ಮಡಿಕೇರಿ ; ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಉಂಟಾದ ಭಾರೀ ಭೂ ಕುಸಿತದಿಂದ ದಕ್ಷಿಣ ಕನ್ನಡ ಜಿಲ್ಲೆಯ ಸಂಪರ್ಕ ಕಳೆದುಕೊಂಡಿದ್ದ ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿ  ಜಿಲ್ಲೆಯ ಇತರ ಭಾಗಗಳ ಸಂಪರ್ಕವನ್ನೂ ಕಳೆದುಕೊಂಡು ಅಕ್ಷರಶಃ  ದ್ವೀಪದಂತಾಗಿದೆ.

ಗುರುವಾರ ಸಂಜೆ ಮಡಿಕೇರಿ -ತಾಳತ್ ಮನೆ ನಡುವೆ ಬರೆ ಕುಸಿದಿದ್ದರೆ, ಮಡಿಕೇರಿ -ವೀರಾಜಪೇಟೆ ರಸ್ತೆಗೆ ಬೆಟ್ಟ ಕುಸಿದ ಪರಿಣಾಮ ಆ ಮಾರ್ಗದಲ್ಲೂ ವಾಹನ ಸಂಚಾರ ಸ್ಥಗಿತಗೊಂಡಿದೆ. ಮಡಿಕೇರಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಶಾಲನಗರದ ತಾವರೆಕೆರೆ ಬಳಿ ರಸ್ತೆಯಲ್ಲಿ ಸುಮಾರು ನಾಲ್ಕು ಅಡಿಗಳಷ್ಟು ನೀರು ನಿಂತಿದ್ದು, ಪರಿಣಾಮವಾಗಿ ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.

ಈ ರಸ್ತೆಯ ಬೋಯಿಕೇರಿಯಿಂದ ಮಡಿಕೇರಿ ನಡುವೆ ಸುಮಾರು 5-6 ಕಡೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದು ಸಂಚಾರ ಅಸ್ತವ್ಯಸ್ತಗೊಂಡಿದೆ. ಮಡಿಕೇರಿ -ಸಿದ್ದಾಪುರ ರಸ್ತೆಯ ಅಬ್ಯಾಲ ಬಳಿ ಬೆಟ್ಟ ಕುಸಿದು ಸಂಪರ್ಕ ಸ್ಥಗಿತಗೊಂಡಿದೆ.

ಜಿಲ್ಲೆಯ ಬಹುತೇಕ ರಸ್ತೆಗಳು ಬಂದ್ ಆಗಿರುವ ಪರಿಣಾಮ ಶುಕ್ರವಾರ ಖಾಸಗಿ ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳು ರಸ್ತೆಗೆ ಇಳಿಯಲಿಲ್ಲ.
ಮೈಸೂರು, ಹಾಸನ ಭಾಗದಿಂದ ಬಂದ ಬಸ್ ಗಳು ಮಾತ್ರ ಮಡಿಕೇರಿಯಿಂದ ವಾಪಾಸಾಗಿವೆ. ಇತರೆಡೆಗೆ ಬಸ್ ಸಂಚಾರವಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.
ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ರಾಜ್ಯ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರುಗಳು ಜಿಲ್ಲೆಗೆ ಭೇಟಿ ನೀಡಿದ್ದು,ಕುಶಾಲನಗರ ಮತ್ತಿತರ ಪ್ರದೇಶಗಳ ವೀಕ್ಷಣೆ ಮಾಡಿದರು.

 

 

ದಕ್ಷಿಣ ಕೊಡಗಿನಲ್ಲೂ ಸಂಚಾರ ಅಸ್ತವ್ಯಸ್ತ

 ದಕ್ಷಿಣ ಕೊಡಗಿನ ಪೋಕಲ್ತೋಡು ಎಂಬಲ್ಲಿ ಬರೆ ಕುಸಿತಗೊಂಡು ಹುದಿಕೇರಿ-ಶ್ರೀಮಂಗಲ ರಸ್ತೆ ಸಂಪರ್ಕ ಕಳೆದುಕೊಂಡಿದೆ. ರಸ್ತೆಯ ಒಂದು ಬದಿ ಸಂಪೂರ್ಣವಾಗಿ ಕುಸಿದಿದೆ. ಪರಿಣಾಮ ಸಣ್ಣ ವಾಹನಗಳು ಮಾತ್ರ ತೆರಳುತ್ತಿದೆ. ಪರ್ಯಾಯ ಮಾರ್ಗವಾಗಿ ಕಾನೂರು ಮೂಲಕ ಕುಟ್ಟಕ್ಕೆ ತೆರಳಬಹುದಾಗಿದೆ.

