ದಾವಣಗೆರೆ : ಸ್ವಸ್ಥ ಮನಸ್ಸು ಮತ್ತು ಸದೃಢ ಆರೋಗ್ಯಕ್ಕಾಗಿ ಪ್ರತಿಯೊಬ್ಬರಿಗೂ ಯೋಗ ಅವಶ್ಯವೆಂದು ವಿಶ್ವಕ್ಕೇ ತೋರಿಸಿಕೊಟ್ಟವರು  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎಂದು ಸಂಸದ ಜಿ ಎಂ ಸಿದ್ದೇಶ್ವರ್ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಯೋಗ ಒಕ್ಕೂಟ, ತಪೋವನ ಹಾಗೂ ಅಶ್ವಿನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಪತಂಜಲಿ ಯೋಗ ಸಂಸ್ಥೆ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ, ರಾಷ್ಟ್ರೀಯ ಸೇವಾದಳ, ಎಎಫ್‍ಐ&ಎನ್‍ಐಎಂಎ, ಎನ್‍ಸಿಸಿ, ಎನ್‍ಎಸ್‍ಎಸ್, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಮತ್ತು ಇಲಾಖೆಗಳ ಸಹಯೋಗದಲ್ಲಿ ಇಂದು ಮೋತಿವೀರಪ್ಪ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿದ್ದ 4ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅತ್ಯಂತ ಪ್ರಾಚೀನವಾದ ಮತ್ತು ಉಪಯುಕ್ತವಾದ ಯೋಗವನ್ನು ಎಲ್ಲರಿಗೂ ಪರಿಚಯಿಸಬೇಕೆಂಬ ಉದ್ದೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಶ್ವ ಯೋಗ ದಿನಾಚರಣೆ ಘೋಷಣೆಗೆ ಕಾರಣಕರ್ತರಾಗಿ ವಿಶ್ವಕ್ಕೇ ಯೋಗವನ್ನು ಪರಿಚಯಿಸಿದರು. ಇಂದು ಅನೇಕ ರಾಷ್ಟ್ರಗಳಲ್ಲಿ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಹಿಂದೆ ಪೂರ್ವಿಜರು ಅತ್ಯಂತ ಶ್ರಮಜೀವಿಗಳಾಗಿದ್ದು, ಬೆವರು ಸುರಿಸಿ ಕೆಲಸ ಮಾಡುತ್ತಿದ್ದರು. ಆ ಮೂಲಕ ಆರೋಗ್ಯವಂತರಾಗಿದ್ದರು. ಇತ್ತೀಚಿನ ದಿನಗಳಲ್ಲಿ ಮನುಷ್ಯ ಯಂತ್ರಗಳ ಮೇಲೆ ಹೆಚ್ಚಾಗಿ ಅವಲಂಬಿತರಾಗಿ, ದೈಹಿಕ ಚಟುವಟಿಕೆ ಇಲ್ಲದೇ ಅನೇಕ ಕಾಯಿಲೆಗಳು ಮತ್ತು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇಂತಹ ದಿನಮಾನದ ಸಂದರ್ಭದಲ್ಲಿ ಯೋಗಾಭ್ಯಾಸವನ್ನು ದಿನ ನಿತ್ಯ ಮಾಡುವುದರಿಂದ ಉತ್ತಮ ಆರೋಗ್ಯವಂತರಾಗಿರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಯೋಗಾಭ್ಯಾಸ ಮಾಡಿ, ಸಧೃಡರಾಗಿರಬೇಕೆಂದು ಆಶಿಸಿದರು.

