಾಂಗ್ರೆಸ್ ನಾಯಕರ ಸಭೆ ಕರೆದಿದ್ದಾರೆ.

ಸಭೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮತ್ತು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರನ್ನು ಆಹ್ವಾನಿಸಲಾಗಿದೆ. ಜಲಸಂಪನ್ಮೂಲ ಸಚಿವ ಮತ್ತು ಸದ್ಯದ ಸಮಸ್ಯೆಯ ಮೂಲ ವ್ಯಕ್ತಿ ಡಿ.ಕೆ. ಶಿವಕುಮಾರ್ ಅವರನ್ನೂ ಆಹ್ವಾನಿಸಲಾಗಿತ್ತು. ಆದರೀಗ ಅವರ ಮೇಲೆ ಜಾರಿ ನಿರ್ದೇಶನಾಲಯ ದೂರು ದಾಖಲಿಸಿಕೊಂಡಿರುವುದರಿಂದ ಕಡೆ ಕ್ಷಣದಲ್ಲಿ ಅವರ ಹೆಸರನ್ನು ಕೈಬಿಡಲಾಗಿದೆ.

ಪಿನ್ ಟು ಪಿನ್ ಮಾಹಿತಿ ‌ಪಡೆಯಲಿರುವ ರಾಹುಲ್ ಗಾಂಧಿ 

ಈಗಾಗಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರಿಂದ ಮಾಹಿತಿ ಸಂಗ್ರಹಿಸಿರುವ ರಾಹುಲ್ ಗಾಂಧಿ, ನಾಳೆ ಮತ್ತೊಮ್ಮೆ ರಾಜ್ಯದ ಎಲ್ಲಾ ನಾಯಕರ ಜೊತೆಯೂ ಒನ್ ಟು ಒನ್ ಮಾತನಾಡಿ ಪಿನ್ ಟು ಪಿನ್ ಮಾಹಿತಿ ಸಂಗ್ರಹಿಸಲಿದ್ದಾರೆ. ಬಳಿಕ ಎಲ್ಲರ ಅಭಿಪ್ರಾಯಗಳನ್ನು ಆಧರಿಸಿ, ಎಲ್ಲರ ಜೊತೆ ಚರ್ಚೆ ಮಾಡಿ ಎಲ್ಲಾ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು.

ಬಂಡಾಯ ಶಮನಕ್ಕೆ ಮೊದಲ ಆದ್ಯತೆ; ಸರ್ಕಾರ ಉಳಿಸಿಕೊಳ್ಳುವುದಕ್ಕೆ ಪ್ರಾಮುಖ್ಯತೆ:

ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಸುಗಮವಾಗಿ ಸಾಗಬೇಕಿರುವುದು ಕಾಂಗ್ರೆಸ್ ಹೈಕಮಾಂಡಿಗೆ ಅತ್ಯಗತ್ಯವಾಗಿದೆ. ರಾಷ್ಟ್ರ ಮಟ್ಟದಲ್ಲಿ ಮಹಾಮೈತ್ರಿ ಸಾಧಿಸಲು ಪ್ರಯತ್ನಿಸುತ್ತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಇರುವ ಮೈತ್ರಿಯನ್ನು ಮುರಿದುಕೊಳ್ಳಲು ಹೈಕಮಾಂಡ್ ಸುತಾರಾಂ ಸಿದ್ದವಿಲ್ಲ‌. ಕರ್ನಾಟಕದ ಮೈತ್ರಿ ಸರ್ಕಾರಕ್ಕೆ ಧಕ್ಕೆಯಾದರೆ ರಾಷ್ಟ್ರ ಮಟ್ಟದಲ್ಲಿ ಸಂಭವನೀಯ ಮಹಾಮೈತ್ರಿಗೆ ಮಾರಕವಾಗಲಿದೆ ಎನ್ನುವ ಕಾರಣಕ್ಕೆ ಮೊದಲಿಗೆ ಮೈತ್ರಿ ಸರ್ಕಾರ ಉಳಿಸಿಕೊಳ್ಳುವುದಕ್ಕೆ ಪ್ರಾಧಾನ್ಯತೆ ನೀಡಲಾಗುತ್ತದೆ.

