ಮಡಿಕೇರಿ : ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ದುಡಿಯುತ್ತಿರುವ ಸ್ವಚ್ಛತಾ ಮತ್ತು ಇತರ ನೌಕರರಿಗೆ ಸರಕಾರ ನಿಗದಿಪಡಿಸಿದ ವೇತನ ನೀಡದೆ ಗುತ್ತಿಗೆದಾರರು ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಸರಕಾರಿ ಆಸ್ಪತ್ರೆಯ ಸ್ವಚ್ಛತಾ ಮತ್ತು ಇತರ ಸಿಬ್ಬಂದಿಗಳ ಸಂಘ, ಮುಂದಿನ ಒಂದು ತಿಂಗಳ ಒಳಗಾಗಿ ಜಿಲ್ಲಾಡಳಿತ ಈ ಸಂಬಂಧ ಕ್ರಮಕೈಗೊಳ್ಳದಿದ್ದಲ್ಲಿ ಕೆಲಸ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸುವುದಾಗಿ ಎಚ್ಚರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ಪಿ.ಆರ್.ಭರತ್ ಹಲವು ವರ್ಷಗಳ ಹೋರಾಟದ ಫಲವಾಗಿ ಕಾರ್ಮಿಕ ಇಲಾಖೆ ಕೊಡಗು ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಸಿಬ್ಬಂದಿ, ಡಿ ಗ್ರೂಪ್, ಸೆಕ್ಯೂರಿಟಿ ಹಾಗೂ ಇತರ ನೌಕರರಿಗೆ ಮಾಸಿಕ ವೇತನ ನಿಗದಿಪಡಿಸಿ 2017ರ ಏ.1ರಂದು ಆದೇಶ ಹೊರಡಿಸಿದೆ. ಅದರಂತೆ ಸ್ವಚ್ಛತಾ ಸಿಬ್ಬಂದಿಗೆ ಹಾಗೂ ಡಿ ಗ್ರೂಪ್ ನೌಕರರಿಗೆ ಪಿಎಫ್ ಮತ್ತು ಇಎಸ್‍ಐ ಮೊತ್ತ ಕಡಿತಗೊಳಿಸಿ 10,375.60 ರೂ., ಸೆಕ್ಯೂರಿಟಿ ಸಿಬ್ಬಂದಿಗಳಿಗೆ 11,285, ವಾಹನ ಚಾಲಕರಿಗೆ 12 ಸಾವಿರ ರೂ.ವೇತನ ನೀಡಬೇಕಾಗಿದೆ. ಆದರೆ ಸರಕಾರ ನಿಗದಿಪಡಿಸಿದ ವೇತನ ನೀಡದೆ ಗುತ್ತಿಗೆದಾರರು ಸ್ವಚ್ಛತಾ ಸಿಬ್ಬಂದಿಗೆ 9 ಸಾವಿರ, ಇತರರಿಗೆ 8400 ರೂ. ನೀಡಿ ಕೈತೊಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತೀ ನೌಕರರಿಂದ ಮಾಸಿಕ 1500 ರಿಂದ 2ಸಾವಿರ ರೂ.ಗಳನ್ನು ಗುತ್ತಿಗೆದಾರರು ಕಡಿತ ಮಾಡುವುದರೊಂದಿಗೆ ಕಾರ್ಮಿಕರಿಗೆ ಸಮವಸ್ತ್ರ ನೀಡುವ ಹೆಸರಿನಲ್ಲಿ ದುಪ್ಪಟ್ಟು ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಇದರೊಂದಿಗೆ ಪಿಎಫ್, ಇಎಸ್‍ಐ ಮೊತ್ತದ ಜೊತೆಗೆ ಅದರ ನಿರ್ವಹಣೆಗಾಗಿಯೂ ಹಣ ವಸೂಲಿ ಮಾಡುವ ಮೂಲಕ ಕಾರ್ಮಿಕರನ್ನು ಶೋಷಿಸುತ್ತಿದ್ದು, ಇದರ ವಿರುದ್ಧ ಕ್ರಮಕೈಗೊಳ್ಳಬೇಕಾದ ಆರೋಗ್ಯ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮೌನವಾಗಿರುವುದನ್ನು ಗಮನಿಸಿದರೆ ಈ ಶೋಷಣೆಯಲ್ಲಿ ಅವರುಗಳೂ ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದರು.

