ಬೆಂಗಳೂರು : ಮೈತ್ರಿ ಸರ್ಕಾರದ ಸಚಿವ ಸಂಪುಟ ಅಂತೂ ಇಂತೂ ವಿಸ್ತರಣೆ ಆಗಿದ್ದಾಗಿದೆ. ಸಾಕಷ್ಟು ಭಿನ್ನಮತ ಸ್ಫೋಟವೂ ಆಗಿದೆ. ಈ ನಡುವೆ ಮೊದಲ ಹಂತದ ಸಚಿವರು ತಮ್ಮ ಕರ್ತವ್ಯ ನಿರ್ವಹಿಸಲು ಸಿದ್ಧರಾಗಿದ್ದಾರೆ. ಇನ್ನು ಅವರು ಯಾರು, ಅವರ ವಯಸ್ಸು ಏನು, ಅವರ ಅನುಭವ ಏನು ಎಂಬುದು ಸಾಕಷ್ಟು ಜನರಿಗೆ ತಿಳಿದಿಲ್ಲ. ಆದ್ದರಿಂದಲೇ ಬಿಪಿ9 ನಿಮಗಾಗಿ ಮೈತ್ರಿ ಸರ್ಕಾರದ ಸಚಿವರ ವಯಸ್ಸು, ಅನುಭವಗಳನ್ನು ಪ್ರಸ್ತುತ ಪಡಿಸುತ್ತಿದ್ದೇವೆ.

ಎಚ್‌.ಡಿ.ರೇವಣ್ಣ (60), ಜೆಡಿಎಸ್ :

ರಾಜಕೀಯ ಜೀವನ ಶುರುವಾಗಿದ್ದು 1985ರಲ್ಲಿ. ಮೊದಲು ಜಿಲ್ಲಾ ಪರಿಷತ್‌ಗೆ ಆಯ್ಕೆ. 1994ರಲ್ಲಿ ಹಾಸನ ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಹಾಮೂಲ್‌) ಅಧ್ಯಕ್ಷ. 1994ರಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ಗೆದ್ದು ವಿಧಾನಸಭೆ ಪ್ರವೇಶ. ಜೆ.ಎಚ್‌.ಪಟೇಲ್‌ ಸಂಪುಟದಲ್ಲಿ ವಸತಿ ಸಚಿವ. 1999ರಲ್ಲಿ ಸೋಲು ಕಂಡ ಅವರು 2004, 2008, 2013, 2018ರಲ್ಲಿ ಶಾಸಕರಾದರು. 2006–07ರ ಸಮ್ಮಿಶ್ರ ಸರ್ಕಾರದಲ್ಲಿ ಇಂಧನ, ಲೋಕೋಪಯೋಗಿ ಸಚಿವ.

ಆರ್.ವಿ.ದೇಶಪಾಂಡೆ (71) ಕಾಂಗ್ರೆಸ್ :

ಹಳಿಯಾಳ ಕ್ಷೇತ್ರದ ದೇಶಪಾಂಡೆ, ಎಂಟು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ, ಉನ್ನತ ಶಿಕ್ಷಣ ಸಚಿವರಾಗಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾಗಿ ಕೆಲಸ ಮಾಡಿದ್ದಾರೆ. ಅತಿ ಹೆಚ್ಚು ಬಾರಿ ಶಾಸಕರಾಗಿರುವ ಹೆಗ್ಗಳಿಕೆ ಗಳಿಸಿರುವ ಇವರು, 2008ರ ಚುನಾವಣೆಯಲ್ಲಿ ಸೋಲಿನ ಕಹಿ ಅನುಭವಿಸಿದ್ದರು.

