ಮಡಿಕೇರಿ:  ಮೈಸೂರಿನಿಂದ ಕೊಡಗಿನ ಮೂಲಕ ತಲಚೇರಿಗೆ ರೈಲು ಮಾರ್ಗ ನಿರ್ಮಿಸುವುದರಲ್ಲಿ ರಾಜ್ಯ ಸರಕಾರದ ಪಾತ್ರವೇನೂ ಇಲ್ಲ ಎಂದು ಸ್ಪಷ್ಟಪಡಿಸಿರುವ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು, ಜನರ ಭಾವನೆಗಳಿಗೆ ವಿರುದ್ಧವಾಗಿ ಸರಕಾರ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಮಳೆಹಾನಿ ಕುರಿತ ಪರಿಶೀಲನಾ ಸಭೆಯಲ್ಲಿ ಶಾಸಕ ಕೆ.ಜಿ.ಬೋಪಯ್ಯ ಅವರು ಗಮನಸೆಳೆದ ಸಂದರ್ಭ ಮಾತನಾಡಿದ ಸಚಿವರು, ಮೈಸೂರು-ತಲಚೇರಿ ರೈಲ್ವೆ ಮಾರ್ಗ ನಿರ್ಮಾಣದಲ್ಲಿ ರಾಜ್ಯ ಸರಕಾರಕ್ಕೆ ಆಸಕ್ತಿ ಇಲ್ಲ. ಕೇರಳ ಸರಕಾರದ ಒತ್ತಡದ ಮೇರೆಗೆ ಕೇಂದ್ರ ಸರಕಾರ ಯೋಜನೆಗೆ ಅನುಮೋದನೆ ನೀಡಿದರೂ, ಕರ್ನಾಟಕ ಹಾಗೂ ಕೊಡಗಿಗೆ ಇದರಿಂದ ಪ್ರಯೋಜನವಾಗುವುದಿದ್ದಲ್ಲಿ ಮಾತ್ರ ರಾಜ್ಯ ಸರಕಾರ ಗಮನಹರಿಸಲಿದೆ. ಆದರೆ ಈ ರೈಲ್ವೆ ಮಾರ್ಗದಿಂದ ರಾಜ್ಯಕ್ಕಾಗಲಿ, ಕೊಡಗಿಗಾಗಲಿ ಯಾವುದೇ ಪ್ರಯೋಜನವಾಗುವುದಿಲ್ಲ ಎಂಬುದು ಈಗಾಗಲೇ ಮನವರಿಕೆಯಾಗಿದೆ ಎಂದು ಹೇಳಿದರು.

ಕೇರಳ ಸರಕಾರದ ನಿರ್ದೇಶನದಂತೆ ಅಲ್ಲಿನ ಅಧಿಕಾರಿಗಳು ಕೊಡಗಿನಲ್ಲಿ ಸರ್ವೆ ಕಾರ್ಯ ನಡೆಸುತ್ತಿದ್ದಾರೆ. ಆದರೆ ಈ ವಿಷಯ ಜಿಲ್ಲಾಡಳಿತದ ಗಮನಕ್ಕೂ ಬಂದಿಲ್ಲ. ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ ಬಳಿಕವಷ್ಟೇ ವಿಷಯ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಈ ಬಗ್ಗೆ ಕೇರಳ ಸರಕಾರಕ್ಕೆ ಪತ್ರ ಬರೆದು ವಿವರಣೆ ಕೋರುವಂತೆ ಜಿಲ್ಲಾ ದಂಡಾಧಿಕಾರಿಯವರಿಗೆ ಸೂಚಿಸಲಾಗಿದೆ. ಯಾವುದೇ ಸರಕಾರವಾದರೂ, ಕೊಡಗಿನಲ್ಲಿ ಸರ್ವೆ ಕಾರ್ಯ ನಡೆಸಬೇಕಾದರೆ ಅದರ ಉದ್ದೇಶಗಳ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತರಲೇಬೇಕು. ನಿಯಮ ಮೀರಿ ಸರ್ವೆ ಕಾರ್ಯ ನಡೆದಿದ್ದರೆ ಅದರ ಬಗ್ಗೆ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರವಿದೆ ಎಂದು ಹೇಳಿದರಲ್ಲದೆ, ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಂಡು ಸರಕಾರದ ಮಟ್ಟದಲ್ಲೂ ಈ ಬಗ್ಗೆ ಪತ್ರವ್ಯವಹಾರ ನಡೆಸಲಾಗುವುದು ಎಂದು ಸಚಿವ ದೇಶಪಾಂಡೆ ಸ್ಪಷ್ಟಪಡಿಸಿದರು.

Please follow and like us:
0
http://bp9news.com/wp-content/uploads/2018/06/Z-DESHPANDE-1.jpghttp://bp9news.com/wp-content/uploads/2018/06/Z-DESHPANDE-1-150x150.jpgBP9 Bureauಕೊಡಗುಮಡಿಕೇರಿ:  ಮೈಸೂರಿನಿಂದ ಕೊಡಗಿನ ಮೂಲಕ ತಲಚೇರಿಗೆ ರೈಲು ಮಾರ್ಗ ನಿರ್ಮಿಸುವುದರಲ್ಲಿ ರಾಜ್ಯ ಸರಕಾರದ ಪಾತ್ರವೇನೂ ಇಲ್ಲ ಎಂದು ಸ್ಪಷ್ಟಪಡಿಸಿರುವ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು, ಜನರ ಭಾವನೆಗಳಿಗೆ ವಿರುದ್ಧವಾಗಿ ಸರಕಾರ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಮಳೆಹಾನಿ ಕುರಿತ ಪರಿಶೀಲನಾ ಸಭೆಯಲ್ಲಿ ಶಾಸಕ ಕೆ.ಜಿ.ಬೋಪಯ್ಯ ಅವರು ಗಮನಸೆಳೆದ ಸಂದರ್ಭ ಮಾತನಾಡಿದ ಸಚಿವರು, ಮೈಸೂರು-ತಲಚೇರಿ ರೈಲ್ವೆ ಮಾರ್ಗ ನಿರ್ಮಾಣದಲ್ಲಿ ರಾಜ್ಯ ಸರಕಾರಕ್ಕೆ...Kannada News Portal