ಮಡಿಕೇರಿ : ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಗಾಳಿ ಮಳೆಗೆ ಉಂಟಾಗಿರುವ ಸರಕಾರಿ ಹಾಗೂ ಖಾಸಗಿ ಆಸ್ತಿಪಾಸ್ತಿ ಹಾನಿಯ ನಷ್ಟದ ಪ್ರಮಾಣವನ್ನು ಅಂದಾಜು ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿರುವ ಬಗ್ಗೆ ರಾಜ್ಯ ಕಂದಾಯ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತಾ ಹಾಗೂ ಜೀವನೋಪಾಯ ಖಾತೆ ಸಚಿವ ಆರ್.ವಿ.ದೇಶಪಾಂಡೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹವಾಮಾನ ಪರಿಸ್ಥಿತಿ, ಬೆಳೆ ಪರಿಸ್ಥಿತಿ ಹಾಗೂ ಮಳೆ ಹಾನಿ ಬಗ್ಗೆ  ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಈ ಸಂಬಂಧ ಮರು ಸಮೀಕ್ಷೆ ನಡೆಸಿ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು. ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಕೆಲಸ ಮಾಡುವ ಬದಲು ಸ್ಥಳ ಪರಿಶೀಲನೆಗೆ ತೆರಳುವಂತೆ ಆದೇಶಿಸಿದರಲ್ಲದೆ, ಕಾನೂನು ಚೌಕಟ್ಟಿನ ಹೊರತಾಗಿ ಮಾನವೀಯ ನೆಲೆಯಲ್ಲೂ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.

ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಜಿಲ್ಲಾಡಳಿತದ ಬಳಿ 10 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಅನುದಾನ ಲಭ್ಯವಿದ್ದರೂ, ಜಿಲ್ಲೆಯಲ್ಲಿ ಮಳೆಯಿಂದಾಗಿ ಸಂಪೂರ್ಣವಾಗಿ ಕುಸಿದಿರುವ ಮನೆಗಳ ಮಾಲೀಕರಿಗೆ ಇನ್ನೂ ಪರಿಹಾರ ಒದಗಿಸದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಪೂರ್ಣವಾಗಿ ಮನೆ ಕಳೆದುಕೊಂಡವರಿಗೆ 24 ಗಂಟೆಗಳ ಒಳಗಾಗಿ ಪರಿಹಾರ ನೀಡುವಂತೆ ಆದೇಶಿಸಿದರಲ್ಲದೆ, ಮನೆಗಳು ಹಾನಿಯಾದ ಸಂದರ್ಭ ನಷ್ಟದ ಅಂದಾಜು ಮಾಡುವಾಗ ಇರುವ ಮಾನದಂಡಗಳಲ್ಲಿ ಸಡಿಲಿಕೆ ಮಾಡುವಂತೆಯೂ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಡಿಕೇರಿ ಹಾಗೂ ವೀರಾಜಪೇಟೆ ತಾಲೂಕಿನಲ್ಲಿ ಸಾಕಷ್ಟು ಮನೆಗಳು ಸಂಪೂರ್ಣವಾಗಿ ಕುಸಿದಿದ್ದರೂ, ಅಧಿಕಾರಿಗಳು ಯಾವುದೇ ಮನೆ ಸಂಪೂರ್ಣವಾಗಿ ಕುಸಿದಿಲ್ಲ ಎಂದು ವರದಿ ನೀಡಿರುವ ಬಗ್ಗೆ ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರು ಸಭೆಯಲ್ಲಿ ಕೆಂಡಮಂಡಲರಾದರಲ್ಲದೆ, ಎರಡೂ ತಾಲೂಕುಗಳ ತಹಶೀಲ್ದಾರರುಗಳನ್ನು ಸಭೆಯಲ್ಲೇ ತರಾಟೆಗೆ ತೆಗೆದುಕೊಂಡರು.