ಬಂಡೆಪ್ಪ ಕಾಶೆಂಪುರ (54), ಜೆಡಿಎಸ್ :

ಮೂರು ಬಾರಿ ಶಾಸಕರಾದ ಅನುಭವ ಹೊಂದಿರುವ ಬೀದರ್ ದಕ್ಷಿಣ ಕ್ಷೇತ್ರದ ಕಾಶೆಂಪುರ, ಈಗ 2ನೇ ಸಲ ಸಚಿವರಾಗಿ ಆಯ್ಕೆಯಾಗಿದ್ದಾರೆ. 1999ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಪಡೆಯುವ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಹೊಸದಾಗಿ ಉದಯಿಸಿದ ಬೀದರ್ ದಕ್ಷಿಣ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಇವರು, ಜೆಡಿಎಸ್‌ ಅಭ್ಯರ್ಥಿಯಾಗಿ 2004, 2008 ಹಾಗೂ 2018ರಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ–ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಕೆಲಸ ನಿರ್ವಹಿಸಿದ್ದರು.

ಡಿ.ಕೆ.ಶಿವಕುಮಾರ್ (56), ಕಾಂಗ್ರೆಸ್ :

ಸದ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್, ಸಮ್ಮಿಶ್ರ ಸರ್ಕಾರ ರಚನೆಯ ರೂವಾರಿಯೂ ಹೌದು. ಯುವ ಕಾಂಗ್ರೆಸ್ ಮೂಲಕ ಸಕ್ರಿಯ ರಾಜಕಾರಣ ಪ್ರಾರಂಭಿಸಿದ ಇವರು, ಸಾತನೂರು ಕ್ಷೇತ್ರದಿಂದ ನಾಲ್ಕು ಹಾಗೂ ಕನಕಪುರ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಎಸ್.ಬಂಗಾರಪ್ಪ ಸಂಪುಟದಲ್ಲಿ ಬಂದಿಖಾನೆ ಸಚಿವರಾಗಿ, ಎಸ್.ಎಂ.ಕೃಷ್ಣ ಸಂಪುಟದಲ್ಲಿ ಸಹಕಾರ, ನಗರಾಭಿವೃದ್ಧಿ ಸಚಿವರಾಗಿ ಹಾಗೂ ಸಿದ್ದರಾಮಯ್ಯ ಸಂಪುಟದಲ್ಲಿ ಇಂಧನ ಸಚಿವರಾಗಿ ಕೆಲಸ ಮಾಡಿದ್ದಾರೆ.

ಜಿ.ಟಿ.ದೇವೇಗೌಡ (68), ಜೆಡಿಎಸ್ :

ಒಕ್ಕಲಿಗರ ಪ್ರಾಬಲ್ಯವುಳ್ಳ ಚಾಮುಂಡೇಶ್ವರಿ ಕ್ಷೇತ್ರದ ಜಿ.ಟಿ.ದೇವೇಗೌಡ, ಎಪಿಎಂಸಿ ಹಾಗೂ ಸಹಕಾರ ಕ್ಷೇತ್ರಗಳ ಚುನಾವಣೆಗಳಲ್ಲಿ ಸ್ಪರ್ಧಿಸಿ ರಾಜಕೀಯ ಪ್ರವೇಶ ಮಾಡಿದರು. ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಸಹಕಾರ ಸಚಿವರಾಗಿದ್ದರು. ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರನ್ನೇ ಸೋಲಿಸುವ ಮೂಲಕ ಈ ಸಲದ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆದಿದ್ದಾರೆ.

ಕೆ.ಜೆ.ಜಾರ್ಜ್‌ (68), ಕಾಂಗ್ರೆಸ್ :

ಏಳು ಬಾರಿ (ಭಾರತಿನಗರ ಹಾಗೂ ಸರ್ವಜ್ಞನಗರ) ಶಾಸಕರಾಗಿರುವ ಕೆ.ಜೆ ಜಾರ್ಜ್‌ ಹಿಂದಿನ ಸರ್ಕಾರದಲ್ಲಿ ಗೃಹ ಖಾತೆ ಮತ್ತು ಬೆಂಗಳೂರು ಅಭಿವೃದ್ಧಿ ಖಾತೆ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಡಿ.ಸಿ.ತಮ್ಮಣ್ಣ (75), ಜೆಡಿಎಸ್ :

