ಮಡಿಕೇರಿ: ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ‘ಭಾಗ್ಯ’ಗಳ ಮೂಲಕ ಶ್ರೀಸಾಮಾನ್ಯನಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಿದ್ದು, ಇದು ಕಾಂಗ್ರೆಸ್‍ಗೆ ಪೂರಕವಾಗುತಿತ್ತಾದರು, ಅಭ್ಯರ್ಥಿಗಳ ಘೋಷಣೆಯಲ್ಲಿನ ವಿಳಂಬ  ಕಾಂಗ್ರೆಸ್ ಪರಾಭವಕ್ಕೆ ಕಾರಣವಾಯಿತ್ತೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ಅಭಿಪ್ರಾಯಪಟ್ಟಿದ್ದಾರೆ.

ಮಡಿಕೇರಿ ಮತ್ತು ವೀರಾಜಪೇಟೆ ಕ್ಷೇತ್ರಗಳೆರಡರಲ್ಲು ಕಾಂಗ್ರೆಸ್ ಪರಾಭವಗೊಂಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಚುನಾವಣಾ ಘೋಷಣೆಗೆ ತಿಂಗಳ ಮುಂಚಿತವಾಗಿ ಘೋಷಿಸಬೇಕೆಂದು ಹೈಕಮಾಂಡನ್ನು ಕೋರಲಾಗಿತ್ತು. ಅದು ಸಾಧ್ಯವಾಗದೆ, ವಿಳಂಬವಾಗಿ ಅಭ್ಯರ್ಥಿಗಳನ್ನು ಘೋಷಿಸಿರುವುದು ಸೋಲಿಗೆ ಕಾರಣವಾಗಿರಬಹುದೆಂದರು.

ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಚಂದ್ರಮೌಳಿ ಸ್ಪರ್ಧಿಸುತ್ತಾರೆನ್ನುವುದು ಅಂತಿಮವಾಗುವ ಹಂತದಲ್ಲಿ ಅಭ್ಯರ್ಥಿಯ ಬದಲಾವಣೆಯಾಗಿ, ಚಂದ್ರಕಲಾ ಅವರು ಪಕ್ಷದ ಟಿಕೆಟ್ ಪಡೆದುಕೊಂಡರು. ಇದು ಮತದಾರರಲ್ಲಿ ಗೊಂದಲವನ್ನು ಮೂಡಿಸಿರಬಹುದೆಂದು ಮುಕ್ತವಾಗಿ ನುಡಿದ ಶಿವು ಮಾದಪ್ಪ, ಕ್ಷೇತ್ರಗಳಲ್ಲಿ ವಿಜೇತರಾದ ಅಭ್ಯರ್ಥಿಗಳನ್ನು ಅಭಿನಂದಿಸಿದರು.

ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮುಂದುವರಿಯಲಿದೆ : ಪರಾಭವಗೊಂಡ ಜೆಡಿಎಸ್ ಅಭ್ಯರ್ಥಿ ಸಂಕೇತ್ ಪೂವಯ್ಯ

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆ ಒಂದು ಹಬ್ಬವಾಗಿದ್ದು, ಇದರಲ್ಲಿ ತಾನು ಪರಾಭವಗೊಂಡಿದ್ದರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ತನ್ನಿಂದ ನಿರಂತರವಾಗಿ ಮುಂದುವರಿಯಲಿದೆ ಎಂದು ವೀರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಪರವಾಗಿ ಸ್ಪರ್ಧಿಸಿದ ಸಂಕೇತ್ ಪೂವಯ್ಯ ತಿಳಿಸಿದ್ದಾರೆ.

ಮತ ಎಣಿಕೆ ಪೂರ್ಣಗೊಳ್ಳುವುದಕ್ಕೂ ಮುನ್ನವೆ ಮತ ಎಣಿಕಾ ಕೇಂದ್ರದಿಂದ ನಿರ್ಗಮಿಸುವ ಹಂತದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣಾ ಹಿನ್ನೆಲೆಯಲ್ಲಿ ಜೆಡಿಎಸ್ ಸೇರಿದಂತೆ ಪ್ರಮುಖ ಮೂರು ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡಿದ್ದಾರೆ. ಇದೀಗ ಹಿಂದಿನ ಶಾಸಕರ ಪರವಾಗಿಯೇ ಜನತೆ ತೀರ್ಪನ್ನಿತ್ತಿದ್ದು, ಅವರನ್ನು ಅಭಿನಂದಿಸುವುದಾಗಿ ಮುಕ್ತವಾಗಿ ನುಡಿದರು.

