ದಾವಣಗೆರೆ : ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಜನತಾ ದರ್ಶನದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ತನ್ನ ತಂದೆ-ತಾಯಿ ಹಾಗೂ ಎರಡುವರೆ ತಿಂಗಳ ಮಗುವಿನೊಂದಿಗೆ ಭೇಟಿ ಮಾಡಿದ ದಾವಣಗೆರೆಯ ಶೈಲಾ, ಅಪಘಾತದಲ್ಲಿ ಕೈ ಕಳೆದುಕೊಂಡು ತಾನು ಅನುಭವಿಸುತ್ತಿರುವ ಸಮಸ್ಯೆಯನ್ನು ತೋಡಿಕೊಂಡಾಗ, ತಕ್ಷಣವೇ ಮುಖ್ಯಮಂತ್ರಿಗಳು ತಮ್ಮ ಕಾರ್ಯಾಲಯದಲ್ಲಿ ಕೆಲಸ ನೀಡಲು ಹೇಳಿದರು. ಆದರೆ ತಾನು ದಾವಣಗೆರೆ ನಿವಾಸಿಯಾಗಿದ್ದು, ಅಲ್ಲಿಯೇ ಕೆಲಸ ನೀಡಿದರೆ ಉತ್ತಮವಾಗುತ್ತದೆ ಎಂಬ ಮನವಿಗೆ ಸ್ಪಂದಿಸಿ, ದಾವಣಗೆರೆಯ ವಾರ್ತಾ ಇಲಾಖೆಯಲ್ಲಿ ಟೈಪಿಸ್ಟ್ ಹುದ್ದೆ ನೀಡಲು ತಿಳಿಸಿದರು. ಮುಖ್ಯಮಂತ್ರಿಗಳ ಆದೇಶದಂತೆ ವಾರ್ತಾ ಇಲಾಖೆಗೆ ಬಂದು ಕೆಲಸಕ್ಕೆ ಸೇರಿಕೊಂಡಿದ್ದಾರೆ.

ಎಡಗೈಯಿಂದ ಟೈಪಿಂಗ್

ದಾವಣಗೆರೆ ನಗರದ ವಿನೋಭಾ ನಗರದ ನಿವಾಸಿ ಶೈಲಾ ಸದ್ಯ ತಂದೆ ಚನ್ನಪ್ಪ, ತಾಯಿ ದಾಕ್ಷಾಯಣಿ ಹಾಗೂ ತನ್ನ ಮೂವರು ಪುತ್ರರೊಂದಿಗೆ ಇದ್ದಾರೆ. ಕಳೆದ 25 ವರ್ಷಗಳ ಹಿಂದೆ ಕುಟುಂಬದ ಸದಸ್ಯರೊಂದಿಗೆ ಚನ್ನಗಿರಿಯಲ್ಲಿ ನಡೆದ ಮದುವೆಗೆ ಹೋಗಿ ದಾವಣಗೆರೆಗೆ ಲಾರಿಯಲ್ಲಿ ವಾಪಾಸ್ಸಾಗುತ್ತಿದ್ದಾಗ, ಮೇಳ್ಳಕಟ್ಟೆ ಎಂಬಲ್ಲಿ ಲಾರಿ ಅಪಘಾತವಾಗಿತ್ತು. ಈ ಸಂದರ್ಭದಲ್ಲಿ ಶೈಲಾರ ಬಲಗೈ ತುಂಡಾಯಿತು. ಇದಾದ ನಂತರ ತನ್ನ ಎಡಗೈಯಿಂದಲೇ ಎಲ್ಲಾ ಕೆಲಸವನ್ನು ಕಲಿತರು. ಬರವಣಿಗೆ, ಕಂಪ್ಯೂಟರ್,  ಹಾರ್ಡ್‍ವೇರ್ ತರಬೇತಿ ಪಡೆದರು. ಎಡಗೈಯೊಂದರಿಂದಲೇ ಟೈಪ್ ಮಾಡುವುದನ್ನು ಕಲಿತರು. ನಂತರ ಕೆಲಸಕ್ಕೆ ಅಲೆದರೂ ಎಲ್ಲೂ ಕೆಲಸ ಸಿಗಲಿಲ್ಲ. ಒಂದೇ ಕೈಯಿಂದ ನೀವೆನು ಕೆಲಸ ಮಾಡುತ್ತೀರಿ ಎಂದು ಹೇಳಿ ವಾಪಸ್ಸು ಕಳುಹಿಸುತ್ತಿದ್ದರಂತೆ. ಕೆಲಸವಿಲ್ಲದೆ, ತಂದೆ-ತಾಯಿ ಹಾಗೂ ಮೂರು ಮಕ್ಕಳೊಂದಿಗೆ ಮುಂದೇನು ಎಂಬ ಯೋಚನೆಯಲ್ಲಿ ಮನೆಯಲ್ಲಿ ಇದ್ದರು. ಮುಖ್ಯಮಂತ್ರಿಗಳಿಂದ ಜನತಾ ದರ್ಶನ ಇದೆ ಎಂಬುದನ್ನು ಟಿವಿಯಲ್ಲಿ ನೋಡಿ, ಮೊನ್ನೆ ನಡೆದ ಮುಖ್ಯಮಂತ್ರಿಗಳ ಜನತಾದರ್ಶನದಲ್ಲಿ ಭಾಗವಹಿಸಿದ್ದೆ. ಕುಮಾರಸ್ವಾಮಿ ಅವರ ಹತ್ತಿರ ತನ್ನ ಸಮಸ್ಯೆಯನ್ನು ತೋಡಿಕೊಂಡಾಗ ಕೂಡಲೇ ಕೆಲಸ ದೊರಕಿಸಿದ್ದಾರೆ. ನನ್ನ ಎರಡೂವರೆ ತಿಂಗಳ ಮಗುವಿನೊಂದಿಗೆ ವಾರ್ತಾ ಇಲಾಖೆಗೆ ಬಂದು ಕೆಲಸಕ್ಕೆ ಹಾಜರಾಗಿದ್ದೇನೆ ಎಂದು ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರಿಗೆ ಶೈಲಾ ಅವರು ತಿಳಿಸಿದ್ದಾರೆ.

