ಇಡೀ ದೇಶದ ತುಂಬೆಲ್ಲಾ ಮೀಸಲಾತಿ & ಸಂವಿಧಾನದ್ದೇ ಸದ್ದುಗದ್ದಲ. ಒಂದು ವರ್ಗದ ಜನ ಮೀಸಲಾತಿ ಕೊಟ್ಟಿದ್ದು ಸಾಕು ಸಂವಿಧಾನ ಬದಲಿಸಬೇಕು ಅಂತಿದ್ರೆ, ಮತ್ತೊಂದು ಕಡೆ ಸಂವಿಧಾನ ಬದಲಾವಣೆಯ ವಿರುದ್ಧ ಬೀದಿಗಿಳಿದು ಹೋರಾಟ ಮಾಡ್ತೀರೋದಲ್ಲದೇ ಮೀಸಲಾತಿ & ಸಂವಿಧಾನದ ವಿಚಾರಕ್ಕೆ ಬಂದರೆ ಹಿಂಸೆಯನ್ನು ಎದುರಿಸಬೇಕಾಗುತ್ತೇ ಅನ್ನೋ ಮಾತನಾಡುತ್ತಿದ್ದಾರೆ. ಇಷ್ಟೆಲ್ಲಾ ದ್ವಂದ್ವಗಳ ನಡುವೆಯೇ ಈಗ ಮತ್ತೊಂದು ತರಹದ ವೇದನೆ & ಒಳಬೇಗುದಿ ದಲಿತ ಒಳಪಂಗಡಗಳಲ್ಲೇ ಶುರುವಾಗಿದೆ. ಒಟ್ಟಾಗಿ ತಮ್ಮ-ತಮ್ಮ ಹಕ್ಕಿಗಾಗಿ ಹೋರಾಟ ಮಾಡಬೇಕಿದ್ದ ಶೋಷಿತ ಸಮುದಾಯಗಳೇ ಈಗ ಒಬ್ಬರ ಮೇಲೋಬ್ಬರು ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಇದರ ನಡುವೆಯೇ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಹಚ್ಚಿದ ಬೆಂಕಿ ಒಳಗೊಳಗೆ ಧಗಧಗಿಸಲಾರಂಭಿಸಿದೆ. ಅದರ ಭಾಗವಾಗಿಯೇ 101 ಉಪಜಾತಿಗಳನ್ನೊಳಗೊಂಡ ಶೋಷಿತರ ಸಮುದಾಯವಾದ ದಲಿತರಲ್ಲೇ ಈಗ ಬಲ & ಎಡ ಎಂಬ ಎರಡು ಪಂಗಡಗಳು ರಾಜಕೀಯ ಅಧಿಕಾರಕ್ಕಾಗಿ ಎದುರು-ಬದುರಾಗಿ ನಿಂತಿವೆ. ಅಲ್ಲದೇ ಈ ಎರಡು ಬಣಗಳ ನಡುವೆ ಪರೋಕ್ಷವಾಗಿ ಇಂತಹದ್ದೊಂದು ದ್ವಂದ್ವ ಹುಟ್ಟುಹಾಕಿದ್ದ ರಾಜಕೀಯ ಪಕ್ಷಗಳು ಈಗ ತಾವೇ ತೋಡಿದ ಹಳ್ಳಕ್ಕೆ ಬಿದ್ದು ತಾವೇ ಮಣ್ಣು ಹಾಕಿಸಿಕೊಳ್ಳಬೇಕಾದಂತಹ ಸನ್ನಿವೇಶ ಸೃಷ್ಠಿಸಿಕೊಂಡಿದ್ದಾರೆ…!

ಅಂಬೇಡ್ಕರ್, ಬಾಬು ಜಗಜೀವನ್ ರಾಂ ಇಬ್ಬರು  ಶೋಷಿತ ಸಮುದಾಯಗಳ ಪಾಲಿನ ಆಶಾಕಿರಣ. ದೇಶದಲ್ಲಿದ್ದ ಜಾತಿ ವ್ಯವಸ್ಥೆಯ ಕಟ್ಟುಪಾಡುಗಳು &  ಅಸ್ಫೃಶ್ಯತೆಯ ವಿಕೃತ ಮನಸ್ಥಿತಿಗಳ ನಡುವೆ ನೊಂದು-ಬೆಂದು ಆ ಜ್ವಾಲೆಯ ನಡುವೆಯೇ ಬೆಳೆದು ಬಂದ ಮಹಾನ್ ಮೇಧಾವಿಗಳು ಹಾಗೂ ಮಹಾನೀಯರು. ತಾವೂ ಅನುಭವಿಸಿದ ಅವಮಾನ & ನೋವುಗಳಿವೆ ಉತ್ತರವಾಗಿ ಶೋಷಣೆಗಳ ವಿರುದ್ಧ ಹೋರಾಟ ಮಾಡಿದರು. ಅದರಲ್ಲೂ ಡಾ. ಬಿ.ಆರ್.ಅಂಬೇಡ್ಕರ್ ರವರು ಶೋಷಿತ ಸಮುದಾಯಗಳು ಗೌರವದಿಂದ ಬದುಕಲು ಅವಶ್ಯಕವಾಗಿ ಬೇಕಾದ ಹಕ್ಕುಗಳನ್ನು ಸಂವಿಧಾನದ ಮೂಲಕ ಒದಗಿಸಿಕೊಟ್ಟರು. ಅಲ್ಲದೇ ಉದ್ಯೋಗ & ಜೀವನಾವಶ್ಯಕವಾಗಿರೋ ಸವಲತ್ತುಗಳು ದಮನಿತರಿಗೆ ತಲುಪಲೀ ಎಂಬ ಉದ್ಧೇಶದಿಂದ ಶೋಷಿತ ವರ್ಗಗಳಿಗೆ ಮೀಸಲಾತಿ ಎಂಬ ಅಸ್ತ್ರವನ್ನು ಒದಗಿಸಿಕೊಟ್ಟಿದ್ದು ಈಗ ಇತಿಹಾಸ.

