ಮಡಿಕೇರಿ: ಮೃಗಶಿರ ಮಳೆಯ ಆರ್ಭಟದಿಂದ ಕೊಡಗು ಜಿಲ್ಲೆ ತಲ್ಲಣಗೊಂಡಿದೆ. ಭಾರೀ ಗಾಳಿ ಮಳೆಗೆ ಸಾಲು ಸಾಲು ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಮರದ ಕೊಂಬೆ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆಯೂ ನಡೆದಿದೆ.

ಶುಕ್ರವಾರ ರಾತ್ರಿಯಿಂದ ತೀವ್ರತೆಯನ್ನು ಪಡೆದುಕೊಂಡ ಗಾಳಿ ಮಳೆಯಿಂದ ಮಡಿಕೇರಿ ಹಾಗೂ ಸೋಮವಾರಪೇಟೆ ತಾಲ್ಲೂಕಿನಲ್ಲಿ ಹೆಚ್ಚಿನ ಹಾನಿ ಉಂಟಾಗಿದೆ. ಮಡಿಕೇರಿ ನಗರದ ವಿವಿಧ ಬಡಾವಣೆಗಳಲ್ಲಿ ಬರೆಗಳು ಕುಸಿದಿವೆ. ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಕೆಸರು ತುಂಬಿದ ಹಾದಿಯಲ್ಲಿ ವಾಹನ ಚಾಲನೆ ದುಸ್ತರವಾಗಿದೆ. ಗೌಳಿಬೀದಿ ಸೇರಿದಂತೆ ಕೆಲವು ಭಾಗಗಳಲ್ಲಿ ಅಪೂರ್ಣಗೊಂಡ ಯುಜಿಡಿ ಕಾಮಗಾರಿಯಿಂದ ರಸ್ತೆ ಕುಸಿತ ಉಂಟಾಗಿದೆ. ಕೊಹಿನೂರ್ ರಸ್ತೆ ಬಳಿಯ ಸೇತುವೆಯಲ್ಲಿ ದೊಡ್ಡ ಹೊಂಡವಾಗಿದ್ದು, ಅಪಾಯದ ಸ್ಥಿತಿ ಕಂಡು ಬಂದಿದೆ. ಗುಡ್ಡ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡಿರುವ ನಿವಾಸಿಗಳು ಆತಂಕವನ್ನು ಎದುರಿಸುತ್ತಿದ್ದಾರೆ. ಮುಂಜಾಗೃತಾ ಕ್ರಮಗಳ ಬಗ್ಗೆ ನಗರಸಭಾ ಅಧಿಕಾರಿಗಳು ಈಗಾಗಲೇ ಎತ್ತರ ಪ್ರದೇಶದ ನಿವಾಸಿಗಳಿಗೆ ಸಲಹೆ ನೀಡಿದ್ದಾರೆ.

ಉಳಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ಮಹಾಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾಗಮಂಡಲ, ಕಾಟಕೇರಿ, ಬಿಳಿಗೇರಿ, ಮಾದಾಪುರ ಸೇರಿದಂತೆ ವಿವಿಧ ಭಾಗಗಳಲ್ಲಿ ಮುಖ್ಯ ರಸ್ತೆಯ ಮೇಲೆ ಬೃಹತ್ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸಿದ್ದಾಪುರದಲ್ಲಿ ಬೆಳೆಗಾರರಾದ ಪಿ.ಸಿ.ಅಹಮ್ಮದ್ ಕುಟ್ಟಿ ಹಾಜಿ(68) ಅವರು ಮರದ ಕೊಂಬೆ ಬಿದ್ದು ಮೃತಪಟ್ಟಿದ್ದಾರೆ.  ಸುಂಟಿಕೊಪ್ಪ ಹೋಬಳಿ ವಿಭಾಗದಲ್ಲಿ ಮರಗಳು ಉರುಳಿ ಬಿದ್ದು ಸಂಚಾರಕ್ಕೆ ತೊಡಕಾಗಿದೆ. ವಿದ್ಯುತ್ ಕಂಬಗಳು ನೆಲಕಚ್ಚಿದ್ದು, ಗ್ರಾಮೀಣ ಪ್ರದೇಶ ಕಾರ್ಗತ್ತಲಿನಲ್ಲಿದೆ.

