ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಮಳೆಯ ತೀವ್ರತೆ ಗುರುವಾರ ಕೊಂಚ ತಗ್ಗಿದೆಯಾದರು, ಜೀವನದಿ ಕಾವೇರಿಯ ಪ್ರವಾಹ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ತಗ್ಗಿ, ಬಿರುಸಿನ ಗಾಳಿ ಕಂಡು ಬಂದು ಆತಂಕವನ್ನು ಮೂಡಿಸಿತು. ಕಾವೇರಿಯ ಕ್ಷೇತ್ರ ಭಾಗಮಂಡಲದಲ್ಲಿ ರಾತ್ರಿಯ ಅವಧಿಯಲ್ಲಿ ಮಳೆಯ ಪ್ರಮಾಣ ಇಳಿಮುಖಗೊಂಡರೂ ಪ್ರವಾಹದ ಮಟ್ಟ ತಗ್ಗಿಲ್ಲ. ಕಳೆದ ಒಂದು ದಿನದ ಅವಧಿಯಲ್ಲಿ ಭಾಗಮಂಡಲ ಮತ್ತು ತಲಕಾವೇರಿ ಕ್ಷೇತ್ರ ವ್ಯಾಪ್ತಿಯಲ್ಲಿ 4 ಇಂಚಿಗೂ ಹೆಚ್ಚಿನ ಮಳೆಯಾಗಿದ್ದು, ಅಲ್ಲಿನ ಮಡಿಕೇರಿ ಮತ್ತು ಅಯ್ಯಂಗೇರಿ ರಸ್ತೆ ಪ್ರವಾಹದ ನೀರಿನಿಂದ ಆವೃತ್ತವಾಗಿದೆ.

ಪ್ರವಾಹದಲ್ಲಿ ಸಿಲುಕಿದ ಕಾರು

ಭಾಗಮಂಡಲದ ಅಯ್ಯಂಗೇರಿ ರಸ್ತೆಯ ಮೇಲೆ ಮೂರು ಅಡಿಗಳಿಗೂ ಹೆಚ್ಚಿನ ಪ್ರವಾಹದ ನೀರು ಆವರಿಸಿದೆ. ಈ ರಸ್ತೆಯಲ್ಲಿ ಅಪಾಯದ ಅರಿವಿಲ್ಲದೆ ಚಲಿಸಿದ ತಮಿಳುನಾಡಿನ ಪ್ರವಾಸಿಗರನ್ನು ಹೊಂದಿದ ಕಾರೊಂದು ನೀರಿನಲ್ಲಿ ಸಿಲುಕಿಕೊಂಡ ಘಟನೆ ಗುರುವಾರ ಬೆಳಗ್ಗೆ ನಡೆಯಿತು.

ತಲಕಾವೇರಿಗೆ ತೆರಳಿ ಹಿಂದಿರುಗುತ್ತಿದ್ದ ಪ್ರವಾಸಿಗರ ಕಾರು ಅಯ್ಯಂಗೇರಿ ರಸ್ತೆಯ ಪ್ರವಾಹದ ನೀರಿನಲ್ಲಿ ಸಾಗಿತ್ತು. ಈ ಸಂದರ್ಭ ಅಲ್ಲೇ ಸಮೀಪದಲ್ಲಿದ್ದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಅಪಾಯದ ಮುನ್ಸೂಚನೆ ನೀಡಿದರಾದರು, ಇದನ್ನು ಚಾಲಕ ನಿರ್ಲಕ್ಷಿಸಿದ ಪರಿಣಾಮ  ಕಾರು ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡಿತ್ತು. ಬಳಿಕ ಅಗ್ನಿಶಾಮಕ ದಳ, ಗೃಹ ರಕ್ಷಕ ದಳದ ಸಿಬ್ಬಂದಿಗಳು ಕಾರಿನಲ್ಲಿದ್ದ ಪ್ರವಾಸಿಗರನ್ನು ಬೋಟಿನ ಮೂಲಕ ಕರೆತಂದು ರಕ್ಷಿಸಿದರು.