ಪ್ರಕೃತಿ ವಿಕೋಪದಂತಹ ತುರ್ತು ಪರಿಸ್ಥಿತಿಯಲ್ಲಿ ಅಧಿಕಾರಿಗಳು ಕೈಗೆ ವಾಚು ಕಟ್ಟಿಕೊಂಡು ಕೆಲಸ ಮಾಡುವುದನ್ನು ಕೈಬಿಡುವಂತೆ ಸೂಚ್ಯವಾಗಿ ನುಡಿದ ಸಚಿವರು, ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಕೆಲಸ ಮಾಡುವ ಬದಲು ಅವರವರ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರವಾಸ ಮಾಡುವಂತೆ ಸಲಹೆ ಮಾಡಿದರಲ್ಲದೆ, ಜನಪ್ರತಿನಿಧಿಗಳೊಂದಿಗೆ ಸಂಪರ್ಕದಲ್ಲಿರುವಂತೆ ಸೂಚಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಸಂಪರ್ಕದಲ್ಲಿರುವುದು ತಪ್ಪಲ್ಲ. ಅಲ್ಲದೆ ಜನರಿಗೆ ಉಪಯೋಗವಾಗುವ ಕೆಲಸವನ್ನು ಮಾಡುವ ಅಧಿಕಾರಿಗಳಿಗೆ ಮೋದಿಯವರಾಗಲಿ, ಕುಮಾರಸ್ವಾಮಿಯವರಾಗಲಿ ಏನೂ ಮಾಡುವುದಿಲ್ಲ ಎಂದು ಸೂಚ್ಯವಾಗಿ ನುಡಿದರು.

ಜಿಲ್ಲಾಧಿಕಾರಿಗಳು ವಾರಕ್ಕೆ ಎರಡು ಬಾರಿ ತಹಶೀಲ್ದಾರರು ಹಾಗೂ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ನಡೆಸುವಂತೆ ಸಲಹೆ ಮಾಡಿದ ಸಚಿವರು, ಪ್ರತಿ ವಾರ ಪ್ರಮುಖ ಇಲಾಖೆ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿ ಅಧಿಕೃತವಾದ ಮಾಹಿತಿಗಳನ್ನು ಪಡೆದು ಸರಕಾರಕ್ಕೆ ವರದಿ ನೀಡುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಭತ್ತದ ಕೃಷಿಯಿಂದ ಕೃಷಿಕರು ವಿಮುಖರಾಗುತ್ತಿರುವ ಬಗ್ಗೆ ಮಾಹಿತಿ ಪಡೆದ ಸಚಿವರು, ಪರ್ಯಾಯ ಬೆಳೆಗಳನ್ನು ಬೆಳೆಯುವತ್ತ ರೈತರನ್ನು ಪ್ರೇರೇಪಿಸುವತ್ತ ಕೃಷಿ ಹಾಗೂ  ತೋಟಗಾರಿಕಾ ಇಲಾಖೆ ಅಧಿಕಾರಿಗಳು ಪ್ರಯತ್ನಿಸುವಂತೆ ಸಲಹೆ ಮಾಡಿದರಲ್ಲದೆ, ಕೃಷಿ ಜಮೀನನ್ನು ಪಾಳು ಬಿಡುವುದು ರಾಷ್ಟ್ರೀಯ ನಷ್ಟ ಎಂದು ವಿಶ್ಲೇಷಿಸಿದರು.

ಜಿಲ್ಲೆಯ ರೈತರು ಭತ್ತದ ಕೃಷಿಯಿಂದ ವಿಮುಖರಾಗಿರುವುದಕ್ಕೆ ಆನೆಹಾವಳಿ ಹಾಗೂ ಉತ್ಪಾದನಾ ವೆಚ್ಚ ಅಧಿಕವಾಗಿರುವುದು ಕಾರಣವಾಗಿದೆ ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ಅಪ್ಪಚ್ಚುರಂಜನ್ ಅವರು ಗಮನಸೆಳೆದರಲ್ಲದೆ, ಸರಕಾರ ಭತ್ತದ ಕೃಷಿ ಮಾಡುವ ರೈತರಿಗೆ ಪ್ರೋತ್ಸಾಹಧನ ನೀಡಿದಲ್ಲಿ ಜಿಲ್ಲೆಯಲ್ಲಿ ಮತ್ತೆ ಭತ್ತದ ಕೃಷಿ ತಲೆ ಎತ್ತಲಿದೆ ಎಂದು ನುಡಿದರು.

ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ: ಜಿಲ್ಲೆಯ ತಹಶೀಲ್ದಾರರ ಕಚೇರಿಗಳು, ಕೃಷಿ ಇಲಾಖೆ, ಸಣ್ಣ ನೀರಾವರಿ, ಅರಣ್ಯ, ಚೆಸ್ಕಾಂ  ಸೇರಿದಂತೆ ಕೆಲವು ಇಲಾಖೆಗಳ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಶಾಸಕರಾದ ಬೋಪಯ್ಯ, ಅಪ್ಪಚ್ಚುರಂಜನ್ ಹಾಗೂ ಎಂ.ಪಿ.ಸುನಿಲ್ ಸುಬ್ರಮಣಿ ಅವರುಗಳು ಸಚಿವರ ಎದುರೇ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಸಚಿವರು, ತಮ್ಮ ಜಿಲ್ಲೆಯಲ್ಲಿನ ಕೆಲವು ಉದಾಹರಣೆಗಳನ್ನು ನೀಡಿ ಅಧಿಕಾರಿಗಳು ಜನಪರವಾಗಿರುವಂತೆ ಸಲಹೆ ಮಾಡಿದರು. ಅಲ್ಲದೆ ನೀವು ಜನಪರವಾಗಿದ್ದಲ್ಲಿ ನಿಮಗೆ ಯಾರೂ ಏನನ್ನೂ ಮಾಡಲಾಗುವುದಿಲ್ಲ ಎಂದು ಹೇಳಿದರು.

ಜಿಲ್ಲೆಯಲ್ಲಿ ಪ್ರಮುಖ ರಸ್ತೆಗಳ ಬದಿ ಹಾಗೂ ಮನೆಗಳ ಸಮೀಪ ಅಪಾಯದ ಮುನ್ಸೂಚನೆ ನೀಡುತ್ತಿರುವ ಮರಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು, ಮಾಕುಟ್ಟ ರಸ್ತೆ ಕುಸಿತ ಉಂಟಾದ ಸಂದರ್ಭ ಹಗಲಿರುಳು ಕಾರ್ಯನಿರ್ವಹಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ಕೇರಳ ಸರಕಾರದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಅಲ್ಲದೆ ಜಿಲ್ಲೆಯ ಕೆಲವು ಅಧಿಕಾರಿಗಳೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರು.

ಮಹಾಮಳೆಗೆ ಕೊಡಗಿನಲ್ಲಿ 14 ಕೋಟಿ ರೂ.ಗಳಷ್ಟು ನಷ್ಟ

ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯಲ್ಲಿ ಸುಮಾರು 14 ಕೋಟಿ ರೂ.ಗಳಷ್ಟು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿರುವುದಾಗಿ ಜಿಲ್ಲಾಡಳಿತ ಅಂದಾಜು ಮಾಡಿ ವರದಿ ನೀಡಿದೆ. ಗಾಳಿ ಮಳೆಯಿಂದಾಗಿ ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ 69 ಲಕ್ಷ, ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 37.15 ಲಕ್ಷ,  ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ 627.40 ಲಕ್ಷ, ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ 575.25 ಲಕ್ಷ ಹಾಗೂ ಚೆಸ್ಕಾಂ ವ್ಯಾಪ್ತಿಯಲ್ಲಿ 84.74 ಲಕ್ಷ ಸೇರಿದಂತೆ ಒಟ್ಟು 1393.55ಲಕ್ಷ ರೂ. ನಷ್ಟವಾಗಿರುವುದಾಗಿ ವಿವರಿಸಿದರು.