ಗೋಣಿಕೊಪ್ಪದಲ್ಲಿ ತೋಡುವಿನಲ್ಲಿ ಕಸ ಸಿಕ್ಕಿಹಾಕೊಂಡು ಪೊನ್ನಂಪೇಟೆ ರಸ್ತೆ ಜಂಕ್ಷನ್‍ನಲ್ಲಿ ಸಂಪರ್ಕ ಕಳೇದುಕೊಂಡಿತ್ತು. ಸ್ಥಳೀಯರು ಕಸವನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಿದರು. ಇದರಿಂದಾಗಿ ಸಂಪರ್ಕ ಮುಕ್ತವಾಗಿದೆ.

ಲಕ್ಷ್ಮಣ ತೀರ್ಥ ಪ್ರವಾಹ ಮತ್ತು ಇತ್ತೀಚೆಗೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಾಳೆಲೆ ಹೋಬಳಿಯ 6 ಗ್ರಾಮಗಳು ಜಲಾವೃತಗೊಂಡಿದ್ದು, ಸುಮಾರು 16,718 ಎಕರೆ ನಾಟಿ ಮಾಡಲಾದ ಭತ್ತದ ಗದ್ದೆಗಳು ಮುಳುಗಡೆ ಯಾಗಿರುವದಾಗಿ ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ ತಿಳಿಸಿದ್ದಾರೆ.

 

ಬಾಳೆಲೆ ಹೋಬಳಿಗೆ ಕೊಟ್ಟಗೇರಿ(2132.20 ಎಕರೆ ಭತ್ತದ ಗದ್ದೆ), ನಿಟ್ಟೂರು(3924.86), ದೇವನೂರು(2897.70) ಬಾಳೆಲೆ(4040.52), ಬಿಳೂರು(2118.73) ಹಾಗೂ ಬೆಸಗೂರು ವ್ಯಾಪ್ತಿಯಲ್ಲಿ ಸುಮಾರು 1600.82 ಎಕರೆ ಭತ್ತದ ಗದ್ದೆಗಳಿದ್ದು ಬಹುತೇಕ ನಾಟಿ ಕಾರ್ಯ ಮಾಡಲಾಗಿತ್ತು ಎನ್ನಲಾಗಿದೆ. ಅಂದಾಜು 4-5 ತಿಂಗಳಿನಲ್ಲಿ ಕಟಾವಿಗೆ ಬರುವ ಇಂಟಾನ್, ಕೆಪಿಆರ್-1, ಅತಿರಾ ಹಾಗೂ ತುಂಗಾ ಭತ್ತವನ್ನು ಬಿತ್ತನೆ ಮಾಡಿದ್ದು ಇದೀಗ ಪ್ರವಾಹದಿಂದ ತೀವೃ ನಷ್ಟ ಉಂಟಾಗಿದೆ ಎಂದು ಈ ಭಾಗದ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಬಾಳೆಲೆ ಹೋಬಳಿಯನ್ನು ಭತ್ತದ ಕಣಜವೆಂದೇ ಕರೆಯಲಾಗುತ್ತಿದ್ದು ಕಳೆದ ಮೂರು ವರ್ಷದಿಂದ ಬರಗಾಲದಿಂದ ಇಲ್ಲಿನ ರೈತರು ಭತ್ತದ ಉತ್ಪಾದನೆಯಲ್ಲಿ ನಷ್ಟ ಅನುಭವಿಸಿದ್ದರೆ, ಈ ಬಾರಿ ಪ್ರವಾಹದಿಂದಾಗಿ ನಷ್ಟ ಅನುಭವಿಸುವಂತಾಗಿದೆ. ಒಟ್ಟಿನಲ್ಲಿ ಅತೀವೃಷ್ಟಿ, ಅನಾವೃಷ್ಟಿಯಿಂದಾಗಿ ಈ ಭಾಗದ ರೈತಾಪಿ ವರ್ಗ ಕಂಗಾಲಾಗಿದ್ದಾರೆ.

ಇತ್ತೀಚೆಗೆ ನೂತನ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ನಿಟ್ಟೂರು ಸೇತುವೆ ವೀಕ್ಷಣೆಗೆ ಭೇಟಿ ನೀಡಿದ್ದು ವಿವಿಧ ಗ್ರಾಮೀಣ ಅಭಿವೃದ್ಧಿ ರಸ್ತೆ ಅಭಿವೃದ್ಧಿಗೆ ಹಂತ ಹಂತವಾಗಿ ಒತ್ತು ನೀಡುವದಾಗಿ ಭರವಸೆ ನೀಡಿದ್ದರು. ಇದೀಗ ಭತ್ತ, ಇತ್ಯಾದಿ ಕೃಷಿ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಿಕೊಡಲು ಸತೀಶ್‍ದೇವಯ್ಯ ಅವರು ಒತ್ತಾಯಿಸಿದ್ದಾರೆ.