ವೀರಾಜಪೇಟೆ ಕ್ಷೇತ್ರದಲ್ಲಿ ಕಾಫಿ ಬೆಳೆಗಾರರು ಮತ್ತು ಕೃಷಿಕರು ಸಮಸ್ಯೆಗಳ ಮೂಟೆಯನ್ನೆ ಹೊತ್ತಿದ್ದು, ಗೆಲುವು ಸಾಧಿಸಿದ ಅಭ್ಯರ್ಥಿಗಳು ಈ ಸಮಸ್ಯೆಗಳನ್ನು ವಿಧಾನಸಭೆಯ ಮುಂದಕ್ಕೆ ಒಯ್ದು ಬಗೆಹರಿಸುವ ಪ್ರಯತ್ನವನ್ನು ನಡೆಸಬೇಕು. ಅದೇ ರೀತಿ, ಚುನಾವಣೆಯಲ್ಲಿ ಪರಾಭವಗೊಂಡರು ತನಗೆ ಮತ ನೀಡಿ ಬೆಂಬಲಿಸಿದ ಮತದಾರರಿಗೆ ಗೌರವವನ್ನು ನೀಡುವ ರೀತಿ ಅವರ ಸಂಕಷ್ಟಗಳಿಗೆ ಸ್ಪಂದಿಸಿ ಕಾರ್ಯ ನಿರ್ವಹಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಮೂಲಕ ಅತ್ಯಂತ ಪ್ರಾಮಾಣಿಕವಾಗಿ, ಮೈಲಿಗೆಯಾಗದಂತೆ ಎದುರಿಸಿರುವುದಾಗಿ ಸ್ಪಷ್ಟಪಡಿಸಿದ ಸಂಕೇತ್ ಪೂವಯ್ಯ, ಕ್ಷೇತ್ರದ ವ್ಯಾಪ್ತಿಯಲ್ಲಿನ ಕಾಡಾನೆ-ಮಾನವ ಸಂಘರ್ಷದ ನಿವಾರಣೆಗೆ, ರೈತರ ಸಂಕಷ್ಟದ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸುವುದಾಗಿ ತಿಳಿಸಿದರು.

ಜಾತಿ ರಾಜಕೀಯ ನಡೆಯಲ್ಲ : ಅಪ್ಪಚ್ಚುರಂಜನ್ ಅಭಿಪ್ರಾಯ

ಕೊಡಗಿನ ಎರಡು ಕ್ಷೇತ್ರಗಳಲ್ಲಿ ಜನತೆ ಬಿಜೆಪಿ ಪರವಾಗಿ ನೀಡಿರುವ ತೀರ್ಪು, ಜಿಲ್ಲೆಯಲ್ಲಿ ಜಾತಿ ರಾಜಕೀಯಕ್ಕೆ ಅವಕಾಶವಿಲ್ಲ ಎನ್ನುವುದನ್ನು ನಿರೂಪಿಸಿದೆ ಎಂದು ಮಡಿಕೇರಿ ಕ್ಷೇತ್ರದ ವಿಜೇತ ಅಭ್ಯರ್ಥಿ ಎಂ.ಪಿ.ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟಿದ್ದಾರೆ.

ಮಡಿಕೇರಿ ಕ್ಷೇತ್ರದ ಚುನಾವಣಾ ಫಲಿತಾಂಶ ಘೋಷಣೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಪ್ರಧಾನಮಂತ್ರಿ ಮೋದಿ ಮತ್ತು ರಾಜ್ಯದ ಬಿಜೆಪಿ ವರಿಷ್ಠರಾದ ಯಡಿಯೂರಪ್ಪ ಅವರ ಅಲೆ ಅತ್ಯಂತ ಸ್ಪಷ್ಟವಾಗಿ ಕೆಲಸ ಮಾಡಿದೆ ಎಂದರು.

