ಬೆಂಗಳೂರು  : ಕಾಲನ ಕರೆಗೆ ಓಗೊಟ್ಟು ಶಾಸಕ ಸಿದ್ದು ನ್ಯಾಮಗೌಡ ಬಾರದ  ಲೋಕಕ್ಕೆ ಪಯಣಿಸಿದ್ದಾರೆ. ಇಡೀ ಜಿಲ್ಲೆಯಲ್ಲಿ ಸೂತಕ ಮನೆ  ಮಾಡಿದೆ. ಎಲ್ಲೆಲ್ಲೂ ಸಿದ್ದು ನ್ಯಾಮನಗೌಡರ ಶ್ರದ್ಧಾಂಜಲಿ ಭಾವಚಿತ್ರಗಳೇ. ವಿಧಿಯ ಘೋರತೆಯ ಮುಂದೆ ಅಳಿಯದ ವ್ಯಕ್ತಿಗಳೇ ಇಲ್ಲ.  ಅಂತೆಯೇ  ಸಿದ್ದು ನ್ಯಾಮನಗೌಡರು ಇದೀಗ  ಬಾಗಲಕೋಟೆಯ ಸಮೀಪದ ತುಳಸಿಗಿರಿ ಬಳಿ ಭೀಕರ ಅಪಘಾತಕ್ಕೊಳಗಾಗಿ  ಮೃತಪಟ್ಟಿದ್ದಾರೆ.

ಪತ್ನಿ ಮತ್ತು ಇಬ್ಬರು ಪುತ್ರರು, ಮೂವರು ಹೆಣ್ಣುಮಕ್ಕಳನ್ನು  ವಿಯೋಗಿಸಿರುವ  ಸಿದ್ದು ನ್ಯಾಮಗೌಡರು  ದೆಹಲಿಯಲ್ಲಿ ಸಚಿವ ಸ್ಥಾನಕ್ಕಾಗಿ ಮಾತುಕತೆ ನಡೆಸಿ ಹಿಂತಿರುಗುತ್ತಿರುವ ವೇಳೆ ಈ ಘಟನೆ ನಡೆದಿದ್ದು, ಮೃತರು ಬದುಕಿದ್ದರೆ ಮೈತ್ರಿ ಸರ್ಕಾರದಲ್ಲಿ ಪ್ರಮುಖ ಖಾತೆಯೇ ದೊರೆಯುತ್ತಿತ್ತೇನೋ.  ತಾನೊಂದು ಬಗೆದೊಡೆ ದೈವವೊಂದು ಬಗೆದಿತು ಎಂಬಂತೆ, ನಸುಕಿನ  ಜಾವದಲ್ಲಿ ಜವರಾಯ  ನ್ಯಾಮಗೌಡರನ್ನ ಮೃತ್ಯುಲೋಕಕ್ಕೆ ಕರೆಸಿಕೊಂಡಿದ್ದಾನೆ.

