ಮಡಿಕೇರಿ  : ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ವಾಮಮಾರ್ಗದಲ್ಲಿ ಗೆಲುವು ಸಾಧಿಸಿದ್ದು, ಅಭಿವೃದ್ಧಿ ಪರ ಚಿಂತನೆ ಇಲ್ಲದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರಿಗೆ ಹಣ ಹಂಚಿ ಗೆಲ್ಲುವುದಕ್ಕಷ್ಟೆ ತಿಳಿದಿದೆ ಎಂದು ಸೋತ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಪ್ರಾಮಾಣಿಕವಾಗಿ ಮತ ಕೇಳಿದ್ದು, ನನಗೆ ಬಂದಿರುವ ಮತಗಳು ಪ್ರಾಮಾಣಿಕ ಮತಗಳೆಂದು ಸಮರ್ಥಿಸಿಕೊಂಡರು. ಅಪ್ಪಚ್ಚು ರಂಜನ್ ಅವರದ್ದು, ಜನಮತದ ಗೆಲುವಲ್ಲ, ಹಣದ ಗೆಲುವೆಂದು ಟೀಕಿಸಿದ ಅವರು, ಅಧಿಕಾರಿಗಳು ಹಾಗೂ ಪೊಲೀಸರು ಬಿಜೆಪಿ ಏಜೆಂಟರಂತೆ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಹಣ ಹಂಚಿ ಜಯಗಳಿಸುವ ಮೂಲಕ ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತಂದಿದೆ. ಕ್ಷೇತ್ರದ ಕೆಲವು ಎಸ್ಟೇಟ್‍ಗಳ ಕೆಲವು ಕಾರ್ಮಿಕರು ಮತದಾನ ಮಾಡದಂತೆ ಬಿಜೆಪಿ ಕಾರ್ಯಕರ್ತರು ತಡೆದಿದ್ದಾರೆ. ಕಾಂಗ್ರೆಸ್‍ಗೆ ನ್ಯಾಯ ಯುತವಾಗಿ ಬರಬೇಕಾಗಿದ್ದ ಜನಸಾಮಾನ್ಯರ ಮತಗಳನ್ನು ಚಲಾವಣೆ ಆಗದಂತೆ ನೋಡಿಕೊಳ್ಳಲಾಗಿದೆ. ನಾನು ಹೆಬ್ಬಾಲೆ ಕ್ಷೇತ್ರದಲ್ಲಿ ಸುಮಾರು 12 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು ಅಲ್ಲಿನ ಮತದಾರರು ನನಗೆ ಮತ ನೀಡದೆ ರಾತೋರಾತ್ರಿ ಹಂಚಿಕೆಯಾದ ಹೆಂಡಕ್ಕಾಗಿ ಮತದಾನ ಮಾಡಿದ್ದಾರೆ ಎಂದು ಚಂದ್ರಕಲಾ ಆರೋಪಿಸಿದರು.

ಜೀವಿಜಯಗೆ ಕಾಂಗ್ರೆಸ್ ಟಿಕೆಟ್ !

ಬಿಜೆಪಿಯನ್ನು ಸೋಲಿಸಲೇಬೇಕೆಂದು ಜೆಡಿಎಸ್ ಅಭ್ಯರ್ಥಿ ಬಿ.ಎ.ಜೀವಿಜಯ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಕೆಪಿಸಿಸಿ ಮುಖಂಡರು ನಿರ್ಧರಿಸಿದ್ದರು. ಈ ಬಗ್ಗೆ ನಾನು ಖುದ್ದು ಜೀವಿಜಯ ಅವರ ಮನೆಗೆ ತೆರಳಿ ಪ್ರಸ್ತಾಪಿಸಿದರು ಇದನ್ನು ನಿರ್ಲಕ್ಷಿಸಿದ ಜೀವಿಜಯ ಅವರು ಸ್ವಪ್ರತಿಷ್ಠೆಗಾಗಿ ಜೆಡಿಎಸ್‍ನಿಂದ ನಾನು ಈಗಾಗಲೆ ಗೆದ್ದೇ ಬಿಟ್ಟಿದ್ದೇನೆಂದು ಬೀಗಿದರು. ಅವರು ಏನಾದರು ಕಾಂಗ್ರೆಸ್ ಮೂಲಕ ಸ್ಪರ್ಧಿಸಿದ್ದರೆ ಶಾಸಕರಾಗುತ್ತಿದ್ದರು. ಅಲ್ಲದೆ, ನನಗೂ ಒಂದು ಅಧಿಕಾರ ಸಿಗುತ್ತಿತ್ತು. ಆದರೆ, ಒಕ್ಕಲಿಗ ಸಮುದಾಯದ ಇಬ್ಬರೂ ಸೋತಿರುವುದು ನನಗೆ ದುಃಖ ತಂದಿದೆ ಎಂದು ಚಂದ್ರಕಲಾ ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಟೈಂಪಾಸ್ ಹಾಗೂ ವೀಕ್‍ಎಂಡ್ ನಾಯಕರುಗಳಿದ್ದಾರೆ. ಇವರುಗಳಿಂದ ಪಕ್ಷದಲ್ಲಿ ಗೊಂದಲ ಉಂಟಾಗಿದ್ದು, ಫಲಿತಾಂಶದಲ್ಲಿ ವ್ಯತ್ಯಾಸವಾಗಿದೆ. ಇವರ ವಿರುದ್ಧ ರಾಷ್ಟ್ರೀಯ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರಿಗೆ ದೂರು ನೀಡಿದ್ದೇನೆ. ನನ್ನ ವಿರುದ್ಧ ಕೆಲಸ ಮಾಡಿದ ಕಾಂಗ್ರೆಸ್ಸಿಗರಿಗೆ ಎಲ್ಲಿ ಪಾಠ ಕಲಿಸಬೇಕೋ ಅಲ್ಲಿ ಪಾಠ ಕಲಿಸುತ್ತೇನೆ ಎಂದು ಚಂದ್ರಕಲಾ ಸ್ಪಷ್ಟಪಡಿಸಿದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಶುದ್ಧವಾಗಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮಹಿಳಾ ಅಭ್ಯರ್ಥಿಯೆನ್ನುವ ಕಾರಣಕ್ಕಾಗಿ ಕೆಲವರು ಎಲ್ಲಾ ರೀತಿಯಲ್ಲಿ ನನಗೆ ಅಸಹಕಾರ ನೀಡಿದ್ದಾರೆ ಎಂದು ಚಂದ್ರಕಲಾ ಬೇಸರ ವ್ಯಕ್ತಪಡಿಸಿದರು.

