ಮಡಿಕೇರಿ:  ಬೆಳ್ತಂಗಡಿಯ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೀರಾಜಪೇಟೆ ತಾಲೂಕು ಘಟಕದ ಜಂಟಿ ಆಶ್ರಯದಲ್ಲಿ ಜೂ.15ರಂದು ಮಡಿಕೇರಿಯಲ್ಲಿ ಸಿರಿಧಾನ್ಯಗಳ ಆಹಾರ ಮೇಳ, ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೋಜನೆಯ ಮಡಿಕೇರಿ ವಲಯ ಮೇಲ್ವಿಚಾರಕ ಹೆಚ್. ಮುಕುಂದ ಅವರು, ಅಂದು ಬೆಳಗ್ಗೆ 8ಗಂಟೆಯಿಂದ ಸಂಜೆ 7ಗಂಟೆಯವರೆಗೆ ನಗರದ ಕಾವೇರಿ ಹಾಲ್‍ನಲ್ಲಿ ಮೇಳ ನಡೆಯಲಿದ್ದು, ಪೂರ್ವಾಹ್ನ 10ಗಂಟೆಗೆ ಯೋಜನೆಯ ಕೊಡಗು ಸುಳ್ಯ ನಿರ್ದೇಶಕ ಯೋಗೀಶ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದರು. ಮಡಿಕೇರಿ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜು, ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಬಾನಂಗಡ ಅರುಣ್, ಮಡಿಕೇರಿ ನಗರ ಠಾಣೆ ಉಪ ನಿರೀಕ್ಷಕ ಷಣ್ಮುಗಂ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಇಂದಿನ ಆಧುನಿಕ ಯುಗದಲ್ಲಿ ನಾವು ಸೇವಿಸುವ ಆಹಾರದಲ್ಲಿ ಮನುಷ್ಯನ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಲಭ್ಯವಾಗುತ್ತಿಲ್ಲ. ಇದರಿಂದ ಹಲವಾರು ಕಾಯಿಲೆಗಳಿಗೆ ನಾವು ತುತ್ತಾಗುತ್ತಿದ್ದು, ಇಂತಹ ಹಲವಾರು ಕಾಯಿಲೆಗಳನ್ನು ತಡೆಯವ ಶಕ್ತಿ ಸಿರಿ ಧಾನ್ಯಗಳಿಗೆ ಇದೆ ಎಂದು ಹೇಳಿದರು.

ಆದರೆ ಮಾಹಿತಿ ಕೊರತೆಯಿಂದಾಗಿ ಸಿರಿಧಾನ್ಯಗಳ ಬಳಕೆಯಾಗುತ್ತಿಲ್ಲ ಎಂದು ಹೇಳಿದ ಅವರು, ಗಾತ್ರದಲ್ಲಿ ಚಿಕ್ಕದಾದ ಏಕದಳ ಧಾನ್ಯಗಳಾದ ನವಣೆ, ಸಾವೆ, ಊದಲು, ಹಾರಕ, ಕೊರಲೆ, ಸಜ್ಜೆ,ಜೋಳ, ಬರಗು, ಮತ್ತು ರಾಗಿಯನ್ನು ಸಿರಿ ಧಾನ್ಯಗಳೆಂದು ಕರೆಯಲಾಗುತ್ತದೆ. ನಮ್ಮ ದೇಹಕ್ಕೆ ಬೇಕಾಗುವ ನಾರು, ಕಬ್ಬಿಣ, ಸುಣ್ಣ, ಪಿಷ್ಠ ಇತ್ಯಾದಿಗಳು ಎಲ್ಲಾ ಧಾನ್ಯಗಳಿಗಿಂತ ಹೆಚ್ಚಾಗಿ ಸಿರಿ ಧಾನ್ಯಗಳಲ್ಲಿ ಲಭ್ಯವಿದ್ದು, ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಿಸಲು ಹಾಗೂ ರಕ್ತದಲ್ಲಿನ ಕೊಲೆಸ್ಟ್ರಾಲ್ ಹಾಗೂ ಟ್ರೈಗ್ಲಿಸರೈಡ್‍ನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ವಿವರಿಸಿದರು.

