ದಾವಣಗೆರೆ :  ಜನತೆಯ ಬೇಡಿಕೆಗಳನ್ನು ಈಡೇರಿಸಲು ನಾವು ಸದಾ ಸಿದ್ಧರಾಗಿದ್ದು, ಹೊನ್ನಾಳಿ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡಲು ನಾವೆಲ್ಲರೂ ಕಂಕಣಬದ್ಧರಾಗಿದ್ದೇವೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದರು. ತಾಲ್ಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ “ಉಜ್ವಲಾ” ಯೋಜನೆಯಡಿ ಫಲಾನುಭವಿಗಳಿಗೆ ಉಚಿತ ಸಿಲಿಂಡರ್ ಮತ್ತು ಅಡುಗೆ ಅನಿಲ ಪರಿಕರಗಳನ್ನು ವಿತರಿಸಿ, ವಿಧಾನಸಭಾ ಚುನಾವಣೆಯಲ್ಲಿ ರೇಣುಕಾಚಾರ್ಯ ಅವರಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಿದ ಮತದಾರರಿಗೆ ಕೃತಜ್ಞತೆ ಅರ್ಪಿಸಿ, ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ದೇಶದ ಅಭಿವೃದ್ಧಿ ಚಿಂತಕ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಡ ಮಹಿಳೆಯರ ಹಿತದೃಷ್ಟಿಯಿಂದ ಗ್ರಾಮೀಣ ಪ್ರದೇಶಗಳ ಬಿಪಿಎಲ್ ಕುಟುಂಬಗಳಿಗೆ ಉಜ್ವಲಾ ಎಂಬ ಮಹಾತ್ವಾಕಾಂಕ್ಷಿ ಯೋಜನೆಯನ್ನು ಲೋಕಾರ್ಪಣೆಗೊಳಿಸಿದ್ದು, ಕಳೆದ 4 ವರ್ಷಗಳಲ್ಲಿ ದೇಶದ 8 ಕೋಟಿ ಮಹಿಳೆಯರಿಗೆ ಸಿಲಿಂಡರ್ ವಿತರಿಸುವ ಗುರಿ ಹೊಂದಲಾಗಿದೆ. ಈಗಾಗಲೇ 5 ಕೋಟಿ ಮಹಿಳೆಯರಿಗೆ ವಿತರಿಸಲಾಗಿದೆ. ಬಡತನ ರೇಖೆಗಿಂತ ಕೆಳಗಿರುವವರನ್ನು ಗಮನದಲ್ಲಿಟ್ಟುಕೊಂಡು ಯೋಜನೆ ಅನುಷ್ಠಾನ ಮಾಡಲಾಗಿದ್ದು, ಯೋಜನೆ ಕುಟುಂಬದ ವೆಚ್ಚವನ್ನು ಕಡಿಮೆ ಮಾಡುವುದಲ್ಲದೇ ಮಹಿಳೆಯರ ಆರೋಗ್ಯ ಸುಧಾರಣೆಯಲ್ಲಿ ಮಹತ್ತರ ಪಾತ್ರ ನಿರ್ವಹಣೆ ಮಾಡಲಿದೆ ಎಂದರು.