ಆದರೆ ಈ ನೆಲದ ಹಣೆಬರಹವೋ ಅಥವಾ ಆಳುವ ವರ್ಗಗಳ ದೂರಾಲೋಚನೆಯ ಕೊರತೆಯೋ ಗೊತ್ತಿಲ್ಲ ಇವತ್ತಿಗೂ ತಲುಪಬೇಕಾದ ಸವಲತ್ತುಗಳು ಅರ್ಹ ಫಲಾನುಭವಿಗಳಿಗೆ ತಲುಪಿಲ್ಲ ಅನ್ನೋದೇ ದುರಾದೃಷ್ಠಕರ. ಅದರಲ್ಲೂ ಈ ಮೀಸಲಾತಿಯ ವಿಚಾರವಾಗಿ ಅಂಬೇಡ್ಕರ್ ರವರ ವಿಚಾರಧಾರೆಗಳನ್ನು & ಅವರ ಆದರ್ಶಗಳು ಮತ್ತಾವರ ಸಂವಿಧಾನದ ಬಗ್ಗೆಯೇ ಕೆಟ್ಟದಾಗಿ ಮಾತಾನಾಡೋ ಪ್ರಜೆಗಳು ಈ ದೇಶದಲ್ಲಿ ಕಡಿಮೆಯೇನಿಲ್ಲ.

ಹೀಗೆ ಅಂಬೇಡ್ಕರ್ ರವರು ಸಂವಿಧಾನದ ಮೂಲಕ ಒದಗಿಸಿಕೊಟ್ಟ ಮೀಸಲಾತಿಯನ್ನು ಎಲ್ಲಾ ಶೋಷಿತ ಸಮುದಾಯಗಳಿಗೂ ತಲುಪಿಸಲು ಇದುವರೆಗೂ ಆಳೋ ಸರ್ಕಾರಗಳು ಸಫಲವಾಗಿಲ್ಲ‌. ಈ ಕಾರಣವಾಗಿಯೇ ಕರ್ನಾಟಕದಲ್ಲಿರೋ ಎಲ್ಲಾ ಶೋಷಿತ ಸಮುದಾಯಗಳಿಗೂ ಸಾಮಾಜಿನ ನ್ಯಾಯದ ಪರಿಕಲ್ಪನೆಯಡಿ ಸವಲತ್ತು ಒದಗಿಸಿಕೊಡೋದಲ್ಲದೇ ಸಾಮಾಜಿಕ ನ್ಯಾಯಾದಡಿ ಸಮಾನ ಅವಕಾಶ ಕಲ್ಪಿಸಬೇಕೆಂಬ ಉದ್ಧೇಶದಿಂದ ಜಸ್ಟಿಸ್. ಎ.ಜೆ. ಸದಾಶಿವ ಆಯೋಗ ರಚಿಸಲಾಗಿತ್ತು. ಹಲವಾರು ದಿನಗಳು & ತಿಂಗಳುಗಳ ಸಂಪೂರ್ಣ ಅಧ್ಯಾಯನದ ಮೂಲಕ ಆಯೋಗವೂ ಒಳಮೀಸಲಾತಿ ಕಲ್ಪಿಸೋ ವರದಿಯನ್ನು 5 ವರ್ಷದ  ಹಿಂದೆಯೃ ಸರ್ಕಾರಕ್ಕೆ ವರದಿ ಸಲ್ಲಿಸಿತು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಗತ್ಯವಿರೋದನ್ನು ಸಮಾನಾಗಿ ಹಂಚಿಕೊಳ್ಳಲು ಒಮ್ಮತ ಮೂಡದ ಕಾರಣವಾಗಿ ಹಾಗೂ ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿಯ ಬಗ್ಗೆ ತಪ್ಪು ಕಲ್ಪನೆ & ಅನುಮಾನದಂತಹ ಸಂದೇಹಗಳು ಸೃಷ್ಠಿಯಾದ ಕಾರಣವಾಗಿ ಇದನ್ನೇ ಬಂಡವಾಳ ಮಾಡಿಕೊಂಡ ರಾಜಕೀಯ ಪಕ್ಷಗಳು ಎರಡು ಪಂಗಡಗಳ ನಡುವೆ ಕಿಚ್ಚು ಹತ್ತಿಸಿದ್ದು ಈಗ ಆ ಜ್ವಾಲೆ ಅವರಿಗೆ ತಿರುಗುಬಾಣವಾಗಿ ಪರಿಣಮಿಸಿದೆ. ಇದರ ಪ್ರತಿಫಲವಾಗಿ ದಲಿತ ಎಡಗೈ ಸಮುದಾಯದ ನಾಯಕರು & ಮುಖಂಡರುಗಳು ಕಾಂಗ್ರೆಸ್ & ಬಿಜೆಪಿ ಎರಡು ಪಕ್ಷಗಳ ವಿರುದ್ಧ ಟೀಕೆಗಳ ಸುರಿಮಳೆಗಳನ್ನೇ ಸುರಿಸತೊಡಗಿದ್ದಾರೆ. ಹೀಗಾಗಿ ಚುನಾವಣೆಗೆ ಕೆಲವೇ ದಿನಗಳು ಬಾಕಿಯುಳಿದಿದ್ದು ಈಗ ಜರುಗುತ್ತಿರೋ ಇಂತಹದ್ದೊಂದು ಆಕ್ರೋಶದ ಬೆಂಕಿ ಎರಡು ರಾಷ್ಟ್ರೀಯ ಪಕ್ಷಗಳಿಗೂ ಬಿಸಿ ತುಪ್ಪವಾಗಿ ಪರಿಣಮಿಸಿದೆ…!