ನವಣೆಯು ನರಗಳಿಗೆ ಶಕ್ತಿ, ಮನಸ್ಸಿಗೆ ದೃಢತೆ, ಆಥ್ರ್ರಾಡಿಸ್, ಪಾರ್ಕಿನ್‍ಸನ್, ಮೂರ್ಛೆ ರೋಗಗಳಿಂದ ಮುಕ್ತಿ ನೀಡಲಿದ್ದು, ಹಾರಕ ಸೇವೆನೆಯಿಂದ ರಕ್ತ ಶುದ್ಧಿ, ರಕ್ತ ಹೀನತೆ, ಪ್ರತಿರೋಧ ಶಕ್ತಿ, ಸಕ್ಕರೆ ಕಾಯಿಲೆ, ಮಲಬದ್ಧತೆ ಮತ್ತು ಉತ್ತಮ ನಿದ್ದೆಗೆ ಪರಿಹಾರವಾಗಿದೆ. ಊದಲುವಿನಿಂದ ಲಿವರ್, ಕಿಡ್ನಿ,ನಿರ್ನಾಳ ಗ್ರಥಿ, ಅರಶಿನ ಕಾಮಾಲೆ, ಕೊಲೆಸ್ಟ್ರಾಲ್‍ನಿಂದ ಪರಿಹಾರ ಕಂಡುಕೊಳ್ಳಬಹುದಾಗಿದ್ದು, ಸಾಮೆಯಿಂದ ಅಂಡಾಶಯ, ವೀರ್ಯಾಣು ಸಮಸ್ಯೆ, ಸಂತಾನ ಸಮಸ್ಯೆ ನಿವಾರಣೆಯಾಗಲಿದೆ. ಕೊರಲೆ ಸೇವನೆಯಿಂದ ಜೀರ್ಣಾಂಗ, ಬೊಜ್ಜು, ಆಥ್ರ್ರಾಡಿಸ್, ರಕ್ತದೊತ್ತಡಮ ಥೈರಾಯಿಡ್ ನಿವಾರಣೆಯಾಗುತ್ತದೆ ಎಂದು ಹೆಚ್.ಮುಕುಂದ ತಿಳಿಸಿದರು.

ಬರಗುವಿನಿಂದ ಚರ್ಮದ ಆರೋಗ್ಯ, ಮೂಳೆಗಳ ಬಲವರ್ಧನೆಯಾಗಲಿದ್ದು, ಜೋಳ ಸೇವಿಸುವುದರಿಂದ ಮಧುಮೇಹ(ಟೈಪ್ 2), ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಪಚನ ಕ್ರಿಯೆಗೆ ಸಹಕಾರಿಯಾಗಲಿದೆ, ರಾಗಿ  ಹಿಮೋಗ್ಲೋಬಿನ್  ಹೆಚ್ಚಳ, ಮೂಳೆ ಗಟ್ಟಿಗೊಳ್ಳಲು, ಕೊಬ್ಬಿನಾಂಶ ಕರಗಿಸಲು ಉತ್ತಮ ಆಹಾರವಾಗಿದ್ದು,ಸಜ್ಜೆ ಸೇವನೆಯಿಂದ ಮಿನೋಪಾಸ್ ಸಮಸ್ಯೆ ಹಾಗೂ ತೂಕ ಇಳಿಸಲು ಸಹಕಾರಿಯಾಗಿದೆ. ಇವುಗಳಲ್ಲಿ ನಾರು ಮಾತ್ರವಲ್ಲದೆ, ವೈವಿಧ್ಯಮಯ ವಿಟಾಮಿನ್‍ಗಳು, ಖನಿಜಾಂಶಗಳಿದ್ದು, ಅನೇಕ ರೋಗಗಳಿಗೆ ಔಷಧಿಯೂ ಆಗಿವೆ ಎಂದು ಹೇಳಿದರು.

