ಮಡಿಕೇರಿ : ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ಯುವ ಸಮೂಹಕ್ಕೆ ಭಾರತದಾದ್ಯಂತ ಉದ್ಯೋಗದ ಅವಕಾಶಗಳನ್ನು ಒದಗಿಸಿಕೊಡುವ ಮಹತ್ವದ ಚಿಂತನೆಯಡಿ ಮುಂದಿನ ಜುಲೈ 6 ಮತ್ತು 7 ರಂದು ಹತ್ತನೇ ಆವೃತ್ತಿಯ  ‘ಆಳ್ವಾಸ್ ಪ್ರಗತಿ-ಬೃಹತ್ ಉದ್ಯೋಗ ಮೇಳ’ ಮೂಡಬಿದರೆಯ ವಿದ್ಯಾಗಿರಿ ಕ್ಯಾಂಪಸ್​​​ನಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಆಳ್ವಾಸ್ ಪ್ರಗತಿ ಮಾಧ್ಯಮ ಸಂಯೋಜಕಿ ಡಾ.ಮೌಲ್ಯ ಜೀವನ್ ರಾಂ ಅವರು, ಮೂಡಬಿದಿರೆಯ ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್‍ನಲ್ಲಿ ಎರಡು ದಿನಗಳ ಕಾಲ ನಡೆಯುವ ಉದ್ಯೋಗ ಮೇಳದೊಂದಿಗೆ, ಇದಕ್ಕೆ ಪೂರ್ವಭಾವಿಯಾಗಿ ಉದ್ಯೋಗಾರ್ಥಿಗಳಿಗೆ ಸಂದರ್ಶನವನ್ನು ಎದುರಿಸುವ ವಿಧಾನಗಳ ಬಗ್ಗೆ ಜುಲೈ 4 ಮತ್ತು 5 ರಂದು ತರಬೇತಿ ಕಾರ್ಯಕ್ರಮವನ್ನು ಕೂಡ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕಳೆದ ಸಾಲಿನ ಉದ್ಯೋಗ ಮೇಳದಲ್ಲಿ 208 ಕಂಪೆನಿಗಳು ವಿವಿಧ ಹುದ್ದೆಗಳ ಭರ್ತಿಗಾಗಿ ಪಾಲ್ಗೊಂಡಿದ್ದವಾದರೆ, ಈ ಬಾರಿ 250ಕ್ಕೂ ಹೆಚ್ಚಿನ ಕಂಪೆನಿಗಳ ಪಾಲ್ಗೊಳ್ಳುವಿಕೆಯನ್ನು ನಿರೀಕ್ಷಿಸಲಾಗುತ್ತಿದೆ. ಕಳೆದ ಸಾಲಿನಲ್ಲಿ 16 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದು, ಇವರಲ್ಲಿ 1058 ಮಂದಿಗೆ ಸ್ಥಳದಲ್ಲೆ ಉದ್ಯೋಗಾವಕಾಶ ದೊರಕಿತ್ತು. 2918 ಮಂದಿ ಉದ್ಯೋಗ ಪಡೆಯುವ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಹೆಚ್ಚಿನ ಉದ್ಯೋಗ ಮೇಳಗಳಲ್ಲಿ ವಿವಿಧ ಕಂಪೆನಿಗಳು ಹೆಚ್ಚಾಗಿ ಪುರುಷ ಅಭ್ಯರ್ಥಿಗಳ ಆಯ್ಕೆಯತ್ತ ಹೆಚ್ಚಿನ ಒಲವು ತೋರುತ್ತಿದ್ದವು. ಆದರೆ, ಈ ಬಾರಿ ಎಲ್‍ಎಂ ವಿಂಡ್ ಪವರ್, ಭಾರತ್ ಪ್ರಿಟ್ಸ್ ವರ್ನರ್ ಕಂಪೆನಿಗಳು ಬಿಇ ಮೆಕ್ಯಾನಿಕಲ್, ಡಿಪ್ಲೋಮಾ ಮೆಕ್ಯಾನಿಕಲ್, ಇಲೆಕ್ಟ್ರಿಕಲ್ ಆದ ಮಹಿಳಾ ಪದವೀಧರರನ್ನೇ ಆಯ್ಕೆ ಮಾಡಿಕೊಳ್ಳಲು ಉತ್ಸುಕರಾಗಿರುವುದಾಗಿ ಡಾ. ಮೌಲ್ಯ ಜೀವನ್ ರಾಂ ತಿಳಿಸಿದರು.