ಜಿಲ್ಲಾಧಿಕಾರಿ ಭೇಟಿ

ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಮಳೆ ಹಾನಿ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ತಿತಿಮತಿ ಬಳಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಸೇತುವೆ, ಸುಂಟಿಕೊಪ್ಪದಲ್ಲಿ ಕುಸಿದಿರುವ ಶಾಲೆ ತಡೆಗೋಡೆ ಸೇರಿದಂತೆ ವಿವಿಧ ಭಾಗಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದರು. ಸಿದ್ದಾಪುರ ಕರಡಿಗೋಡು ಬಳಿ ಕಾವೇರಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಕರಡಿಗೋಡು ಬೆಟ್ಟದ ಕಾಡು ಬಳಿ ಕೆಲವು ಮನೆಗಳಿಗೆ  ನದಿ ನೀರು ನುಗ್ಗಿದೆ. ಮನೆಗಳಿಗೆ ನೀರು ನುಗ್ಗಿರುವ  ಹಿನ್ನೆಲೆಯಲ್ಲಿ 5-6 ಕುಟುಂಬಗಳು, ತಾತ್ಕಲಿಕವಾಗಿ ಬೇರೆ ಕಡೆಗಳಿಗೆ ಸ್ಥಳಾಂತರವಾಗಿದ್ದು, ಕೆಲವು  ಮನೆಗಳ ಗೋಡೆಗಳು ಮಳೆಯಿಂದ ಬಿರುಕು ಬಿಟ್ಟ ಬಗ್ಗೆ ವರದಿಯಾಗಿದೆ. ಕರಡಿಗೋಡು ವ್ಯಾಪ್ತಿಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ  ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಹಲವು ವರ್ಷಗಳಿಂದ ಮಳೆಗಾಲದಲ್ಲಿ, ಕಾವೇರಿ ನದಿ ನೀರು ಮನೆಗಳಿಗೆ ನುಗ್ಗುತ್ತಿದ್ದು, ದಿಡ್ಡಳ್ಳಿ ನಿವಾಸಿಗಳಿಗೆ ಪುರ್ನವಸತಿ ಕಲ್ಪಿಸಿದಂತೆ ತಮಗೆ  ಪರ್ಯಾಯ ವ್ಯವಸ್ಥೆ ಮಾಡಿದಲ್ಲಿ ಕರಡಿಗೋಡುವಿನಿಂದ ತೆರಳಲು ಸಿದ್ದವಿರುವುದಾಗಿ ಸಂತ್ರಸ್ಥರು ಜಿಲ್ಲಾಧಿಕಾರಿಗಳ ಗಮನ ಸೆಳೆದರು.

ಸಿದ್ದಾಪುರ ವ್ಯಾಪ್ತಿಯಿಂದ ಪೈಸಾರಿ ಭೂಮಿಗಳು ಒತ್ತುವರಿಯಾಗಿದ್ದು, ಅವುಗಳನ್ನು ತೆರವುಗೊಳಿಸಿ ನದಿ ದಡ ನಿವಾಸಿಗಳಿಗೆ ನಿವೇಶನಗಳ ರೀತಿಯಲ್ಲಿ  ವಿತರಿಸಿದರೆ. ಶಾಶ್ವತ ಪರಿಹಾರ ಕಾಣಬಹುದೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಮತ್ತು ಕಾರ್ಮಿಕ ಮುಖಂಡ ಪಿ.ಆರ್. ಭರತ್ ಜಿಲ್ಲಾಧಿಕಾರಿಗಳಿಗೆ ವಿವರಿಸಿದರು.

ನದಿಯಲ್ಲಿ ನೀರಿನ ಮಟ್ಟ ಹೆಚ್ಚಿರುವುದರಿಂದ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಕಂದಾಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಸೂಚನೆ ನೀಡಿದರು. ಪ್ರವಾಹ ಸಂತ್ರಸ್ಥ ಕುಟುಂಬಗಳಿಗೆ ಕರಡಿಗೋಡು ಸರ್ಕಾರಿ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ ಎಂದು ಕಂದಾಯಾಧಿಕಾರಿಗಳು ತಿಳಿಸಿದ್ದಾರೆ.

