ತುರುವೇಕೆರೆ: ನಿಮ್ಮ ಆರ್ಶೀವಾದ ಪಡೆಯಲು ತಾತ(ಹೆಚ್.ಡಿ.ದೇವೇಗೌಡ), ಮಗ(ಹೆಚ್.ಡಿ.ಕುಮಾರಸ್ವಾಮಿ), ಮೊಮ್ಮಗ(ನಿಖಿಲ್ ಕುಮಾರಸ್ವಾಮಿ) ಮೂರು ಮಂದಿ ಕ್ಷೇತ್ರಕ್ಕೆ ಬಂದಿದ್ದೇವೆ. ಕ್ಷೇತ್ರದ ಜನತೆ ನಮಗೆ ಹಾಲು ಕೊಡ್ತೀರೋ? ವಿಷ ಕೊಡ್ತೀರೋ ನೀವೇ ತೀರ್ಮಾನಿಸಿ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಬಾವುಕರಾದರು.

ತುರುವೇಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಟಿ.ಕೃಷ್ಣಪ್ಪ ಪರ ಪ್ರಚಾರಕ್ಕೆ ಪಟ್ಟಣಕ್ಕೆ ಆಗಮಿಸಿ ಕೆ.ಹಿರಣ್ಣಯ್ಯ ಬಯಲು ರಂಗಮಂದಿರ ಆವರಣದಲ್ಲಿ ನೆರೆದಿದ್ದ ೨೫ಸಾವಿರಕ್ಕೂ ಅಧಿಕ ಮಂದಿ ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಅವರು, ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಎಂ.ಟಿ.ಕೃಷ್ಣಪ್ಪ ಅಲ್ಲ ಹೆಚ್.ಡಿ.ಕುಮಾರಸ್ವಾಮಿ ಅಭ್ಯರ್ಥಿ ಎಂದು ತಿಳಿದು ಜೆಡಿಎಸ್ ಪಕ್ಷಕ್ಕೆ ಮತದಾರ ಬಂಧುಗಳು ಮತ ನೀಡಬೇಕು. ರೈತಪರವಾದ, ಜನಸಾಮಾನ್ಯರ ಸರ್ಕಾರ ಜೆಡಿಎಎಸ್ ಅಧಿಕಾರಕ್ಕೆ ಬರಲು ನೀವು ಆರ್ಶೀವಾದ ಮಾಡಬೇಕಿದೆ. ಸರ್ಕಾರ ರಚನೆಗೆ ಅಗತ್ಯವಾದ ಮ್ಯಾಜಿಕ್ ಸಂಖ್ಯೆ ೧೧೩ನ್ನು ತಲುಪಲು ಪ್ರತಿ ಕ್ಷೇತ್ರದ ಗೆಲುವು ಮುಖ್ಯವಾಗಿದೆ. ತುರುವೇಕೆರೆ ಕ್ಷೇತ್ರದ ಅಭ್ಯರ್ಥಿಯಾದ ಎಂ.ಟಿ.ಕೃಷ್ಣಪ್ಪ ಅವರನ್ನು ಅತ್ಯಧಿಕ ಮತಗಳಿಂದ ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿಕೊಡಬೇಕೆಂದು ಕೋರಿದರು.

ಸಿದ್ದರಾಮಯ್ಯ ಅವರಪ್ಪನಾಣೆ ಈ ಬಾರಿ ಶಾಸಕರೂ ಆಗಲ್ಲ?

ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್ ಪಕ್ಷದ ಸ್ವಾಭಿಮಾನವನ್ನು ಕೆಣಕಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಅವರಪ್ಪನಾಣೆ ಸಿಎಂ ಆಗಲ್ಲ ಎನ್ನುವ ಸಿದ್ದರಾಮಯ್ಯ ಅವರಪ್ಪನಾಣೆ ಚಾಮುಂಡೇಶ್ವರಿ, ಬಾದಾಮಿ ಕ್ಷೇತ್ರದಲ್ಲಿ ಗೆಲ್ಲಲ್ಲ, ಈ ಬಾರಿ ಶಾಸಕರಾಗಿಯೂ ವಿಧಾನಸಭೆ ಪ್ರವೇಶಿಸಲ್ಲ. ನಾನೇ ಮುಂದಿನ ಸಿಎಂ ಎಂದು ಹೇಳಿಕೊಳ್ಳುತ್ತಿರುವ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುವ ಭಯದಿಂದ ಬಾದಾಮಿ ಕ್ಷೇತ್ರಕ್ಕೆ ತೆರಳಿದ್ದಾರೆ. ಸಿದ್ಧರಾಮಯ್ಯ ಅವರಿಗೆ ಚಾಮುಂಡೇಶ್ವರಿ ಹಾಗೂ ಬನಶಂಕರಮ್ಮ ದೇವಿ ಇಬ್ಬರೂ ಆರ್ಶೀವದಿಸಲ್ಲ. ಈ ಬಾರಿ ವಿಧಾನಸಭೆಗೆ ಶಾಸಕರಾಗಿಯೂ ಸಿದ್ದರಾಮಯ್ಯ ಪ್ರವೇಶಿಸುವುದಿಲ್ಲ, ಎರಡೂ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸಲಿದ್ದಾರೆಂದರು.