ಕರ್ನಾಟಕದ ಮಟ್ಟಿಗೆ ದಲಿತ ಸಮುದಾಯ ಒಟ್ಟು  101 ಉಪಜಾತಿಗಳನ್ನು ಹೊಂದಿದೆ. ಇದರ ಪ್ರಕಾರ 48 ಉಪಜಾತಿಗಳು ದಲಿತ ಬಲಗೈ (ಛಲವಾದಿ) ಪಂಗಡಕ್ಕೆ ಸಂಬಂಧಪಟ್ಟಿದ್ದರೆ, 53 ಉಪಜಾತಿಗಳು ಎಡಗೈ (ಮಾದಿಗ) ಪಂಗಡಕ್ಕೆ ಸಂಬಂಧಪಟ್ಟಂತಿದೆ. ಹೀಗೆ ಬೇರೆ-ಬೇರೆ ಉಪಜಾತಿಗಳಿಗಳ ಸಮೂಹವಾದ ದಲಿತ ಪಂಗಡಕ್ಕೆ ಮೀಸಲಿಟ್ಟಿರೋ ಶೇಕಡವಾರು ಹಂಚಿಕೆಯಲ್ಲಿ ಜನಸಂಖ್ಯೆಯಾಧಾರವಾಗಿ ಮೀಸಲು ವಿಂಗಡಿಸಬೇಕೆಂಬ & ಎಡಗೈ ಪಂಗಡದ ಉಪಜಾತಿಗಳಿಗೂ ಒಳ ಮೀಸಲಾತಿ ಕಲ್ಪಿಸುವ ಅಂಶಗಳನ್ನೊಳಗೊಂಡ ವರದಿಯೇ ನ್ಯಾಯಾಮೂರ್ತಿ  ಸದಾಶಿವ ಆಯೋಗದ ವರದಿ. ಹೀಗೆ ಶೋಷಿತ ಸಮುದಾಯದ ಪ್ರತಿಯೊಬ್ಬರಿಗೂ ಸಮಾನ ಹಕ್ಕು- ಮೂಲಭೂತ ಸೌಕರ್ಯಗಳು ಮತ್ತು ಸರ್ಕಾರದ ಸವಲತ್ತುಗಳನ್ನು ಒದಗಿಸಿಕೊಡೋ ಉದ್ಧೇಶದಿಂದ ಸರ್ಕಾರಕ್ಕೆ ಸಲ್ಲಿಸಲಾಗಿರೋ ಈ ವರದಿ ಈಗ ಶೋಷಿತ ಸಮುದಾಯಗಳಲ್ಲೇ ಒಡಕು ಸೃಷ್ಠಿಸಿತ್ತು. ಆ ಕಾರಣವಾಗಿ ವರದಿಯನ್ನು ಜಾರಿಗೆ ತರಲು ಹಲವು ವರ್ಷಗಳಿಂದಲೂ ಭಾರೀ ಹಗ್ಗ-ಜಗ್ಗಾಟವೇ ನಡೆದುಹೋಯಿತು. ಆದರೆ ಈ ಹಗ್ಗ-ಜಗ್ಗಾಟದಲ್ಲಿ ಆಳೋ ಸರ್ಕಾರಗಳು ದಲಿತರ ಮೂಗಿಗೆ ತುಪ್ಪ ಸವರಿ ತಂತಮ್ಮ ಕಾರ್ಯನೆರವೇರಿಸಿಕೊಂಡರೆ ಹೊರತು ವರದಿ ಜಾರಿಗೆ ತರುವ ಅಥವಾ ವರದಿಯ ಬಗ್ಗೆ ಮೂಡಿರೋ ಅನುಮಾನಗಳನ್ನು ಪರಿಹರಿಸೋ ಪ್ರಾಮಾಣಿಕ ಪ್ರಯತ್ನ ಮಾಡಲೇ ಇಲ್ಲ…..!

