ಮಡಿಕೇರಿ: ಮಹಾಮಳೆಯಿಂದ ಉಂಟಾದ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ನಲುಗಿದ ಗ್ರಾಮಗಳಲ್ಲಿ ಒಂದಾಗಿರುವ ‘ಸೂರ್ಲಬ್ಬಿ’, ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ತುತ್ತಾಗಿರುವ ಸಂಶಯಗಳು ಗ್ರಾಮಸ್ಥರಲ್ಲಿ ಮೂಡಿದ್ದು, ಮೂಲಭೂತ ಸೌಲಭ್ಯಗಳನ್ನು ಕಳೆದುಕೊಂಡು ಅತಂತ್ರರಾಗಿರುವವರ ಸಮಸ್ಯೆಗಳಿಗೆ ಜಿಲ್ಲಾಡಳಿತ ಸ್ಪಂದಿಸಬೇಕೆನ್ನುವ ಒತ್ತಾಯ ಕೇಳಿ ಬಂದಿದೆ.

ಸೋಮವಾರಪೇಟೆ ತಾಲ್ಲೂಕಿಗೆ ಒಳಪಟ್ಟ ಬೆಟ್ಟ ಗುಡ್ಡಗಳ ಪುಟ್ಟ ಗ್ರಾಮ ಸೂರ್ಲಬ್ಬಿಯಲ್ಲಿ ಅತಿವೃಷ್ಟಿಯ ಹಿನ್ನೆಲೆಯಲ್ಲಿ ಸಣ್ಣ ಪುಟ್ಟ ಹಿಡುವಳಿಗಳನ್ನು ಮಾಡುತ್ತಾ ಶ್ರಮದಾಯಕ ಬದುಕನ್ನು ನಡೆಸುತ್ತಿದ್ದ ಮಂದಿ ಇಂದು ಬರಿಗೈಯಾಗಿ ಆತಂಕವನ್ನು ಎದುರಿಸುವಂತಾಗಿದೆ. ಗ್ರಾಮದ ಸಾಕಷ್ಟು ಮಂದಿಯ ತೋಟ ಭಾರೀ ಮಳೆಯಿಂದ ಹಾನಿಗೀಡಾಗಿದ್ದು, ಫಸಲಿನ ನಿರೀಕ್ಷೆಯನ್ನೆ ಬಿಡುವ ಸ್ಥಿತಿ ನಿರ್ಮಾಣವಾಗಿದೆ.

ನಿರಂತರವಾಗಿ ಸುರಿದ ಭಾರೀ ಮಳೆಯಿಂದ ಗ್ರಾಮದ ತೋಟಗಳಲ್ಲಿನ ಕಾಫಿ ಬೆಳೆಗಳೆಲ್ಲ ಕೊಳೆ ರೋಗ ಬಂದು ಸತ್ತುಹೋಗುತ್ತಿವೆ. ಗ್ರಾಮ ವ್ಯಾಪ್ತಿಯಲ್ಲಿ ಬಹುತೇಕ ಬೆಳೆಗಾರರು ಅತ್ಯಂತ ಸಣ್ಣ ಪ್ರಮಾಣದಲ್ಲಿ ಕಾಫಿ ಕೃಷಿಯನ್ನು ಮಾಡುತ್ತಿದ್ದು, ವಾರ್ಷಿಕವಾಗಿ 20 ರಿಂದ 30 ಚೀಲಗಳಷ್ಟು ಕಾಫಿ ಫಸಲನ್ನಷ್ಟೆ ಪಡೆಯುತ್ತಾರೆ. ಈ ಬಾರಿ ಹಿಡಿ ಕಾಫಿ ಫಸಲು ಇಲ್ಲದಂತಹ ದುಸ್ಥಿತಿ ಎದುರಾಗಿದೆ.

ಗದ್ದೆಗಳೆಲ್ಲಾ ಮಣ್ಣುಪಾಲು

ಸೂರ್ಲಬ್ಬಿ ಗ್ರಾಮ ವ್ಯಾಪ್ತಿಯ ಗ್ರಾಮೀಣರು ಅಲ್ಪಸ್ವಲ್ಪ, ತಮ್ಮ ಬದುಕಿಗೆ ಅಗತ್ಯವಾದಷ್ಟು ಭತ್ತವನ್ನು ಬೆಳೆದುಕೊಳ್ಳುತ್ತಿದ್ದರಾದರು, ಈ ಬಾರಿಯ ಭಾರೀ ಮಳೆಯಿಂದ ಅಲ್ಲಲ್ಲಿ ಕುಸಿದ ಬರೆಯ ಮಣ್ಣು ಗದ್ದೆಗಳನ್ನು ಆವರಿಸಿಕೊಂಡು ಭತ್ತದ ಫಸಲು ಸರ್ವನಾಶವಾಗಿ ಹೋಗಿದ್ದು, ಇಲ್ಲಿನ ನಿವಾಸಿಗಳ ಬದುಕು ಡೋಲಾಯಮಾನವಾಗಿದೆ.