ಹೊಸತೋಟ, ಕಾಜೂರು, ಕೋವರ್‍ಕೊಲ್ಲಿ ಬಳಿಯೂ ಮರಗಳು ರಸ್ತೆಗುರುಳಿವೆ. ಚಳಿ ಗಾಳಿಯಿಂದ ಪ್ರಾಣಿ ಪಕ್ಷಿಗಳು ಕೂಡ ಕಷ್ಟ ಅನುಭವಿಸುತ್ತಿದ್ದು, ಕಾರ್ಮಿಕರು ತೋಟಗಳಲ್ಲಿ ಕಾರ್ಯನಿರ್ವಹಿಸಲಾಗದ ಪರಿಸ್ಥಿತಿ ಇದೆ. ಆದರೆ ಅತಿ ಹೆಚ್ಚು ಮಳೆಯಾಗುವ ಭಾಗಮಂಡಲ ಹಾಗೂ ತಲಕಾವೇರಿ ಪ್ರದೇಶದಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಯಥಾಸ್ಥಿತಿ ಇದೆ.

ಶನಿವಾರಸಂತೆ:  ಭಾರೀ ಗಾಳಿಗೆ ಮರದ ರೆಂಬೆಯೊಂದು ಬೈಕ್ ಸವಾರನ ಮೇಲೆ ಬಿದ್ದು ಗಂಭೀರ ಗಾಯಗೊಂಡ ಘಟನೆ ಗುಡುಗಳಲೆಯಲ್ಲಿ ನಡೆದಿದೆ. ಹಿತ್ತಲಕೇರಿ ಗ್ರಾಮದ ಗುಂಡಪ್ಪ ಹಾಗೂ ಗೊಪಾಲಪುರದ ಬಾಲು ಅವರುಗಳು ಬೈಕ್‍ನಲ್ಲಿ ಶನಿವಾರಸಂತೆಗೆ ಬಂದು ಮರಳಿ ಹಿತ್ತಲಕೇರಿಗೆ ಹೋಗುವಾಗ ಶನಿವಾರಸಂತೆ-ಸೋಮವಾರಪೇಟೆ ಮುಖ್ಯ ರಸ್ತೆಯ ಗುಡುಗಳಲೆಯಲ್ಲಿ   ಒಣಗಿ ನಿಂತಿದ್ದ ಮರದ ರೆಂಬೆಯೊಂದು ಇವರ ಮೇಲೆ ಬಿದ್ದಿದೆ.

ಪರಿಣಾಮವಾಗಿ ಬೈಕ್ ಚಲಾಯಿಸುತ್ತಿದ್ದ ಗುಂಡಪ್ಪ ಅವರ ತಲೆ, ಕೈ ಹಾಗೂ ಇನ್ನಿತರ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ಹಿಂಬದಿ ಸವಾರ ಬಾಲು ಅವರೂ ಗಾಯಗೊಂಡಿದ್ದಾರೆ.ಗಾಯಾಳುಗಳಿಗೆ   ಶನಿವಾರಸಂತೆ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದೊಯ್ಯಲಾಗಿದೆ.

ಶನಿವಾರಸಂತೆಯಿಂದ ಸೋಮವಾರಪೇಟೆ ಹಾಗೂ ಕುಶಾಲನಗರ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಒಣಗಿ ನಿಂತಿರುವ ಮರಗಳನ್ನು ತೆರವುಗೊಳಿಸುವಂತೆ ಅನೇಕ ಬಾರಿ ಸ್ಥಳೀಯ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ,   ಮೇಲಧಿಕಾರಿಗಳಿಂದ ಅದೇಶ ಬರಬೇಕು ಎಂಬ ನೆಪ ಹೇಳಿಕೊಂಡೇ ಅರಣ್ಯ ಇಲಾಖಾ ಅಧಿಕಾರಿಗಳು ದಿನತಳ್ಳುತ್ತಿರುವುದರಿಂದ ಈ ರೀತಿಯ ಅವಘಡಗಳು ಮಳೆಗಾಲದ ಆರಂಭದಲ್ಲೇ ನಡೆಯುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