ಲಕ್ಷ್ಮಣ ತೀರ್ಥ ಪ್ರವಾಹದ ಹಿನ್ನೆಲೆ ಕಾನೂರು ಸೇತುವೆ ಕುಸಿಯುವ ಭೀತಿಯನ್ನು ಅಲ್ಲಿನ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ಸೇತುವೆಯ ಇಬ್ಬದಿಯಲ್ಲಿಯೂ ಬಿರುಕು ಹೆಚ್ಚುತ್ತಿದ್ದು, ಇದೀಗ ಸುರಿಯುತ್ತಿರುವ ಮಳೆ ಹಾಗೂ ಪ್ರವಾಹಕ್ಕೆ ಸಿಲುಕಿ ಸೇತುವೆಗೆ ತೀವ್ರ ಹಾನಿ ಸಂಭವಿಸುವ ಸಾಧ್ಯತೆ ಇದೆ ಎನ್ನಲಾಗಿದೆ.ಬೆಕ್ಕೆಸೊಡ್ಲೂರು, ಕೋತೂರು, ಕಾನೂರು ವ್ಯಾಪ್ತಿಯಲ್ಲಿ ಸುಮಾರು 300 ಎಕರೆ ಪ್ರದೇಶದಲ್ಲಿ ನಾಟಿ ಮಾಡಲಾಗಿದ್ದು, ಲಕ್ಷ್ಮಣ ತೀರ್ಥ ಪ್ರವಾಹದಿಂದಾಗಿ ರೈತರು ತೀವ್ರ ನಷ್ಟ ಅನುಭವಿಸಿದ್ದಾರೆ.

ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ದಕ್ಷಿಣ ಕೊಡಗಿನ ಪ್ರಮುಖ ವಾಣಿಜ್ಯ ಕೇಂದ್ರ ಗೋಣಿಕೊಪ್ಪಲಿನ ಕೀರೆ ಹೊಳೆಯಲ್ಲಿ ಪ್ರವಾಹವೇರ್ಪಟ್ಟು ಆತಂಕವನ್ನು ಸೃಷ್ಟಿಸಿದೆ. ಕಂದಾಯ ಇಲಾಖಾಧಿಕಾರಿಗಳು, ಗ್ರಾ.ಪಂ.ಅಧ್ಯಕ್ಷರು, ಜನಪ್ರತಿನಿಧಿಗಳು, ಜಿ.ಪಂ.ಸದಸ್ಯರು, ಗ್ರಾ.ಪಂ.ಪಿಡಿಓ ಅವರುಗಳು ಪ್ರವಾಹ ಪೀಡಿತ ಇಲ್ಲಿನ ಎರಡು ಹಾಗೂ ಮೂರನೇ ವಾರ್ಡ್ ಗೆ ತೆರಳಿ ಕೀರೆಹೊಳೆ ದಡದ ನಿವಾಸಿಗಳಿಗೆ ಗಂಜಿಕೇಂದ್ರಕ್ಕೆ ತೆರಳುವಂತೆ ಎಚ್ಚರಿಕೆ ನೀಡಿದ್ದಾರೆ. ಇಲ್ಲಿನ ಪ್ರವಾಹ ಪೀಡಿತ ಸಂತ್ರಸ್ತರಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಂಜಿಕೇಂದ್ರವನ್ನು ತೆರೆಯಲಾಗಿದ್ದು, ಸಂಕಷ್ಟದಲ್ಲಿರುವವರಿಗೆ ಅಗತ್ಯ ನೆರವನ್ನು ಒದಗಿಸಲಾಗುತ್ತಿದೆ.