ಬಿದ್ದ ಮನೆಗಳು, ಬಿರುಕು ಬಿಟ್ಟ ನಿವಾಸಗಳು- ಭಾರೀ ಮಳೆಯಿಂದ ಗ್ರಾಮ ವ್ಯಾಪ್ತಿಯಲ್ಲಿ ಹಲ ಮನೆಗಳು ಬಿದ್ದು ಹೋಗಿವೆಯಾದರೆ, ಮತ್ತೆ ಹಲ ಮನೆಗಳು ಬಿರುಕು ಬಿಟ್ಟು ಅದರಲ್ಲಿ ವಾಸಿಸುವುದು ದುಸ್ಸಾಹಸವಾಗಿ ಪರಿಣಮಿಸಿದೆ. ಇಷ್ಟೆಲ್ಲ ಸಮಸ್ಯೆಗಳ ಹೊರೆಯನ್ನು ಹೊತ್ತ ಗ್ರಾಮೀಣರ ನೆರವಿಗೆ ಯಾರೂ ಹೆಚ್ಚಿನ ಮುತುವರ್ಜಿ ವಹಿಸಿದಂತೆ ಕಂಡು ಬರುತ್ತಿಲ್ಲ.

ಭಾರೀ ಮಳೆಯ ಹಿನ್ನೆಲೆಯಲ್ಲಿ ಗ್ರಾಮದ ರಸ್ತೆ ವ್ಯವಸ್ಥೆಗಳು ಸಂಪೂರ್ಣ ಹದಗೆಟ್ಟಿರುವುದರಿಂದ ಯಾವುದೇ ಬಸ್‍ಗಳು ಗ್ರಾಮಕ್ಕೆ ಬರುತ್ತಿಲ್ಲ. ಗ್ರಾಮದ ಆರೋಗ್ಯ ಕೇಂದ್ರಗಳಿಗೆ ವೈದ್ಯರು, ದಾದಿಯರು ಸಂಪರ್ಕ ಸಂಚಾರ ವ್ಯವಸ್ಥೆಗಳಿಲ್ಲದೆ ಬರಲಾಗದ ಪರಿಸ್ಥಿತಿ ಇದೆ. ಇದೀಗ ಗ್ರಾಮಸ್ಥರು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಮಾದಾಪುರದ ಅರೋಗ್ಯ ಕೇಂದ್ರವನ್ನು ಅವಲಂಬಿಸುವ ಅನಿವಾರ್ಯತೆ ಇದ್ದು, ಅಲ್ಲಿಗೆ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

 ಬಿರುಕು ಬಿಟ್ಟ ಬೆಟ್ಟ

ಸೂರ್ಲಬ್ಬಿ ಗ್ರಾಮ ವ್ಯಾಪ್ತಿಯ ತಂಬುಗುತ್ತಿ ಎಂಬಲ್ಲಿನ ಬೆಟ್ಟವೊಂದು ಭಾರೀ ಮಳೆಯಿಂದ ಬಿರುಕು ಬಿಟ್ಟು ನಿಂತಿದೆ. ಇದನ್ನು ಅಧಿಕಾರಿಗಳಿಗೆ ತಿಳಿಸಿದರೂ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಬೆಟ್ಟ ಕುಸಿದದ್ದೇ ಆದಲ್ಲಿ  ಬೆಟ್ಟದ ತಳಭಾಗದಲ್ಲಿರುವ  ಹತ್ತಾರು ಮನೆಗಳು ಅಪಾಯಕ್ಕೆ ಸಿಲುಕುವ ಸಂಭವವಿದೆ ಎನ್ನುತ್ತಾರೆ ಗ್ರಾಮಸ್ಥರಾದ ತಂಬುಕುತ್ತಿರ ಸೋಮಯ್ಯ.

ಸಮಸ್ಯೆ ಕೇವಲ ಸೂರ್ಲಬ್ಬಿಯದ್ದು ಮಾತ್ರವಲ್ಲ, ಇದರ ಸುತ್ತಮುತ್ತಲಲ್ಲಿ ಇರುವ ಮುಟ್ಲು ಹಮ್ಮಿಯಾಲ, ಕುಂಬಾರಗಡಿಗೆ, ಮಂಕ್ಯ, ಕಿಕ್ಕರಳ್ಳಿ, ಗ್ರಾಮಸ್ಥರು ಸಂಕಷ್ಟದಲ್ಲಿದ್ದು, ಮುಂದಿನ ವಾರದ ಒಳಗಾಗಿ ಈ ಭಾಗದ ಗ್ರಾಮಸ್ಥರ ಸಂಕಷ್ಟಗಳಿಗೆ ಸ್ಪಂದಿಸದಿದ್ದಲ್ಲಿ ತೀವ್ರ ರೀತಿಯ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

 

Please follow and like us:
0
http://bp9news.com/wp-content/uploads/2018/09/Z-SURLABI-VILLAGERS-1-1.jpghttp://bp9news.com/wp-content/uploads/2018/09/Z-SURLABI-VILLAGERS-1-1-150x150.jpgBP9 Bureauಕೊಡಗುಪ್ರಮುಖಮಡಿಕೇರಿ: ಮಹಾಮಳೆಯಿಂದ ಉಂಟಾದ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ನಲುಗಿದ ಗ್ರಾಮಗಳಲ್ಲಿ ಒಂದಾಗಿರುವ ‘ಸೂರ್ಲಬ್ಬಿ’, ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ತುತ್ತಾಗಿರುವ ಸಂಶಯಗಳು ಗ್ರಾಮಸ್ಥರಲ್ಲಿ ಮೂಡಿದ್ದು, ಮೂಲಭೂತ ಸೌಲಭ್ಯಗಳನ್ನು ಕಳೆದುಕೊಂಡು ಅತಂತ್ರರಾಗಿರುವವರ ಸಮಸ್ಯೆಗಳಿಗೆ ಜಿಲ್ಲಾಡಳಿತ ಸ್ಪಂದಿಸಬೇಕೆನ್ನುವ ಒತ್ತಾಯ ಕೇಳಿ ಬಂದಿದೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) +...Kannada News Portal