ಬೆಂಗಳೂರು : ಇತ್ತೀಚೆಗೆ ನಾಯಿಕೊಡೆಗಳಂತೆ ಎಲ್ಲೆಂದರಲ್ಲಿ ತಲೆ ಎತ್ತುತ್ತಿರುವ ಖಾಸಗಿ ವಿದ್ಯಾಸಂಸ್ಥೆಗಳು ಒಂದು ಕಡೆಯಾದರೆ ,ಅದನ್ನೇ ಒಂದು ವರ್ಗದ ಜನರು ವ್ಯಾಪಾರೀಕರಣಕ್ಕೆ ತೊಡಗಿಸಿಕೊಂಡಿರುವುದು ದುರಂತವೇ ಸರಿ. ಕೆಲವರು ಅದರಲ್ಲೂ ಪದವಿ ಪೂರ್ವ ವಿದ್ಯಾ ಸಂಸ್ಥೆಯನ್ನು ಹೊಂದಿರುವವರಂತೂ, ತಮ್ಮ ಸಂಸ್ಥೆಯಲ್ಲಿ  ದ್ವಿತೀಯ ಪಿಯುಸಿ ತರಗತಿಯಲ್ಲಿ ನೂರಕ್ಕೆ ನೂರು ಶೇಕಡಾ ಅಂಕ  ತೆಗೆದು  ತೇರ್ಗಡೆಯಾಗಬೇಕೆಂದು ಬಯಸುವ ಕಾಲೇಜುಗಳೇ ಹೆಚ್ಚು .

ಆದರೆ ಇದರಲ್ಲೇನು ವಿಶೇಷವಿದೆಯೆಂದು ಕೇಳುತ್ತೀರಾ .ಇಲ್ಲೇ ಇರುವುದು ಅದರ ಒಳಮರ್ಮ.ನಿಮ್ಮ ಮಕ್ಕಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾದರೆ ನಿಮ್ಮ ಮಕ್ಕಳಿಗಿಂತ ಲಾಭವನ್ನು ಕಾಲೇಜಿನವರೇ ಪಡೆದಿರುತ್ತಾರೆ . ನಿಮ್ಮ ಮಕ್ಕಳಿಂದ ಗಳಿಸಿದ ಕೀರ್ತಿಯನ್ನು ಎನ್ಕ್ಯಾಷ್ ಗೊಳಿಸಿ ಅವರು ಮತ್ತೊಂದು ವರ್ಷದಲ್ಲಿ ಬೇರೊಬ್ಬರ ಮಕ್ಕಳನ್ನು ತಮ್ಮ ಕಾಲೇಜಿನತ್ತ ಸೆಳೆಯುವುದರಲ್ಲಿ ಯಶಸ್ವಿ ಆಗುತ್ತಾರೆ .
ಸತತವಾಗಿ ಮೂರು- ನಾಲ್ಕು ವರ್ಷ ಸತತವಾಗಿ ನೂರಕ್ಕೆ ನೂರು ಫಲಿತಂಶ ಬಂದರೆ ತಾವು ಹೇಳಿದಷ್ಟು ಫೀಅನ್ನು ಪಾವತಿಸಿ ಜನರು ತಾ ಮುಂದು ನಾ ಮುಂದು ಎಂದು ಮಕ್ಕಳನ್ನು ದಾಖಲಿಸುವುದರಲ್ಲಿ ಸಂಶಯವಿಲ್ಲ ಎಂದು ಎಲ್ಲರಿಗು ತಿಳಿದ ವಿಷಯವೇ.

ಆದರೆ ವಿಪರ್ಯಾಸವಿರುವುದು ಇಲ್ಲೇ . ಎಲ್ಲ ಮಕ್ಕಳು ಒಂದೇ ರೀತಿಯಲ್ಲಿ ಸೂಪರ್ ಇಂಟಲಿಜೆಂಟ್ ಆಗಿರುವುದಿಲ್ಲ . ಆದರೆ ಈ ಸತ್ಯವನ್ನು ಅರಿತಿರುವ ಇಂತಹ ಕೆಲವು ವಿದ್ಯಾ ಸಂಸ್ಥೆಗಳು , ಪ್ರಥಮ ಪಿಯುಸಿ ತರಗತಿಗೆ ಒಂದು ನಿರ್ದಿಷ್ಟ ಅಂಕವನ್ನು ಗಣನೆಗೆ ತೆಗೆದುಕೊಂಡು ಜಾಸ್ತಿ ಅಂಕ ಬಂದವರನ್ನು ವಿಜ್ಞಾನಕ್ಕೂ ,ಕಮ್ಮಿ ಅಂಕ ಬಂದವರನ್ನು ವಾಣಿಜ್ಯ ವಿಭಾಗಕ್ಕೂ ಸೇರಿಸಿ ಒಂದೊಂದು ತರಗತಿಯಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹಾಕಿಕೊಂಡು ತಮ್ಮ ಖಜಾನೆ ತುಂಬಿಸಿಕೊಳ್ಳುತ್ತಾರೆ . ಆದರೆ ಇವರು ಮಾಡುವುದೇನು..