ಶಾಸಕ ಎಸ್ ಎ ರವೀಂದ್ರನಾಥ್ ಮಾತನಾಡಿ, ಯಾರು ನಿತ್ಯ ಬೆಳಿಗ್ಗೆ 6 ಗಂಟೆಗೂ ಮುನ್ನ ಏಳುವರು ಅವರು ದೇವಮಾನವರು. 6 ರಿಂದ 7 ಗಂಟೆಯೊಳಗೆ ಏಳುವವರು ಮನುಷ್ಯರು, 7 ಗಂಟೆಗೂ ಮೀರಿ ಏಳುವವರು ರಾಕ್ಷಸರು. ಯಾವ ಗುಂಪಿಗೆ ಸೇರುತ್ತೀರೋ ನೀವೇ ನಿರ್ಧರಿಸಿ ಎಂದ ಅವರು ಆರೋಗ್ಯವಂತರಾಗಿರಲು ಆದಷ್ಟು ಬೇಗ ಎದ್ದು ಯೋಗಾಭ್ಯಾಸ ಮಾಡಬೇಕು. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಶ್ವದ ಕಣ್ಣು ತೆರೆಸುವ ಕೆಲಸ ಮಾಡಿದ್ದಾರೆಂದರು.

ಜಿಲ್ಲಾಧಿಕಾರಿ ಡಿ ಎಸ್ ರಮೇಶ್ ಮಾತನಾಡಿ, ಹಿಂದಿನ ಜೀವನ ಕ್ರಮಕ್ಕೆ ಹೋಲಿಸಿದರೆ ಇಂದಿನ ಜೀವನ ಕ್ರಮ ತೀರಾ ವಿಭಿನ್ನ ಮಾರ್ಗದಲ್ಲಿ ಹೋಗುತ್ತಿದೆ. ಮನುಷ್ಯನಿಗೆ ಅಗಾಧವಾದ ನಿಯಂತ್ರಣ ಶಕ್ತಿ ಇದೆ. ಬಾಹ್ಯ ಜಗತ್ತಿನಲ್ಲಿ ಏನನ್ನು ಬೇಕಾದರೂ ಮನುಷ್ಯ ನಿಯಂತ್ರಿಸಬಲ್ಲ. ಕ್ಷಣ ಮಾತ್ರದಲ್ಲಿ ಎಲ್ಲವನ್ನೂ ಹೊಸಕಿ ಹಾಕುವ ಶಕ್ತಿ ಕೂಡ ಇದೆ. ಆದರೆ ಅಂತರ್ಗತವಾಗಿ, ಆಂತರ್ಯದಲ್ಲಿ ಅಂತಹ ಶಕ್ತಿ ಇಲ್ಲವಾಗಿದೆ. ಈ ನಿಟ್ಟಿನಲ್ಲಿ ಮಾನಸಿಕವಾಗಿ ಬಲಾಢ್ಯರಾಗಲು, ಸ್ವಯಂ ನಿಯಂತ್ರಣ ಹೊಂದಲು ಯೋಗ ಕ್ರಮಗಳು ಸಹಕಾರಿ. ನಮ್ಮನ್ನು ನಾವು ನಿಯಂತ್ರಿಸಿಕೊಂಡಾಗ ಸಂತಸದ ಜೀವನ ನಡೆಸಬಹುದು.