ಹೈಕಮಾಂಡಿನ ಈ ನಿಲುವನ್ನು ರಾಹುಲ್ ಗಾಂಧಿ ನಾಳಿನ ಸಭೆಯಲ್ಲಿ ರಾಜ್ಯದ ನಾಯಕರಿಗೆ ಇನ್ನಷ್ಟು ಖಚಿತವಾಗಿ ಹೇಳಲಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಇದಕ್ಕೆ ಪೂರಕವಾಗಿ ಉದ್ಭವಿಸಿರುವ ಬಂಡಾಯ, ಭಿನ್ನಮತ, ಬಣ ರಾಜಕೀಯ ಮತ್ತು ಕೆಲ ನಾಯಕರ ಸ್ವಪ್ರತಿಷ್ಠೆಗಳನ್ನು ಹತ್ತಿಕ್ಕಲು ಹುಕುಂ ಹೊರಡಿಸುವ ಸಾಧ್ಯತೆಯೂ ಇದೆ.

ಮುನಿದವರನ್ನು ಮನವೊಲಿಸುವ ಹೊಣೆಗಾರಿಕೆ ಸಿದ್ದು ಹೆಗಲಿಗೆ !

ವೈಯಕ್ತಿಕ ಕಾರಣಗಳಿಗೆ ಹಾಗೂ ಸಚಿವ ಸ್ಥಾನ ಸಿಗದೆ ಬಂಡಾಯ ಎದ್ದಿರುವ, ಮುಖ್ಯವಾಗಿ ಜಾರಕಿಹೊಳಿ ಸಹೋದರರು ಹಾಗೂ ಬಳ್ಳಾರಿ ಶಾಸಕರ ಮನವೊಲಿಸುವ ಜವಾಬ್ದಾರಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡುವ ಸಾಧ್ಯತೆ ಇದೆ. ಜೊತೆಗೆ ಸಚಿವ ಡಿ.ಕೆ. ಶಿವಕುಮಾರ್ ಅವರಿಂದಲೇ ಸಮಸ್ಯೆಯಾಗುತ್ತಿದೆ ಎಂಬ ಮಾತು ಎಲ್ಲಡೆಯಿಂದ ಕೇಳಿಬರುತ್ತಿರುವುದರಿಂದ ಅವರಿಗೆ ಬುದ್ದಿವಾದ ಹೇಳಿ ಅಥವಾ ಖಡಕ್ ಆಗಿ ಎಚ್ಚರಿಸಿ ಸುಮ್ಮನಾಗಿಸುವ ಸಾಧ್ಯತೆಯಿದೆ.

ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಬಗ್ಗೆಯೂ ಸಮಾಲೋಚನೆ !!!

ಬಿಜೆಪಿ‌ಯ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಆಪರೇಷನ್ ಕಮಲ ಮಾಡಲು ತುದಿಗಾಲಲ್ಲಿ ನಿಂತಿರುವುದರಿಂದ ಇದರಿಂದ ಪಾರಾಗುವ ಬಗೆ ಹೇಗೆ ಎಂಬ ಬಗ್ಗೆ ನಾಳಿನ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ. ಆಪರೇಷನ್ ಕಮಲಕ್ಕೆ ಹೇಗೆ ಪ್ರತ್ಯುತ್ತರ ನೀಡಬೇಕು ಎಂಬ ಬಗ್ಗೆಯೂ ಚರ್ಚೆಯಾಗಲಿದೆ.