ವಾರದ ಹಿಂದೆ ಜಾಗೆನಹಳ್ಳಿಯಲ್ಲೂ ಒಣ ಮರವೊಂದು ಗಾಳಿಗೆ ಮುಖ್ಯ ರಸ್ತೆಗೆ ಬಿದ್ದುದರಿಂದ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿ ಅನೇಕರಿಗೆ ತೊಂದರೆಯಾಗಿತ್ತು. ಇನ್ನಾದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ರಸ್ತೆ ಬದಿಯ ಒಣಗಿ ನಿಂತಿರುವ ಮರಗಳನ್ನು ಆದಷ್ಟು ಬೇಗ ತೆರವುಗೊಳಿಸಲು ಮುಂದಾಗಬೇಕು. ಇಲ್ಲವಾದಲ್ಲಿ   ಮುಂದಾಗುವ ದೊಡ್ಡ ಅನಾಹುತಗಳಿಗೆ   ಅರಣ್ಯ ಇಲಾಖೆ ಹೊಣೆಯಾಗಬೇಕಾಗುತ್ತದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರಸಂತೆ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಯಿಂದ ಜಿಟಿಜಿಟಿ ಮಳೆಯಾಗುತ್ತಿದ್ದು, ರೈತರಿಗೆ ಹೊಲ, ಗದ್ದೆಯಲ್ಲಿ ಕೆಲಸ ಮಾಡಲು ಸಾಧ್ಯವಾಗದಂತಾಗಿದೆ. ಈ ವರ್ಷ  ಶನಿವಾರಸಂತೆ ಹೋಬಳಿಯ ಆಲೂರುಸಿದ್ದಾಪುರ, ಮಾಲಂಬಿ, ಕಂತೆಬಸವನಹಳ್ಳಿ, ಕಣಿವೆಬಸವನಹಳ್ಳಿ, ಮುಳ್ಳೂರು ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ಈ ವ್ಯಾಪ್ತಿಯಲ್ಲಿ ಏ. 15 ರಿಂದ ಜೂನ್ 9 ರ ವರೆಗೆ ಒಟ್ಟು 408.94 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 318 ಮಿ.ಮೀ ಮಳೆಯಾಗಿತ್ತು. ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗ್ಗೆ 6 ಗಂಟೆಯ ತನಕ ಈ ವ್ಯಾಪ್ತಿಯಲ್ಲಿ ಸರಾಸರಿ 1.25 ಇಂಚು ಮಳೆಯಾಗಿದೆ.

ಶನಿವಾರಸಂತೆ ವ್ಯಾಪ್ತಿಯ ನಿಡ್ತ, ದುಂಡಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಈ ವರ್ಷ ಮಳೆಯ ಪ್ರಮಾಣ ಕುಸಿದಿದೆ. ಆದರೆ ಶುಕ್ರವಾರ ಬೆಳಗಿನಿಂದ   ಈ ವ್ಯಾಪ್ತಿಯಲ್ಲಿ ತುಂತುರು ಮಳೆಯಾಗುತ್ತಿದೆ. ಒಂದೆ ಸಮನೆ ಸುರಿಯುತ್ತಿರುವ  ಮಳೆಗೆ ಶನಿವಾರಸಂತೆ ಪಟ್ಟಣದ ಮುಖ್ಯರಸ್ತೆ ಬಳಿಯ ಪಶುವೈದ್ಯ ಆಸ್ಪತ್ರೆಗೆ ಸೇರಿದ ತಡೆಗೋಡೆ ಸಂಪೂರ್ಣವಾಗಿ ಕುಸಿದಿದೆ.

ರಸ್ತೆ ಬದಿಯ   ಚರಂಡಿ ಮೇಲೆ ಗೋಡೆ ಕುಸಿದಿರುವುದರಿಂದ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ತುಂತುರು ಮಳೆಯಿಂದಾಗಿ  ಸಂತೆ ದಿನವಾಗಿರುವ ಶನಿವಾರ ಸಂತೆ ಮಾರುಕಟ್ಟೆಗೆ ಬಂದಿದ್ದ ವ್ಯಾಪಾರಿಗಳು ಮತ್ತು ಗ್ರಾಹಕರು ಪರದಾಡುವಂತಾಯಿತು.