ನಾವೂ ಸಂತೋಷದಿಂದಿದ್ದು, ಇತರರನ್ನೂ ಸಂತೋಷವಾಗಿಡುವ ವಾತಾವರಣವನ್ನು ಸೃಷ್ಟಿಸುವ ದಿಸೆಯಲ್ಲಿ ಸಾಗೋಣವೆಂದು ಕರೆ ನೀಡಿದರು. ಬೆಳಿಗ್ಗೆ 7 ರಿಂದ 8.45 ರವರೆಗೆ ಶಿಷ್ಟಾಚಾರದಂತೆ ಯೋಗ : ವೈದ್ಯಶ್ರೀ ಚನ್ನಬಸವಣ್ಣ ಯೋಗಾಭ್ಯಾಸ ನಡೆಸಿಕೊಟ್ಟರು. ಧ್ಯಾನ ಸಂಗಚಧ್ವಂ ಸಂವಧ್ವಂ ಸಂವೋ ಮನಾಂಸಿ ಜಾನತಾಮ್ ದೇವಾಭಾಗಂ ಯಥಾಪೂರ್ವೇ ಸಂಜಾನಾನಾ ಉಪಾಸತೆ ಎಂಬ ಯೋಗ ಪ್ರಾರ್ಥನೆಯೊಂದಿಗೆ ಶಿಷ್ಟಾಚಾರದಂತೆ ಬೆಳಿಗ್ಗೆ 7 ರಿಂದ  ಯೋಗಾಭ್ಯಾಸ ಆರಂಭವಾಯಿತು. ಮೊದಲಿಗೆ ಚಲನ ಕ್ರಿಯೆ, ಭುಜದ ವ್ಯಾಯಾನ, ನಂತರ 25 ನಿಮಿಷಗಳ ಕಾಲ 19 ಆಸನಗಳು ಹಾಗೂ ಪ್ರಾಣಾಯಾಮ, ಧ್ಯಾನ ಮತ್ತು ಸಂಕಲ್ಪ ನಂತರ ಶಾಂತಿ ಮಂತ್ರದೊಂದಿಗೆ ಮುಕ್ತಾಯಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಮಹಾಪೌರರಾದ ಶೋಭಾ ಪಲ್ಲಾಗಟ್ಟೆ, ಜಿ ಪಂ ಅಧ್ಯಕ್ಷೆ ಮಂಜುಳಾ ಟಿ ವಿ ರಾಜು, ಜಿ ಪಂ ಉಪಾಧ್ಯಕ್ಷೆ ಗೀತಾಗಂಗಾನಾಯ್ಕ, ಜಿ ಪಂ ಸದಸ್ಯೆ ಶೈಲಜಾ ಬಸವರಾಜ, ಪಾಲಿಕೆ ಸದಸ್ಯೆ ಅಶ್ವಿನಿ ಪ್ರಶಾಂತ್, ಡಿ ಸಿ ಉಮಾಪತಿ, ವೈದ್ಯಶ್ರೀ ಚನ್ನಬಸವಣ್ಣ, ಹಾಸ್ಯ ಸಾಹಿತಿ ಕೃಷ್ಣೇಗೌಡ, ಉಪವಿಭಾಗಾಧಿಕಾರಿಗಳಾದ ಡಾ.ಮಧು ಪಾಟಿಲ್, ಪ್ರಸನ್ನಕುಮಾರ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಸಿದ್ದೇಶ್, ಡಾ. ಶಶಿಕುಮಾರ್, ಡಾ.ಗಂಗಾಧರ್ ವರ್ಮ, ಕರ್ನಲ್ ಸಿ ಎಂ ಬೋಪಣ್ಣ, ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದ ಲೀಲಕ್ಕ, ಜಿಲ್ಲಾ ಯೋಗ ಒಕ್ಕೂಟದ, ಯೋಗ ಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

ಅಸೂಯೆ, ನೋವುಗಳಾಚೆಗಿನ ಆನಂದವೇ ಯೋಗ
ಯೋಗ ಎಂದರೆ ಎಲ್ಲರೂ ಭಾರತದೆಡೆ ತಿರುಗಿ ನೋಡುತ್ತಾರೆ. ಯೋಗ ಭಾರತದ ಒಂದು ಪ್ರಾಚೀನ ಕ್ರಮವಾಗಿದೆ. 2014 ರ ನವೆಂಬರ್ 27 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಶ್ವ ಯೋಗ ದಿನಾಚರಣೆಗೆ ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ವಾನುಮತದಿಂದ ಅಂಗೀಕರಿಸಲಾಗಿದ್ದು ಐತಿಹಾಸಿಕ ಘಟನೆ ಎಂದು ಹಾಸ್ಯ ಸಾಹಿತಿ ಪ್ರೋ. ಕೃಷ್ಣೇಗೌಡ ಹೇಳಿದರು.