ನಾನು ನಾಡಿನ ಜನರ ಕಡೆಗಿದ್ದೇನೆ

ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಕಡೆಗಿದ್ದೇನೆಂದು ಕೆಲವರು, ಬಿಜೆಪಿ ಕಡೆಗಿದ್ದೇನೆಂದು ಕೆಲವರು ಇಲ್ಲಸಲ್ಲದ ಊಹಾಪೋಹಗಳನ್ನು ಸೃಷ್ಟಿಸುತ್ತಿದ್ದಾರೆ. ಜನತೆ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ನಾನು ಕಾಂಗ್ರೆಸ್ ಹಾಗೂ ಬಿಜೆಪಿ ಕಡೆಗಿಲ್ಲ, ರಾಹುಲ್ ಗಾಂಧಿ ಅಥವಾ ನರೇಂದ್ರ ಮೋದಿ ಅವರ ಪರವಾಗಿ ನಾನಿದ್ದೇನೆಂಬುದು ಸತ್ಯಕ್ಕೆ ದೂರವಾದ ಸಂಗತಿ. ನಾನು ನನ್ನನ್ನೇ ನಂಬಿರುವ ಜನರ ಕಡೆಗಿದ್ದೇನೆ, ರೈತರ ಕಡೆಗಿದ್ದೇನೆ. ನಾನು ಯಾರ ಪರವಾಗಿದ್ದೇನೆಂಬುದು ನಾಡಿನ ಅಣ್ಣತಮ್ಮಂದಿರಿಗೆ, ತಂದೆ ತಾಯಂದಿರಿಗೆ ಗೊತ್ತಿದೆ ಎಂದ ಅವರು, ರಾಷ್ಟ್ರೀಯ ಪಕ್ಷಗಳು ರಾಜ್ಯದ ಜನರ ತೆರಿಗೆ ಹಣವನ್ನು ಲೂಟಿ ಮಾಡಿವೆ. ಅಂತಹ ಪಕ್ಷಗಳೊಂದಿಗೆ ಹೊಂದಾಣಿಕೆ ಇಲ್ಲ. ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್, ಬಿಜೆಪಿ ಆರೋಪ ಪ್ರತ್ಯಾರೋಪಗಳಲ್ಲಿ ನಿರತರಾಗಿದ್ದು ಇವರಿಂದ ರಾಜ್ಯದ ಅಭಿವೃದ್ದಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.

ನಾಡಿನ ರೈತರು, ಜನರಿಗಾಗಿ ನನ್ನ ಹೋರಾಟ

ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಉಳಿವಿಗಾಗಿ ನನ್ನ ಹೋರಾಟವಲ್ಲ. ನನ್ನ ಹೋರಾಟ ನನ್ನ ನಾಡಿನ ಸಂಕಷ್ಟದಲ್ಲಿರುವ ರೈತರಿಗಾಗಿ, ನಾಡಿನ ಜನರಿಗಾಗಿ. ನನ್ನ ಹೋರಾಟ ಸಾರ್ಥಕವಾಗಬೇಕಾದರೆ ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ನೀವು ಆಶೀರ್ವದಿಸಿ, ತುರುವೇಕೆರೆ ಕ್ಷೇತ್ರದಲ್ಲಿ ಎಂ.ಟಿ.ಕೃಷ್ಣಪ್ಪ ಅವರನ್ನು ಗೆಲ್ಲಿಸಲೇಬೇಕು. ನಾಡಿನ ರೈತರ ಉಳಿವಿಗಾಗಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲೇಬೇಕೆಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕೆಂದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬೇಡ

ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ಬರುವಂತೆ ಮಾಡಬೇಡಿ, ಕಾಂಗ್ರೆಸ್, ಬಿಜೆಪಿ ಪಕ್ಷದ ಹಂಗಿಲ್ಲದೆ ಸ್ವಂತ ಬಲದ ಮೇಲೆ ೧೧೩ ಸ್ಥಾನಗಳನ್ನು ಗೆಲ್ಲಿಸಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಿ. ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರು, ನಾಡಿನ ಜನರ ಕಣ್ಣಲ್ಲಿ ನೀರು ಬರದಂತೆ ಕಾಪಾಡುವ ಹೊಣೆಗಾರಿಕೆ ನನ್ನದು ಎಂದ ಅವರು, ರಾಷ್ಟ್ರೀಯ ಪಕ್ಷಗಳ ಆಸೆ, ಆಮಿಷಗಳಿಗೆ ಬಲಿಯಾಗಬೇಡಿ. ೫೦೦-೧೦೦೦ರೂಗಳಿಗೆ ಮತ ಮಾರಿಕೊಂಡರೆ, ಆಮಿಷಗಳಿಗೆ ಬಲಿಯಾದರೆ ನಾಡಿನ ಜನರ ಬದುಕು ಹಸನಾಗುವುದಿಲ್ಲ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಂದ ರೈತರ ಸಂಕಷ್ಟ ನಿವಾರಣೆಯಾಗುವುದಿಲ್ಲ. ರಾಜ್ಯದ ಅಭಿವೃದ್ದಿಯಾಗುವುದಿಲ್ಲ. ನಿರುದ್ಯೋಗ ಸಮಸ್ಯೆ ಬಗೆಹರಿಯುವುದಿಲ್ಲ. ಉದ್ಯಮಿಗಳ ಪರವಾಗಿರುವ ರಾಷ್ಟ್ರೀಯ ಪಕ್ಷಗಳಿಗೆ ಬೆವರಿನ ಬೆಲೆ ಗೊತ್ತಿಲ್ಲ ಎಂದು ಟೀಕಿಸಿದರು.

ನನ್ನ ಆರೋಗ್ಯಕ್ಕಿಂತ ನಿಮ್ಮ ಬದುಕು ಮುಖ್ಯ

ನಾನು ಈಗಾಗಲೇ ನಿಮ್ಮ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿದ್ದೇನೆ. ನಾನು ಮುಖ್ಯಮಂತ್ರಿಯಾಗುವುದಕ್ಕೆ ನನ್ನ ಆರೋಗ್ಯವನ್ನು ನಿರ್ಲಕ್ಷಿಸಿ ಕಳೆದ ೪-೫ ತಿಂಗಳಿಂದ ಹೋರಾಟ ನಡೆಸುತ್ತಿಲ್ಲ. ನನ್ನ ಆರೋಗ್ಯಕ್ಕಿಂತ ನಿಮ್ಮ ಬದುಕು ಮುಖ್ಯ ಎಂದು ಹೋರಾಟ ನಡೆಸುತ್ತಿದ್ದೇನೆ. ಸಂಕಷ್ಟದಲ್ಲಿರುವ ರೈತ ಕುಟುಂಬಗಳು ಆತ್ಮಹತ್ಯೆಯ ಹಾದಿ ಹಿಡಿದಿವೆ. ಸಂಪೂರ್ಣವಾಗಿ ರೈತರ ಸಾಲಮನ್ನಾ ಮಾಡಿ ಮತ್ತೆಂದೂ ರೈತರು ಸಾಲಗಾರರಾಗದಂತೆ ಮಾಡಿ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ಅವಕಾಶ ಬೇಡುತ್ತಿದ್ದೇನೆ. ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್‌ಗಳ ಸಾಲವನ್ನು ಮನ್ನಾ ಮಾಡುವ ಜವಾಬ್ದಾರಿ ನನ್ನದು. ರಾಷ್ಟ್ರೀಯ ಪಕ್ಷಗಳಿಗೆ ಸಾಕಷ್ಟು ಅವಕಾಶ ನೀಡಿರುವಾಗ ನಿಮ್ಮ ರೈತನ ಮಗನಿಗೆ ಒಮ್ಮೆ ಅವಕಾಶ ಕೊಟ್ಟು ಪರೀಕ್ಷಿಸಬಾರದೇಕೆ? ಎಂದು ಪ್ರಶ್ನಿಸಿದರು.