ರೈತರಲ್ಲಿ ಸಂತಸ

ಜಿಲ್ಲೆಯಲ್ಲಿ ಈ ಬಾರಿ ಸಕಾಲದಲ್ಲಿ ಮುಂಗಾರು ಆರಂಭಗೊಂಡಿದೆ. ಸಾಮಾನ್ಯವಾಗಿ ನೈಋತ್ಯ ಭಾಗಕ್ಕೆ ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರವೇಶ ಮಾಡಿ, ಕೊಡಗು ಜಿಲ್ಲೆಯಲ್ಲಿ ಜೂನ್ ತಿಂಗಳ ಮೂರನೇ ಅಥವಾ ಕೊನೆ ವಾರದಲ್ಲಿ ಚುರುಕು ಪಡೆದುಕೊಳ್ಳುತ್ತಿದ್ದ ಮುಂಗಾರು, ಈ ಬಾರಿ ಸಕಾಲದಲ್ಲಿ ಆರಂಭವಾಗಿರುವುದು ರೈತರಲ್ಲಿ ಸಂತಸ ಹೆಚ್ಚಿಸಿದೆ.

ಕಳೆದ 30-35 ವರ್ಷಗಳಲ್ಲಿ ಅತ್ಯಧಿಕ ಮಳೆಯಾಗಿ ದಾಖಲೆ ಸೇರಿದ್ದು 2007 ಮತ್ತು 2013ರ ಮುಂಗಾರು ಮಳೆ. 2013ರ ಜೂನ್ ಅಂತ್ಯ ಹಾಗೂ ಜುಲೈ ತಿಂಗಳಲ್ಲಿ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಕಾವೇರಿ ಕಣಿವೆಯ ಜಲಾಶಯಗಳು ಭರ್ತಿಯಾಗಿದ್ದವು. ಈ ಬಾರಿ ಜೂನ್ ಮೊದಲ ವಾರದಲ್ಲಿಯೇ ಮುಂಗಾರು ಚುರುಕು ಪಡೆದಿರುವುದರಿಂದ ನದಿ, ತೊರೆ, ಹಳ್ಳಕೊಳ್ಳ, ಜಲಪಾತಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ.

ಈ ಬಾರಿ ವಾಡಿಕೆಯಂತೆ ಮಾರ್ಚ್ ಏಪ್ರಿಲ್, ಮೇ ತಿಂಗಳಲ್ಲಿ ಮಳೆಯಾದ್ದರಿಂದ ಕುಡಿಯುವ ನೀರಿಗೆ ಅಷ್ಟಾಗಿ ತೊಂದರೆ ಬರಲಿಲ್ಲ. ಸದ್ಯ ಸಕಾಲದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆ ಗರಿಗೆದರಿದೆ.

ಜಿಲ್ಲೆಯಲ್ಲಿ ಜನವರಿಯಿಂದ ಮೇ ಅಂತ್ಯದ ವರೆಗೆ ವಾಡಿಕೆ ಮಳೆಯ ಪ್ರಮಾಣವು 245.50 ಮಿ.ಮೀ.ಗಳಾಗಿದ್ದು, 2018 ರ ಜನವರಿಯಿಂದ ಇಲ್ಲಿಯ ವರೆಗೆ 423.68 ಮಿ.ಮೀ. ಮಳೆಯಾಗಿದೆ, 2017 ರ ಇದೇ ಅವಧಿಯಲ್ಲಿ 305.04 ಮಿ.ಮೀ, 2016 ರ ಇದೇ ಅವಧಿಯಲ್ಲಿ 158.20 ಮಿ.ಮೀ.ಮಳೆಯಾಗಿರುವುದನ್ನು ಗಮನಿಸಬಹುದಾಗಿದೆ.

ತಾಲ್ಲೂಕುವಾರು ಗಮನಿಸಿದಾಗ ಮಡಿಕೇರಿ ತಾಲ್ಲೂಕಿನಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 253.60ಮಿ.ಮೀ.ಗಳಾಗಿದ್ದು, 2018ರ ಜನವರಿಯಿಂದ ಇಲ್ಲಿಯವರೆಗೆ 614.74 ಮಿ.ಮೀ.ಮಳೆಯಾಗಿದೆ. 2017ರ ಜನವರಿಯಿಂದ ಇಲ್ಲಿಯವರೆಗೆ 344.29 ಮಿ.ಮೀ.ಮಳೆಯಾಗಿದ್ದು, 2016ರ ಇದೇ ಅವಧಿಯಲ್ಲಿ 234.75 ಮಿ.ಮೀ. ಮಳೆಯಾಗಿತ್ತು.