ತಮ್ಮ ಪಕ್ಷದ ಶಾಸಕರು ಆಪರೇಷನ್ ಕಮಲಕ್ಕೆ ಬಲಿಯಾಗದಂತೆ ಅವರನ್ನು ಹೇಗೆ ಮನವೊಲಿಸಬೇಕು? ಅವರ ಸಮಸ್ಯೆ ಏನು? ಅದನ್ನು ಯಾರು ಪರಿಹರಿಸಬೇಕು? ಸಮಸ್ಯೆ ಸರ್ಕಾರದಿಂದಲೋ‌ ಅಥವಾ ಪಕ್ಷದಿಂದಲೋ? ಪಕ್ಷದ ಸಮಸ್ಯೆಯಾದರೆ ತಕ್ಷಣವೇ ಸಂಬಂಧಪಟ್ಟವರು ಕ್ರಮ ತೆಗೆದುಕೊಳ್ಳಬೇಕು.‌ ಸರ್ಕಾರದಿಂದ ಸಮಸ್ಯೆ ಆಗುತ್ತಿದ್ದರೆ ಕೂಡಲೇ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೊತೆ ಮಾತನಾಡಿ, ಅಗತ್ಯ ಬಿದ್ದರೆ ಸಮನ್ವಯ ಸಮಿತಿ ಸಭೆ ಕರೆದು ಬಗೆಹರಿಸಬೇಕೆಂಬ ನಿಟ್ಟಿನಲ್ಲಿ ಚರ್ಚೆಯಾಗಲಿದೆ

ಆತಂಕ ಸೃಷ್ಟಿಸಿರುವ ನಿಗಮ‌ ಮಂಡಳಿ ನೇಮಕ

ಕಾಂಗ್ರೆಸ್ ಪಾಲಿನ ಆರು ಸಚಿವ ಸ್ಥಾನ ಖಾಲಿ ಇವೆ.‌ ಜೊತೆಗೆ 32 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮಾಡಬೇಕಿದೆ. ಆಷಾಡ ಬಳಿಕ ಐದು ಸಚಿವ ಸ್ಥಾನದ ವಿಸ್ತರಣೆ ಆಗುತ್ತೆ, 20 ನಿಗಮ ಮಂಡಳಿಗಳಿಗೆ ನೇಮಕ ಆಗುತ್ತೆ ಎಂದು ಹೇಳಲಾಗುತ್ತಿತ್ತು. ಹೈಕಮಾಂಡ್ ಸೆಪ್ಟೆಂಬರ್ 3ನೇ ವಾರದಲ್ಲಿ ನೇಮಕ ಮಾಡುವಂತೆ ರಾಜ್ಯನಾಯಕರಿಗೆ ಗ್ರೀನ್ ಸಿಗ್ನಲ್ ನೀಡಿತ್ತು.

ಈ ಮಧ್ಯೆ ರಾಜ್ಯ ರಾಜ್ಯಕಾರಣದಲ್ಲಿ ಮಹತ್ವದ ಬೆಳವಣಿಗ ನಡೆದಿದ್ದು ಈ ವೇಳೆ ಸಂಪುಟ ವಿಸ್ತರಣೆ ಸರಿಯಲ್ಲ ಎಂದುಕೊಂಡ ಹೈಕಮಾಂಡ್ ಕೆಲ ದಿನಗಳ ಹಿಂದೆಯಷ್ಟೆ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ನೇಮಕಕ್ಕೆ ಹೈಕಮಾಂಡ್ ಕೊಕ್ಕೆ ಹಾಕಿತ್ತು. ಈಗ ನಿಗಮ ಮಂಡಳಿ ಹಾಗೂ ಸಚಿವ ಸ್ಥಾನದ ಆಕಾಂಕ್ಷಿಗಳು ಬಂಡಾಯ ಎದ್ದಿದ್ದು ಸಂಪುಟ ವಿಸ್ತರಣೆ ಹಾಗೂ ಮಂಡಳಿಗಳಿಗೆ ನೇಮಕ ಮಾಡಬೇಕೋ ಬೇಡವೋ ಎಂಬ ಗೊಂದಲ ಸೃಷ್ಟಿಯಾಗಿದೆ. ಈ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಲಿದೆ.