ಪ್ರಥಮ ಪಿಯುಸಿಯಲ್ಲಿ ಮೂರು ತಿಂಗಳು, ಮಕ್ಕಳನ್ನು ಫಿಲ್ಟರ್ ಮಾಡಲಿಕ್ಕೆ ಶುರು ಹಚ್ಚಿಕೊಳ್ಳುತ್ತಾರೆ . ನಂತರ ಯಾರು ಚೆನ್ನಾಗಿ ಓದುತ್ತಾರೋ ಅವರನ್ನು ಒಂದು ಲಿಸ್ಟ್ , ಮತ್ತು ಯಾರು ಸ್ವಲ್ಪ ದಡ್ಡರಿರುತ್ತಾರೋ ಅವರ ಮುಂದಿನ ಭವಿಷ್ಯಕ್ಕೆ ಮೂರ್ತ ಫಿಕ್ಸ್ . ಯಾಕೆಂದರೆ ಕಾಲೇಜಿಗೆ ಮುಂದಿನ ವರ್ಷ ಯಾರು ಪರೀಕ್ಷೆಗೆ ಕೂತರೆ ಚೆನ್ನಾಗಿ ಪರೀಕ್ಷೆ ಬರೆದು ಅಂಕ ಗಳಿಸುತ್ತಾರೆ ಎನ್ನುವುದು ಖಾತರಿಯಾಗುತ್ತದೆ. ಅಲ್ಲಿಗೆ ಈ ದಡ್ಡ ವಿದ್ಯಾರ್ಥಿಗಳ (ದಡ್ಡ ವಿದ್ಯಾರ್ಥಿಗಳುಕಾಲೇಜಿನವರ ಲೆಕ್ಕಾಚಾರದಲ್ಲಿ , ಈಗಿನ ಕಾಲದಲ್ಲಿ ಯಾರು ದಡ್ಡರಲ್ಲ ) ಮನೆಯವರಿಗೆ ಒಂದು ಕರೆ ಹೋಗಿರುತ್ತದೆ, ಪ್ರಿನ್ಸಿಪಾಲರನ್ನು ಕಾಣಲು ಪಾಪದ ಪೋಷಕರು ಬಂದಾಗ ಅವರ ಮಕ್ಕಳ ಬಗ್ಗೆ ಒಂದಿಷ್ಟು ಪುಕಾರು ಹೇಳುತ್ತಾರೆ. ನಿಮ್ಮ ಮಗ ಅಥವಾ ಮಗಳು ಓದುವುದರಲ್ಲಿ ಆಸಕ್ತಿ ತೋರುತ್ತಿಲ್ಲ. ಹಿಂಗಾದರೆ ಹೆಂಗೆ ..ನಮ್ಮ ಸಂಸ್ಥೆಯ ಮರ್ಯಾದಿ ಹೋಗುತ್ತೆ ಎಂದು ಹೇಳುತ್ತಾರೆ ಎಂದು ಹಲವಾರು ಪೋಷಕರ ಆರೋಪವಾಗಿದೆ.