ರಾಜಕೀಯ ಪ್ರವೇಶಕ್ಕೆ ಮೊದಲು KAS ಅಧಿಕಾರಿಯಾಗಿದ್ದ ಇವರು ಕರ್ನಾಟಕ ರಾಜ್ಯ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಮುಖ್ಯ ಅಭಿವೃದ್ಧಿ ಅಧಿಕಾರಿಯಾಗಿದ್ದರು. ಇವರ ಮಗಳನ್ನು ಎಚ್‌.ಡಿ.ದೇವೇಗೌಡರ ಪುತ್ರ ಎಚ್​​ ಡಿ ರಮೇಶ್​ ಅವರಿಗೆ ಕೊಟ್ಟು ಮದುವೆ ಮಾಡುವ ಮೂಲಕ ದೇವೇಗೌಡರ ಬೀಗರೂ ಆಗಿರುವ ಅವರು ಕಿರುಗಾವಲು ಕ್ಷೇತ್ರದಲ್ಲಿ ಒಮ್ಮೆ, ಮದ್ದೂರು ಕ್ಷೇತ್ರದಲ್ಲಿ ಮೂರು ಬಾರಿ ಶಾಸಕ. ಕಾಂಗ್ರೆಸ್‌, ಜೆಡಿಎಸ್‌ನಿಂದ ತಲಾ ಎರಡು ಬಾರಿ ಆಯ್ಕೆ. 1999ರಲ್ಲಿ ಕಿರುಗಾವಲು ಕ್ಷೇತ್ರದ ಕಾಂಗ್ರೆಸ್‌ ಶಾಸಕರಾಗಿ ಆಯ್ಕೆ. 2004ರಲ್ಲಿ ಮದ್ದೂರು ಕ್ಷೇತ್ರಕ್ಕೆ ವಲಸೆ ಬಂದು ಗೆಲುವು. ನಂತರ ಜೆಡಿಎಸ್‌ ಸೇರಿ 2013, 2018ರಲ್ಲಿ ಗೆಲುವು.

ಕೃಷ್ಣ ಬೈರೇಗೌಡ (45), ಕಾಂಗ್ರೆಸ್ :

ಜೆ.ಎಚ್‌. ಪಟೇಲ್‌ ಸರ್ಕಾರದಲ್ಲಿ ಸಚಿವರಾಗಿದ್ದ, ದಿವಂಗತ ಸಿ.ಬೈರೇಗೌಡ ಅವರ ಪುತ್ರರಾಗಿರುವ ಕೃಷ್ಣ ಬೈರೇಗೌಡ ಹಿಂದಿನ ಸರ್ಕಾರದ ಅವಧಿಯಲ್ಲಿ ಕೃಷಿ ಸಚಿವರಾಗಿದ್ದರು. ಕೋಲಾರ ಜಿಲ್ಲೆಯ ವೇಮಗಲ್‌ ಕ್ಷೇತ್ರದಿಂದ ಎರಡು ಬಾರಿ ಮತ್ತು ಬ್ಯಾಟರಾಯನಪುರ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದಾರೆ.

ಎಂ.ಸಿ.ಮನಗೂಳಿ (82), ಜೆಡಿಎಸ್ :

