ದಾವಣಗೆರೆ : ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ ಅಗತ್ಯವಾಗಿ ಬೇಕಾಗಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನಿದ್ದು, ರೈತರಿಗೆ ತೊಂದರೆಯಾಗದಂತೆ ಸಕಾಲದಲ್ಲಿ ಲಭ್ಯವಾಗುವ ವ್ಯವಸ್ಥೆ ಮಾಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದ್ಗಲ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ಸಕಾಲದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಪೂರೈಸುವಂತೆ ಕೃಷಿ ಇಲಾಖೆ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಕ್ರಮವಹಿಸಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಒಟ್ಟು 41.175 ಮೆಟ್ರಿಕ್ ಟನ್ ರಸಗೊಬ್ಬರಗಳ ದಾಸ್ತಾನಿದೆ. ಮುಂದಿನ ದಿನಗಳಲ್ಲಿ ಬೇಡಿಕೆ ಇರುವಷ್ಟು ರಸಗೊಬ್ಬರ ಪೂರೈಕೆಗೆ ಕ್ರಮಕೈಗೊಳ್ಳಲಾಗುವುದು.  ಒಣ ಪ್ರದೇಶಗಳಾದ ಹರಪನಹಳ್ಳಿ, ಜಗಳೂರು ಮತ್ತು ಭಾಗಶಃ ದಾವಣಗೆರೆ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿರುವುದರಿಂದ ಡಿಎಪಿ ರಸಗೊಬ್ಬರದ ಬೇಡಿಕೆ ಹೆಚ್ಚಾಗುವ ಸಂಭವವಿದೆ. ಅದಕ್ಕಾಗಿ ಸಿದ್ದತೆ ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಒಟ್ಟು ಈ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ 1.45.637 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳ ಬೇಡಿಕೆ ಇದೆ. ಹಂತ ಹಂತವಾಗಿ ರೈತರಿಗೆ ತೊಂದರೆಯಾಗದಂತೆ ಪೂರೈಕೆ ಮಾಡಲಾಗುವುದು. ಈ ಬಾರಿ ಮಳೆ ಉತ್ತಮವಾಗಿದೆ. ಜಿಲ್ಲೆಯಲ್ಲಿ ಒಟ್ಟು 3.24 ಲಕ್ಷಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಮ್ಮಿಕೊಂಡಿದ್ದು ಇಲ್ಲಿಯವರೆಗೆ ಶೇ. 13.5 ಅಂದರೆ 42,268 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಇಲ್ಲಿಯವರೆಗೆ ಶೇ. 59 ರಷ್ಟು ಹೆಚ್ಚು ಮಳೆಯಾಗಿದೆ.

ಜಿಲ್ಲೆಯಲ್ಲಿ 24 ರೈತ ಸಂಪರ್ಕ ಕೇಂದ್ರಗಳಿದ್ದು, ಇದರ ಜೊತೆಯಲ್ಲಿ 13 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಇತರ 9 ಕೇಂದ್ರಗಳು ಸೇರಿ ಒಟ್ಟಾರೆ 46 ಕೇಂದ್ರಗಳ ಮುಖಾಂತರ ರೈತರ ಅನುಕೂಲಕ್ಕಾಗಿ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಬೇಡಿಕೆಯ ಪೂರೈಕೆಯಲ್ಲಿ ವ್ಯತ್ಯಾಸವಾಗದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಬೀಜ ಬದಲಾವಣೆ ಅನುಪಾತದಡಿಯಲ್ಲಿ ಒಟ್ಟಾರೆ 49.103 ಕ್ವಿಂಟಲ್ ಬೇಡಿಕೆ ಇದೆ. ಕಳೆದ ವರ್ಷ 13.222 ಕ್ವಿಂಟರ್ ರಿಯಾಯ್ತಿ ದರದಲ್ಲಿ ವಿತರಿಸಲಾಗಿದೆ. ಈ ವರ್ಷವು ಸಹ ರಿಯಾಯ್ತಿ ದರದಲ್ಲಿ ವಿತರಿಸಲು ಎಲ್ಲಾ ತರಹದ ಬಿತ್ತನೆ ಬೀಜಗಳನ್ನು ದಾಸ್ತಾನೀಕರಿಸಲಾಗಿದೆ.