ಯಾವುದೇ ಉದ್ಯೋಗ ಮೇಳಗಳಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ತರಬೇತಿ ಪಡೆದವರಿಗೆ ಉದ್ಯೋಗಾವಕಾಶಗಳು ಇರಲಿಲ್ಲ. ಆದರೆ, ಈ ಬಾರಿ ಅಜೀಂ ಪ್ರೇಂ ಜೀ ಫೌಂಡೇಶನ್, ಗೋವಾ ಇನ್‍ಸ್ಟಿಟ್ಯೂಟ್, ದೇಶಪಾಂಡೆ ಫೌಂಡೇಶನ್ ಮೊದಲಾದ ಕಂಪೆನಿಗಳು ಬಿಎಡ್ ಆದ ಅಭ್ಯರ್ಥಿಗಳ ಆಯ್ಕೆಗೆ ಉತ್ಸಾಹ ತೋರಿರುವುದಲ್ಲದೆ, ಅಂದಾಜು 100 ಹುದ್ದೆಗಳು ಈ ವಿಭಾಗದಲ್ಲಿ ಭರ್ತಿಯಾಗುವ ಸಾಧ್ಯತೆಗಳಿದೆ ಎಂದರು.

ಉದ್ಯೋಗ ಮೇಳದಲ್ಲಿ ಪ್ರಮುಖವಾಗಿ ಐಟಿ, ಐಟಿಎಸ್, ಮ್ಯಾನುಫ್ಯಾಕ್ಚರಿಂಗ್, ಹೆಲ್ತ್​​​ಕೇರ್ ಮತ್ತು ಫಾರ್ಮಾ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆಟೋಮೋಬೈಲ್, ಬ್ಯಾಂಕಿಂಗ್ ಮತ್ತು ಹಣಕಾಸು, ಹಾಸ್ಪಿಟಾಲಿಟಿ, ಶಿಕ್ಷಣ ಮತ್ತು ಎನ್‍ಜಿಒಗಳನ್ನು ಪ್ರತಿನಿಧಿಸುವ ಉನ್ನತ ನೇಮಕಾತಿ ಕಂಪೆನಿಗಳು ಪಾಲ್ಗೊಳ್ಳಲಿವೆ. ಮೇಳದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ, ವ್ಯದ್ಯಕೀಯ, ಪ್ಯಾರಾ ಮೆಡಿಕಲ್, ಇಂಜಿನಿಯರಿಂಗ್, ವಾಣಿಜ್ಯ ಮತ್ತು ನಿರ್ವಹಣೆ, ಬೇಸಿಕ್ ಸೈನ್ಸ್, ನರ್ಸಿಂಗ್, ಐಟಿಐ, ಡಿಪ್ಲೋಮಾ ಹಾಗೂ ಸ್ನಾತಕೋತ್ತರ ಪದವೀಧರ ಉದ್ಯೋಗಾಕಾಂಕ್ಷಿಗಳು ಭಾಗವಹಿಸಬಹುದಾಗಿದೆಯೆಂದು ತಿಳಿಸಿದರು.

ಉದ್ಯೋಗ ಮೇಳದಲ್ಲಿ ಉತ್ಪಾದನಾವಲಯದ ಪ್ರಮುಖ ಕಂಪೆನಿಗಳಾದ ಕಿರ್ಲೋಸ್ಕರ್, ಟೊಯೊಟೋ ಇಂಡಸ್ಟ್ರೀಸ್ ಇಂಜಿನ್ ಇಂಡಿಯಾ, ಮಿಟ್ಸುಬಿಷಿ, ಗಲ್ಫ್‍ನ ಮಲ್ಟಿನ್ಯಾಷನಲ್ ಕಂಪೆನಿಗಳಾದ ಎನ್‍ಎಂಸಿ ಹೆಲ್ತ್‍ಕೇರ್, ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ಮೊದಲಾದ ದಿಗ್ಗಜ ಕಂಪೆನಿಗಳು, ಪ್ರತಿಷ್ಠಿತ ಬ್ಯಾಂಕ್‍ಗಳಾದ ಹೆಚ್‍ಡಿಎಫ್‍ಸಿ, ಐಸಿಐಸಿಐ, ಆಕ್ಸಿಸ್, ಪ್ರತಿಷ್ಠಿತ ಕಂಪೆನಿಗಳಾದ ಒರೇಕಲ್, ಕೆಫೆ ಕಾಫಿ ಡೇ, ಆರೋಗ್ಯ ಕ್ಷೇತ್ರದ ಪ್ರತಿಷ್ಟಿತ ಆಸ್ಪತ್ರೆಗಳಾದ ಓಕ್‍ಹಾರ್ಟ್, ಕೊಲಂಬಿಯಾ ಏಷ್ಯಾ ಆಸ್ಪತ್ರೆ ಸೇರಿದಂತೆ ಹತ್ತು ಹಲ ಆಸ್ಪತ್ರೆಗಳು, ಕಂಪೆನಿಗಳು ಪಾಲ್ಗೊಳ್ಳಲಿವೆ ಎಂದರು.

