ದಾವಣಗೆರೆ : ವಿಧಾನಸಭೆ ಚುನಾವಣೆ – 2018 ರ ಬಹಿರಂಗ ಪ್ರಚಾರ ನಾಳೆಗೆ ಅಂತ್ಯಗೊಳ್ಳಲಿದೆ. ಜಿಲ್ಲೆಯಲ್ಲಿ ಪ್ರಚಾರದ ಅಬ್ಬರ ಮುಗಿಲು ಮುಟ್ಟಿದೆ. ಮತದಾರರ ಮನವೊಲಿಕೆಯ ಕಸರತ್ತುಗಳು ಬಿರುಸುಗೊಂಡಿದ್ದು, ಪ್ರಚಾರ ಕಣ ಅಕ್ಷರಶಃ ಕಾವೇರುವುದರ ಜೊತೆಗೆ ರಂಗೇರಿದೆ.

ಮತದಾನ ಕೊನೆಗೊಳ್ಳುವ 48 ಗಂಟೆ ಮುಂಚಿತವಾಗಿ ಎಲ್ಲ ರೀತಿಯ ಬಹಿರಂಗ ಪ್ರಚಾರ ಕಾರ್ಯವನ್ನು ಅಭ್ಯರ್ಥಿ, ರಾಜಕೀಯ ಪಕ್ಷಗಳು ನಿಲ್ಲಿಸಬೇಕಾಗುತ್ತದೆ. ಕ್ಷೇತ್ರದ ಮತದಾರರಲ್ಲದ ನಾಯಕರು ಕ್ಷೇತ್ರ ತೊರೆಯಬೇಕಾಗುತ್ತದೆ. ಮೇ 12 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, ನಾಳೆ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ಅಧಿಕೃತ ತೆರೆ ಬೀಳಲಿದೆ. ನಾಳೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳೂ ಸೇರಿದಂತೆ ರಾಜ್ಯದ  ಪ್ರಚಾರ ಕಣ ಬಿಸಿಯೇರಿದೆ. ಚುನಾವಣೆಗೆ ಸಂಬಂಧಿಸಿದ ಸಭೆ, ಸಮಾರಂಭ, ರೋಡ್ ಶೋ, ಮತಯಾಚನೆ ಕಾರ್ಯವು ಮತ್ತಷ್ಟು ವೇಗ ಪಡೆದುಕೊಂಡಿದೆ. ಇಂದು ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡವರ ರೀತಿಯಲ್ಲಿ ಹಗಲು-ರಾತ್ರಿಗಳ ಪರಿವೆಯೇ ಇಲ್ಲದೆ ಓಡಾಡುತ್ತಿದ್ದು, ಅಂತಿಮ ಕ್ಷಣದಲ್ಲಿ ಮತದಾರರ ಗಮನ ಸೆಳೆಯಲು ನಾನಾ ರೀತಿಒಯ ತಂತ್ರಗಾರಿಕೆ ನಡೆಸುತ್ತಿದ್ದಾರೆ. ಹಾಗೆಯೇ ಜಿಲ್ಲೆಗೆ ಆಗಮಿಸುತ್ತಿರುವ ವಿವಿಧ ಪಕ್ಷಗಳ ಸ್ಟಾರ್ ಪ್ರಚಾರಕರ ಸಂಖ್ಯೆ ಕೂಡ ಹೆಚ್ಚಾಗಿದೆ.

ಓಡಾಟ: ಪ್ರಸ್ತುತ ಜಿಲ್ಲೆಯಲ್ಲಿ ಬೇಸಿಗೆ ಬಿಸಿಲು ನೆತ್ತಿ ಸುಡುತ್ತಿದೆ. ತಾಪಮಾನದ ಪ್ರಮಾಣ ಗರಿಷ್ಠ 40 ಡಿಗ್ರಿಯವರೆಗೂ ದಾಖಲಾಗುತ್ತಿದೆ. ಮಧ್ಯಾಹ್ನದ ವೇಳೆಯಲ್ಲಂತೂ ಮನೆಯ ಹೊರಗೆ ಕಾಲಿಡಲು ಆಗದಷ್ಟು ಬಿಸಿಲು ಬಿದ್ದಿರುವುದು ಕಂಡುಬರುತ್ತದೆ. ಇಂತಹ ಸನ್ನಿವೇಶದಲ್ಲಿಯೂ ಅಭ್ಯರ್ಥಿ ಮತ್ತವರ ಬೆಂಬಲಿಗರು ಮತದಾರರ ಮನೆ ಬಾಗಿಲುಗಳಿಗೆ ಎಡತಾಕುತ್ತಿದ್ದಾರೆ. ಮತಯಾಚನೆ ಮಾಡುತ್ತಿದ್ದಾರೆ.

