ಮಡಿಕೇರಿ : ಮುಂಗಾರಿನ ಆರಂಭದೊಂದಿಗೆ ಉತ್ತರಕೊಡಗಿನ ಶನಿವಾರಸಂತೆ ಬೆಳ್ಳಾರಳ್ಳಿ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಮತ್ತೆ ಆಫ್ರಿಕನ್ ದೈತ್ಯ ಶಂಖು ಹುಳುಗಳ ಉಪಟಳ ಕಾಣಿಸಿಕೊಳ್ಳುವ ಮೂಲಕ ಬೆಳೆಗಾರರ ನಿದ್ದೆಗೆಡಿಸಿದೆ.

ಮಳೆಗಾಲದ ಆರಂಭದೊಂದಿಗೆ ಕಾಣಿಸಿಕೊಳ್ಳುವ ಈ ಶಂಖು ಹುಳುಗಳು ಶನಿವಾರಸಂತೆ ವ್ಯಾಪ್ತಿಯ ತೋಟಗಳ ಕಾಫಿ ಗಿಡ ಸೇರಿದಂತೆ  ಕರಿಮೆಣಸು ಬಳ್ಳಿ, ಬಾಳೆ, ಅಡಿಕೆ ಗಿಡಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿವೆ. ಈ ಎಲ್ಲಾ ಬೆಳೆಗಳಿಗೆ ಹಾನಿ ಮಾಡುವ ಶಂಖು ಹುಳದ ನಿಯಂತ್ರಣ ಬೆಳೆಗಾರರಿಗೆ ದೊಡ್ಡ ಸಮಸ್ಯೆಯಾಗಿ ಕಾಡಲಾರಂಭಿಸಿದೆ.

ಮೂಲತಃ ಪೂರ್ವ ಆಫ್ರಿಕಾದ ಈ ಹುಳು, ಭಾರತದಲ್ಲಿ 1847ರಲ್ಲಿ ಕಾಣಿಸಿಕೊಂಡಿತೆಂದು ಹೇಳಲಾಗುತ್ತದೆ. ಮಳೆಗಾಲದಲ್ಲಿ ಹೇರಳವಾಗಿ ಕಾಣಸಿಗುವ ಈ ಹುಳು ರಾತ್ರಿ ವೇಳೆಯಲ್ಲಿ ಹೆಚ್ಚು ಚುರುಕಾಗಿದ್ದು, ಹಗಲಿನ ವೇಳೆಯಲ್ಲಿ ಒಣಗಿ ಬಿದ್ದಿರುವ ಮರದ ತುಂಡುಗಳಲ್ಲಿ, ಕಸದ ರಾಶಿಯಲ್ಲಿ ಅಡಗಿಕೊಂಡಿರುತ್ತದೆ.

ಈ ಶಂಖು ಹುಳು ಕಾಫಿ ಮಾತ್ರವಲ್ಲ  ಪಪ್ಪಾಯಿ, ರಬ್ಬರ್, ಕೋಕೊ, ಬಾಳೆ, ಅಡಿಕೆ ಸೇರಿದಂತೆ 500ಕ್ಕು ಹೆಚ್ಚಿನ ವಿವಿಧ ಸಸ್ಯ ಪ್ರಭೇದಗಳಿಗೆ ಹಾನಿಯನ್ನು ಉಂಟುಮಾಡುತ್ತದೆ.ಇದರ ಜೀವಿತಾವಧಿ 3-5 ವರ್ಷಗಳಾಗಿದ್ದು, ಕೆಲವು 9 ವರ್ಷಗಳ ವರೆಗೂ ಜೀವಿಸಿರುವುದೂ ಇವೆ.