1975ರಲ್ಲಿ ವಿಜಯಪುರದ ಸಿಂದಗಿ ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷರಾಗಿ ಆಯ್ಕೆಯಾದ ಮನಗೂಳಿ, ನಂತರ ಪುರಸಭೆ ಸದಸ್ಯರಾಗಿಯೂ ಕೆಲಸ ಮಾಡಿದರು. 1989ರಲ್ಲಿ ಸಮಾಜವಾದಿ ಜನತಾ ಪಕ್ಷದಿಂದ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲುಂಡರು. 1994ರಲ್ಲಿ ಜನತಾದಳದ ಶಾಸಕರಾಗಿ ಆಯ್ಕೆಯಾದ ಇವರು, ಇದೇ ಅವಧಿಯಲ್ಲಿ ಜೆ.ಎಚ್‌.ಪಟೇಲ್‌ ಸಂಪುಟದಲ್ಲಿ ಸಚಿವ ಸ್ಥಾನ ಪಡೆದರು. 1999, 2004, 2008, 2013ರ ಚುನಾವಣೆಗಳಲ್ಲಿ ಸೋಲು ಅನುಭವಿಸಿ, 2018ರಲ್ಲಿ ಜೆಡಿಎಸ್ ಶಾಸಕರಾಗಿ ಆಯ್ಕೆಯಾದರು.

ಎನ್‌.ಎಚ್.ಶಿವಶಂಕರರೆಡ್ಡಿ (64), (ಕಾಂಗ್ರೆಸ್) :

ಗೌರಿಬಿದನೂರು ಕ್ಷೇತ್ರದ ಶಿವಶಂಕರರೆಡ್ಡಿ ಕಳೆದ ಐದು ಚುನಾವಣೆಗಳಲ್ಲೂ ಗೆಲುವ ಸಾಧಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಎನ್‌.ಎಸ್.ಹನುಮಂತರೆಡ್ಡಿ ಅವರ ಪುತ್ರರಾದ ಇವರು, 1977ರಲ್ಲಿ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಮೂಲಕ ರಾಜಕೀಯ ಪ್ರವೇಶ. 1988ರಲ್ಲಿ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾದರು. 1999ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಸಾಧಿಸಿದರು. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಿಧಾನಸಭೆ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಎಸ್.ಆರ್.ಶ್ರೀನಿವಾಸ್ (56), ಜೆಡಿಎಸ್ :

ಗುಬ್ಬಿ ತಾಲ್ಲೂಕು ಸಿ.ಎಸ್.ಪುರ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸಚಿವರಾಗಿದ್ದರು. 2004ರಲ್ಲಿ ಗುಬ್ಬಿ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಪ್ರಥಮ ಪ್ರಯತ್ನದಲ್ಲೇ ಗೆಲುವು ಸಾಧಿಸಿದರು. ಬಳಿಕ 2008, 2013, 2018ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸತತವಾಗಿ ಗೆಲುವು ಸಾಧಿಸಿದ್ದಾರೆ. ಬಿ.ಎ ಪದವಿ ಪಡೆದಿದ್ದಾರೆ.

ರಮೇಶ ಜಾರಕಿಹೊಳಿ (58), ಕಾಂಗ್ರೆಸ್ :

ಗೋಕಾಕ ಕ್ಷೇತ್ರದ ಜಾರಕಿಹೊಳಿ, 1999, 2004, 2008, 2013 ಹಾಗೂ 2018ರ ಚುನಾವಣೆಗಳಲ್ಲಿ ಸತತ ಐದು ಬಾರಿಗೆ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಿ ಗೆದ್ದವರು. ಹಿಂದಿನ ಸರ್ಕಾರದಲ್ಲಿ, ಸಹಕಾರ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ವೆಂಕಟರಾವ್ ನಾಡಗೌಡ (61), ಜೆಡಿಎಸ್ :

ಸಿಂಧನೂರು ಕ್ಷೇತ್ರದ ನಾಡಗೌಡ, ಎರಡು ಬಾರಿ ಶಾಸಕರಾದ (2008, 2018) ಅನುಭವ ಹೊಂದಿದ್ದಾರೆ. 2013ರ ಚುನಾವಣೆಯಲ್ಲಿ ಪರಾಜಿತರಾಗಿದ್ದರು.