2022ರ ವೇಳೆಗೆ ದೇಶದ ಎಲ್ಲಾ ನಾಗರಿಕರಿಗೂ ಈ ಸೌಲಭ್ಯ ದೊರೆಯಲಿದೆ. ರೈತರ ಕಲ್ಯಾಣಕ್ಕಾಗಿ ಫಸಲ್ ಭೀಮಾ, ಕೃಷಿ ಸಂಚಯಿನಿ ಯೋಜನೆ ಜಾರಿಗೊಳಿಸಿದ್ದು, ಪ್ರಧಾನಮಂತ್ರಿಯವರು ಅನ್ನದಾತರ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರೈತರ ಸಂಕಷ್ಟಕ್ಕೆ ಪರಿಹಾರ ನೀಡಲಿದ್ದಾರೆ  ಎಂದು ವಿವರಿಸಿದರು. ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಕಳೆದ ಬಾರಿ ಕಾರಣಾಂತರಗಳಿಂದ ನನಗೆ ಸೋಲುಂಟಾದರೂ ಈ ಬಾರಿ ನಮ್ಮ ಕಾರ್ಯಕರ್ತರ ನಿರಂತರ ಪರಿಶ್ರಮದಿಂದ ಗೆಲುವು ಲಭಿಸಿದೆ. ನಾನು ನಿಮ್ಮ ಸೇವಕನೇ ಹೊರತು ನಾಯಕನಲ್ಲ. ನಿಮ್ಮ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಸದಾ ನಾನು ಸಿದ್ಧ ಇದ್ದು, ತಮ್ಮ ಗ್ರಾಮಗಳಿಗೆ ಬೇಕಾದ ಸೌಲಭ್ಯಗಳನ್ನು ಪಟ್ಟಿ ಮಾಡಿಕೊಡಿ. ಹಂತ ಹಂತವಾಗಿ ಕೆಲಸ ಮಾಡುತ್ತೇನೆ ಎಂದರು.

ಈ ಭಾಗದ ಎಲ್ಲಾ ಗ್ರಾಮಗಳಿಗೆ ಬಹು ಗ್ರಾಮ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆಯಡಿ ಕಳೆದ ನಮ್ಮ ಅವಧಿಯಲ್ಲಿ ಕೋಟ್ಯಂತರ ವೆಚ್ಚದಲ್ಲಿ ಪ್ರಸ್ತಾವನೆ ಸಲ್ಲಿಸಿದ ಕಾರಣ ಈ ಯೋಜನೆ ಸಾಕಾರವಾಗಿದ್ದು, ಇದರಲ್ಲಿ ಕಳೆದ ಕಾಂಗ್ರೆಸ್ ಸರಕಾರದ ಪಾತ್ರವಿಲ್ಲ ಎಂದರು. ಈ ಭಾಗದ ಹಲವಾರು ಗ್ರಾಮಗಳನ್ನು ಕಳೆದ ನನ್ನ ಶಾಸಕತ್ವದ ಅವಧಿಯಲ್ಲಿ ಸುವರ್ಣ ಗ್ರಾಮ ಯೋಜನೆಯಡಿಯಲ್ಲಿ ಮಾದರಿಯಾಗಿ ಅಭಿವೃದ್ಧಿಪಡಿಸಲಾಗಿತ್ತು.

ಈ ಭಾಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಿರೇಗೋಣಿಗೆರೆಯಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿನಿಲಯ ಮಂಜೂರು ಮಾಡಿಸಲಾಗಿತ್ತು ಎಂದರು. ನನಗೆ ಈ ಬಾರಿ ಹೆಚ್ಚಿನ ಮತ ನೀಡಿ ಗೆಲ್ಲಿಸಿದ್ದು, ತಮ್ಮೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಮುಂಬರುವ ದಿನಗಳಲ್ಲಿ ನಮ್ಮ ಮುಂದಿರುವ ಸವಾಲೆಂದರೆ ಲೋಕಸಭೆ ಚುನಾವಣೆ. ಮಾಜಿ ಸಂಸದ ಮಲ್ಲಿಕಾರ್ಜುನಪ್ಪ ಅವರ ನಿಧನ ನಂತರ ಸಂಸದರಾದ ಸಿದ್ದೇಶ್ವರ್ ಅವರನ್ನು ಕಳೆದ 3 ಅವಧಿಗಳಲ್ಲಿ ಆಯ್ಕೆ ಮಾಡಿದ್ದೀರಿ.

