ಬೆಂಗಳೂರು : ಈಕೆ ಹೆಸರು ಸುಮಿತ್ರಾ ದೇವಿ ಅಂತ… ಜಾರ್ಖಂಡ್ ನ ರಾಜರಪ್ಪ ಎಂಬಲ್ಲಿನ ಸಿಸಿಎಲ್ ಕಾಲೋನಿಯಲ್ಲಿ ಪೌರಕಾರ್ಮಿಕೆಯಾಗಿ, ರಸ್ತೆ ಸ್ವಚ್ಛತೆ ಮಾಡುತ್ತಿದ್ದವರು. 30 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಈ ಮಹಿಳೆ ಇದೀಗ ನಿವೃತ್ತಿಯಾಗಿದ್ದಾರೆ.

ಇದೇನಪ್ಪಾ ಇವರು ಓರ್ವ ಪೌರಕಾರ್ಮಿಕೆ ನಿವೃತ್ತಿ ಆಗಿರೋದನ್ನು ಒಂದು ಸುದ್ದಿ ಮಾಡಿದ್ದಾರಲ್ಲಾ ಅಂತ ಗೊಣಗುತ್ತಾ ಇದ್ದೀರಾ…, ಪ್ಲೀಸ್ ವೆಯ್ಟ್​​ … ಪ್ರಿಯ ಓದುಗರೇ… ಪೌರಕಾರ್ಮಿಕೆ ಸುಮಿತ್ರಾ ದೇವಿ ಅವರ ನಿವೃತ್ತಿಯ ದಿನ ಕಚೇರಿಯ ಮುಂದೆ  ಆಕೆಯನ್ನು ಬೀಳ್ಕೊಡಲು ಮೂರು ಸರ್ಕಾರಿ ಗೂಟದ ಕಾರುಗಳು ಬಂದವು. ಎಲ್ಲರಲ್ಲಿಯೂ ಅಚ್ಚರಿ… ಅಸಲಿಗೆ ಸಿಸಿಎಲ್ ಕಾಲೋನಿಯ ಪೌರಕಾರ್ಮಿಕರ ಕಚೇರಿ ಮುಂದೆ ಬಂದ ಆ ಕಾರುಗಳು ಯಾರದ್ದು ಗೊತ್ತಾ???

ಓರ್ವ ಜಿಲ್ಲಾಧಿಕಾರಿ ಮತ್ತು ಒಬ್ಬರು ವೈದ್ಯಾಧಿಕಾರಿ ಹಾಗೂ ಇನ್ನೋರ್ವ ಇಂಜಿನಿಯರ್ ಗಳದ್ದು. ಹೌದು ಈ ಮೂರು ಸರ್ಕಾರಿ ಉನ್ನತ ಹುದ್ದೆಯಲ್ಲಿ ಇರುವ ಅಧಿಕಾರಿಗಳು. ಅವರುಗಳು ಖುದ್ದು ಪೌರಕಾರ್ಮಿಕೆ ಸುಮಿತ್ರಾ ದೇವಿ ಅವರ ನಿವೃತ್ತಿಯ ದಿನದ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಇದೇನಪ್ಪಾ ವಿಚಿತ್ರ…, ಓರ್ವ ಪೌರಕಾರ್ಮಿಕೆ ರಿಟೈಡ್ ಆಗೋ ಕಾರ್ಯಕ್ರಮಕ್ಕೆ ಅದೂ ಡಿ ಗ್ರೂಪ್ ವೃತ್ತಿಯಲ್ಲಿ ಇರುವ ಆಕೆಯನ್ನು ಬೀಳ್ಕೊಡುವ ಕಾರ್ಯಕ್ರಮಕ್ಕೆ ಇಷ್ಟು ದೊಡ್ಡ ಅಧಿಕಾರಿಗಳು ಏಕೆ ಬರಬೇಕು… ಎಂಬ ಪ್ರಶ್ನೆ ಕಾಡುತ್ತಿದೆಯೇ..? ನಿಜ… ಆ ಸರ್ಕಾರಿ ಕಚೇರಿಯಲ್ಲಿ ಇದ್ದ ಮತ್ತು ಸುಮಿತ್ರಾ ದೇವಿ ಅವರ ಮೇಲಧಿಕಾರಿಗಳಿಗೂ ಈ ಅಚ್ಚರಿ ಮತ್ತು ವಿಚಿತ್ರದ ಅನುಭವ ಆಗಿಯೇ ಇತ್ತು…