ಪ್ರಿಯಾಂಕ್ ಖರ್ಗೆ (39), ಕಾಂಗ್ರೆಸ್ :

ಎರಡು ಬಾರಿ ಶಾಸಕರಾದ ಅನುಭವ ಹೊಂದಿರುವ ಪ್ರಿಯಾಂಕ್, ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ. ಹಿಂದಿನ ಸರ್ಕಾರದಲ್ಲಿ ಪ್ರವಾಸೋದ್ಯಮ ಹಾಗೂ ಐಟಿ–ಬಿಟಿ ಸಚಿವರಾಗಿ ಅವರು ಕೆಲಸ ಮಾಡಿದ್ದರು.

ಸಿ.ಎಸ್‌.ಪುಟ್ಟರಾಜು (54), ಜೆಡಿಎಸ್ :

ಮೇಲುಕೋಟೆ ಕ್ಷೇತ್ರದಲ್ಲಿ 2004, 2008 ಹಾಗೂ 2018ರ ಚುನಾವಣೆಗಳಲ್ಲಿ ಗೆಲುವು. 1999 ಹಾಗೂ 2013ರಲ್ಲಿ ಸೋಲು. 2013ರ ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ನಟಿ ರಮ್ಯಾ ಎದುರು ಪರಾಭವ. 2014ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ರಮ್ಯಾ ವಿರುದ್ಧ ಗೆಲುವು. ಲೋಕಸಭಾ ಸದಸ್ಯತ್ವ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು.

ಯು.ಟಿ.ಖಾದರ್ (49), ಕಾಂಗ್ರೆಸ್ :

ಈ ಬಾರಿ ಕರಾವಳಿ ಭಾಗದಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿ ಬಂದ ಏಕೈಕ ಅಭ್ಯರ್ಥಿ ಯು.ಟಿ.ಖಾದರ್. ಶಾಸಕರಾಗಿದ್ದ ತಂದೆ 2007ರಲ್ಲಿ ನಿಧನರಾದ ಬಳಿಕ ನಡೆದ ಉಪಚುನಾವಣೆಯಲ್ಲಿ ಖಾದರ್ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 2008, 2013 ಮತ್ತು 2018ರ ಚುನಾವಣೆಗಳಲ್ಲೂ ಗೆಲುವಿನ ಓಟ ಮುಂದುವರಿಸಿದರು. 2013ರಲ್ಲಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಆರೋಗ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿ ಕೆಲಸ ಮಾಡಿದ್ದಾರೆ.

ಸಾ.ರಾ.ಮಹೇಶ್‌ (52), ಜೆಡಿಎಸ್ :

2004ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವ ಹೊಂದಿದ್ದ ಮಹೇಶ್‌, ನಂತರ ಜೆಡಿಎಸ್ ಸೇರಿ ಹ್ಯಾಟ್ರಿಕ್ ಗೆಲುವು ಸಾಧಿಸಿದರು. ವಿಧಾನಸಭೆಯ ಲೆಕ್ಕಪತ್ರಗಳ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿರುವ ಅನುಭವ ಇವರಿಗಿದೆ.

ಜಮೀರ್‌ ಅಹ್ಮದ್‌ ಖಾನ್‌ (51), ಕಾಂಗ್ರೆಸ್ :

2005ರಲ್ಲಿ ಎಸ್.ಎಂ.ಕೃಷ್ಣ ರಾಜೀನಾಮೆಯಿಂದ ಚಾಮರಾಜಪೇಟೆ ಕ್ಷೇತ್ರ ತೆರವಾಯಿತು. ಆಗ ನಡೆದ ಉಪ ಚುನಾವಣೆಯಲ್ಲಿ ಜಮೀರ್ ಅಹ್ಮದ್ ಖಾನ್ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಜಯಗಳಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಹಜ್‌ ಮತ್ತು ವಕ್ಫ್‌ ಇಲಾಖೆ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವ ಅವರಿಗಿದೆ. 2016ರ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಕಾರಣಕ್ಕೆ ಪಕ್ಷ ಅವರನ್ನು ಅಮಾನತು ಮಾಡಿತ್ತು. 2018ರಲ್ಲಿ ಕಾಂಗ್ರೆಸ್‌ಗೆ ಸೇರಿದರು.