ಇಂದು ಮೋತಿವೀರಪ್ಪ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿದ್ದ 4ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಭಾವಶೋಧ ಅಂದರೆ ಮನಸ್ಸಿನ ಶೋಧಕ್ಕೆ ಯೋಗ ಬಹಳ ಮುಖ್ಯ. ಮನುಷ್ಯ ಮಲಗಿದ್ದಾಗ ಏನೂ ಅರಿವಿರುವುದಿಲ್ಲ. ಆಗ ಮನುಷ್ಯನ ಮನಸ್ಸು ರಾಜನಂತಿರುತ್ತದೆ. ಎಚ್ಚರವಾಗಿದ್ದಾಗಲೂ ಮನಸ್ಸು ರಾಜನಂತಿರಬೇಕಾದರೆ ಯೋಗಾಭ್ಯಾಸ ಮಾಡಬೇಕು. ಯೋಗ ವ್ಯಾಯಾಮ ಅಲ್ಲ. ದೇಹ ಮತ್ತು ಮನಸ್ಸಿನ ಸಮಾಗಮ. ಪ್ರಕತಿ ಮತ್ತು ಮನಸ್ಸಿನ ಜೊತೆ ದೇಹದ ಸಮಾಗಮ ಯೋಗ. ಅಸೂಯೆ, ನೋವುಗಳಾಚೆಗಿನ ಆನಂದವೇ ಯೋಗ.

ಚೆನ್ನಾಗಿರುವುದು ಬೇರೆ, ಆರೋಗ್ಯವಂತರಾಗಿರುವುದು ಬೇರೆ. ಆರೋಗ್ಯವಂತರಾಗಿ ಬಹುತೇಕ ಮಂದಿ ಇರಬಹುದು. ಆದರೆ ಚೆನ್ನಾಗಿರುವುದು ಮುಖ್ಯ. ದೇಹ ಮತ್ತು ಮನಸ್ಸಿನ ಆರೋಗ್ಯವೆರಡೂ ಸೇರಿದರೆ ಚೆನ್ನಾಗಿರಲು ಸಾಧ್ಯ. ಓಶೋ ರಜನೀಶ್, ನಾವು ಬಾಯಿಯಿಂದ ತಿನ್ನುವ ಆಹಾರ ಶೇ. 1, ಆದರೆ ಕೇಳುವುದು, ನೋಡುವುದರ ಮೂಲಕ ಕಿವಿ, ಕಣ್ಣು ತೆಗೆದುಕೊಳ್ಳುವ ಆಹಾರ ಶೇ. 99 ಆಗಿರುತ್ತದೆ. ಆದ್ದರಿಂದ ಈ ಆಹಾರ ಮುಖ್ಯವಾಗಿ ಚೆನ್ನಾಗಿದ್ದರೆ ಮನುಷ್ಯ ಸದೃಢ, ಆರೋಗ್ಯವಂತನಾಗಿರಲು ಸಾಧ್ಯ ಎನ್ನುತ್ತಾರೆ. ಈ ನಿಟ್ಟಿನಲ್ಲಿ ಎಲ್ಲರೂ ದೇಹ-ಮನಸ್ಸನ್ನು ನಿಯಂತ್ರಣದಲ್ಲಿರಿಸುವ ಯೋಗಾಭ್ಯಾಸದೆಡೆ ಒಲವು ತೋರಬೇಕೆಂದರು.

ಕಾರ್ಯಕ್ರಮದಲ್ಲಿ ಯೋಗಾಭ್ಯಾಸ ಹೇಳಿಕೊಟ್ಟ ವೈದ್ಯಶ್ರೀ ಚನ್ನಬಸವಣ್ಣ ಮಾತನಾಡಿ ನಮ್ಮ ಒಳಗೆ ನಾವು ಪ್ರವೇಶ ಮಾಡುವುದೇ ಯೋಗ. ಯೋಗ ನೋವಿನಲ್ಲಿರುವವರ ಕಣಿ ?ಣೀರನ್ನು ಒರೆಸುವುದು. ಬೇರೆಯವರ ಮನೆ ದೀಪ ಹಚ್ಚುವುದು. ಎಲ್ಲವನ್ನು ಪೂಜನೀಯವಾಗಿ ನೋಡುವುದೇ ಯೋಗಾಚರಣೆ. ಇಂದು ನಾವೆಲ್ಲಾ ಯೋಗ ಜೀವನ ನಡೆಸುವುದು ಅತ್ಯವಶ್ಯಕವಾಗಿದೆ. ಒಳ್ಳೆಯ ಆಹಾರ, ಉತ್ತಮ ಮಾತು, ಸತ್ಯತೆ, ಸನ್ನಡತೆ ಇತ್ಯಾದಿ ಇವೇ ಯೋಗ.