ಮುಖ್ಯವಾಗಿ ಮುಸುಕಿನ ಜೋಳ, 10.600 ಕ್ವಿಂಟಲ್, ಶೇಂಗಾ 4000 ಕ್ವಿಂಟಲ್ ಮತ್ತು ಇತರೆ ಬಿತ್ತನೆ ಬೀಜಗಳನ್ನು 2000 ಕ್ವಿಂಟಲ್ ದಾಸ್ತಾನಿಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಯಾವುದೇ ರೀತಿಯ ಬಿತ್ತನೆ ಬೀಜಗಳ ಪೂರೈಕೆಯಲ್ಲಿ ಕೊರತೆ ಇಲ್ಲ. ಜಿಲ್ಲೆಯಲ್ಲಿ 2017-18ನೇ ಸಾಲಿನಲ್ಲಿ ಒಟ್ಟು 64 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದವು. ಈ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು ಅರ್ಹ ಪ್ರಕರಣದಲ್ಲಿ ಚೆಕ್ ವಿತರಿಸಲಾಗಿದೆ ಎಂದು ತಿಳಿಸಿದರು.

ಹುಳುಗಳ ನಿಯಂತ್ರಿಸಲು ಕ್ರಮ

ಹರಪನಹಳ್ಳಿ ತಾಲ್ಲೂಕಿನ ಜಂಗಮತುಂಬಿಗೆರೆ ಗ್ರಾಮದ ಸುಮಾರು ನಾಲ್ಕೈದು ಎಕರೆ ಜಮೀನಿನಲ್ಲಿ ಹುಳುಗಳ ಹಾವಳಿ ಉಂಟಾಗಿತ್ತು. ಈಗಾಗಲೇ ಆ ಭಾಗದಲ್ಲಿ ಅಗತ್ಯವಿರುವ ಔಷಧಿ ಸಿಂಪಡಿಸಲಾಗಿದೆ.ನಮ್ಮ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಬೇಕಾದ ಸಮಗ್ರ ಮಾಹಿತಿ ನೀಡಲಾಗಿದೆ. ಹುಳುಗಳ ಬಾಧೆ ಉಂಟಾಗದಂತೆ ಸುತ್ತಮುತ್ತಲ ರೈತರಿಗೂ ಸೂಕ್ತ ತಿಳುವಳಿಕೆ ನೀಡಲಾಗಿದೆ ಎಂದು ತಿಳಿಸಿದರು.

ಉತ್ತಮ ಬೆಳೆಯ ನಿರೀಕ್ಷೆಯಿದೆ

ಈ ಬಾರಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ಸತತ ಬರಗಾಲದಿಂದ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಇರುವ ಮೂರು ಎಕರೆ ಜಮೀನಿನಲ್ಲಿ 6 ಕೊಳವೆ ಬಾವಿಕೊರೆಯಿಸಿದ್ದೇನೆ. ಆದರೂ ನೀರು ದೊರೆತಿರಲಿಲ್ಲ. ಉತ್ತಮ ಮಳೆಯಾಗುವುದರಿಂದ ನೀರು ಸಿಗುವ ನಿರೀಕ್ಷೆ ಇದೆ. ಈಗಾಗಲೇ ಮೆಕ್ಕೆಜೋಳ ಬಿತ್ತಿದ್ದೇನೆ. ಸಸಿ ಗಳು ಬೆಳೆಯುತ್ತಿವೆ. ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದೇನೆ ಎಂದು ಬಾಡ ಗ್ರಾಮದ ರೈತ ಪರಸಪ್ಪ ಅವರ ಮಾತು.

 

Please follow and like us:
0
http://bp9news.com/wp-content/uploads/2018/06/dvg-1-bhija-rasagoobara-13618-script.and-photo.2-1024x575.jpghttp://bp9news.com/wp-content/uploads/2018/06/dvg-1-bhija-rasagoobara-13618-script.and-photo.2-150x150.jpgBP9 Bureauಕೃಷಿದಾವಣಗೆರೆಪ್ರಮುಖದಾವಣಗೆರೆ : ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ ಅಗತ್ಯವಾಗಿ ಬೇಕಾಗಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನಿದ್ದು, ರೈತರಿಗೆ ತೊಂದರೆಯಾಗದಂತೆ ಸಕಾಲದಲ್ಲಿ ಲಭ್ಯವಾಗುವ ವ್ಯವಸ್ಥೆ ಮಾಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದ್ಗಲ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ಸಕಾಲದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಪೂರೈಸುವಂತೆ ಕೃಷಿ ಇಲಾಖೆ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಕ್ರಮವಹಿಸಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಒಟ್ಟು...Kannada News Portal