ಎನ್‌.ಮಹೇಶ್‌ (62), ಬಿಎಸ್‌ಪಿ :

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಜಿಲ್ಲಾ ಅಧಿಕಾರಿಯಾಗಿ ಕೆಲಸ ಮಾಡಿರುವ ಎನ್‌.ಮಹೇಶ್, ಕಾನ್ಶೀರಾಂ ಪ್ರಭಾವಕ್ಕೆ ಒಳಗಾಗಿ ಸರ್ಕಾರಿ ಹುದ್ದೆ ತೊರೆದು ಬಿಎಸ್‌ಪಿ (ಬಹುಜನ ಸಮಾಜ ಪಕ್ಷ) ಸೇರಿದರು. 2004, 2008 ಹಾಗೂ 2013ರ ಚುನಾವಣೆಗಳಲ್ಲಿ ಕೊಳ್ಳೇಗಾಲ ಕ್ಷೇತ್ರದಿಂದ ಬಿಎಸ್‌ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಅವರು, ಈ ಬಾರಿ ಚೊಚ್ಚಲ ಗೆಲುವು ದಾಖಲಿಸಿದ್ದಾರೆ.

ಶಿವಾನಂದ‍ ಪಾಟೀಲ (56), ಕಾಂಗ್ರೆಸ್ :

ಬಸವನಬಾಗೇವಾಡಿ ಕ್ಷೇತ್ರದ ಶಿವಾನಂದ ಪಾಟೀಲ, ಐದನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1989ರಲ್ಲಿ ವಿಜಯಪುರ ಪುರಸಭೆಗೆ ಜೆಡಿಎಸ್‌ ಸದಸ್ಯರಾಗುವ ಮೂಲಕ ಸಕ್ರಿಯ ರಾಜಕಾರಣ ಪ್ರಾರಂಭಿಸಿದ ಇವರು,‌ 1990ರಲ್ಲಿ ಪುರಸಭೆ ಅಧ್ಯಕ್ಷರಾದರು. 1994ರಲ್ಲಿ ಜೆಡಿಎಸ್ ಹಾಗೂ 1999ರಲ್ಲಿ ಬಿಜೆಪಿಯಿಂದ ತ್ರಿಕೋಟಾ ಕ್ಷೇತ್ರದ ಶಾಸಕರಾದರು. 2004ರಲ್ಲಿ ಕಾಂಗ್ರೆಸ್‌ ಸೇರಿದ ಇವರು, ಬಸವನಬಾಗೇವಾಡಿಗೆ ವಲಸೆ ಬಂದು ಹ್ಯಾಟ್ರಿಕ್ ಜಯದ ಸಾಧನೆ ಮಾಡಿದರು. 2008ರಲ್ಲಿ ಸೋಲು ಅನುಭವಿಸಿದರೂ, 2013 ಹಾಗೂ 2018ರ ಚುನಾವಣೆಯಲ್ಲಿ ಮತ್ತೆ ವಿಜಯ ಪತಾಕೆ ಹಾರಿಸಿದರು.