ದೇವರಿಗೆ ತಂದೆ ಇಲ್ಲ, ತಾಯಿ ಇಲ್ಲ, ದೇವ ಅಪರಿಮಿತ. ಪರಿಮಿತಿಯೇ ಇಲ್ಲ. ಯೋಗ-ಪ್ರಾಮಾಯಾನ ನಿರತರಾದಾಗ ನಮ್ಮಲ್ಲಿ ಹರಿಯುವ ವಿಶ್ವಶಕ್ತಿಯೇ ದೇವರು. ಎಲ್ಲರಲ್ಲೂ ಈ ಶಕ್ತಿ ಇದೆ. ಎಲ್ಲರಲ್ಲೂ ದೇವರಿದ್ದಾನೆ. ಹಲವಾರು ಧರ್ಮದವರು ವಿಧ ವಿಧವಾಗಿ ಆರಾಧಿಸುತ್ತಾರೆ ಅಷ್ಟೆ. ಅದಕ್ಕೆ ಯೋಗಾಭ್ಯಾಸದಂತಹ ಕ್ರಮಗಳ ಮೂಲಕ ಚಾಲನೆ ನೀಡಬೇಕಷ್ಟೆ. ಎಲ್ಲರ ಹಸ್ತಕಮಲದಲ್ಲಿ ಹರಿಯುವ ಶಕ್ತಿಯೇ ದೇವರು ಅಭಿಪ್ರಾಯ ಪಟ್ಟರು.

ಯೋಗಾಭ್ಯಾಸದಲ್ಲಿ ಸಂಸದರು, ಜಿ ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಜಿಲ್ಲಾಧಿಕಾರಿ, ಅಧಿಕಾರಿ, ವೈದ್ಯರು, ವಿದ್ಯಾರ್ಥಿಗಳು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಜನ ಯೋಗಾಭ್ಯಾಸ ಮಾಡಿದರು. ಶಿಕ್ಷಣ ಮತ್ತು ಸಂಸ್ಕೃತಿ ವಿನಿಯಮ ಕಾರ್ಯಕ್ರಮದಡಿ ಯು ಕೆ(ಯುನೈಟೆಡ್ ಕಿಂಗ್‍ಡಮ್)ಯಿಂದ ಜಿಲ್ಲೆಗೆ ಆಗಮಿಸಿದ್ದ ಎಂಟು ವಿದ್ಯಾರ್ಥಿಗಳು ಇಂದಿನ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಯೋಗಾಭ್ಯಾಸ ಮಾಡಿದರು.

 

 

Please follow and like us:
0
http://bp9news.com/wp-content/uploads/2018/06/dvg-2-anandave-yooga-21618-script.and-photo-1.jpghttp://bp9news.com/wp-content/uploads/2018/06/dvg-2-anandave-yooga-21618-script.and-photo-1-150x150.jpgBP9 Bureauದಾವಣಗೆರೆಪ್ರಮುಖದಾವಣಗೆರೆ : ಸ್ವಸ್ಥ ಮನಸ್ಸು ಮತ್ತು ಸದೃಢ ಆರೋಗ್ಯಕ್ಕಾಗಿ ಪ್ರತಿಯೊಬ್ಬರಿಗೂ ಯೋಗ ಅವಶ್ಯವೆಂದು ವಿಶ್ವಕ್ಕೇ ತೋರಿಸಿಕೊಟ್ಟವರು  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎಂದು ಸಂಸದ ಜಿ ಎಂ ಸಿದ್ದೇಶ್ವರ್ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಯೋಗ ಒಕ್ಕೂಟ, ತಪೋವನ ಹಾಗೂ ಅಶ್ವಿನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಪತಂಜಲಿ ಯೋಗ ಸಂಸ್ಥೆ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ, ರಾಷ್ಟ್ರೀಯ ಸೇವಾದಳ, ಎಎಫ್‍ಐ&ಎನ್‍ಐಎಂಎ, ಎನ್‍ಸಿಸಿ, ಎನ್‍ಎಸ್‍ಎಸ್,...Kannada News Portal