ಸೋಮವಾರಪೇಟೆ ತಾಲ್ಲೂಕಿನಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 211.30 ಮಿ.ಮೀ. ಗಳಾಗಿದ್ದು, 2018 ರ ಜನವರಿಯಿಂದ ಇಲ್ಲಿಯವರೆಗೆ 343.70 ಮಿ.ಮೀ ರಷ್ಟು ಮಳೆಯಾಗಿದೆ. 2017 ರ ಇದೇ ಅವಧಿಯಲ್ಲಿ 266.25 ಮಿ.ಮೀ.ಮಳೆಯಾಗಿತ್ತು. ಹಾಗೆಯೇ 2016 ರ ಇದೇ ಅವಧಿಯಲ್ಲಿ 122.33 ಮಿ.ಮೀ. ಮಳೆಯಾಗಿತ್ತು.

ವಿರಾಜಪೇಟೆ ತಾಲ್ಲೂಕಿನಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 271.60 ಮಿ.ಮೀ.ಗಳಾಗಿದ್ದು, 2018ರ ಜನವರಿಯಿಂದ ಇಲ್ಲಿಯವರೆಗೆ 312.60 ಮಿ.ಮೀ.ಮಳೆಯಾಗಿದ್ದು, 2017ರ ಇದೇ ಅವಧಿಯಲ್ಲಿ 304.56 ಮಿ.ಮೀ. ಮಳೆಯಾಗಿದ್ದು, 2016ರ ಇದೇ ಅವಧಿಯಲ್ಲಿ 117.55 ಮಿ.ಮೀ. ಮಳೆಯಾಗಿತ್ತು.

ಒಟ್ಟಾರೆ ಜಿಲ್ಲೆಯಲ್ಲಿ ಮೇ ಅಂತ್ಯದ ವರೆಗೆ ಮಳೆಯ ಪ್ರಮಾಣ ಸರಾಸರಿ ವಾಡಿಕೆಗಿಂತ 170 ಮಿ.ಮೀ.ಗೂ ಹೆಚ್ಚು ಮಳೆಯಾಗಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಹವಾಮಾನ ವಿಜ್ಞಾನಿಗಳ ಪ್ರಕಾರ ಈಗಾಗಲೇ ನೈಋತ್ಯ ಭಾಗದಲ್ಲಿ ಮಳೆ ಮುಂದುವರೆಯುವ ಲಕ್ಷಣ ಇರುವುದರಿಂದ, ಕೊಡಗು ಜಿಲ್ಲೆಯಲ್ಲಿ ಇನ್ನೂ ಎರಡು ಮೂರು ದಿನ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

 

Please follow and like us:
0
http://bp9news.com/wp-content/uploads/2018/06/Z-BHAGAMANDALA-1-1.jpghttp://bp9news.com/wp-content/uploads/2018/06/Z-BHAGAMANDALA-1-1-150x150.jpgBP9 Bureauಕೊಡಗುಮಡಿಕೇರಿ: ಮೃಗಶಿರ ಮಳೆಯ ಆರ್ಭಟದಿಂದ ಕೊಡಗು ಜಿಲ್ಲೆ ತಲ್ಲಣಗೊಂಡಿದೆ. ಭಾರೀ ಗಾಳಿ ಮಳೆಗೆ ಸಾಲು ಸಾಲು ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಮರದ ಕೊಂಬೆ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆಯೂ ನಡೆದಿದೆ. ಶುಕ್ರವಾರ ರಾತ್ರಿಯಿಂದ ತೀವ್ರತೆಯನ್ನು ಪಡೆದುಕೊಂಡ ಗಾಳಿ ಮಳೆಯಿಂದ ಮಡಿಕೇರಿ ಹಾಗೂ ಸೋಮವಾರಪೇಟೆ ತಾಲ್ಲೂಕಿನಲ್ಲಿ ಹೆಚ್ಚಿನ ಹಾನಿ ಉಂಟಾಗಿದೆ. ಮಡಿಕೇರಿ ನಗರದ ವಿವಿಧ ಬಡಾವಣೆಗಳಲ್ಲಿ ಬರೆಗಳು ಕುಸಿದಿವೆ. ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಕೆಸರು ತುಂಬಿದ ಹಾದಿಯಲ್ಲಿ ವಾಹನ ಚಾಲನೆ...Kannada News Portal