ಆ ಮೂರು ಅಧಿಕಾರಿಗಳು ಬೇರಾರೂ ಅಲ್ಲಾ… ಇದೇ 30 ವರ್ಷದಿಂದ ರಸ್ತೆ ಗುಡಿಸಿ, ಕಾಲೋನಿಯನ್ನು ಸ್ವಚ್ಛ ಗೊಳಿಸುತ್ತಿದ್ದ ಪೌರಕಾರ್ಮಿಕೆ ಸುಮಿತ್ರಾ ದೇವಿ ಅವರ ಮಕ್ಕಳು…. YES , ಆಶ್ಚರ್ಯ ಆದ್ರೂ ಇದು ಸತ್ಯ.

ಸುಮಿತ್ರಾ ದೇವಿ ಅವರ ನಿವೃತ್ತಿಯ ದಿನ ಆಕೆಯನ್ನು ಬೀಳ್ಕೊಡಲು ಒಂದು ಸಣ್ಣ ಕಾರ್ಯಕ್ರಮವನ್ನು ಆಕೆಯ ಜೊತೆ ಇಷ್ಟು ವರ್ಷ ಕೆಲಸ ಮಾಡಿದ್ದ ಸಹದ್ಯೋಗಿಗಳು ಮಾಡುತ್ತಿದ್ದರು. ಆ ವೇಳೆ ಒಂದು ನೀಲಿ ಗೂಟದ ಕಾರು ಆಗಮಿಸಿತು. ಆ ಕಾರು ಬರುತ್ತಿದ್ದಂತೇ ಎಲ್ಲರ ಗಮನ ಸೆಳೆಯಿತು. ಏಕೆಂದ್ರೆ ಅದು ಬಿಹಾರದ ಸಿವಾನ್ ಜಿಲ್ಲೆಯ ಜಿಲ್ಲಾಧಿಕಾರಿ ಮಹೇಂದ್ರ ಕುಮಾರ್ ಅವರ ಕಾರು.

ಅವರು ಬರು ಬರುತ್ತಿದ್ದಂತೆ ಕಚೇರಿ ಒಳಗಿದ್ದ ಅಧಿಕಾರಿಗಳೆಲ್ಲಾ ಎದ್ದು ಬಿದ್ದು ಹೊರಗಡೆ ಬರುತ್ತಿದ್ದರು. ಆದರೆ ಮಾನ್ಯ ಸಿವಾನ್ ಜಿಲ್ಲಾಧಿಕಾರಿ ಮಹೇಂದ್ರ ಕುಮಾರ್ ಅವರು ಸೀದ ಹೋಗಿ ಸುಮಿತ್ರಾ ದೇವಿ ಅವರ ಪಾದಗಳಿಗೆ ಹಣೆ ಇಟ್ಟು ನಮಸ್ಕಾರ ಮಾಡಿದರು.

ನೆರೆದಿದ್ದವರು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಲೇ ಇದ್ದರು. ಕಚೇರಿಯ ಮೇಲಧಿಕಾರಿಗಳ ಮುಖದಲ್ಲಿಯೂ ಚಕಿತತೆ. ಜಿಲ್ಲಾಧಿಕಾರಿ ಮಹೇಂದ್ರ ಕುಮಾರ್ ಆಕೆಯನ್ನು ಅಮ್ಮ ಎಂದು ಕರೆದಾಗಲೇ ತಿಳಿದಿದ್ದು, ಜಿಲ್ಲೆಯ ಜಿಲ್ಲಾಧಿಕಾರಿ ಪೌರಕಾರ್ಮಿಕೆ ಸುಮಿತ್ರಾ ದೇವಿ ಅವರ ಮಗ ಎಂದು. ಕಚೇರಿ ಮುಂದೆ ನೆರೆದಿದ್ದವರ ಮೈಮನವೆಲ್ಲಾ ರೋಮಾಂಚನ ವಾಗಿತ್ತು.
ಈ ದೃಶ್ಯ ಮುಗಿಯುತ್ತಿದ್ದಂತೆ ಯಾವುದೋ ಸಿನಿಮಾದಲ್ಲಿ ನಡೆಯುವಂತೆ ಏನೇನೋ ನಡೆಯುತ್ತಿದೆಯಲ್ಲಾ ಎಂದು ಯೋಚಿಸುತ್ತಿದ್ದ ಜನರಿಗೆ ಮತ್ತೆರಡು ಆಶ್ಚರ್ಯ ಕಾದಿತ್ತು.