ಸದ್ಯದ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ದಲಿತ ಸಮುದಾಯದ ಬಲಗೈ ಪಂಗಡದ 48 ಉಪಜಾತಿಗಳು ಸೇರಿ 28 ಲಕ್ಷ ಮತದಾರರಿದ್ದರೆ ಎಡಗೈ ಪಂಗಡದ 53 ಉಪಜಾತಿಗಳು ಸೇರಿದರೆ ಒಟ್ಟು 34 ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಮತದಾರರಿದ್ದಾರೆ ಎಂಬುದು ಎಡಗೈ ಸಮುದಾಯದವರ ವಾದ. ಹೀಗೆ ಬಲಗೈ ಸಮುದಾಯಕ್ಕಿಂತಲೂ ಅತೀ ಹೆಚ್ಚು ಉಪಜಾತಿಗಳು ಮತ್ತು ಜನಸಂಖ್ಯೆಯನ್ನು ಹೊಂದಿದ್ದರು ಕೂಡ ಆಳೋ ಸರ್ಕಾರಗಳು ತಮಗೆ ಸರಿಯಾಗಿ ಸವಲತ್ತು ವಿತರಿಸುತ್ತಿಲ್ಲ ಜೊತೆಗೆ ರಾಜಕೀಯ ಸ್ಥಾನಮಾನಗಳು & ಅಧಿಕಾರದ ಹುದ್ಧೆಗಳು ಸಿಗುತ್ತಿಲ್ಲ ಕೇವಲ ಬಲಗೈ ಪಂಗಡಕ್ಕೆ ಅತೀ ಹೆಚ್ಚು ಪ್ರಾಮುಖ್ಯತೆ ನೀಡೋ ಮೂಲಕ ತಮ್ಮನ್ನು ಮತ್ತಷ್ಟು ಶೋಷಣೆಗೆ ಒಳಪಡಿಸುತ್ತಿದ್ದಾರೆ ಅನ್ನೋ ಆರೋಪಗಳನ್ನು ಮಾಡ್ತೀರೋ ಎಡಗೈ ಮುಖಂಡರು & ನಾಯಕರು ಈಗ ರಾಜ್ಯದ ಕಾಂಗ್ರೆಸ್ ಸರ್ಕಾರದ ಧೋರಣೆಯ ವಿರುದ್ಧ ತಿರುಗಿ ತಮ್ಮ ಅಸಮಾಧಾನ ಹೊರಹಾಕುತ್ತಿರೋದಲ್ಲದೇ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸೋ ಮಾತಾನಾಡಿದ್ದು ಸಿದ್ದು ನೇತೃತ್ವದ ಸರ್ಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದೆ…..!

ಬಲಗೈ ಪಂಗಡಕ್ಕಿಂತಲೂ ಅತೀ ಹೆಚ್ಚು ಮತದಾರರನ್ನು ಹೊಂದಿರೋ ಎಡಗೈ ಪಂಗಡದ ಮತದಾರರು ಕರ್ನಾಟಕದ 90 ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಪ್ರಭಾವ ಹೊಂದಿದ್ದಾರೆ. ಇದರ ಜೊತೆಗೆ ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೆ ತರಲೇಬೇಕೆಂಬ ಹಠಕ್ಕೆ ಬಿದ್ದಿರೋ ಆ ಸಮುದಾಯದ ಜನ ಹೀಗಾಗಲೇ ಆ ಕುರಿತು ನೂರಾರು ಹೋರಾಟಗಳನ್ನು ಮಾಡಿದ್ದಾರೆ. ಈ ಹೋರಾಟದ ವಿಚಾರವಾಗಿ ಹೀಗಾಗಲೇ ಹತ್ತಾರು ಮಂದಿ ಪ್ರಾಣವನ್ನು ಬಿಟ್ಟಿದ್ದಾರೆ. ಆದರೆ ಇವರ ಈ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿ ಇರೋ ಅನುಮಾನಗಳನ್ನು ಪರಿಹರಿಸಿ ವರದಿ ಜಾರಿಗೆ ತರಲು ಹಿಂದೇಟು ಹಾಕಿದ್ದು ಜೊತೆಗೆ ನ್ಯಾಯಮೂರ್ತಿಗಳ ವರದಿಯನ್ನು ಮತ್ತೇ ಪರಾಮರ್ಶಿಸಲು ಮತ್ತೊಂದು ಉಪಸಮಿತಿ ರಚಿಸಿ ಕಾಲಹರಣ ಮಾಡಿದ್ದಲ್ಲದೇ ಎಡಗೈನ ಮತದಾರರ ಪ್ರಾಬಲ್ಯವಿರೋ ಕಡೆಯಲ್ಲೂ ಬಲಗೈ ಸಮುದಾಯದವರಿಗೆ ಚುನಾವಣೆಯಲ್ಲಿ ಸ್ಫರ್ಧಿಸಲು ಅವಕಾಶ ಮಾಡಿಕೊಟ್ಟಿರೋ ಕಾಂಗ್ರೆಸ್ ರಾಜಕೀಯವಾಗಿಯೂ ತಮ್ಮನ್ನು ಮೂಲೆಗುಂಪು ಮಾಡಲು ಹೊರಟಿದ್ದಾರೆ ಅನ್ನೋ ಅಂಶ ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಾರಕವಾಗೋ ಮೂನ್ಸೂಚನೆಗಳಿವೆ….!