ಜಿ.ಪಂ.ಸದಸ್ಯ ಸಿ.ಕೆ.ಬೋಪಣ್ಣ, ಗ್ರಾ.ಪಂ.ಅಧ್ಯಕ್ಷೆ ಸೆಲ್ವಿ, ಪಿಡಿಓ ಚಂದ್ರಮೌಳಿ ಹಾಗೂ ಸದಸ್ಯರು ವಿವಿಧ ಬಡಾವಣೆಗಳಿಗೆ ತೆರಳಿ ಪ್ರವಾಹ ಪರಿಸ್ಥಿತಿ ವೀಕ್ಷಣೆ ಮಾಡಿದರು. ಇದೇ ಸಂದರ್ಭ ಗ್ರಾ.ಪಂ.ಶೇ.25 ರ ಅನುದಾನದಲ್ಲಿ ಪ.ಜಾತಿ ಮತ್ತು ಪ.ಪಂಗಡ ಕುಟುಂಬಗಳಿಗೆ ಪ್ಲ್ಲಾಸ್ಟಿಕ್ ಹೊದಿಕೆ ಹಾಗೂ ಮನೆ ದುರಸ್ತಿಗೆ ಕನಿಷ್ಠ 20 ಸಾವಿರ ರೂ.ಅನುದಾನ ನೀಡಲು ಜಿ.ಪಂ.ಸದಸ್ಯ ಸಿ.ಕೆ.ಬೋಪಣ್ಣ ಪಂಚಾಯಿತಿ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ ಅವರಿಗೆ ನಿರ್ದೇಶನ ನೀಡಿದರು.

ಇಲ್ಲಿನ 2 ಹಾಗೂ 3 ನೇ ವಾರ್ಡ್‍ನಲ್ಲಿ ಸುಮಾರು 54ಕ್ಕೂ ಅಧಿಕ ಕುಟುಂಬಗಳು ವಾಸವಿದ್ದು, ಭಾರೀ ಮಳೆ ಮುಂದುವರಿದಲ್ಲಿ ಬಡಾವಣೆಗಳು ಸಂಪೂರ್ಣ ಜಲಾವೃತಗೊಳ್ಳುವ ಸಾಧ್ಯತೆಯೂ ಕಂಡುಬಂದಿದೆ. ಮುಂಜಾಗೃತಾ ಕ್ರಮವಾಗಿ ಇಲ್ಲಿನ ಸಂಪರ್ಕ ಸೇತುವೆ ಮೇಲಿನ ವಾಹನ ಓಡಾಟ ನಿಷೇಧಿಸಿ, ಬ್ಯಾರಿಕೇಡ್ ಅಳವಡಿಸಲಾಗಿದೆ. ಪೊಲೀಸರನ್ನೂ ನಿಯೋಜಿಸಲಾಗಿದೆ.

ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಬೋಯಿಕೇರಿಯ ಎರಡು ಕಡೆಗಳಲ್ಲಿ ಭಾರೀ ಪ್ರಮಾಣದ ಬರೆ ಕುಸಿತವುಂಟಾಗಿ ವಾಹನಗಳ ಸಂಚಾರ ಕೆಲವು ಕಾಲ ಸ್ಥಗಿತಗೊಂಡ ಘಟನೆ ನಡೆದಿದೆ.

Please follow and like us:
0
http://bp9news.com/wp-content/uploads/2018/08/Z-DESHPANDE-3-1024x768.jpghttp://bp9news.com/wp-content/uploads/2018/08/Z-DESHPANDE-3-150x150.jpgBP9 Bureauಕಲಬುರ್ಗಿಪ್ರಮುಖರಾಜಕೀಯ  ಮಡಿಕೇರಿ ; ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಉಂಟಾದ ಭಾರೀ ಭೂ ಕುಸಿತದಿಂದ ದಕ್ಷಿಣ ಕನ್ನಡ ಜಿಲ್ಲೆಯ ಸಂಪರ್ಕ ಕಳೆದುಕೊಂಡಿದ್ದ ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿ  ಜಿಲ್ಲೆಯ ಇತರ ಭಾಗಗಳ ಸಂಪರ್ಕವನ್ನೂ ಕಳೆದುಕೊಂಡು ಅಕ್ಷರಶಃ  ದ್ವೀಪದಂತಾಗಿದೆ. ಗುರುವಾರ ಸಂಜೆ ಮಡಿಕೇರಿ -ತಾಳತ್ ಮನೆ ನಡುವೆ ಬರೆ ಕುಸಿದಿದ್ದರೆ, ಮಡಿಕೇರಿ -ವೀರಾಜಪೇಟೆ ರಸ್ತೆಗೆ ಬೆಟ್ಟ ಕುಸಿದ ಪರಿಣಾಮ ಆ ಮಾರ್ಗದಲ್ಲೂ ವಾಹನ ಸಂಚಾರ ಸ್ಥಗಿತಗೊಂಡಿದೆ. ಮಡಿಕೇರಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಶಾಲನಗರದ ತಾವರೆಕೆರೆ ಬಳಿ ರಸ್ತೆಯಲ್ಲಿ...Kannada News Portal