ಕಚೇರಿಯ ಮುಂಭಾಗ ಮತ್ತೆರಡು ಸರ್ಕಾರಿ ಅಧಿಕಾರಿಗಳ ಕಾರುಗಳು ಬಂದು ನಿಂತವು. ಆ ಕಾರುಗಳು ಯಾರದಪ್ಪಾ ಎನ್ನತ್ತಿದ್ದಂತೆ , ಸುಮಿತ್ರಾ ಅವರ ಹಿರಿಯ ಪುತ್ರ ರೈಲ್ವೆ ಎಂಜಿನಿಯರ್ ವೀರೇಂದ್ರ ಕುಮಾರ್, ಮತ್ತು ಎರಡನೇ ಪುತ್ರ ಜಿಲ್ಲಾ ವೈಧ್ಯಧಿಕಾರಿಯಾದ ಧೀರೇಂದ್ರ ಕುಮಾರ್ ತಾಯಿ ಪಾದಗಳನ್ನ ಮುಟ್ಟಿ ನಮಸ್ಕರಿಸಿ ಆಕೆಗೆ ಬಾಹುಬಂಧನದ ಅಪ್ಪುಗೆಯನ್ನು ನೀಡಿದರು. ಆ ಕ್ಷಣದಲ್ಲಿ ನೆರೆದಿದ್ದವರು ಏನು ನಡೆಯುತ್ತಿದೆ ಎಂಬ ರೋಮಾಂಚನದಲ್ಲಿ ಮುಳುಗಿ ಹೋಗಿದ್ದರೆ, ತಾಯಿ ಸುಮಿತ್ರಾ ದೇವಿ ಮಾತ್ರ ಮೂವರು ಮಕ್ಕಳನ್ನು ಬಿಗಿದಪ್ಪಿದರು. ಅವರ ಕಣ್ಣಾಲೆಗಳಲ್ಲಿ ಆನಂದ ಭಾಷ್ಪ ನೀರಾಡುತ್ತಿತ್ತು.
ಜಿಲ್ಲೆಯ ಈ ಮೂವರು ದಕ್ಷ ಅಧಿಕಾರಿಗಳು ಪೌರ ಕಾರ್ಮಿಕೆ ಸುಮಿತ್ರದೇವಿಯವರ ಮುತ್ತಿನಂತ ಪುತ್ರರು.

ಸುಮಿತ್ರಾ  ಅವರ ಕಣ್ಣಲ್ಲಿ ನೀರು :

ಮೂವರು ಪುತ್ರರು ಅವಳ ಪಾದಗಳನ್ನು ಮುಟ್ಟಿದಾಗ, ಸುಮಿತ್ರಾ ಅವರು ಭಾವೋದ್ವೇಗಕ್ಕೆ ಒಳಗಾಗಿದ್ದರು. ಆಕೆಯ ಕಣ್ಣುಗಳಲ್ಲಿ ಧನ್ಯತೆ ಮನೆ ಮಾಡಿತ್ತು. ಕೊನೆಯ ದಿನದಂದು ಆಕೆಗೆ ಮೆಚ್ಚುಗೆ ವ್ಯಕ್ತಪಡಿಸಲು ಬಂದಿದ್ದ ಅಧಿಕಾರಿಗಳು ಆಶ್ಚರ್ಯಪಟ್ಟರು.