ಬಿಜೆಪಿ ವಿರುದ್ಧವೂ ಹೆಪ್ಪುಗಟ್ಡಿದೆ ದಲಿತರ ಆಕ್ರೋಶ:

ಹೀಗಾಗಲೇ ದೇಶಾದ್ಯಾಂತ ಇಂತಹದೊಂದು ರೀತಿಯ ಸನ್ನಿವೇಶ ಸೃಷ್ಠಿಯಾಗಿದೆ. ಅದರಲ್ಲೂ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲಂತೂ ಹೀಗೊಂದು ಭಯದ ವಾತಾವರಣವನ್ನು ಸೃಷ್ಠಿಯಾಗಿದೆಯೆಂದೂ ಮೇಲ್ನೋಟಕ್ಕೆ ಕಂಡುಬಂದರು ಈ ತೀವ್ರವಾದಿ ಚಟುವಟಿಕೆಗಳ ಹಿಂದೆ ಪ್ರಭಾವಿಗಳ ಕೈವಾಡವಿದೆಯೆಲ್ಲದೇ ಉದ್ಧೇಶಪೂರ್ವಕವಾಗಿಯೇ ಇಂತಹ ವಾತಾವರಷವನ್ನಾ ಸೃಷ್ಠಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದರ ಜೊತೆಗೆ ಕೇಂದ್ರ ಸಚಿವ ಹಾಗೂ ಹಾಲಿ ಸಂಸದ ಅನಂತ್ ಕುಮಾರ್ ಹೆಗ್ಡೆಯವರ  ಸಂವಿಧಾನ ಬದಲಾವಣೆಯ ಹೇಳಿಕೆ ಬಂದ ಮೇಲಂತೂ ಇಂತಹದ್ದೊಂದು ವಾತಾವರಣ ದೇಶದಲ್ಲೇಡೆ ಜೋರಾಗಿಯೇ ಪಸರಿಸಿ ಬಿಟ್ಟಿದೆ. ಹೀಗೆ ಅನಂತ್ ಕುಮಾರ್ ಹೆಗ್ಡೆಯವರ ಹೇಳಿಕೆ ವಿರುದ್ಧ ದೇಶಾದ್ಯಾಂತ ಭಾರೀ ಆಕ್ರೋಶವೇ ವ್ಯಕ್ತವಾಗುತ್ತಿದ್ದ ಸಂದರ್ಭದಲ್ಲೇ ಸುಪ್ರೀಂ ಕೋರ್ಟ್ ಅಟ್ರಾಸಿಟಿ ಕಾಯಿದೆಯ ಕುರಿತು ನೀಡಿದ ತೀರ್ಪು ದಲಿತ ಸಮುದಾಯಗಳನ್ನು ಮತ್ತಷ್ಟು ಕೆರಳಿಸಿದ್ದಲ್ಲದೇ ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ದಲಿತರು ಬೀದಿಗಳಿದು ಹಿಂಸಾಚಾರ ನಡೆಸಿದ ಘಟನೆಯೂ ಕೂಡ ನಡೆದು ಹೋಯಿತು. ಇಂತಹ ಪರಿಸ್ಥಿತಿಯಲ್ಲಿಯೇ 2018ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಹೀಗಾಗಿ ಈ ಚುನಾವಣೆಯ ತಾಪದ ಜೊತೆಗೆ ದಲಿತ ಎಡಗೈ ಸಮುದಾಯದ ಮಂದಿಯೂ ಕೋಪದಿಂದ ಕುದಿಯತೊಡಗಿದ್ದಾರೆ. ಇಷ್ಟೆಲ್ಲಾದರ ನಡುವೆಯೇ ಹೊರಗೆ ಪ್ರಶ್ನಾತೀತ ಒಗ್ಗಟ್ಟನ್ನು ದಲಿತ ಸಮುದಾಯಗಳು ತೋರಿಸ್ತಾ ಇದ್ರೂ ಒಳಗೊಳಗೆ ತಮ್ಮ ಹಕ್ಕಿನ ಹೋರಾಟದಲ್ಲಿ ಜಿದ್ದಿಗೆ ಬಿದ್ದಿವೆ. ಆದರೆ ಅಂತರಂಗದಲ್ಲಿ ಎಷ್ಟೇ ಒಡಕಿದ್ದರು ಕೂಡ ಅನಂತ್ ಕುಮಾರ್ ಹೆಗ್ಡೆಯವರ ಆ ಒಂದೇ-ಒಂದು ಹೇಳಿಕೆ ಮತ್ತು ಆ ಹೇಳಿಕೆಯನ್ನೇ ವಿರೋಧಿ ನಾಯಕರು ರಾಜಕೀಯವಾಗಿ ಬಳಸಿಕೊಂಡು ಸೃಷ್ಠಿಸಿದ ಭಯದ ವಾತಾವರಣ ಯಾರು ಎಷ್ಟೇ ಸರ್ಕಸ್ ಮಾಡಿದ್ರೂ ಕೂಡ ರಾಜ್ಯ ಬಿಜೆಪಿ ಪಾಲಿಗೆ ಮುಳುವಾಗೋದರಲ್ಲಿ ಅನುಮಾನವೇ ಇಲ್ಲ. ಆದರೆ ಬಿಜೆಪಿಯವರ ಮೇಲೀನ ಈ ಆಕ್ರೋಶದ ಜೊತೆಗೆ ದಲಿತರನ್ನು ರಾಜಕೀಯಕ್ಕಾಗಿ ಬಳಸಿಕೊಂಡು ಅಧಿಕಾರ ಕೇಂದ್ರದಿಂದ ದೂರವಿಡ್ತೀರೋ ಕಾಂಗ್ರೆಸ್ ನ ಧೋರಣೆಯ ವಿರುದ್ಧವೂ ಕೂಡ ಈಗ ದಲಿತ ಸಮುದಾಯದ ಆಕ್ರೋಶ ತಿರುಗಿರೋದು ಎರಡು ರಾಷ್ಟ್ರೀಯ ಪಕ್ಷಗಳಿಗೂ ಅಪಾಯದ ಮುನ್ಸೂಚನೆ ನೀಡಿದೆ…..!