ವೆಂಕಟರಮಣಪ್ಪ (71), ಕಾಂಗ್ರೆಸ್ :

ಪಾವಗಡ ತಾಲ್ಲೂಕಿನ ಹನುಮಂತನಹಳ್ಳಿ ಗ್ರಾಮದ ಕೃಷಿ ಕುಟುಂಬದಲ್ಲಿ ಜನಿಸಿದರು. ಮರಿದಾಸನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಪಾವಗಡ ಕ್ಷೇತ್ರದಲ್ಲಿ 6 ಬಾರಿ ಸ್ಪರ್ಧಿಸಿ 4 ಬಾರಿ ಗೆಲುವು ಸಾಧಿಸಿದ್ದಾರೆ. 1989, 1999, 2008 ಮತ್ತು 2018ರಲ್ಲಿ ಜಯ ಗಳಿಸಿದ್ದಾರೆ. 2008ರಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದಾಗ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದರು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಸರ್ಕಾರಕ್ಕೆ ಬೆಂಬಲಿಸಿ ಆ ಸರ್ಕಾರದಲ್ಲಿ ರೇಷ್ಮೆ ಮತ್ತು ಸಣ್ಣ ಉಳಿತಾಯ ಖಾತೆ ಸಚಿವರಾಗಿದ್ದರು. 2013ರಲ್ಲಿ ಪರಾಭವಗೊಂಡಿದ್ದ ಇವರು 2018ರಲ್ಲಿ ಮತ್ತೆ ಗೆಲುವು ಸಾಧಿಸಿದರು.

ರಾಜಶೇಖರ ಪಾಟೀಲ (53), ಕಾಂಗ್ರೆಸ್ :

ಹುಮನಾಬಾದ್ ಕ್ಷೇತ್ರದ ರಾಜಶೇಖರ ಪಾಟೀಲ, ಮಾಜಿ ಸಚಿವ ದಿ.ಬಸವರಾಜ ಪಾಟೀಲ ಅವರ ಪುತ್ರ. 1999ರಿಂದ ಸತತ ಐದೂ ಚುನಾವಣೆಗಳಲ್ಲಿ ಸ್ಪರ್ಧಿಸಿ, ನಾಲ್ಕು ಬಾರಿ ಗೆಲವು ಸಾಧಿಸಿದ್ದಾರೆ. ಹಿಂದಿನ ಸರ್ಕಾರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಇವರು, ಸ್ಥಾನ ಕೈತಪ್ಪಿದಾಗ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ನಂತರ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಇವರ ಸಿಟ್ಟು ಕಡಿಮೆ ಮಾಡಲಾಗಿತ್ತು.

ಸಿ.ಪುಟ್ಟರಂಗಶೆಟ್ಟಿ (64), ಕಾಂಗ್ರೆಸ್ :

1973ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದ ಪುಟ್ಟರಂಗಶೆಟ್ಟಿ, ಎರಡು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಒಮ್ಮೆ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಣೆ ಮಾಡಿದರು. ಚಾಮರಾಜನಗರ ಜಿಲ್ಲೆಯ ಯಳಂದೂರು ಟಿಎಪಿಸಿಎಂಎಸ್‌ ನಿರ್ದೇಶಕರಾಗಿ, ಎರಡು ಬಾರಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. 2008 ಮತ್ತು 2013ರಲ್ಲಿ ಶಾಸಕರಾಗಿ ಆಯ್ಕೆಯಾದ ಇವರು, ಈ ಅವಧಿಯಲ್ಲಿ ಸಂಸದೀಯ ಕಾರ್ಯದರ್ಶಿಯಾಗಿ ಹಾಗೂ ರಸ್ತೆ ನಿಗಮದ ಅಧ್ಯಕ್ಷರಾಗಿ ದುಡಿದಿದ್ದರು.

ಆರ್. ಶಂಕರ್ (52), ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ :

ಬಿಬಿಎಂಪಿಯ ಮಾಜಿ ಉಪ ಮೇಯರ್‌. ರಾಜಕೀಯವಾಗಿ ರಾಣೆಬೆನ್ನೂರಿಗೆ 2012ರಲ್ಲಿ ಪ್ರವೇಶಿಸಿದ್ದರು. 2013ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದಿದ್ದರು. ಅಂದು, ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ .ಕೋಳಿವಾಡ ಗೆಲುವು ಸಾಧಿಸಿದ್ದರು. ಆ ಬಳಿಕ ಕ್ಷೇತ್ರದಲ್ಲೇ ಮನೆ ಮಾಡಿ ನಿಂತ ಶಂಕರ್ ಅವರು ಈ ಸಲ ಕೋಳಿವಾಡ ವಿರುದ್ಧ 4,338 ಮತಗಳ ಅಂತರದಲ್ಲಿ ಆಯ್ಕೆಯಾದರು.

