ಮಡಿಕೇರಿ: ಅತಿವೃಷ್ಟಿ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರನ್ನು ಕೆಲವು ಸಮಸ್ಯೆಗಳು ಕಾಡುತ್ತಲೇ ಇದೆ. ಕುಶಾಲನಗರದ ವಾಲ್ಮೀಕಿ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರು ಮೂಲಭೂತ ಸೌಲಭ್ಯಗಳ ಕೊರತೆ ಎದುರಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.

ಗುಣಮಟ್ಟವಿಲ್ಲದ ಆಹಾರವನ್ನು ನೀಡಲಾಗುತ್ತಿದೆ ಮತ್ತು ಕೇವಲ ಮೂರು ಶೌಚಾಲಯಗಳ ವ್ಯವಸ್ಥೆಯನ್ನಷ್ಟೇ ಮಾಡಲಾಗಿದೆ. ಅಲ್ಲದೆ ನಮ್ಮ ಸಂಕಷ್ಟವನ್ನು ಆಲಿಸಬೇಕಾದ ಸೋಮವಾರಪೇಟೆ ತಾಲ್ಲೂಕು ತಹಶೀಲ್ದಾರ್ ಮಹೇಶ್ ಅವರು ದರ್ಪದಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ದಿಢೀರ್ ಪ್ರತಿಭಟನೆಗಿಳಿದು ಅಸಮಾಧಾನ ವ್ಯಕ್ತಪಡಿಸಿದರು. ಸಂತ್ರಸ್ತರನ್ನು ತಹಶೀಲ್ದಾರ್ ಕೀಳಾಗಿ ಕಾಣುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಅಧಿಕಾರಿಯನ್ನು ಬದಲಾಯಿಸಬೇಕು ಮತ್ತು ಮೂಲಭೂತ ಸೌಲಭ್ಯಗಳನ್ನು ನೀಡಬೇಕೆಂದು ಆಗ್ರಹಿಸಿದರು.

ಮಧ್ಯರಾತ್ರಿ 12 ಗಂಟೆಯವರೆಗೂ ಪ್ರತಿಭಟನೆ ತೀವ್ರಗೊಂಡಾಗ ರಾತ್ರಿ 12.15 ಗಂಟೆಗೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಸೌಲಭ್ಯ ಕಲ್ಪಿಸುವ ಭರವಸೆ ನೀಡಿದರು. ಅಲ್ಲದೆ, ತಹಶೀಲ್ದಾರ್ ಕರ್ತವ್ಯ ಲೋಪ ಮಾಡಿರುವುದು ಸಾಬೀತಾದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಈ ಸಂದರ್ಭ ಕೆಲವು ಸಂತ್ರಸ್ತರು ನೋಡಲ್ ಅಧಿಕಾರಿ ಹಾಗೂ ತಹಸೀಲ್ದಾರ್ ಅವರ ಅಸಮರ್ಪಕ ಕಾರ್ಯವೈಖರಿ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ತಮ್ಮ ಅಳಲನ್ನು ತೋಡಿಕೊಂಡರು. ಕೇಂದ್ರದಲ್ಲಿರುವ ಸಂತ್ರಸ್ತರಿಗೆ ತಮ್ಮ ಗ್ರಾಮಗಳಿಗೆ ತೆರಳಲು ಬಸ್ ಪಾಸ್ ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಇದರಿಂದ ನಮಗೆ ಅನಾನುಕೂಲ ಉಂಟಾಗುತ್ತಿದೆ ಎಂದು ದೂರಿಕೊಂಡರು. ದಾನಿಗಳು ನೀಡುವ ನಗದನ್ನು ಪಡೆಯಲು ತಮಗೆ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು. ಘಟನೆ ಸಂದರ್ಭ ಬೆರಳೆಣಿಕೆಯಷ್ಟು ಪೊಲೀಸ್ ಸಿಬ್ಬಂದಿಗಳು ಗಲಭೆ ನಿಯಂತ್ರಿಸಲು ಪ್ರಯತ್ನಿಸಿದರೂ ಸಫಲರಾಗದೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಯಿತು. ಕುಶಾಲನಗರ ಪಟ್ಟಣದಲ್ಲಿದ್ದ ಕೆಎಸ್‍ಆರ್‍ಪಿ ತುಕಡಿಯ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಸಿದ ಪೊಲೀಸ್ ಅಧಿಕಾರಿಗಳು ಸಂತ್ರಸ್ತರನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.