 

ಮೂರು ಪಕ್ಷಗಳಿಗೂ ಬೇಕು ಇವರ ಕೃಪಾಕಟಾಕ್ಷ:

ಸದ್ಯದ ಚುನಾವಣೆಯ ಮಟ್ಟಿಗೆ ಅಧಿಕಾರ ಹಿಡಿಯಲು ಹವಣಿಸುತ್ತಿರೋ ಕಾಂಗ್ರೆಸ್, ಬಿ.ಜೆ.ಪಿ & ಜೆ.ಡಿ.ಎಸ್. ಮೂರು ಪಕ್ಷಕ್ಕೂ ದಲಿತರ ಬೆಂಬಲ ಬೇಕೆ-ಬೇಕು. ಏಕೆಂದರೆ  ಕಳೆದ ಬಾರಿ ಅಧಿಕಾರಕ್ಕೆ ಬಂದಿದ್ದ ಯಡಿಯ್ಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನಡೆದುಕೊಂಡ ರೀತಿ ಕರ್ನಾಟಕದಲ್ಲೂ ಆ ಪಕ್ಷವನ್ನು ಲಿಂಗಾಯುತ & ಬ್ರಾಹ್ಮಣರ ಪಕ್ಷವನ್ನಾಗಿ ಮಾಡಿದ್ದರೆ, ಜೆ.ಡಿ.ಎಸ್ ಗೆ ಒಕ್ಕಲಿಗರ ಪಕ್ಷವೆಂಬ ಹಣೆಪಟ್ಟಿ ಹೀಗಾಗಲೇ ಕೀಳಲಾರದಷ್ಟು ಗಟ್ಟಿಯಾಗಿ ಅಂಟಿಕೊಂಡುಬಿಟ್ಟಿದೆ. ಇದರ ನಡುವೆ ದಲಿತರ ಮತಗಳ ಹಿಡುಗಂಟನ್ನೇ ಅತೀ ಹೆಚ್ಚು ನೆಚ್ಚಿಕೊಂಡು ರಾಜಕೀಯ ಮಾಡುತ್ತಿರೋ ಕಾಂಗ್ರೆಸ್ ಅದೇ ದಲಿತರಿಗೆ ಮುಖ್ಯಮಂತ್ರಿ & ಉಪ ಮುಖ್ಯಮಂತ್ರಿ ಸ್ಥಾನನೀಡದೇ ವಂಚಿಸುತ್ತಿರೋ ವಿಚಾರ ಕೂಡ ಇತ್ತೀಚಿನ ದಿನಗಳಲ್ಲಿ ಆ ಪಕ್ಷದ ವಿರುದ್ಧ ದಲಿತರು ಮುನಿಸಿಕೊಳ್ಳುವಂತೆ ಮಾಡಿತ್ತು. ಇಂತಹ ಸಂದರ್ಭದಲ್ಲೇ ಎಡಗೈ ಪಂಗಡಕ್ಕೆ ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿ ಜಾರಿ ಮಾಡದೇ ಕಾಲಹರಣ ಮಾಡಿದ ವಿಚಾರ ಈಗ ದಲಿತರ ಮತಗಳನ್ನಾ ಎರಡು ಭಾಗಗಳನ್ನಾಗಿಸಿದ್ದು ಬಲಗೈ ಪಂಗಡ ಕಾಂಗ್ರೆಸ್ ಪರವಾಗಿದ್ದಂತೆ ಕಂಡುಬಂದಿದ್ದರು ಕೂಡ ಪರಮೇಶ್ವರ್ & ಮಲ್ಲಿಕಾರ್ಜುನ್ ಖರ್ಗೆ ಕಾರಣವಾಗಿ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸೋ ಮನಸ್ಸು ಮಾಡಿದ್ದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮರ್ಮಾಘಾತವೇ ಸರಿ. ಏಕೆಂದರೆ ಹೀಗಾಗಲೇ ಕಾಂಗ್ರೆಸ್  ಪಕ್ಷದ ವಿರುದ್ಧ ಒಕ್ಕಲಿಗ, ಲಿಂಗಾಯುತ & ಬ್ರಾಹ್ಮಣ ಜನಾಂಗ ಮುನಿಸಿಕೊಂಡು ದೂರವಾಗೋ ಮುನ್ಸೂಚನೆ ನೀಡಿವೆ. ಇದರ ಜೊತೆಗೆ ದಲಿತ ಸಮುದಾಯವೂ ಕೂಡ ಕಾಂಗ್ರೆಸ್ ನಿಂದ ದೂರ ಸರಿದರೆ ಅವರ ಪಾಡು ಹೇಳತೀರದು. ಇನ್ನು ಬಿಜೆಪಿಗೆ  ಲಿಂಗಾಯುತ & ಬ್ರಾಹ್ಮಣರ ಹಿಡಿಗಂಟಿನೊಂದಿಗೆ ದಲಿತ ಸಮುದಾಯಗಳೇನಾದರೂ ಮೋದಿಯ ಅಭಿವೃದ್ಧಿ ವಿಚಾರಗಳಿಗೆ ಅತ್ತ ವಾಲಿದರೆ  ಈ ಬಾರಿಯ ಅಧಿಕಾರದ ಗದ್ದುಗೆ ಭಾರತೀಯ ಜನತಾ ಪಾರ್ಟಿಗೆ ಅಷ್ಟೇನೂ ಕಷ್ಟಕರವಾಗಿ ಕಾಣಿಸೋದಿಲ್ಲ. ಆದರೆ ಅನಂತ್ ಕುಮಾರ್ ಹೆಗ್ಡೆಯ ಹೇಳಿಕೆ & ಸುಪ್ರೀಂ ಕೋರ್ಟ್ ನ ತೀರ್ಪಿನ ವಿಚಾರವಾಗಿ ಬಿಜೆಪಿಗೆ ಹಾಗೂ ದಲಿತರಿಗೆ ಮುಖ್ಯಮಂತ್ರಿ & ಉಪಮುಖ್ಯಮಂತ್ರಿ  ಅಧಿಕಾರ ಕೊಡದೇ ವಂಚಿಸಿದರು ಎನ್ನೋ ಕಾರಣಕ್ಕೆ ದಲಿತ ಬಲಗೈ ಜೊತೆಗೆ ಆಯೋಗದ ವರದಿ ಜಾರಿಗೆ ತರಲ್ಲಿಲ್ಲ ಎಂಬ ಕಾರಣಕ್ಕೆ ದಲಿತ ಎಡಗೈ ಪಂಗಡಗಳು ಎರಡು ರಾಷ್ಟ್ರೀಯ ಪಕ್ಷಗಳಿಗೂ ತಿರುಗಿಬಿದ್ದರೆ ಕರ್ನಾಟಕದ ಮಟ್ಟಿಗೆ  ಕಾಂಗ್ರೆಸ್ & ಬಿಜೆಪಿ ಎರಡು ಪಕ್ಷಗಳಿಗೂ ಕೈಗೆಟುಕದ ದ್ರಾಕ್ಷಿಯಂತಾಗುತ್ತದೆ. ಇವರ ಈ ಆಕ್ರೋಶದ ಕಿಚ್ವು ಮತ್ತಷ್ಟು ಪ್ರಖರತೆಯನ್ನೇನಾದರೂ ಪಡೆದುಕೊಂಡು ಮಾಯಾವತಿಯವರ ಬಿ.ಎಸ್.ಪಿ ಕಾರಣವಾಗಿಯೇನಾದರೂ ಜೆ.ಡಿ.ಎಸ್. ಪಕ್ಷದ ಕಡೆಗೆ ವಾಲಿದರೆ ದೇವೇಗೌಡರಿಗೆ ಸುಗ್ಗಿ. ಏಕೆಂದರೆ ಹೀಗಾಗಲೇ ಮುಸ್ಲೀಂ‌ ತೀವ್ರಾತವಾಧಿ ಅಸಾದುದ್ದೀನ್ ಒವೈಸಿ ಕೂಡ ಜೆ.ಡಿ.ಎಸ್ ಪಕ್ಷಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನು ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಆರ್. ಕೂಡ ಹೀಗಾಗಲೇ ಗೌಡರಿಗೆ ಅಭಯ ನೀಡಿದ್ದಾರೆ. ಇದೆಲ್ಲಾ ಒಟ್ಟು ಸೇರಿ ಒಕ್ಕಲಿಗ-ದಲಿತ-ಅಲ್ಪ ಸಂಖ್ಯಾತ ಸೂತ್ರದಡಿ ಪ್ರಾದೇಶಿಕ ಪಕ್ಷಕ್ಕೆ ಶುಕ್ರದೆಸೆ ಗ್ಯಾರೆಂಟಿ.