ಜಯಮಾಲಾ (59), ಕಾಂಗ್ರೆಸ್ :

ವಿಧಾನ ಪರಿಷತ್‌ ಸದಸ್ಯೆ. ನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಅವರು, ಚಲನಚಿತ್ರ ವಾಣಿಜ್ಯ ಮಂಡಳಿಯ ಮೊದಲ ಮಹಿಳಾ ಅಧ್ಯಕ್ಷರಾಗಿದ್ದವರು. ಹಲವು ಚಿತ್ರಗಳ ನಿರ್ಮಾಪಕಿ. ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ ಸಮಿತಿಯ ಅಧ್ಯಕ್ಷರಾಗಿ, ಆ ಕುರಿತ ವರದಿಯನ್ನು ಈ ಹಿಂದಿನ ಸರ್ಕಾರಕ್ಕೆ ಸಲ್ಲಿಸಿದ್ದರು.

ಇನ್ನು ಈ ಮೇಲ್ಕಂಡ ಸಚಿವರ ಮತ್ತು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಮೊಬೈಲ್ ನಂಬರ್ ಕೂಡ ಈ ಕೆಳಗೆ ನೀಡಲಾಗಿದೆ.

 

ವಿಶೇಷ ಸೂಚನೆ :

ಈ ನಂಬರ್ ಅನ್ನು ದುರುಪಯೋಗ ಮತ್ತು ಅನಗತ್ಯ ಕರೆ ಮಾಡಿ ಸಚಿವ ಸಮಯ ಹಾಳು ಮಾಡಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ.

ಲೇಖನ : PSV

Please follow and like us:
0
http://bp9news.com/wp-content/uploads/2018/06/cabinet-9-1.jpghttp://bp9news.com/wp-content/uploads/2018/06/cabinet-9-1-150x150.jpgPolitical Bureauಅಂಕಣಪ್ರಮುಖರಾಜಕೀಯDo you know the age and experience of our minister ??? See here. Numerous Information !!!ಬೆಂಗಳೂರು : ಮೈತ್ರಿ ಸರ್ಕಾರದ ಸಚಿವ ಸಂಪುಟ ಅಂತೂ ಇಂತೂ ವಿಸ್ತರಣೆ ಆಗಿದ್ದಾಗಿದೆ. ಸಾಕಷ್ಟು ಭಿನ್ನಮತ ಸ್ಫೋಟವೂ ಆಗಿದೆ. ಈ ನಡುವೆ ಮೊದಲ ಹಂತದ ಸಚಿವರು ತಮ್ಮ ಕರ್ತವ್ಯ ನಿರ್ವಹಿಸಲು ಸಿದ್ಧರಾಗಿದ್ದಾರೆ. ಇನ್ನು ಅವರು ಯಾರು, ಅವರ ವಯಸ್ಸು ಏನು, ಅವರ ಅನುಭವ ಏನು ಎಂಬುದು ಸಾಕಷ್ಟು ಜನರಿಗೆ ತಿಳಿದಿಲ್ಲ. ಆದ್ದರಿಂದಲೇ ಬಿಪಿ9 ನಿಮಗಾಗಿ ಮೈತ್ರಿ ಸರ್ಕಾರದ ಸಚಿವರ ವಯಸ್ಸು, ಅನುಭವಗಳನ್ನು ಪ್ರಸ್ತುತ ಪಡಿಸುತ್ತಿದ್ದೇವೆ. var domain = (window.location...Kannada News Portal