ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಮಳೆ ತೀವ್ರತೆಯನ್ನು ಪಡೆದುಕೊಳ್ಳುತ್ತಲೇ ಇದ್ದು, ಹಲವೆಡೆ ಅನಾಹುತಗಳು ಸಂಭವಿಸಿದೆ. ಕಂಟೈನರ್ ಮೇಲೆ ಬಿದ್ದ ಬೃಹತ್ ಗಾತ್ರ ಮರವನ್ನು ತೆರವುಗೊಳಿಸುವ ಸಂದರ್ಭ ವಿದ್ಯುತ್ ಕಂಬವೊಂದು ಕೆಎಸ್‍ಆರ್​​​ಟಿಸಿ ಬಸ್ ಮೇಲೆ ಬಿದ್ದ ಘಟನೆ ಜೋಡುಪಾಲ-ಕೊಯನಾಡು ಮಾರ್ಗದಲ್ಲಿ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಸಾವು, ನೋವುಗಳು ಸಂಭವಿಸಿಲ್ಲ.

ಕಳೆದ ಐದು ದಿನಗಳಿಂದ ಎಡಬಿಡದೆ ಮಳೆಯಾಗುತ್ತಿದ್ದು, ರಸ್ತೆ ಬದಿಯ ಮರಗಳು ಅಪಾಯದ ಅಂಚಿನಲ್ಲಿವೆ. ಜೋಡುಪಾಲ-ಕೊಯನಾಡು ರಸ್ತೆಯಲ್ಲಿ ಇದೇ ರೀತಿಯಾಗಿ ಭಾರೀ ಗಾಳಿ, ಮಳೆಗೆ ಬೃಹತ್ ಮರವೊಂದು ಕಂಟೈನರ್ ಮೇಲೆ ಬಿದ್ದಿದೆ. ಇದನ್ನು ತೆರವುಗೊಳಿಸುವ ಸಂದರ್ಭ ಬಸ್ ಮೇಲೆ ವಿದ್ಯುತ್ ಕಂಬ ಬಿದ್ದಿದ್ದು, ವಿದ್ಯುತ್ ಸಂಪರ್ಕವಿಲ್ಲದ ಕಾರಣ ಯಾವುದೇ ಹಾನಿ ಸಂಭವಿಸಲಿಲ್ಲ. ಘಟನೆ ಸಂಭವಿಸಿದ ತಕ್ಷಣ ಕಾರ್ಯ ಪ್ರವೃತ್ತರಾದ ಪ್ರಕೃತಿ ವಿಕೋಪ ತಂಡ ವಿದ್ಯುತ್ ಕಂಬ ಹಾಗೂ ಮರಗಳನ್ನು ತೆರವುಗೊಳಿಸಿತು. ಘಟನೆಯಲ್ಲಿ ಎರಡೂ ವಾಹನಗಳ ಚಾಲಕರಿಗೆ ಹಾಗೂ ಬಸ್ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸುಮಾರು ನಾಲ್ಕು ಗಂಟೆಗಳ ಕಾರ್ಯಾಚರಣೆಯ ನಂತರ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.

ಭಾಗಮಂಡಲದಲ್ಲಿ ಪ್ರವಾಹದ ಸ್ಥಿತಿ

ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನದಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ. ಸಂಪರ್ಕ ರಸ್ತೆಗಳು ಜಲಾವೃತಗೊಂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅಗ್ನಿಶಾಮಕ ದಳ  ಸಿಬ್ಬಂದಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಸುತ್ತಮುತ್ತಲ ಗದ್ದೆಗಳಲ್ಲಿ ನೀರು ತುಂಬಿದ್ದು, ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳಕ್ಕೆ ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್ ಭೇಟಿ ನೀಡಿ ಸೂಕ್ತ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಡಿಕೇರಿ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹಲವೆಡೆ ಬರೆ, ಮರಗಳು ಬಿದ್ದಿವೆ. ನಗರದಲ್ಲಿ ಕೂಡ ಎಡೆಬಿಡದೆ ಮಳೆಯಾಗುತ್ತಿದ್ದು, ದಟ್ಟ ಮಂಜು, ಗಾಳಿ, ಚಳಿಯ ವಾತಾವರಣ ಮುಂದುವರೆದಿದೆ. ಮಲ್ಲಿಕಾರ್ಜುನ ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮನೆಯ ಗೋಡೆ ಹಾಗೂ ತಡೆಗೋಡೆ ಕುಸಿದು ಬಿದ್ದಿದ್ದು, ಮೊದಲ ಹಂತದಲ್ಲಿ ನಗರಸಭೆ ವತಿಯಿಂದ ಪ್ಲಾಸ್ಟಿಕ್ ಶೀಟ್‍ಗಳನ್ನು ವಿತರಿಸಲಾಗಿದೆ. ಇಂದು ಕೂಡ ಎಸ್‍ಡಿಪಿಐ ನಗರಾಧ್ಯಕ್ಷ ಖಲೀಲ್ ನೇತೃತ್ವದಲ್ಲಿ ಕಾರ್ಯಕರ್ತರು ಶ್ರಮದಾನದ ಮೂಲಕ ಮನೆ ಹಾನಿಗೊಳಗಾದವರಿಗೆ ಸಹಾಯ ಹಸ್ತ ಚಾಚಿದರು.