ವಾಲ್ಮೀಕಿ ಭವನದಲ್ಲಿರುವ ಸಂತ್ರಸ್ತ ಕೇಂದ್ರಕ್ಕೆ ಭೇಟಿ ನೀಡುವ ಮತ್ತು ಅಲ್ಲಿಂದ ಹೊರಹೋಗುವ ವ್ಯಕ್ತಿಗಳ ಮೇಲೆ ಸಂಪೂರ್ಣ ನಿಗಾವಹಿಸಲಾಗುವುದು. ಹಾರಂಗಿ ರಸ್ತೆಯ ಪ್ರವೇಶದ್ವಾರದಲ್ಲಿ ವಿಶೇಷ ಪೊಲೀಸ್ ಭದ್ರತಾ ಕೇಂದ್ರ ಸ್ಥಾಪಿಸಲಾಗುವುದು ಎಂದು ಡಿವೈಎಸ್‍ಪಿ ಮುರಳೀಧರ್ ಮಾಹಿತಿ ನೀಡಿದರು.

ತಹಶೀಲ್ದಾರ್ ಆಸ್ಪತ್ರೆಗೆ ದಾಖಲು

ಈ ನಡುವೆ ಪ್ರತಿಭಟನೆಯ ಸಂದರ್ಭ ನನ್ನ ಮೇಲೆ ಹಲ್ಲೆಯಾಗಿದೆ ಎಂದು ಆರೋಪಿಸಿ ಸೋಮವಾರಪೇಟೆ ತಾಲ್ಲೂಕು ತಹಶೀಲ್ದಾರ್ ಮಹೇಶ್ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಂತ್ರಸ್ತರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂಜೀವ, ಸುರೇಶ ಸೇರಿದಂತೆ ಕೆಲವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಹೇಶ್ ದೂರಿನಲ್ಲಿ ತಿಳಿಸಿದ್ದಾರೆ.

ಕೇಂದ್ರದ ನೋಡೆಲ್ ಅಧಿಕಾರಿಯ ದೂರಿನ ಹಿನ್ನಲೆಯಲ್ಲಿ ತಹಶೀಲ್ದಾರ್ ಹಾಗೂ ಸಿಬ್ಬಂದಿಗಳು ಕೇಂದ್ರದಲ್ಲಿ ಸಂತ್ರಸ್ತರ ಹಾಜರಾತಿ ಪಡೆಯಲು ತೆರಳಿದಾಗ ಈ ಘಟನೆ ಸಂಭವಿಸಿದೆ.  ತಹಸೀಲ್ದಾರ್ ಮಹೇಶ್ ಅವರನ್ನು ಕುಶಾಲನಗರ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ನಂತರ ಮಡಿಕೇರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

Please follow and like us:
0
http://bp9news.com/wp-content/uploads/2018/09/Z-PROTEST-2-1.pnghttp://bp9news.com/wp-content/uploads/2018/09/Z-PROTEST-2-1-150x150.pngBP9 Bureauಕೊಡಗುಪ್ರಮುಖಮಡಿಕೇರಿ: ಅತಿವೃಷ್ಟಿ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರನ್ನು ಕೆಲವು ಸಮಸ್ಯೆಗಳು ಕಾಡುತ್ತಲೇ ಇದೆ. ಕುಶಾಲನಗರದ ವಾಲ್ಮೀಕಿ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರು ಮೂಲಭೂತ ಸೌಲಭ್ಯಗಳ ಕೊರತೆ ಎದುರಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() *...Kannada News Portal