ಕೊಡಗಿಗೆ ಕಾಲಿಟ್ಟ ಹುಳು- ಮೂರು ವರ್ಷಗಳಿ ಹಿಂದೆ 2015ರಲ್ಲಿ  ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಬೆಳ್ಳಾರಳ್ಳಿ ಹಾಗು ಸುತ್ತಲಿನ ಪ್ರದೇಶಗಳಲ್ಲಿ ಶಂಖು ಹುಳು ಮೊದಲಿಗೆ ಕಾಣಿಸಿಕೊಂಡಿತ್ತು.  ಮಳೆಗಾಲದ ಅವಧಿಯಲ್ಲಿ ಕಂಡು ಬರುವ ಈ ಹುಳು ಇದೀಗ  ಶನಿವಾರಸಂತೆ ವಿಭಾಗದ ಕಾಫಿ ಗಿಡ , ಕರಿಮೆಣಸಿನ ಬಳ್ಳಿಗಳಲ್ಲಿ ಪ್ರತ್ಯಕ್ಷವಾಗಿದೆ.

ಚಿಕ್ಕಮಗಳೂರು ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಕೇಂದ್ರ ಹಾಗು ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪಕೇಂದ್ರದಲ್ಲಿ ಸಂಶೋಧನೆ ನಡೆಸಿ ಶಂಖು ಹುಳುಗಳನ್ನು ಕ್ರಿಮಿನಾಶಕ  ಮತ್ತು  ಕ್ಯಾಚ್ ಆಂಡ್​​​ ಕಿಲ್​​  ವಿಧಾನವನ್ನು ಬಳಸಿ ನಿಯಂತ್ರಿಸಲು ಸೂಚಿಸಿದೆ.

ಚೆಟ್ಟಳ್ಳಿ ಕಾಫಿ ಸಂಶೋಧನ ಉಪಕೇಂದ್ರದ ಉಪನಿರ್ದೇಶಕ ಡಾ. ಜಗದೀಶನ್ ಹೇಳುವಂತೆ, ಕಳೆದ ಮೂರು ವರ್ಷಗಳಿಂದ ಶಂಖು ಹುಳುವಿರುವ ಪ್ರದೇಶಗಳಲ್ಲಿ ಕಾಫಿ ಸಂಶೋಧನ ಉಪಕೇಂದ್ರದ ಅಧಿಕಾರಿಗಳು ಹಾಗು ತಜ್ಞರು ಕಾರ್ಯಾಗಾರಗಳ ಮೂಲಕ ರೈತರಿಗೆ ಶಂಖು ಹುಳುವಿನ ನಿಯಂತ್ರಣದ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಡುತ್ತಿದ್ದು, ಹುಳುಗಳ ಉಪಟಳ ಸಾಕಷ್ಟು ನಿಯಂತ್ರಣಕ್ಕೂ ಬಂದಿದೆ.

ಕಿರಿಯ ಕೀಟತಜ್ಞ ರಂಜಿತ್ ಕುಮಾರ್, ಶಂಖು ಹುಳುವಿನ ನಿಯಂತ್ರಣದ ಬಗ್ಗೆ ರೈತರಲ್ಲಿ ಅರಿವು ಮೂಡಿದ್ದು, ಇಲಾಖೆಯೊಂದಿಗೆ ಸಹಕಾರ ನೀಡಿದರೆ ಒಂದೆರಡು ವರ್ಷಗಳಲ್ಲಿ ಸಂಪೂರ್ಣ ನಿಯಂತ್ರಣ ಸಾಧ್ಯವಿದೆ ಎನ್ನುತ್ತಾರೆ.