ಕೋಟೆ ಆವರಣ ಜಲಾವೃತಗೊಂಡಿದ್ದು, ಶ್ರೀಓಂಕಾರೇಶ್ವರ ದೇವಾಲಯದ ಆವರಣದ ಕೆರೆಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ. ದೇವಾಲಯವನ್ನು ಪ್ರವೇಶಿಸಲು ಭಕ್ತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ನೀರು ತುಂಬಿರುವ ರಸ್ತೆಗಳಲ್ಲಿ ವಾಹನ ಸಂಚಾರ ದುಸ್ತರವಾಗಿದೆ.ಸೋಮವಾರಪೇಟೆ ತಾಲ್ಲೂಕಿನಲ್ಲೂ ಮಳೆ ತೀವ್ರತೆಯನ್ನು ಪಡೆದುಕೊಂಡಿದ್ದು, ಯಾವುದೇ ಹಾನಿ ಸಂಭವಿಸಿಲ್ಲ. ವಿರಾಜಪೇಟೆ ತಾಲ್ಲೂಕಿನಲ್ಲಿ ಬೆಳಗ್ಗೆ ಮಳೆ ಬಿಡುವು ನೀಡಿತ್ತಾದರೂ ಸಂಜೆ ವೇಳೆ ಭಾರೀ ಮಳೆಯಾಗಿದೆ.

ಜಿಲ್ಲೆಯಾದ್ಯಂತ ಸುರಿದ ಮಳೆಗೆ ಶಾಲಾ ವಿದ್ಯಾರ್ಥಿಗಳು ಬಹಳ ಕಷ್ಟ ಪಟ್ಟುಕೊಂಡೆ ಶಾಲೆಗಳಿಗೆ ತೆರಳಿದ್ದು, ಜಿಲ್ಲಾಡಳಿತ ರಜೆ ನೀಡಬೇಕಾಗಿತ್ತು ಎನ್ನುವ ಅಭಿಪ್ರಾಯ ಪೋಷಕರಿಂದ ಕೇಳಿಬಂತು. ಸುಂಟಿಕೊಪ್ಪದಲ್ಲಿ ಶಾಲೆಯ ತಡೆಗೋಡೆ ಕುಸಿದು ಬಿದ್ದು, ಅಪಾಯದ ಸ್ಥಿತಿ ಎದುರಾದ ಘಟನೆಯೂ ನಡೆದಿದೆ.

ಕಂಟ್ರೋಲ್ ರೂಮ್ 24 ಗಂಟೆ ಕಟ್ಟೆಚ್ಚರ

ಜಿಲ್ಲಾಡಳಿತ ಮಳೆಯ ತೀವ್ರತೆಯ ಮೇಲೆ ನಿಗಾ ಇಟ್ಟಿದ್ದು, ಮೂರೂ ತಾಲ್ಲೂಕಿನ ಕಂಟ್ರೋಲ್ ರೂಮ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ದಿನದ 24 ಗಂಟೆಯೂ ಕಟ್ಟೆಚ್ಚರದಲ್ಲಿದೆ.

ಮಳೆ ವಿವರ

24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 78.96 ಮಿ.ಮೀ. ಕಳೆದ ವರ್ಷ ಇದೇ ದಿನ 3.74 ಮಿ.ಮೀ., ಜನವರಿಯಿಂದ ಇಲ್ಲಿಯವರೆಗಿನ ಮಳೆ 1681.38 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 815.65 ಮಿ.ಮೀ ಮಳೆಯಾಗಿತ್ತು.

ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 104.40 ಮಿ.ಮೀ. ಕಳೆದ ವರ್ಷ ಇದೇ ದಿನ 5.85 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2338.55 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1114 ಮಿ.ಮೀ. ಮಳೆಯಾಗಿತ್ತು.

ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 57.50 ಮಿ.ಮೀ. ಕಳೆದ ವರ್ಷ ಇದೇ ದಿನ 5.37 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1485.77 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 715.65 ಮಿ.ಮೀ. ಮಳೆಯಾಗಿತ್ತು.

ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 74.97 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1219.82 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 600.98 ಮಿ.ಮೀ. ಮಳೆಯಾಗಿತ್ತು.

ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 116.80, ನಾಪೋಕ್ಲು 82.40, ಸಂಪಾಜೆ 111, ಭಾಗಮಂಡಲ 107.40, ವಿರಾಜಪೇಟೆ ಕಸಬಾ 42.20, ಹುದಿಕೇರಿ 116, ಶ್ರೀಮಂಗಲ 119.40 ಪೊನ್ನಂಪೇಟೆ 9.40, ಅಮ್ಮತಿ 45, ಬಾಳೆಲೆ 13, ಸೋಮವಾರಪೇಟೆ ಕಸಬಾ 111.80, ಶನಿವಾರಸಂತೆ 80, ಶಾಂತಳ್ಳಿ 124, ಕೊಡ್ಲಿಪೇಟೆ 58.40, ಸುಂಟಿಕೊಪ್ಪ 45 ಮಿ.ಮೀ, ಕುಶಾಲನಗರ 30.60 ಮಳೆಯಾಗಿದೆ.

ಹಾರಂಗಿ ಜಲಾಶಯದ ನೀರಿನ ಮಟ್ಟ

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2856.79 ಅಡಿಗಳು, ಕಳೆದ ವರ್ಷ ಇದೇ ದಿನ 2832.92 ಅಡಿ. ಹಾರಂಗಿಯಲ್ಲಿ ಬಿದ್ದ ಮಳೆ 19.20 ಮಿ.ಮೀ. ಇಂದಿನ ನೀರಿನ ಒಳಹರಿವು 12168 ಕ್ಯುಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 530 ಕ್ಯುಸೆಕ್. ಇಂದಿನ ನೀರಿನ ಹೊರ ಹರಿವು ನದಿಗೆ 13406 ಕ್ಯುಸೆಕ್. ನಾಲೆಗೆ 450 ಕ್ಯುಸೆಕ್.

ಧುಮ್ಮಿಕ್ಕಿ ಹರಿಯುತ್ತಿರುವ ಅಬ್ಬಿ ಜಲಪಾತ

ಕಳೆದ 5 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ  ಮಡಿಕೇರಿ ಸಮೀಪದ ಅಬ್ಬಿ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ. ಈ ಸೊಭಗನ್ನ ಸವಿಯಲು ರಾಜ್ಯದ ಪ್ರವಾಸಿಗರು ಬರುತ್ತಿದ್ದಾರೆ.

Please follow and like us:
0
http://bp9news.com/wp-content/uploads/2018/07/Z-OMKARESHAWARA-TEMPLE-1.jpghttp://bp9news.com/wp-content/uploads/2018/07/Z-OMKARESHAWARA-TEMPLE-1-150x150.jpgBP9 Bureauಕೊಡಗುಪ್ರಮುಖಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಮಳೆ ತೀವ್ರತೆಯನ್ನು ಪಡೆದುಕೊಳ್ಳುತ್ತಲೇ ಇದ್ದು, ಹಲವೆಡೆ ಅನಾಹುತಗಳು ಸಂಭವಿಸಿದೆ. ಕಂಟೈನರ್ ಮೇಲೆ ಬಿದ್ದ ಬೃಹತ್ ಗಾತ್ರ ಮರವನ್ನು ತೆರವುಗೊಳಿಸುವ ಸಂದರ್ಭ ವಿದ್ಯುತ್ ಕಂಬವೊಂದು ಕೆಎಸ್‍ಆರ್​​​ಟಿಸಿ ಬಸ್ ಮೇಲೆ ಬಿದ್ದ ಘಟನೆ ಜೋಡುಪಾಲ-ಕೊಯನಾಡು ಮಾರ್ಗದಲ್ಲಿ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಸಾವು, ನೋವುಗಳು ಸಂಭವಿಸಿಲ್ಲ. ಕಳೆದ ಐದು ದಿನಗಳಿಂದ ಎಡಬಿಡದೆ ಮಳೆಯಾಗುತ್ತಿದ್ದು, ರಸ್ತೆ ಬದಿಯ ಮರಗಳು ಅಪಾಯದ ಅಂಚಿನಲ್ಲಿವೆ. ಜೋಡುಪಾಲ-ಕೊಯನಾಡು ರಸ್ತೆಯಲ್ಲಿ ಇದೇ ರೀತಿಯಾಗಿ ಭಾರೀ ಗಾಳಿ, ಮಳೆಗೆ...Kannada News Portal