ಒಟ್ಟಿನಲ್ಲಿ ಈ ಬಾರಿಯ ಕರ್ನಾಟಕದ ವಿಧಾನಸಭಾ ಚುನಾವಣೆ ಭಾರೀ ಬದಲಾವಣೆಯೊಂದಕ್ಕೆ ವೇದಿಕೆಯನ್ನು ಒದಗಿಸಿಕೊಡೋ ಮುನ್ಸೂಚನೆ ದೊರೆಯುತ್ತಿದ್ದು ಆ ಬದಲಾವಣೆಯ ಅಲೆಯ ಮುಖ್ಯ ರೂವಾರಿಯಾಗಿ ದಲಿತ ಎಡಗೈ ಸಮುದಾಯ ಕಾರಣವಾಗಲಿದೆಯೇನೋ ಅನ್ನೋ ವಾತಾವರಣ ಸೃಷ್ಠಿಯಾಗುತ್ತಿದೆ. ಅಧಿಕಾರ ನೀಡಿದರು ಅಥವಾ ನೀಡಿಲ್ಲ ಎಂಬುದು ದಲಿತ ಸಮುದಾಯದ ಒಂದು ಪಂಗಡಕ್ಕೆ ಒಂದು ವಿಷಯ ಅಂತಾ ಅನ್ನಿಸದಿದ್ದರೂ ಕೂಡ ಮತ್ತೊಂದು ಪಂಗಡಕ್ಕೆ ಆಯೋಗದ ವರದಿ ತಮಗೆ ಸಿಗಬೇಕಾದ ಹಕ್ಕಾಗಿ ಬದಲಾಗಿರೋದು ಎಡಗೈ ಪಂಗಡ ತನ್ನ ಶಕ್ತಿ ಪ್ರದರ್ಶನ ವೇದಿಕೆಯನ್ನಾಗಿ ಈ ಚುನಾವಣೆಯನ್ನು ಬಳಸಿಕೊಳ್ಳಬಹುದು. ಏಕೆಂದರೆ ಹತ್ತಾರು ವರ್ಷಗಳಿಂದಲೂ ತಮ್ಮ ಹಕ್ಕಿಗಾಗಿ ಎಡಗೈ ಸಮುದಾಯ ಬೀದಿಯಲ್ಲಿ ನಿಂತು ಬಡಿದಾಡುತ್ತಿದ್ರೂ ಇದುವರೆಗೂ ಯಾರು ಕೂಡ ಆ ಸ್ಪಷ್ಟ ನಿರ್ಧಾರ ಪ್ರಕಟಿಸದೇ ಇರೋದು, ಇದರ ಜೊತೆಗೆ ಎರಡು ರಾಷ್ಟ್ರೀಯ ಪಕ್ಷಗಳು ಹೀಗಾಗಲೇ ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆ ಹೊರಡಿಸಿದ್ದರು ಕೂಡ ಆ ಪ್ರಣಾಳಿಕೆಗಳಲ್ಲಿ ಆಯೋಗದ ವರದಿಯ ಜಾರಿಯ ಬಗ್ಗೆಯಾಗಲೀ ಅಥವಾ ಒಳ ಮೀಸಲಾತಿ ಬಗೆಯಾಗಲೀ ಯಾವುದೇ ಅಂಶವನ್ನು ಸೇರಿಸಿಲ್ಲದಿರೋದು ಹೀಗಾಗಲೇ ಆಕ್ರೋಶಗೊಂಡಿದ್ದ ಎಡಗೈ ಸಮುದಾಯವನ್ನು ಮತ್ತಷ್ಟು ರೊಚ್ಚಿಗೆಬ್ಬಿಸಿದೆ. ಹೀಗಾಗಿ ರೊಚ್ಚಿಗೆದ್ದಿರೋ ಎಡಗೈ (ಮಾದಿಗ) ಪಂಗಡವೇನಾದರೂ ಎರಡು ರಾಷ್ಟ್ರೀಯ ಪಕ್ಷಗಳಿಗೂ ಚುರುಕುಮುಟ್ಟಿಸಲು ಮನಸ್ಸು ಮಾಡಿದರೆ ಈ ಬಾರಿಯ ಕರ್ನಾಟಕ ರಾಜಕೀಯ ಬಿರುಗಾಳಿಗೆ ಸಿಕ್ಕ ಹಡಗಿನಂತಾಗಿ ಯಾರು ಎಣಿಸದ & ಅಂದಾಜಿಸದ ಬದಲಾವಣೆಗೆ ಕಾರಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ……!