ಆಣೆ ಮಾಡಲು ಸಿದ್ಧ

ವಕೀಲರೊಬ್ಬರು ನಾನು ಬಿಜೆಪಿಯಿಂದ 2 ಕೋಟಿ ರೂ. ಪಡೆದಿದ್ದೇನೆ ಮತ್ತು ನಾನು ಲಿಂಗಾಯಿತ ವಿರೋಧಿ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಅಪಪ್ರಚಾರ ಮಾಡಿದ್ದು, ಇವರ ವಿರುದ್ಧ ದೂರು ನೀಡಿರುವುದಾಗಿ ಚಂದ್ರಕಲಾ ಇದೇ ಸಂದರ್ಭ ತಿಳಿಸಿದರು. ಇವರ ಅಪಪ್ರಚಾರವು ನನ್ನ ಸೋಲಿಗೆ ಕಾರಣವೆಂದು ಅಭಿಪ್ರಾಯಪಟ್ಟ ಅವರು, ಅಪಪ್ರಚಾರ ಮಾಡಿದ ವಕೀಲ ಯಾವುದೇ ದೇವಾಲಯಕ್ಕೆ ಬಂದು ಪ್ರಮಾಣ ಮಾಡಲಿ, ನಾನು ಕೂಡ ಪ್ರಮಾಣ ಮಾಡಲು ಸಿದ್ಧಳಿದ್ದೇನೆ ಎಂದು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ತಾಹಿರಾ ಹಫೀಜ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ ಹಾಗೂ ಎಸ್‍ಟಿ ಘಟಕದ ಪ್ರಮುಖರಾದ ವಸಂತ ಉಪಸ್ಥಿತರಿದ್ದರು.

 

Please follow and like us:
0
http://bp9news.com/wp-content/uploads/2018/05/Z-K.P.CHANDRAKALA-1.jpghttp://bp9news.com/wp-content/uploads/2018/05/Z-K.P.CHANDRAKALA-1-150x150.jpgBP9 Bureauಕೊಡಗುರಾಜಕೀಯಮಡಿಕೇರಿ  : ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ವಾಮಮಾರ್ಗದಲ್ಲಿ ಗೆಲುವು ಸಾಧಿಸಿದ್ದು, ಅಭಿವೃದ್ಧಿ ಪರ ಚಿಂತನೆ ಇಲ್ಲದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರಿಗೆ ಹಣ ಹಂಚಿ ಗೆಲ್ಲುವುದಕ್ಕಷ್ಟೆ ತಿಳಿದಿದೆ ಎಂದು ಸೋತ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಪ್ರಾಮಾಣಿಕವಾಗಿ ಮತ ಕೇಳಿದ್ದು, ನನಗೆ ಬಂದಿರುವ ಮತಗಳು ಪ್ರಾಮಾಣಿಕ ಮತಗಳೆಂದು ಸಮರ್ಥಿಸಿಕೊಂಡರು. ಅಪ್ಪಚ್ಚು ರಂಜನ್ ಅವರದ್ದು, ಜನಮತದ ಗೆಲುವಲ್ಲ, ಹಣದ...Kannada News Portal