ಜೋರು: ಜಿಲ್ಲೆಯ 8 ಕ್ಷೇತ್ರಗಳಲ್ಲಿಯೂ ಪ್ರಮುಖ ಅಭ್ಯರ್ಥಿ ಹಾಗೂ ರಾಜಕೀಯ ಪಕ್ಷಗಳ ನಾಯಕರ ನಡುವೆ ಆರೋಪ-ಪ್ರತ್ಯಾರೋಪಗಳ ಕೆಸರೆರಚಾಟ ತಾರಕಕ್ಕೇರಿದೆ. ಕೆಲ ನಾಯಕರು ಪರಸ್ಪರ ಒಬ್ಬರು ಮತ್ತೊಬ್ಬರನ್ನು ಟೀಕಿಸುವ, ಕಾಲೆಳೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಕೇವಲ ಇನ್ನೊಂದು ದಿನ ಮಾತ್ರ ಪ್ರಚಾರಕ್ಕೆ ಅವಕಾಶವಿದ್ದು ಅಭ್ಯರ್ಥಿಗಳ ಅಬ್ಬರ ಇನ್ನೂ ಜೋರಾಗುವುದು ನಿಶ್ಚಿತವಾಗಿದೆ. ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪರವಾಗಿ, ಆ ಪಕ್ಷಗಳ ಹಿರಿಯ ನಾಯಕರು ಪ್ರಚಾರ ಕೈಗೊಳ್ಳುವ ಸಾಧ್ಯತೆಗಳಿವೆ. ಒಟ್ಟಾರೆ ನಾಳೆ ಬಹಿರಂಗ ಪ್ರಚಾರಕ್ಕೆ ಅಂತಿಮ ತೆರೆ ಬೀಳುವ ದಿನ. ಪ್ರಚಾರದ ಕಾವು ಕೂಡ ಏರುಗತಿಯಲ್ಲಿ ಸಾಗಿದ್ದು, ಉಳಿದಿರುವ ಸೀಮಿತಾವಧಿಯಲ್ಲಿ ಮತದಾರರ ಮನ ಗೆಲ್ಲಲು ನಾನಾ ಕಸರತ್ತು ನಡೆಸುತ್ತಿರುವುದಂತೂ ಸತ್ಯವಾಗಿದೆ.

ಮತದಾರರಿಗೆ ಆಮಿಷವೊಡ್ಡುವುದನ್ನು ತಡೆಯಲು ಚುನಾವಣಾ ಆಯೋಗ ವ್ಯಾಪಕ ಕಟ್ಟೆಚ್ಚರವಹಿಸಿದೆ. ಇದೆಲ್ಲದರ ಹೊರತಾಗಿಯೂ ಜಿಲ್ಲೆಯ ಹಲವೆಡೆ ಕೆಲ ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಗಳು ಅತ್ಯಂತ ಗುಪ್ತವಾಗಿ ಮತದಾರರಿಗೆ ನಾನಾ ರೀತಿಯ ಆಮಿಷವೊಡ್ಡುತ್ತಿರುವ ಮಾಹಿತಿಗಳು ಸಾರ್ವಜನಿಕ ವಲಯದಿಂದ ಕೇಳಿಬರಲಾರಂಭಿಸಿದೆ. ಮುಂದಿನ ದಿನಗಳಲ್ಲಿ ಆಮಿಷದ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲವಾಗಿದೆ.

 

Please follow and like us:
0
http://bp9news.com/wp-content/uploads/2018/05/dvg-1-nale-baheranga-prachara-antya-9518-script.-and-photo-1.jpghttp://bp9news.com/wp-content/uploads/2018/05/dvg-1-nale-baheranga-prachara-antya-9518-script.-and-photo-1-150x150.jpgBP9 Bureauದಾವಣಗೆರೆಪ್ರಮುಖರಾಜಕೀಯದಾವಣಗೆರೆ : ವಿಧಾನಸಭೆ ಚುನಾವಣೆ - 2018 ರ ಬಹಿರಂಗ ಪ್ರಚಾರ ನಾಳೆಗೆ ಅಂತ್ಯಗೊಳ್ಳಲಿದೆ. ಜಿಲ್ಲೆಯಲ್ಲಿ ಪ್ರಚಾರದ ಅಬ್ಬರ ಮುಗಿಲು ಮುಟ್ಟಿದೆ. ಮತದಾರರ ಮನವೊಲಿಕೆಯ ಕಸರತ್ತುಗಳು ಬಿರುಸುಗೊಂಡಿದ್ದು, ಪ್ರಚಾರ ಕಣ ಅಕ್ಷರಶಃ ಕಾವೇರುವುದರ ಜೊತೆಗೆ ರಂಗೇರಿದೆ. ಮತದಾನ ಕೊನೆಗೊಳ್ಳುವ 48 ಗಂಟೆ ಮುಂಚಿತವಾಗಿ ಎಲ್ಲ ರೀತಿಯ ಬಹಿರಂಗ ಪ್ರಚಾರ ಕಾರ್ಯವನ್ನು ಅಭ್ಯರ್ಥಿ, ರಾಜಕೀಯ ಪಕ್ಷಗಳು ನಿಲ್ಲಿಸಬೇಕಾಗುತ್ತದೆ. ಕ್ಷೇತ್ರದ ಮತದಾರರಲ್ಲದ ನಾಯಕರು ಕ್ಷೇತ್ರ ತೊರೆಯಬೇಕಾಗುತ್ತದೆ. ಮೇ 12 ರಂದು ಬೆಳಿಗ್ಗೆ 7...Kannada News Portal