ಭರವಸೆ ಈಡೇರಿಸುವ ಜವಾಬ್ದಾರಿ ನನ್ನದು

ನಾಡಿನ ಜನರ ಅಭ್ಯುದಯಕ್ಕಾಗಿ ಪ್ರಣಾಳಿಕೆಯಲ್ಲಿ ತಿಳಿಸಿರುವ ರೈತರ, ಮೀನುಗಾರರ, ಸ್ತ್ರೀಶಕ್ತಿ ಸಂಘದವರ ೫೬ಸಾವಿರ ಕೋಟಿ ಸಾಲಮನ್ನಾ, ಒಂದು ಕೋಟಿ ಉದ್ಯೋಗ ಸೃಷ್ಟಿ, ಕೈಗಾರಿಕೆ ಅಭಿವೃದ್ದಿ, ನೂತನ ಕೃಷಿ ನೀತಿ ಜಾರಿ, ೬೫ ವರ್ಷ ಮೇಲ್ಪಟ್ಟ ಹಿರಿಯರಿಗೆ ೬ಸಾವಿರ ಮಾಸಾಶನ, ಗರ್ಭಿಣಿಯರಿಗೆ ಹೆರಿಗೆ ಪೂರ್ವ ಹಾಗೂ ನಂತರ ೬ ತಿಂಗಳು ಮಾಸಿಕ ೬ಸಾವಿರ ಮಾಸಾಶನ, ಬಡ ಮಹಿಳೆಯರಿಗೆ ಮಾಸಿಕ ೨ಸಾವಿರ ಮಾಸಾಶನ, ರೈತರು ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳಲು ಶೇ.೧೦೦ ಸಬ್ಸಿಡಿ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಜೆಡಿಎಸ್ ರೂಪಿಸಿದ್ದು ನೀವು ಅಧಿಕಾರ ನೀಡಿದರೆ ಎಲ್ಲವನ್ನೂ ಈಡೇರಿಸುವ ಜವಾಬ್ದಾರಿ ನನ್ನದು ಎಂದರು.

ಪ್ರಚಾರ ಸಭೆಯಲ್ಲಿ ಶಾಸಕ, ಜೆಡಿಎಸ್ ಅಭ್ಯರ್ಥಿ ಎಂ.ಟಿ.ಕೃಷ್ಣಪ್ಪ, ರಾಜ್ಯ ಜೆಡಿಎಸ್ ಯುವ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್, ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು, ವಿಧಾನಪರಿಷತ್ ಸದಸ್ಯ ಬೆಮೆಲ್ ಕಾಂತರಾಜು, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ನಿಂಗಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಸ್ವಾಮಿ, ಜಿಪಂ ಮಾಜಿ ಸದಸ್ಯ ಎ.ಬಿ.ಜಗದೀಶ್, ಮುಖಂಡರಾದ ಎನ್.ಆರ್.ಸುರೇಶ್, ಮಾವಿನಕೆರೆ ವಿಜಯಕುಮಾರ್, ಬಡಗರಹಳ್ಳಿ ತ್ಯಾಗರಾಜ್ ಸೇರಿದಂತೆ ೨೫ ಸಾವಿರಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಂಡಿದ್ದರು.

 

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ

Please follow and like us:
0
http://bp9news.com/wp-content/uploads/2018/05/WhatsApp-Image-2018-05-08-at-9.51.48-AM-1024x593.jpeghttp://bp9news.com/wp-content/uploads/2018/05/WhatsApp-Image-2018-05-08-at-9.51.48-AM-150x150.jpegBP9 Bureauತುಮಕೂರುಪ್ರಮುಖರಾಜಕೀಯತುರುವೇಕೆರೆ: ನಿಮ್ಮ ಆರ್ಶೀವಾದ ಪಡೆಯಲು ತಾತ(ಹೆಚ್.ಡಿ.ದೇವೇಗೌಡ), ಮಗ(ಹೆಚ್.ಡಿ.ಕುಮಾರಸ್ವಾಮಿ), ಮೊಮ್ಮಗ(ನಿಖಿಲ್ ಕುಮಾರಸ್ವಾಮಿ) ಮೂರು ಮಂದಿ ಕ್ಷೇತ್ರಕ್ಕೆ ಬಂದಿದ್ದೇವೆ. ಕ್ಷೇತ್ರದ ಜನತೆ ನಮಗೆ ಹಾಲು ಕೊಡ್ತೀರೋ? ವಿಷ ಕೊಡ್ತೀರೋ ನೀವೇ ತೀರ್ಮಾನಿಸಿ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಬಾವುಕರಾದರು. ತುರುವೇಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಟಿ.ಕೃಷ್ಣಪ್ಪ ಪರ ಪ್ರಚಾರಕ್ಕೆ ಪಟ್ಟಣಕ್ಕೆ ಆಗಮಿಸಿ ಕೆ.ಹಿರಣ್ಣಯ್ಯ ಬಯಲು ರಂಗಮಂದಿರ ಆವರಣದಲ್ಲಿ ನೆರೆದಿದ್ದ ೨೫ಸಾವಿರಕ್ಕೂ ಅಧಿಕ ಮಂದಿ ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ...Kannada News Portal