ಹತೋಟಿ ಕ್ರಮಗಳು

ಈ ಶಂಖಹುಳು, ಹುಳುವಿನ ಅಡಗುತಾಣಗಳನ್ನು ನಾಶಪಡಿಸುವುದು, ಪ್ರಾರಂಭಿಕ ಹಂತದಲ್ಲೆ ಈ ಹುಳುಗಳನ್ನು ಸಂಗ್ರಹಿಸಿ ನಾಶಪಡಿಸುವುದು,ಹುಳುಗಳನ್ನು ಅಕರ್ಷಿಸಲು ಪಪ್ಪಾಯ ಕಾಂಡದ ತುಂಡನ್ನು ಇಡುವುದು, ತೇವವಾದ ಗೋಣಿಚೀಲಗಳನ್ನು ಹಾಗು ಪಪಾಯ ಎಲೆಗಳನ್ನು ಆಕರ್ಷಣಾ ಬಲೆಯಾಗಿ ಉಪಯೋಗಿಸಿ ಹುಳುಗಳನ್ನು ಸಂಗ್ರಹಿಸಿ ನಾಶಪಡಿಸುವುದು, ಹುಳ ಪೀಡಿತ ಪ್ರದೇಶದಲ್ಲಿ ಚಿಪ್ಪಿನ ಸುಣ್ಣದ ಪುಡಿಯನ್ನು ಹರಡುವುದು,ದರಗುಗಳ ಮೇಲೆ ಮೊಟ್ಟೆ ಇಡುವ ಪ್ರದೇಶಗಳಲ್ಲಿ ಸಹ ಚಿಪ್ಪಿನ ಸುಣ್ಣದ ಪುಡಿಯನ್ನು ಹರಡುವುದು, 50ಲೀ. ನೀರಿನಲ್ಲಿ  2ಕೆ.ಜಿ.ಮೈಲುತುತ್ತು ಮತ್ತು 2ಕೆ.ಜಿ ತಂಬಾಕಿನ ಸಾರವನ್ನು ಮಿಶ್ರಣ ಮಾಡಿ ಹುಳುಗಳ ಮೇಲೆ ಚಿಮುಕಿಸುವುದು, ಶೇ.5 ಮೆಟಾಲ್ಡಿಹೈಡ್ ಗುಳಿಗೆಗಳನ್ನು ಎಕರೆಗೆ ಹತ್ತು ಕೆಜಿಯಂತೆ ಗಿಡಗಳ ಸುತ್ತಲು ಹರಡುವುದು.

160-240 ಗ್ರಾಂ ಲಾರ್ವಿನ್ ಪುಡಿಯನ್ನು 60 ಕೆ.ಜಿ ಅಕ್ಕಿ ತೌಡಿನೊಂದಿಗೆ ಮಿಶ್ರಮಾಡಿ ನಂತರ 6ಕೆ.ಜಿ ಬೆಲ್ಲವನ್ನು 5ಲೀಟರ್ ಬಿಸಿನೀರಿನಲ್ಲಿ ನಿಧಾನವಾಗಿ ಕರಗಿಸಿ ಮತ್ತುಬೆಲ್ಲದ ದ್ರಾವಣಕ್ಕೆ 300 ಮಿಲಿ ಹರಳೆಣ್ಣೆ ಮಿಶ್ರಣಮಾಡಿ ಈಬೆಲ್ಲದ ದ್ರಾವಣವನ್ನು ನಿಧ್ದಾನವಾಗಿ ತೌಡು ಲಾರ್ವಿನ್ ಮಿಶ್ರಣದೊಂದಿಗೆ ಚೆನ್ನಾಗಿ ಕಲಸಿ ಅಗತ್ಯವಿದ್ದಲ್ಲಿ ನೀರನ್ನು ಸೇರಿಸಿ ಕಲಸಿ.ಮಿಶ್ರಣ ತುಂಬಾತೇವ ಅಥವ ಗಟ್ಟಿಯಾಗದಂತೆ ನೋಡಿಕೊಳ್ಲಬೇಕು.ಒಂದು ಏಕರೆ ಪ್ರದೇಶದಲ್ಲಿ 1500 ಗ್ರಾಂ ಮಿಶ್ರಣದ ಉಂಡೆಯನ್ನು 400 ಜಾಗದಲ್ಲಿ ಪ್ರತೀ ನಾಲಕ್ಕು ಗಿಡಗಳಿ ಮದ್ಯೆ ಇರಿಸುವುದು. ಶಂಖು ಹುಳುಗಳ ಓಡಾಟ ಕಂಡುಬಂದ ಜಾಗ(ಗಿಡಗಳ ಬುಡ)ದಲ್ಲಿ ಶೇ.5 ಮೆಟಾಲ್ಡಿಹ್ಯಡ್ ಹರಳುಗಳನ್ನು ಹರಡುವುದು.