ನಾನು 30 ವರ್ಷದಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ನಿಮಗೆಲ್ಲಾ ಸಾಹೇಬ್ರೇ ಎಂದು ಕರೆಯುತ್ತಿದ್ದೆ. ನನ್ನ ಮಕ್ಕಳೂ ಕೂಡ ನಿಮ್ಮಂತೆಯೇ ಸಾಹೇಬ್ರುಗಳೇ ಎಂದು ಹೇಳಿಕೊಂಡು ಸುಮಿತ್ರಾ ಅವರು ಭಾವನಾತ್ಮಕವಾಗಿ ನೆರೆದಿದ್ದ ಅಧಿಕಾರಿಗಳಲ್ಲಿ ತನ್ನ ಮೂರು ಜನ ಅಧಿಕಾರಿ ಮಕ್ಕಳನ್ನು ಪರಿಚಯಿಸಿದ್ದಾರೆ. ಆಗ ನಿಜಕ್ಕೂ ಸಿಸಿಎಲ್ ಕಾಲೋನಿಯ ಪೌರಾಡಳಿತ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿ ಅವರ ಕಣ್ಣುಗಳಲ್ಲಿಯೂ ನೀರಾಡಲು ಪ್ರಾರಂಭಿಸಿತ್ತು.

ಜಿಲ್ಲಾಧಿಕಾರಿ ಮಹೇಂದರ್ ಕುಮಾರ್ : ( ಸುಮಿತ್ರಾ ದೇವಿ ಅವರ ಮೂರನೇ ಪುತ್ರ )

ನಮ್ಮ ತಾಯಿ ನಮಗಾಗಿ ಬಹಳಷ್ಟು ತ್ಯಾಗ ಮಾಡಿದ್ದಾಳೆ. ಆಕೆ ಪೌರಕಾರ್ಮಿಕೆ ಆಗಿದ್ದರೂ ನಮ್ಮನ್ನು ಮಾತ್ರ ಯಾವತ್ತು ಬಡತನ ಕಷ್ಟ ತೋರಿಸಲಿಲ್ಲ. ಉಳಿದ ಮಕ್ಕಳಂತೆ ನಮ್ಮನ್ನೂ ಸಮಾಜದ ಮುಂದೆ ತಲೆ ಎತ್ತಿ ನಿಲ್ಲುವಂತೆಯೇ ನೋಡಿಕೊಂಡ ಬಲವಾದ ಮನಸ್ಸು ಉಳ್ಳವಳು ನನ್ನ ತಾಯಿ. ನಮ್ಮ ಜೀವನದಲ್ಲಿ ಕಿಂಚಿತ್ತಾದರೂ ಯಶಸ್ಸು ಕಂಡಿದ್ದೇವೆ ಎಂದರೆ ನನ್ನ ತಾಯಿ ಯಶಸ್ವಿಯಾಗಿದ್ದಾಳೆ ಎಂದೇ ಅರ್ಥ. ನಮ್ಮ ಎಲ್ಲಾ ಸಾಧನೆಗೂ ನನ್ನ ತಾಯಿ ಸುಮಿತ್ರಾ ದೇವಿಯ ತ್ಯಾಗವೇ ಕಾರಣ ಎಂದು ಬಿಹಾರದ ಸಿವಾನ್ ಜಿಲ್ಲಾಧಿಕಾರಿ ಮಹೇಂದ್ರ ಕುಮಾರ್ ಭಾವನಾತ್ಮಕವಾಗಿ ಹೇಳಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಸುಮಿತ್ರಾ ಅವರ ಉಳಿದ ಪುತ್ರರು ಮಾತನಾಡಿ ತಮ್ಮ ಯಶಸ್ಸಿನ ರಹಸ್ಯಗಳನ್ನು ಹಂಚಿಕೊಂಡರು.
ಸುಮಿತ್ರಾ ಅವರ ಪುತ್ರರು ತಮ್ಮ ಯಶಸ್ಸಿನ ರಹಸ್ಯಗಳನ್ನು ಹಂಚಿಕೊಂಡರು ಮತ್ತು ಅವರ ತಾಯಿ ಅವರಿಗೆ ಉತ್ತಮ ಶಿಕ್ಷಣವನ್ನು ನೀಡಲು ಹೇಗೆ ಶ್ರಮಿಸಿದರು. ತಾಯಿಯ ಹೋರಾಟವನ್ನು ನೋಡಿದ ನಂತರ ಮೂವರು ತಮ್ಮ ಜೀವನದಲ್ಲಿ ಒಳ್ಳೆಯದನ್ನು ಮಾಡಲು ನಿರ್ಧರಿಸಿದೆವು ಎಂದು ಹೇಳಿಕೊಂಡಿದ್ದಾರೆ.