ಆನ್‍ಲೈನ್ ನೋಂದಾವಣೆಗೆ ಮನವಿ- ಉದ್ಯೋಗಾಸಕ್ತರು ಸ್ಥಳದಲ್ಲೆ ನೋಂದಣಿ ಮಾಡಿಕೊಳ್ಳಬಹುದಾಗಿದ್ದರು, ಆನ್‍ಲೈನ್ ಮೂಲಕ ಹೆಸರು ನೋಂದಾಯಿಸಿಕೊಂಡಲ್ಲಿ ಅಂತಹವರ ದಾಖಲಾತಿಯ ಮಾಹಿತಿಗಳನ್ನು ಇನ್ನಿತರ ಕಂಪೆನಿಗಳಿಗೆ ವಿಸ್ತರಿಸಿ ಹೆಚ್ಚಿನ ಉದ್ಯೋಗಾವಕಾಶ ಒದಗಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಆಸಕ್ತ ಉದ್ಯೋಗಾಕಾಂಕ್ಷಿಗಳು ಹೆಚ್ಚಿನ ಮಾಹಿತಿಗಳಿಗೆ ಮೊ.9611686148, 9663190590, 7892880902, 8494934852, 9008907716 ನ್ನು ಸಂಪರ್ಕಿಸಬಹುದು. ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವವರಿಗೆ ವಸತಿ ಮತ್ತು ಊಟದ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆಂದು ಮಾಹಿತಿ ನೀಡಿದರು.

ದಾಖಲೆಗಳು ಬೇಕು

ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವವರು 5 ರಿಂದ 10 ಪಾಸ್ ಪೋರ್ಟ್ ಫೋಟೋಗಳನ್ನು, ಇತ್ತೀಚಿನ ರೆಸ್ಯೂಮ್, ದೃಢೀಕರಿಸಲ್ಪಟ್ಟ ಎಲ್ಲಾ, ಅಂಕ ಪಟ್ಟಿ  ಜೆರಾಕ್ಸ್ ಪ್ರತಿಗಳು, ಆನ್ ಲೈನ್ ನೋಂದಣಿ ಸಂಖ್ಯೆಯನ್ನು ತರುವುದು ಅತ್ಯವಶ್ಯವೆಂದು ತಿಳಿಸಿದರು.

 

 

 

 

 

 

Please follow and like us:
0
http://bp9news.com/wp-content/uploads/2018/06/Z-ALVAS-2.jpghttp://bp9news.com/wp-content/uploads/2018/06/Z-ALVAS-2-150x150.jpgBP9 Bureauಉದ್ಯೋಗಕೊಡಗುಪ್ರಮುಖಮಡಿಕೇರಿ : ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ಯುವ ಸಮೂಹಕ್ಕೆ ಭಾರತದಾದ್ಯಂತ ಉದ್ಯೋಗದ ಅವಕಾಶಗಳನ್ನು ಒದಗಿಸಿಕೊಡುವ ಮಹತ್ವದ ಚಿಂತನೆಯಡಿ ಮುಂದಿನ ಜುಲೈ 6 ಮತ್ತು 7 ರಂದು ಹತ್ತನೇ ಆವೃತ್ತಿಯ  ‘ಆಳ್ವಾಸ್ ಪ್ರಗತಿ-ಬೃಹತ್ ಉದ್ಯೋಗ ಮೇಳ’ ಮೂಡಬಿದರೆಯ ವಿದ್ಯಾಗಿರಿ ಕ್ಯಾಂಪಸ್​​​ನಲ್ಲಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಆಳ್ವಾಸ್ ಪ್ರಗತಿ ಮಾಧ್ಯಮ ಸಂಯೋಜಕಿ ಡಾ.ಮೌಲ್ಯ ಜೀವನ್ ರಾಂ ಅವರು, ಮೂಡಬಿದಿರೆಯ ಆಳ್ವಾಸ್...Kannada News Portal