ವಿಧಾನ ಪರಿಷತ್ತಿಗೆ ಹೆಸರು ಅಂತಿಮ‌ಗೊಳಿಸುವ ಸಾಧ್ಯತೆ

ರಾಜ್ಯ ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಮೂರು ಸ್ಥಾನಗಳ ಪೈಕಿ ಜೆಡಿಎಸ್ ಗೆ ಒಂದು ಸ್ಥಾನ ಬಿಟ್ಟುಕೊಟ್ಟು ಕಾಂಗ್ರೆಸ್ ಎರಡು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಹೂಡುವ ಚಿಂತನೆ ನಡೆಸಿದೆ. ಅಭ್ಯರ್ಥಿಗಳ ದೊಡ್ಡ ಪಟ್ಟಿ ತೆಗೆದುಕೊಂಡು ದೆಹಲಿಗೆ ಬಂದಿರುವ ರಾಜ್ಯ ನಾಯಕರು ರಾಹುಲ್ ಗಾಂಧಿ ಜತೆ ಚರ್ಚಸಿ ಎರಡು ಹೆಸರುಗಳನ್ನು ಫೈನಲ್ ಮಾಡಲಿದ್ದಾರೆ. ಜತೆಗೆ ಪರಿಷತ್ತಿಗೆ ನಾಮ ನಿರ್ದೇಶನ ಮಾಡುವ ವಿಚಾರವಾಗಿಯೂ ರಾಹುಲ್ ಜತೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.

ಪ್ರತ್ಯೇಕವಾಗಿ ರಾಹುಲ್ ಗಾಂಧಿ ಭೇಟಿಯಾಗಲಿರುವ ಸತೀಶ್ ಜಾರಕಿಹೊಳಿ

ರಾಜ್ಯ ನಾಯಕರ ಭೇಟಿಯ ಬಳಿಕ ಸಂಜೆ ಬಂಡಾಯ ಶಾಸಕ ಸತೀಶ್ ಜಾರಕಿಹೋಳಿ ಪ್ರತ್ಯೇಕವಾಗಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ. ಸತೀಶ್ ಜಾರಕಿಹೊಳಿ ಅವರ ಈ ನಡೆ ಇನ್ನಷ್ಟು ಕುತೂಹಲ ಮೂಡಿಸಿದೆ.

Please follow and like us:
0
http://bp9news.com/wp-content/uploads/2018/09/congress-2.pnghttp://bp9news.com/wp-content/uploads/2018/09/congress-2-150x150.pngBP9 Bureauಪ್ರಮುಖರಾಜಕೀಯರಾಷ್ಟ್ರೀಯನವದೆಹಲಿ : ಆಪರೇಷನ್ ಕಮಲದ ಆತಂಕ, ಸಚಿವ ಡಿ.ಕೆ. ಶಿವಕುಮಾರ್ ಮೇಲೆ ಇಡಿಯಲ್ಲಿ ದೂರು ದಾಖಲು, ಬಿರುಸುಗೊಂಡಿರುವ ಬಣ ರಾಜಕೀಯ ಮತ್ತು ಸಚಿವ ಸ್ಥಾನದ ಆಕಾಂಕ್ಷಿಗಳ ಅಸಮಾಧಾನಕ್ಕೆ ಪರಿಹಾರ ಕಂಡುಕೊಳ್ಳಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಾಳೆ ರಾಜ್ಯ ಕಾಂಗ್ರೆಸ್ ನಾಯಕರ ಸಭೆ ಕರೆದಿದ್ದಾರೆ. ಇಂದಿನ ಸಭೆಯಲ್ಲಿ ಏನೇನು ಚರ್ಚೆಯಾಗಬಹುದು? ‌ಕಾಂಗ್ರೆಸ್ ಹೈಕಮಾಂಡ್ ಲೆಕ್ಕಾಚಾರ ಏನಿರಬಹುದು? ರಾಹುಲ್ ಗಾಂಧಿ ರಾಜ್ಯದ ನಾಯಕರಿಗೆ ಏನು ಹೇಳಬಹುದು? ಎಂಬ ಸಂಪೂರ್ಣ ವಿವರ ಇಲ್ಲಿದೆ.  ರಾಜ್ಯದ...Kannada News Portal