ಸಂಸ್ಕರಣೆ ಹಾಗೂ ಮೌಲ್ಯವರ್ಧನೆಯ ಕೊರತೆಯಿಂದ ಕಣ್ಮರೆಯಾಗಿದ್ದ ಈ ಧಾನ್ಯಗಳ ಬಳಕೆಯನ್ನು ಮತ್ತೆ ಜನರಿಗೆ ಪರಿಚಯಿಸಿ ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸುವ ಉದ್ದೇಶದಿಂದ ಸಿರಿಧಾನ್ಯ ಆಹಾರ ಮೇಳವನ್ನು ಆಯೋಜಿಸಲಾಗುತ್ತಿದ್ದು, ಮೇಳದಲ್ಲಿ ಸಿರಿ ಧಾನ್ಯಗಳ ಉಪ್ಪಿಟ್ಟು, ಇಡ್ಲಿ, ಪಲಾವ್, ಬಿಸಿಬೇಳೆ ಬಾತ್, ಕೇಸರಿಬಾತ್, ಪಾಯಸ, ಮೊಸರನ್ನ, ಸಜ್ಜೆ ಹಾಲು, ರಾಗಿಹಾಲು, ದೋಸೆ, ಚಕ್ಕುಲಿ, ಬಿರಿಯಾನಿ, ಸಿರಿಧಾನ್ಯ ಬರ್ಫಿ, ಲಾಡು ಹಾಗೂ ಇನ್ನಿತರ ಕರಿದ ತಿಂಡಿಗಳ ಪ್ರದರ್ಶನ, ಮತ್ತು ಸಿರಿಧಾನ್ಯಗಳ ಉತ್ಪನ್ನಗಳು ಇರುತ್ತವೆ. ಅಲ್ಲದೆ ಸಿರಿಧಾನ್ಯಗಳ ಆಹಾರ ತಯಾರಿಕಾ ಪ್ರಾತ್ಯಕ್ಷಿಕೆಯೂ ಇರುತ್ತದೆ ಎಂದು ಹೆಚ್.ಮುಕುಂದ ಅವರು ಮಾಹಿತಿ ನೀಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಉತ್ಪಾದಿಸುವ ಸಿರಿ ಧಾನ್ಯಗಳನ್ನು ಖರೀದಿಸಿ ಸಂಸ್ಕರಿಸಿ, ಮೌಲ್ಯವರ್ಧನೆ ಮಾಡಿ ಅವುಗಳನ್ನು ಮಾರಾಟ ಮಾಡಲಾಗುತ್ತಿದ್ದು, ಈ ಮೇಳದಲ್ಲಿ ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಬಹುದಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸೇವಾ ಪ್ರತಿನಿಧಿ ಎಸ್.ಜಯಂತಿ ಉಪಸ್ಥಿತರಿದ್ದರು.

Please follow and like us:
0
http://bp9news.com/wp-content/uploads/2018/06/seri-danya.jpghttp://bp9news.com/wp-content/uploads/2018/06/seri-danya-150x150.jpgBP9 Bureauಕೃಷಿಕೊಡಗುಪ್ರಮುಖಮಡಿಕೇರಿ:  ಬೆಳ್ತಂಗಡಿಯ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೀರಾಜಪೇಟೆ ತಾಲೂಕು ಘಟಕದ ಜಂಟಿ ಆಶ್ರಯದಲ್ಲಿ ಜೂ.15ರಂದು ಮಡಿಕೇರಿಯಲ್ಲಿ ಸಿರಿಧಾನ್ಯಗಳ ಆಹಾರ ಮೇಳ, ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೋಜನೆಯ ಮಡಿಕೇರಿ ವಲಯ ಮೇಲ್ವಿಚಾರಕ ಹೆಚ್. ಮುಕುಂದ ಅವರು, ಅಂದು ಬೆಳಗ್ಗೆ 8ಗಂಟೆಯಿಂದ ಸಂಜೆ 7ಗಂಟೆಯವರೆಗೆ ನಗರದ ಕಾವೇರಿ ಹಾಲ್‍ನಲ್ಲಿ ಮೇಳ ನಡೆಯಲಿದ್ದು, ಪೂರ್ವಾಹ್ನ 10ಗಂಟೆಗೆ ಯೋಜನೆಯ ಕೊಡಗು ಸುಳ್ಯ ನಿರ್ದೇಶಕ...Kannada News Portal