ಕ್ಷೇತ್ರದ ಅಭಿವೃದ್ಧಿಗೆ ನಿಸ್ವಾರ್ಥವಾಗಿ ಕಾರ್ಯ ನಿರ್ವಹಿಸಿದ್ದರ ಫಲವಾಗಿ ಜನತೆ ತಮ್ಮ ಮೇಲೆ ಒಲವು ತೋರಿದ್ದಾರೆ. ಅದರಲ್ಲೂ ಕೂಲಿ ಕಾರ್ಮಿಕರು, ದಲಿತರು, ಬಡವರ್ಗದ ಮಂದಿ ತಮ್ಮನ್ನು ಬೆಂಬಲಿಸಿದ್ದು, ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಮುಂದಿನ ತಮ್ಮ ಐದು ವರ್ಷದ ಅಧಿಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ವ್ಯಕ್ತಿಯಿಂದ ಮನೆ ಇಲ್ಲ ಎನ್ನುವ ಕೂಗು ಬಾರದಂತೆ, ಜನರ ಬೇಡಿಕೆಗಳಿಗೆ ಸ್ಪಂದಿಸಿ ಸರ್ವರಿಗೂ ಸೂರು ಒದಗಿಸಿಕೊಡುವುದಾಗಿ ಭರವಸೆ ನೀಡಿದರು. 94ಸಿ ಮತ್ತು 94 ಸಿಸಿಯಡಿ ಹಕ್ಕುಪತ್ರಗಳನ್ನು ಎರಡು ತಿಂಗಳ ಒಳಗೆ ದೊರಕಿಸಿಕೊಡಲು ಕ್ರಮ ಕೈಗೊಳ್ಳುತ್ತೇನೆ. ಇದನ್ನು ಮಾಡಲು ಮುಂದಾಗದಿರುವ ಅಧಿಕಾರಿಗಳನ್ನು ಅಮಾನತುಗೊಳಿಸುತ್ತೇನೆ ಎಂದು ಅಪ್ಪಚ್ಚುರಂಜನ್ ಹೇಳಿದರು.

 

Please follow and like us:
0
http://bp9news.com/wp-content/uploads/2018/05/collage-3-8.jpghttp://bp9news.com/wp-content/uploads/2018/05/collage-3-8-150x150.jpgBP9 Bureauಕೊಡಗುಪ್ರಮುಖರಾಜಕೀಯಮಡಿಕೇರಿ: ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ‘ಭಾಗ್ಯ’ಗಳ ಮೂಲಕ ಶ್ರೀಸಾಮಾನ್ಯನಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಿದ್ದು, ಇದು ಕಾಂಗ್ರೆಸ್‍ಗೆ ಪೂರಕವಾಗುತಿತ್ತಾದರು, ಅಭ್ಯರ್ಥಿಗಳ ಘೋಷಣೆಯಲ್ಲಿನ ವಿಳಂಬ  ಕಾಂಗ್ರೆಸ್ ಪರಾಭವಕ್ಕೆ ಕಾರಣವಾಯಿತ್ತೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ಅಭಿಪ್ರಾಯಪಟ್ಟಿದ್ದಾರೆ. ಮಡಿಕೇರಿ ಮತ್ತು ವೀರಾಜಪೇಟೆ ಕ್ಷೇತ್ರಗಳೆರಡರಲ್ಲು ಕಾಂಗ್ರೆಸ್ ಪರಾಭವಗೊಂಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಚುನಾವಣಾ ಘೋಷಣೆಗೆ ತಿಂಗಳ ಮುಂಚಿತವಾಗಿ ಘೋಷಿಸಬೇಕೆಂದು ಹೈಕಮಾಂಡನ್ನು ಕೋರಲಾಗಿತ್ತು. ಅದು ಸಾಧ್ಯವಾಗದೆ, ವಿಳಂಬವಾಗಿ ಅಭ್ಯರ್ಥಿಗಳನ್ನು ಘೋಷಿಸಿರುವುದು...Kannada News Portal