ಕ್ಯಾಚ್ ಆಂಡ್​​​ ಕಿಲ್​​ ಮುಖಾಂತರ ಸಂಗ್ರಹಿಸಿದ ಹುಳುಗಳನ್ನು 7 ಅಡಿ ಆಳ, 4 ಅಡಿ ಅಗಲ ಮತ್ತು 4 ಅಡಿ ಉದ್ದದ ಗುಂಡಿಗಳಲ್ಲಿ ತುಂಬಿಸಿ ಪ್ರತಿ ಒಂದು ಅಡಿ ಎತ್ತರದ ಪದರಗಳ ಮೇಲೆ ಚಿಪ್ಪಿನ ಸುಣ್ಣ ಮತ್ತು ಉಪ್ಪನ್ನು ಹರಡುವುದು,6 ಅಡಿ ಅಗಲ ನಂತರ ಮತ್ತೆ ಚಿಪ್ಪಿನ ಸುಣ್ಣ ಮತ್ತು ಪೌಡರ್ ಹರಡಿ ಗಂಡಿಯನ್ನು ಮಣ್ಣಿನಿಂದ ಮುಚ್ಚುವುದು.

ಹುಳುಗಳನ್ನು ಹಿಡಿಯುವಾಗ ಮುನ್ನೆಚ್ಚರಿಕೆ ಕ್ರಮವಾಗಿ ಕೈಗೆ ಕವಚವನ್ನು ಹಾಕಿಕೊಳ್ಳುವುದು,ಈ ಶಂಕುಹುಳುಗಳೊಂದಿಗೆ ನೇರ ಸಂಪರ್ಕವನ್ನು ತಪ್ಪಿಸುವುದು. ಕ್ಯಾಚ್ ಆಂಡ್​​​​ ಕಿಲ್​​ ಮುಖಾಂತರ ಹುಳುಗಳನ್ನು ಗುಂಡಿಯಲ್ಲಿ ತುಂಬಿ ಸಂಪೂರ್ಣವಾಗಿ ಮಣ್ಣಿನಿಂದ ಮುಚ್ಚುವುದು.

Please follow and like us:
0
http://bp9news.com/wp-content/uploads/2018/06/Z-COFFEE-2-1.jpghttp://bp9news.com/wp-content/uploads/2018/06/Z-COFFEE-2-1-150x150.jpgBP9 Bureauಕೃಷಿಕೊಡಗುಪ್ರಮುಖಮಡಿಕೇರಿ : ಮುಂಗಾರಿನ ಆರಂಭದೊಂದಿಗೆ ಉತ್ತರಕೊಡಗಿನ ಶನಿವಾರಸಂತೆ ಬೆಳ್ಳಾರಳ್ಳಿ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಮತ್ತೆ ಆಫ್ರಿಕನ್ ದೈತ್ಯ ಶಂಖು ಹುಳುಗಳ ಉಪಟಳ ಕಾಣಿಸಿಕೊಳ್ಳುವ ಮೂಲಕ ಬೆಳೆಗಾರರ ನಿದ್ದೆಗೆಡಿಸಿದೆ. ಮಳೆಗಾಲದ ಆರಂಭದೊಂದಿಗೆ ಕಾಣಿಸಿಕೊಳ್ಳುವ ಈ ಶಂಖು ಹುಳುಗಳು ಶನಿವಾರಸಂತೆ ವ್ಯಾಪ್ತಿಯ ತೋಟಗಳ ಕಾಫಿ ಗಿಡ ಸೇರಿದಂತೆ  ಕರಿಮೆಣಸು ಬಳ್ಳಿ, ಬಾಳೆ, ಅಡಿಕೆ ಗಿಡಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿವೆ. ಈ ಎಲ್ಲಾ ಬೆಳೆಗಳಿಗೆ ಹಾನಿ ಮಾಡುವ ಶಂಖು ಹುಳದ ನಿಯಂತ್ರಣ ಬೆಳೆಗಾರರಿಗೆ ದೊಡ್ಡ...Kannada News Portal