ಈ ಸಂದರ್ಭ ಪ್ರತಿಕ್ರಿಯಿಸಿದ ಚೆಸ್ಕಾಂ ಕಾರ್ಯಪಾಲಕ ಅಭಿಯಂತರರು ಜಿಲ್ಲೆಯಲ್ಲಿ 1374 ವಿದ್ಯುತ್ ಕಂಬಗಳು ಹಾನಿಗೊಳಗಾಗಿದ್ದು, ಈಗಾಗಲೇ 1110 ಕಂಬಗಳನ್ನು ಮತ್ತೆ ನೆಡಲಾಗಿದೆ. 93 ಟ್ರಾನ್ಸ್‍ಫಾರ್ಮರ್ ಪೈಕಿ 80ನ್ನು ಮರು ಸ್ಥಾಪಿಸಲಾಗಿದೆ. ಮುಂದಿನ ಮೂರು ದಿನಗಳಲ್ಲಿ ಜಿಲ್ಲೆಯ ಬಹುತೇಕ ಎಲ್ಲಾ ಗ್ರಾಮಗಳಿಗೂ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಭರವಸೆ ನೀಡಿದರು.

ಆದರೆ ಅಧಿಕಾರಿಯ ಈ ಉತ್ತರಕ್ಕೆ ಪ್ರತಿಕ್ರಿಯಿಸಿದ ಶಾಸಕರುಗಳು, ಸಭೆಗೆ ಸುಳ್ಳು ಮಾಹಿತಿ ನೀಡಬೇಡಿ. ನಿಮ್ಮಲ್ಲಿ ಸಿಬ್ಬಂದಿ ಕೊರತೆ ಇದೆ. ಇರುವ ಸಿಬ್ಬಂದಿಗಳಲ್ಲಿ 3 ಅಲ್ಲ 5 ದಿನಗಳಾದರೂ ನಿಮಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಿಲ್ಲ. ಗ್ರಾಮೀಣ ಪ್ರದೇಶಗಳ ವಸ್ತುಸ್ಥಿತಿಯ ಬಗ್ಗೆ ನಿಮಗೆ ಅರಿವೇ ಇಲ್ಲ ಎಂದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ,  ವೀಣಾ ಅಚ್ಚಯ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಗಂಗಾರಾಂ ಬಡೇರಿಯಾ, ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಹಾಜರಿದ್ದರು.

ಮಳೆಹಾನಿ ಪ್ರದೇಶಗಳಿಗೆ ಸಚಿವ ಆರ್.ವಿ.ದೇಶಪಾಂಡೆ ಭೇಟಿ

ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಹಾನಿಗೊಳಗಾಗಿ ಬಂದ್ ಆಗಿರುವ ವೀರಾಜಪೇಟೆ-ಕೇರಳ ಅಂತರರಾಜ್ಯ  ರಸ್ತೆಯನ್ನು   ರಾಜ್ಯದ ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಪರಿಶೀಲನೆ ನಡೆಸಿದರು. ಹೆದ್ದಾರಿ ಧರೆ ಕುಸಿತಕ್ಕೆ ಕಾರಣವಾಗಿರುವ ರಸ್ತೆ ಬದಿಯಲ್ಲಿರುವ ನೂರಾರು ಮರಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು.

 

Please follow and like us:
0
http://bp9news.com/wp-content/uploads/2018/06/Z-DESHPANDE-MEETING-1-1.jpghttp://bp9news.com/wp-content/uploads/2018/06/Z-DESHPANDE-MEETING-1-1-150x150.jpgBP9 Bureauಕೊಡಗುಮಡಿಕೇರಿ : ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಗಾಳಿ ಮಳೆಗೆ ಉಂಟಾಗಿರುವ ಸರಕಾರಿ ಹಾಗೂ ಖಾಸಗಿ ಆಸ್ತಿಪಾಸ್ತಿ ಹಾನಿಯ ನಷ್ಟದ ಪ್ರಮಾಣವನ್ನು ಅಂದಾಜು ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿರುವ ಬಗ್ಗೆ ರಾಜ್ಯ ಕಂದಾಯ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತಾ ಹಾಗೂ ಜೀವನೋಪಾಯ ಖಾತೆ ಸಚಿವ ಆರ್.ವಿ.ದೇಶಪಾಂಡೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹವಾಮಾನ ಪರಿಸ್ಥಿತಿ, ಬೆಳೆ ಪರಿಸ್ಥಿತಿ ಹಾಗೂ ಮಳೆ ಹಾನಿ ಬಗ್ಗೆ  ಪರಿಶೀಲನಾ ಸಭೆ ನಡೆಸಿ...Kannada News Portal