ಚಕ್ರವರ್ತಿ (ಕೆ.ಎಂ.ಶಿವಪ್ರಸಾದ್)
ಪತ್ರಕರ್ತ & ಅಂಕಣಕಾರ

 

Please follow and like us:
0
http://bp9news.com/wp-content/uploads/2018/05/collage-16-1024x768.jpghttp://bp9news.com/wp-content/uploads/2018/05/collage-16-150x150.jpgBP9 Bureauಅಂಕಣಪ್ರಮುಖಇಡೀ ದೇಶದ ತುಂಬೆಲ್ಲಾ ಮೀಸಲಾತಿ & ಸಂವಿಧಾನದ್ದೇ ಸದ್ದುಗದ್ದಲ. ಒಂದು ವರ್ಗದ ಜನ ಮೀಸಲಾತಿ ಕೊಟ್ಟಿದ್ದು ಸಾಕು ಸಂವಿಧಾನ ಬದಲಿಸಬೇಕು ಅಂತಿದ್ರೆ, ಮತ್ತೊಂದು ಕಡೆ ಸಂವಿಧಾನ ಬದಲಾವಣೆಯ ವಿರುದ್ಧ ಬೀದಿಗಿಳಿದು ಹೋರಾಟ ಮಾಡ್ತೀರೋದಲ್ಲದೇ ಮೀಸಲಾತಿ & ಸಂವಿಧಾನದ ವಿಚಾರಕ್ಕೆ ಬಂದರೆ ಹಿಂಸೆಯನ್ನು ಎದುರಿಸಬೇಕಾಗುತ್ತೇ ಅನ್ನೋ ಮಾತನಾಡುತ್ತಿದ್ದಾರೆ. ಇಷ್ಟೆಲ್ಲಾ ದ್ವಂದ್ವಗಳ ನಡುವೆಯೇ ಈಗ ಮತ್ತೊಂದು ತರಹದ ವೇದನೆ & ಒಳಬೇಗುದಿ ದಲಿತ ಒಳಪಂಗಡಗಳಲ್ಲೇ ಶುರುವಾಗಿದೆ. ಒಟ್ಟಾಗಿ ತಮ್ಮ-ತಮ್ಮ ಹಕ್ಕಿಗಾಗಿ ಹೋರಾಟ...Kannada News Portal