“ಜೀವನದಲ್ಲಿ ಯಾವುದೇ ಕೆಲಸ ಕೀಳು ಎಂಬುದಿಲ್ಲ, ಎಲ್ಲರೂ ಪ್ರಾಮಾಣಿಕವಾಗಿ ಕಷ್ಟಪಟ್ಟು ಕೆಲಸ ಮಾಡಬೇಕು. ನಮ್ಮ ತಾಯಿ ಮತ್ತು ನಾವುಗಳು ಜೀವನದಲ್ಲಿ ಸಾಕಷ್ಟು ಕಠಿಣವಾದ ಸಮಯವನ್ನು ಕಂಡಿದ್ದೇವೆ. ಆದರೆ ನಮ್ಮ ತಾಯಿ ನಮ್ಮನ್ನು ಎಂದಿಗೂ ನಿರಾಶೆಗೊಳಿಸಲಿಲ್ಲ. ನಾವು ಕೇಳಿದ್ದನ್ನೆಲ್ಲಾ ಇಲ್ಲ ಎನ್ನದೆ ನೀಡಿದ್ದಾಳೆ . ಆ ಕಾರಣವಾಗಿಯೇ ನಾವು ಇಂದು ಈ ಗೌರವವನ್ನು ಪಡೆದಿದ್ದೇವೆ” ಎಂದು ತನ್ನ ತಾಯಿಯ ನಿವೃತ್ತಿಯ ಕಟ್ಟ ಕಡೆಯ ದಿನ ತನ್ನ ತಾಯಿಯ ಬೀಳ್ಕೊಡುಗೆಯ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ತಾಯಿಯ ಬಗೆಗೆ ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ.

ವರದಿ : PSV

Please follow and like us:
0
http://bp9news.com/wp-content/uploads/2018/07/fb_1478243968_800x420.jpghttp://bp9news.com/wp-content/uploads/2018/07/fb_1478243968_800x420-150x150.jpgPolitical Bureauಅಂಕಣಪ್ರಮುಖರಾಷ್ಟ್ರೀಯ  ಬೆಂಗಳೂರು : ಈಕೆ ಹೆಸರು ಸುಮಿತ್ರಾ ದೇವಿ ಅಂತ... ಜಾರ್ಖಂಡ್ ನ ರಾಜರಪ್ಪ ಎಂಬಲ್ಲಿನ ಸಿಸಿಎಲ್ ಕಾಲೋನಿಯಲ್ಲಿ ಪೌರಕಾರ್ಮಿಕೆಯಾಗಿ, ರಸ್ತೆ ಸ್ವಚ್ಛತೆ ಮಾಡುತ್ತಿದ್ದವರು. 30 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಈ ಮಹಿಳೆ ಇದೀಗ ನಿವೃತ್ತಿಯಾಗಿದ್ದಾರೆ. ಇದೇನಪ್ಪಾ ಇವರು ಓರ್ವ ಪೌರಕಾರ್ಮಿಕೆ ನಿವೃತ್ತಿ ಆಗಿರೋದನ್ನು ಒಂದು ಸುದ್ದಿ ಮಾಡಿದ್ದಾರಲ್ಲಾ ಅಂತ ಗೊಣಗುತ್ತಾ ಇದ್ದೀರಾ..., ಪ್ಲೀಸ್ ವೆಯ್ಟ್​​ ... ಪ್ರಿಯ ಓದುಗರೇ... ಪೌರಕಾರ್ಮಿಕೆ ಸುಮಿತ್ರಾ ದೇವಿ ಅವರ ನಿವೃತ್ತಿಯ ದಿನ ಕಚೇರಿಯ...Kannada News Portal