ಆದರೆ ಇದೆಲ್ಲವು ಮೂರು ತಿಂಗಳು ಸರಿಯಾಗಿ ಓದಿಸದೆ, ಕೇವಲ ಜಾಣ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಮುಂದಿನ ವರ್ಷಕ್ಕೆ ಕಳುಹಿಸುವ ಸಂಸ್ಥೆಯ ಒಂದು ನಾಟಕ ಎಂದು ಪಾಪದ ಪೋಷಕರಿಗೆ ತಿಳಿಯುವುದೇ ಇಲ್ಲ. ನೀವು ಹೇಗಾದರೂ ಮಾಡಿ ಮನೆಯಲ್ಲೋ ಬೇರೆಕಡೆನೋ ಮನೆಪಾಠ ಕೊಡಿಸಿದರು ಏನು ಪ್ರಯೋಜನ ಬರುವುದಿಲ್ಲ . ಏಕೆಂದರೆ ಕಾಲೇಜಿನ ಸಿಬ್ಬಂದಿ ವರ್ಗ ಒಂದು ಮೀಟಿಂಗನ್ನು ಮಾಡಿ, ಪ್ರಿನ್ಸಿಪಾಲರಿಗೆ ಯಾರನ್ನು ತೆಗೆಯಬೇಕೆಂದು ಲಿಸ್ಟ್ ಕೊಟ್ಟಿರುತ್ತಾರೆ. ಪ್ರಿನ್ಸಿಪಾಲ ಆಡಳಿತ ಮಂಡಳಿ ಜೊತೆ ಸೇರಿ ಚರ್ಚಿಸಿ ಆ ವಿದ್ಯಾರ್ಥಿಗೆ ಮೂಹರ್ತ ಫಿಕ್ಸ್ ಆಗಿರುತ್ತದೆ. ಪರಿಣಾಮ ಪ್ರಥಮ ಪಿಯುಸಿಯಲ್ಲಿ ಅವರು ಫೇಲ್.  ನಂತರ ಶುರುವಾಗುವುದೇ ಸಪ್ಪ್ಲಿಮೆಂಟರಿ ಎನ್ನುವ ನಾಟಕ .  ವಿದ್ಯಾರ್ಥಿಯ ಪೋಷಕರು ವಿದ್ಯಾರ್ಥಿಯು ತಲೆ ಕೆಡಿಸಿಕೊಂಡು ಓದಿದರು ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಪುನಃ ಫೇಲ್. ಯಾಕೆಂದರೆ ಆ ವಿದ್ಯಾರ್ಥಿಯು ಅವರಿಗೆ ಬೇಡವಾಗಿರುತ್ತಾನೆ . ಅಲ್ಲಿಗೆ ಆ ವಿದ್ಯಾರ್ಥಿಯ ಭವಿಷಕ್ಕೆ ಎಳ್ಳು ನೀರು ಬಿಟ್ಟಾಗಿರುತ್ತದೆ . ಇತ್ತ ಪಾಸಾದ ವಿದ್ಯಾರ್ಥಿಗಳನ್ನು ದ್ವಿತೀಯ ಪಿಯುಸಿಯಲ್ಲಿ ನಿಲ್ಲಕ್ಕೂ, ಕೂರಕ್ಕೂ ಬಿಡದೆ, ಪುರುಸೊತ್ತಿಲ್ಲದೆ ಪಾಠ ಮಾಡಿ ಅವರನ್ನು ಪರೀಕ್ಷೆಗೆ ತಯಾರು ಮಾಡುತ್ತಾರೆ . ಇದೇ ಕೆಲಸವನ್ನು ಮೊದಲನೇ ವರ್ಷ ಮಾಡಿದಿದ್ದರೆ ಇವರ ಗಂಟೇನು ಹೋಗುತ್ತಿತ್ತು ಎನ್ನುವುದು ತಿಳಿದವರ ಪ್ರಶ್ನೆಯಾಗಿದೆ. ವಿದ್ಯೆಯನ್ನ ಉದ್ಯಮವಾಗಿಸಿ ಕೊಂಡ ಖಾಸಗಿ ವಿದ್ಯಾ ಸಂಸ್ಥೆಗಳ ಮೇಲೆ ಇನ್ನಾದರೂ ಸಂಬಂಧ ಪಟ್ಟ ಇಲಾಖೆ, ಅಧಿಕಾರಿಗಳು ಗಮನ ಹರಿಸಿದಲ್ಲಿ ಶಿಕ್ಷಣ ಕೇತ್ರಕ್ಕೆ ಒಳ್ಳೆದಾಗಲಿದೆ ಎಂದು ಹಲವರ ಆಶಯ.

Please follow and like us:
0
http://bp9news.com/wp-content/uploads/2018/05/collage-2-44.jpghttp://bp9news.com/wp-content/uploads/2018/05/collage-2-44-150x150.jpgBP9 Bureauಅಂಕಣಕೊಡಗುಪ್ರಮುಖ  ಬೆಂಗಳೂರು : ಇತ್ತೀಚೆಗೆ ನಾಯಿಕೊಡೆಗಳಂತೆ ಎಲ್ಲೆಂದರಲ್ಲಿ ತಲೆ ಎತ್ತುತ್ತಿರುವ ಖಾಸಗಿ ವಿದ್ಯಾಸಂಸ್ಥೆಗಳು ಒಂದು ಕಡೆಯಾದರೆ ,ಅದನ್ನೇ ಒಂದು ವರ್ಗದ ಜನರು ವ್ಯಾಪಾರೀಕರಣಕ್ಕೆ ತೊಡಗಿಸಿಕೊಂಡಿರುವುದು ದುರಂತವೇ ಸರಿ. ಕೆಲವರು ಅದರಲ್ಲೂ ಪದವಿ ಪೂರ್ವ ವಿದ್ಯಾ ಸಂಸ್ಥೆಯನ್ನು ಹೊಂದಿರುವವರಂತೂ, ತಮ್ಮ ಸಂಸ್ಥೆಯಲ್ಲಿ  ದ್ವಿತೀಯ ಪಿಯುಸಿ ತರಗತಿಯಲ್ಲಿ ನೂರಕ್ಕೆ ನೂರು ಶೇಕಡಾ ಅಂಕ  ತೆಗೆದು  ತೇರ್ಗಡೆಯಾಗಬೇಕೆಂದು ಬಯಸುವ ಕಾಲೇಜುಗಳೇ ಹೆಚ್ಚು . ಆದರೆ ಇದರಲ್ಲೇನು ವಿಶೇಷವಿದೆಯೆಂದು ಕೇಳುತ್ತೀರಾ .ಇಲ್ಲೇ ಇರುವುದು ಅದರ ಒಳಮರ್ಮ.ನಿಮ್ಮ ಮಕ್ಕಳು...Kannada News Portal