ಪರಿಹಾರಕ್ಕೆ ವೀಣಾಅಚ್ಚಯ್ಯ ಮನವಿ

ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಅಪಾರ ನಷ್ಟ ಉಂಟಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ವೀಣಾಅಚ್ಚಯ್ಯ ಅವರು ವಿಧಾನ ಪರಿಷತ್‍ನಲ್ಲಿ ಕಂದಾಯ ಸಚಿವರ ಗಮನ ಸೆಳೆದರು. ಅತಿವೃಷ್ಟಿ ಹಾನಿಗೆ ಶೀಘ್ರ ಪರಿಹಾರ ನೀಡುವಂತೆ ಮನವಿ ಮಾಡಿದರು.

ಮಳೆಯಲ್ಲೂ ಮಾನ್ಸೂನ್ ಪ್ರವಾಸೋದ್ಯಮದ ಮಜಾ

ಮಾನ್ಸೂನ್ ಪ್ರವಾಸೋದ್ಯಮದ ಹೆಸರಿನಲ್ಲಿ ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಮಂಜಿನ ನಗರಿ ಮಡಿಕೇರಿಯ ಮುಖ್ಯ ರಸ್ತೆಗಳಲ್ಲಿ ಮಳೆಯಲ್ಲೇ ಅಡ್ಡಾಡುತ್ತಿರುವ ಯುವ ಪ್ರವಾಸಿಗರು ತುಂಬಿ ಹರಿಯುತ್ತಿರುವ ಅಬ್ಬಿ ಜಲಪಾತ ಹಾಗೂ ರಾಜಾಸೀಟು ಉದ್ಯಾನವನದಲ್ಲಿ ಪ್ರಕೃತಿ ಸಿರಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಶ್ರೀಓಂಕಾರೇಶ್ವರ ದೇವಾಲಯದ ಪುಷ್ಕರಣಿಯಲ್ಲಿ ಉಕ್ಕಿ ಹರಿಯುತ್ತಿರುವ ನೀರಿನ ಮಟ್ಟ ಕುಗ್ಗಿಲ್ಲ. ಪ್ರವಾಸಿಗರು ಹಾಗೂ ಭಕ್ತರು ತುಂಬಿದ ಕೆರೆ ನೀರಿನ ಮೂಲಕವೇ ದೇವಾಲಯವನ್ನು ಪ್ರವೇಶಿಸುತ್ತಿದ್ದಾರೆ.ಮಳೆಯ ಕಾರಣದಿಂದ ರಜೆಯಲ್ಲಿದ್ದ ಮಕ್ಕಳು ಗುರುವಾರ ಮಳೆ ಬಿಡುವು ನೀಡಿದ್ದರಿಂದ ಶ್ರೀಓಂಕಾರೇಶ್ವರ ದೇವಾಲಯದ ಕೆರೆ ನೀರಿನಲ್ಲಿ ಆಟವಾಡಿ ರಜೆಯ ಮಜಾ ಅನುಭವಿಸಿದರು.

 ಮಳೆ ವಿವರ

ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 77.97 ಮಿ.ಮೀ. ಕಳೆದ ವರ್ಷ ಇದೇ ದಿನ 6.65 ಮಿ.ಮೀ., ಜನವರಿಯಿಂದ ಇಲ್ಲಿಯವರೆಗಿನ ಮಳೆ 1846.66  ಕಳೆದ ವರ್ಷ ಇದೇ ಅವಧಿಯಲ್ಲಿ 822.30 ಮಿ.ಮೀ ಮಳೆಯಾಗಿದೆ.

ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 86.90 ಮಿ.ಮೀ. ಕಳೆದ ವರ್ಷ ಇದೇ ದಿನ 7.10 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2536.11 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1130.75,  ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 63.32 ಮಿ.ಮೀ. ಕಳೆದ ವರ್ಷ ಇದೇ ದಿನ 2.18 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1607.49 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 722.63 ಮಿ.ಮೀ. ಮಳೆಯಾಗಿತ್ತು.

ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 83.70 ಮಿ.ಮೀ. ಕಳೆದ ವರ್ಷ ಇದೇ ದಿನ 10.67 ಜನವರಿಯಿಂದ ಇಲ್ಲಿಯವರೆಗಿನ ಮಳೆ 1396.37 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 613.52 ಮಿ.ಮೀ. ಮಳೆಯಾಗಿತ್ತು.

ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:ಮಡಿಕೇರಿ ಕಸಬಾ 88.60, ನಾಪೋಕ್ಲು 90.20, ಸಂಪಾಜೆ 58.80, ಭಾಗಮಂಡಲ 110, ವಿರಾಜಪೇಟೆ ಕಸಬಾ 65.20, ಹುದಿಕೇರಿ 97, ಶ್ರೀಮಂಗಲ 78.60, ಪೊನ್ನಂಪೇಟೆ 40.60, ಅಮ್ಮತಿ 60, ಬಾಳೆಲೆ 38.50, ಸೋಮವಾರಪೇಟೆ ಕಸಬಾ 83.06, ಶನಿವಾರಸಂತೆ 115.03, ಶಾಂತಳ್ಳಿ 182.02, ಕೊಡ್ಲಿಪೇಟೆ 70.02, ಕುಶಾಲನಗರ 18.06, ಸುಂಟಿಕೊಪ್ಪ 34.02 ಮಿ.ಮೀ. ಮಳೆಯಾಗಿದೆ.

ಹಾರಂಗಿ ಜಲಾಶಯದ ನೀರಿನ ಮಟ್ಟ 

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2856.64 ಅಡಿಗಳು, ಕಳೆದ ವರ್ಷ ಇದೇ ದಿನ 2834.01 ಅಡಿ. ಹಾರಂಗಿಯಲ್ಲಿ ಬಿದ್ದ ಮಳೆ 37.60 ಮಿ.ಮೀ. ಕಳೆದ ವರ್ಷ ಇದೇ ದಿನ 5.40, ಇಂದಿನ ನೀರಿನ ಒಳಹರಿವು 15162 ಕ್ಯುಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 313 ಕ್ಯುಸೆಕ್. ಇಂದಿನ ನೀರಿನ ಹೊರ ಹರಿವು ನದಿಗೆ 18334 ಕ್ಯುಸೆಕ್. ನಾಲೆಗೆ 450 ಕ್ಯುಸೆಕ್.

Please follow and like us:
0
http://bp9news.com/wp-content/uploads/2018/07/Z-BHAGAMANDALA-4-1.jpghttp://bp9news.com/wp-content/uploads/2018/07/Z-BHAGAMANDALA-4-1-150x150.jpgBP9 Bureauಕೊಡಗುಪ್ರಮುಖಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಮಳೆಯ ತೀವ್ರತೆ ಗುರುವಾರ ಕೊಂಚ ತಗ್ಗಿದೆಯಾದರು, ಜೀವನದಿ ಕಾವೇರಿಯ ಪ್ರವಾಹ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ತಗ್ಗಿ, ಬಿರುಸಿನ ಗಾಳಿ ಕಂಡು ಬಂದು ಆತಂಕವನ್ನು ಮೂಡಿಸಿತು. ಕಾವೇರಿಯ ಕ್ಷೇತ್ರ ಭಾಗಮಂಡಲದಲ್ಲಿ ರಾತ್ರಿಯ ಅವಧಿಯಲ್ಲಿ ಮಳೆಯ ಪ್ರಮಾಣ ಇಳಿಮುಖಗೊಂಡರೂ ಪ್ರವಾಹದ ಮಟ್ಟ ತಗ್ಗಿಲ್ಲ. ಕಳೆದ ಒಂದು ದಿನದ ಅವಧಿಯಲ್ಲಿ ಭಾಗಮಂಡಲ ಮತ್ತು ತಲಕಾವೇರಿ ಕ್ಷೇತ್ರ ವ್ಯಾಪ್ತಿಯಲ್ಲಿ 4 ಇಂಚಿಗೂ ಹೆಚ್ಚಿನ ಮಳೆಯಾಗಿದ್ದು,...Kannada News Portal