ಸಂಸದರೂ ಹೊನ್ನಾಳಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡುತ್ತಿದ್ದು, ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಕೇಂದ್ರದ ಹಲವಾರು ಯೋಜನೆಗಳನ್ನು ಜಿಲ್ಲೆಗೆ ತಂದಿದ್ದು, ಈ ಬಾರಿ ತಾವೆಲ್ಲರೂ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿ ಮಾಡಲು ದಾವಣಗೆರೆ ಕ್ಷೇತ್ರದಲ್ಲಿ ಸಿದ್ದೇಶ್ವರ್ ಅವರಿಗೆ ಕಳೆದ ಬಾರಿಗಿಂತ ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಕೋಟೆಮಲ್ಲೂರು ತಾಂಡ, ಚಿಕ್ಕಗೋಣಿಗೆರೆ, ಹಿರೇಗೋಣಿಗೆರೆ, ಹರಗನಹಳ್ಳಿ, ಕೋಣನತಲೆ, ಹೊನ್ನೂರು ಒಡ್ಡರಹಟ್ಟಿ ತಾಂಡ, ಅರಕೆರೆ ಕಾಲೋನಿ, ಅರಕೆರೆ, ನರಸಗೊಂಡನಹಳ್ಳಿ ಗ್ರಾಮಗಳ ಮತದಾರರಿಗೆ ಕೃತಜ್ಞತೆ ಅರ್ಪಿಸಿ ಹಲವು ಗ್ರಾಮಗಳಲ್ಲಿ ಸಿಲಿಂಡರ್ ವಿತರಿಸಲಾಯಿತು. ಜಿಪಂ ಸದಸ್ಯ ಸಿ. ಸುರೇಂದ್ರನಾಯ್ಕ, ಪಪಂ ಸದಸ್ಯ ಕೆ.ಪಿ. ಕುಬೇಂದ್ರಪ್ಪ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಮಂಜುನಾಥ್, ತಾಲೂಕು ಬಿಜೆಪಿ ಅಧ್ಯಕ್ಷ ಡಿ.ಜಿ. ರಾಜಪ್ಪ, ಎಸ್ಸಿ ಮೋರ್ಚಾ ಅಧ್ಯಕ್ಷ ಮಾರುತಿ ನಾಯ್ಕ, ಮುಖಂಡರಾದ ಚಂದ್ರಪ್ಪ, ಸಿದ್ದಪ್ಪ, ಹಳದಪ್ಪ, ತೊಳಕಿ ಹಾಲೇಶಪ್ಪ, ಪ್ರೇಮ್‍ಕುಮಾರ್ ಭಂಡಿಗಡಿ, ನಾಗರಾಜ್, ಚಂದ್ರು ಸೇರಿದಂತೆ ಗ್ರಾಮದ ಅನೇಕ ಮುಖಂಡರು ಉಪಸ್ಥಿತರಿದ್ದರು.

 

Please follow and like us:
0
http://bp9news.com/wp-content/uploads/2018/06/dvg-4-janateya-bedike-21618-script.and-photo-1-1.jpghttp://bp9news.com/wp-content/uploads/2018/06/dvg-4-janateya-bedike-21618-script.and-photo-1-1-150x150.jpgBP9 Bureauದಾವಣಗೆರೆದಾವಣಗೆರೆ :  ಜನತೆಯ ಬೇಡಿಕೆಗಳನ್ನು ಈಡೇರಿಸಲು ನಾವು ಸದಾ ಸಿದ್ಧರಾಗಿದ್ದು, ಹೊನ್ನಾಳಿ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡಲು ನಾವೆಲ್ಲರೂ ಕಂಕಣಬದ್ಧರಾಗಿದ್ದೇವೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದರು. ತಾಲ್ಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 'ಉಜ್ವಲಾ' ಯೋಜನೆಯಡಿ ಫಲಾನುಭವಿಗಳಿಗೆ ಉಚಿತ ಸಿಲಿಂಡರ್ ಮತ್ತು ಅಡುಗೆ ಅನಿಲ ಪರಿಕರಗಳನ್ನು ವಿತರಿಸಿ, ವಿಧಾನಸಭಾ ಚುನಾವಣೆಯಲ್ಲಿ ರೇಣುಕಾಚಾರ್ಯ ಅವರಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಿದ ಮತದಾರರಿಗೆ ಕೃತಜ್ಞತೆ...Kannada News Portal