ಹೆಚ್ಚಳವಾದ ವೇತನವನ್ನು ಪಡೆಯಲಾಗದೆ ಕಾರ್ಮಿಕರು ಕಂಗಾಲಾಗಿದ್ದು,  ಗುತ್ತಿಗೆದಾರರು ಕಾರ್ಮಿಕರ ವೇತವನ್ನು ಕಡಿತ ಮಾಡುವ ಮೂಲಕ ದುಪ್ಪಟ್ಟು ಲಾಭ ಮಾಡಿಕೊಳ್ಳುತ್ತಿದ್ದಾರೆ. ಇಎಸ್‍ಐ ಸೌಲಭ್ಯ ದೊರಕುತ್ತಿಲ್ಲ: ನೌಕರರ ವೇತನದಲ್ಲಿ ಇಎಸ್‍ಐ ಕಡಿತಗೊಳಿಸಲಾಗುತ್ತಿದ್ದರೂ, ಕಾರ್ಮಿಕರು ಅನಾರೋಗ್ಯಕ್ಕೆ ಒಳಗಾದಾಗ ಇಎಸ್‍ಐ ಸೌಲಭ್ಯ ಪಡೆಯಲು ಜಿಲ್ಲೆಯ ಯಾವ ಆಸ್ಪತ್ರೆಗೆ ತೆರಳಬೇಕು ಎಂಬುದನ್ನು ನಮೂದಿಸಿಲ್ಲ. ಅಲ್ಲದೆ ಕೊಡಗು ಜಿಲ್ಲೆಯಲ್ಲಿ ಸಾವಿರಾರು ಮಂದಿ ಕಾರ್ಮಿಕರಿದ್ದರೂ, ಇಲ್ಲಿ ಇಎಸ್‍ಐ ಆಸ್ಪತ್ರೆ ಇಲ್ಲದಿರುವುದು ದೌರ್ಭಾಗ್ಯವಾಗಿದೆ ಎಂದು ಭರತ್ ಆರೋಪಿಸಿದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ಕಾರ್ಮಿಕರ ಶೋಷಣೆಯ ಬಗ್ಗೆ ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದರೊಂದಿಗೆ ಕೂಡಲೇ ಗುತ್ತಿಗೆದಾರರ ಸಭೆ ನಡೆಸಿ ಸರಕಾರ ನಿಗದಿಪಡಿಸಿದ ವೇತನ ಹಾಗೂ ಬಾಕಿ ವೇತನ, ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳುವಂತೆ ಕೋರಲಾಗುವುದು. ಮುಂದಿನ ಒಂದು ತಿಂಗಳ ಒಳಗಾಗಿ ನೌಕರರ ಈ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳ ಸಿಬ್ಬಂದಿಗಳು ಕೆಲಸ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಭರತ್ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಕೆ.ಕೆ.ರಜಿನಿ, ಉಪ ಕಾರ್ಯದರ್ಶಿ ಓಮನ, ಸದಸ್ಯರಾದ ಬಿ.ಎಸ್.ಮಂಜುಳಾ, ಜಿ.ಸಿ.ರತ್ನಕುಮಾರಿ ಹಾಗೂ ಲತಾ ಉಪಸ್ಥಿತರಿದ್ದರು.

Please follow and like us:
0
http://bp9news.com/wp-content/uploads/2018/06/Z-P.C.AHAMAD-KUTTY-1-749x1024.jpghttp://bp9news.com/wp-content/uploads/2018/06/Z-P.C.AHAMAD-KUTTY-1-150x150.jpgBP9 Bureauಕೊಡಗುಮಡಿಕೇರಿ : ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ದುಡಿಯುತ್ತಿರುವ ಸ್ವಚ್ಛತಾ ಮತ್ತು ಇತರ ನೌಕರರಿಗೆ ಸರಕಾರ ನಿಗದಿಪಡಿಸಿದ ವೇತನ ನೀಡದೆ ಗುತ್ತಿಗೆದಾರರು ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಸರಕಾರಿ ಆಸ್ಪತ್ರೆಯ ಸ್ವಚ್ಛತಾ ಮತ್ತು ಇತರ ಸಿಬ್ಬಂದಿಗಳ ಸಂಘ, ಮುಂದಿನ ಒಂದು ತಿಂಗಳ ಒಳಗಾಗಿ ಜಿಲ್ಲಾಡಳಿತ ಈ ಸಂಬಂಧ ಕ್ರಮಕೈಗೊಳ್ಳದಿದ್ದಲ್ಲಿ ಕೆಲಸ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸುವುದಾಗಿ ಎಚ್ಚರಿಸಿದೆ. var domain = (window.location != window.parent.location)?...Kannada News Portal