ಟೈಪಿಸ್ಟ್ ಆಗಿ ಕೆಲಸಕ್ಕೆ

ಶೈಲಾ ಅವರು ಇಂದು ಹೊರಗುತ್ತಿಗೆ ಆದಾರ ಮೇಲೆ ಟೈಪಿಸ್ಟ್ ಆಗಿ ನಮ್ಮ ಇಲಾಖೆಯಲ್ಲಿ ಕೆಲಸಕ್ಕೆ ಹಾಜರಾಗಿದ್ದಾರೆ. ಬಲಗೈ ಇಲ್ಲದಿದ್ದರೂ, ಎಡಗೈ ಒಂದರಿಂದಲೇ ಉತ್ತಮವಾಗಿ, ಯಾವುದೇ ತಪ್ಪುಗಳು ಇಲ್ಲದಂತೆ ಟೈಪ್ ಮಾಡುತ್ತಿದ್ದಾರೆ ಎಂದು ದಾವಣಗೆರೆಯ ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಅಶೋಕ್‍ಕುಮಾರ್ ಹೇಳಿದ್ದಾರೆ.

ಮಗುವಿಗೆ ಕುಮಾರಸ್ವಾಮಿ ಹೆಸರು

ಜನತಾದರ್ಶನದಲ್ಲಿ ಮುಖ್ಯಮಂತ್ರಿಗಳ ಭೇಟಿ ಆಗುವ ಭಾಗ್ಯ ದೊರೆಯುತ್ತದೋ ಇಲ್ಲವೋ ಎಂಬ ಅಳುಕಿನಿಂದಲೇ ಬೆಂಗಳೂರಿಗೆ ಹೋಗಿದ್ದೆ. ಕೊನೆಗೂ ಅವರ ದರ್ಶನ ಆಯಿತು. ನನ್ನ ಸಮಸ್ಯೆಯನ್ನು ಅವರ ಮುಂದೆ ಹೇಳಿದೆ. ಎಡಗೈ ಒಂದರಿಂದಲೇ ಹೇಗೆ ಕೆಲಸ ಮಾಡುತ್ತಿ ಎಂದು ಹೇಳಿ, ಅಲ್ಲಿಯೇ ಇದ್ದ ಕಂಪ್ಯೂಟರ್‍ನಿಂದ ಟೈಪ್ ಮಾಡಲು ಹೇಳಿದರು. ಒಂದು ತಪ್ಪು ಇಲ್ಲದಂತೆ ಟೈಪ್ ಮಾಡಿ ಕೊಟ್ಟೆ. ಆಗ ಮುಖ್ಯಮಂತ್ರಿಗಳು ತಮ್ಮ ಕಚೇರಿಯಲ್ಲಿಯೇ ಕೂಡಲೇ ಕೆಲಸ ನೀಡಲು ಅಲ್ಲಿನ ಅಧಿಕಾರಿಗಳಿಗೆ ತಿಳಿಸಿದರು. ಆದರೆ ನನ್ನ ಸಮಸ್ಯೆಗಳನ್ನು ಅವರ ಮುಂದೆ ತೋಡಿಕೊಂಡು, ದಾವಣಗೆರೆ ನಗರದಲ್ಲಿಯೇ ಕೆಲಸ ನೀಡಿದರೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದೆ. ಆಗ ದಾವಣಗೆರೆ ವಾರ್ತಾ ಇಲಾಖೆಯಲ್ಲಿ ಟೈಪಿಸ್ಟ್ ಆಗಿ ಕೆಲಸಕ್ಕೆ ಸೇರಿಕೊಳ್ಳಲು ತಿಳಿಸಿದರು. ಅವರ ಸೂಚನೆಯಂತೆ ಇಂದು ಬಂದು ಸೇರಿಕೊಂಡಿದ್ದೇನೆ. ನನ್ನ ಸಮಸ್ಯೆಯನ್ನು ಆಲಿಸಿದ್ದು, ನನ್ನ ಎರಡೂವರೆ ತಿಂಗಳ ಮಗುವನ್ನು ಮುಖ್ಯಮಂತ್ರಿಗಳು ಎತ್ತಿ ಮುದ್ದಾಡಿದ್ದು ಜೀವನದಲ್ಲಿ ಮರೆಯಲಾರೆ. ಇನ್ನೂ ಹೆಸರಿಡದ ಈ ನನ್ನ ಮುಗುವಿಗೆ ಕುಮಾರಸ್ವಾಮಿ ಎಂದು ಹೆಸರಿಡುತ್ತೇನೆ ಎಂದು  ಶೈಲಾ ಅವರು ಅಭಿಮಾನ ವ್ಯಕ್ತಪಡಿಸಿದರು.

 

 

Please follow and like us:
0
http://bp9news.com/wp-content/uploads/2018/06/collage-14.jpghttp://bp9news.com/wp-content/uploads/2018/06/collage-14-150x150.jpgBP9 Bureauದಾವಣಗೆರೆಪ್ರಮುಖದಾವಣಗೆರೆ : ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಜನತಾ ದರ್ಶನದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ತನ್ನ ತಂದೆ-ತಾಯಿ ಹಾಗೂ ಎರಡುವರೆ ತಿಂಗಳ ಮಗುವಿನೊಂದಿಗೆ ಭೇಟಿ ಮಾಡಿದ ದಾವಣಗೆರೆಯ ಶೈಲಾ, ಅಪಘಾತದಲ್ಲಿ ಕೈ ಕಳೆದುಕೊಂಡು ತಾನು ಅನುಭವಿಸುತ್ತಿರುವ ಸಮಸ್ಯೆಯನ್ನು ತೋಡಿಕೊಂಡಾಗ, ತಕ್ಷಣವೇ ಮುಖ್ಯಮಂತ್ರಿಗಳು ತಮ್ಮ ಕಾರ್ಯಾಲಯದಲ್ಲಿ ಕೆಲಸ ನೀಡಲು ಹೇಳಿದರು. ಆದರೆ ತಾನು ದಾವಣಗೆರೆ ನಿವಾಸಿಯಾಗಿದ್ದು, ಅಲ್ಲಿಯೇ ಕೆಲಸ ನೀಡಿದರೆ ಉತ್ತಮವಾಗುತ್ತದೆ ಎಂಬ ಮನವಿಗೆ ಸ್ಪಂದಿಸಿ, ದಾವಣಗೆರೆಯ ವಾರ್ತಾ ಇಲಾಖೆಯಲ್ಲಿ ಟೈಪಿಸ್ಟ್...Kannada News Portal