ಸಾವು ಯಾರಿಗೇ ತಾನೇ ಅಪ್ಪಳಿಸುವುದಿಲ್ಲ ಹೇಳಿ.  ಹುಟ್ಟಿದ ಪ್ರತಿಯೊಬ್ಬರು ಸಾಯಲೇ ಬೇಕು ಆದರೆ ಮೃತ ವ್ಯಕ್ತಿಯ ಸಾಧನೆಯೇನೂ ಎಂಬ ಪ್ರಶ್ನೆಗೆ ಉತ್ತರ ಸಿಗುವುದು ಆತನ ಮರಣಾನಂತರದ ಕ್ರಿಯೆಗಳಲ್ಲಿ, ಸೇರುವ ಜನಸಾಗರದಲ್ಲಿ, ಕೇಳುವ ಆರ್ಥನಾದಗಳಲ್ಲಿ, ಮೃತ ಕುಟುಂಬದ ಕಣ್ಣೀರು ಒರೆಸುವ ಕೈಗಳಲ್ಲಿ, ಅಂತೆಯೇ ಸಿದ್ದುನ್ಯಾಮನಗೌಡರ ಸಾವಿನ ಸುದ್ದಿ ಬರಸಿಡಿಲಿನಂತೆ ರಾಜ್ಯದಲ್ಲೆಡೆ ವ್ಯಾಪಿಸುತ್ತಿದ್ದಂತೇ ಇಡೀ ರಾಜ್ಯವೇ ಮರುಕ ವ್ಯಕ್ತಪಡಿಸಿದೆ. ಸೌಧದ ಕುರ್ಚಿಯ  ಕಚ್ಚಾಟದಲ್ಲಿ ತೊಡಗಿದ್ದರೂ ಸಾವಿನ ಸುದ್ದಿ ತಲುಪುತಿದ್ದಂತೇ ಮೋಡವಿಲ್ಲದ ಬಾನಿನಂತಾಗಿದೆ ರಾಜ್ಯ ರಾಜಕಾರಣ.

ಮಾಜಿ ಪ್ರಧಾನಿ ದೇವೇಗೌಡರಾದಿಯಿಂದಾಗಿ ಪ್ರತಿಪಕ್ಷಗಳ ನಾಯಕರುಗಳು ಸಹ ಸಿದ್ದುನ್ಯಾಮಗೌಡರ ಪಾರ್ಥೀವ ದರ್ಶನ ಪಡೆದಿದ್ದು ಕುಟುಂಬಕ್ಕೆ ಸಾಂತ್ವಾನ ತಿಳಿಸುತ್ತಿದ್ದಾರೆ. ಈ  ವೇಳೆಯಲ್ಲಿ ಮೃತ ನ್ಯಾಮಗೌಡರನ್ನ ಇಡೀ ಜಿಲ್ಲೆಯ ರೈತಾಪಿ ವರ್ಗ ಪುಣ್ಯಾತ್ಮನ ಸಾವಾಗಿದೆ ಎಂದು ತಿಳಿಯುತ್ತಿದ್ದಂತೆ ಸಾಗರೋಪಾದಿಯಲ್ಲಿ   ಗೌಡರ ಮನೆಯಮುಂದೆ ಜಮಾಯಿಸಿದ್ದಾರೆ.  ಏಕೆಂದರೆ ಸಿದ್ದು ನ್ಯಾಮಗೌಡ ಬಾಗಲಕೋಟೆಯ ಭಗೀರಥ. ಐತಿಹಾಸಿಕ ಭಗೀರಥ ಗಂಗೆಯ ಕರೆತಂದರೆ, ಆಧುನಿಕ ಭಗೀರಥ ನ್ಯಾಮನಗೌಡ ಕೃಷ್ಣ ನದಿಯ ನೀರನ್ನ ತನ್ನ ಜಿಲ್ಲೆಗೆ ಹರಿಸಿದವರು. ನೂರಾರು ಎಕರೆ ಜಮೀನನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಿದ ಇವರು ರೈತರ ಪಾಲಿನ ಕಲ್ಪತರು.

ಆಧುನಿಕ ಭಗೀರಥ : 

ಹೌದು, ಅದು ರಾಮಕೃಷ್ಣ ಹೆಗಡೆ ಅವರ  ಸರ್ಕಾರ 1988 ರಲ್ಲಿ ಬಿಜಾಪುರ ಜಿಲ್ಲೆಯೇ ನೀರಿನ ಹಾಹಾಕಾರಕ್ಕೆ ತತ್ತರಿಸಿ ತೊಳಲಾಡುತ್ತಿತ್ತು. ಅಪಾರ ಭೂಮಿ ಕೃಷಿಗೆ ಯೋಗ್ಯವಾಗದೇ ಬಿರುಕು ಮೂಡಿದ ಬರಡು ಭೂಮಿಯಾಗಿತ್ತು. ಇದನ್ನು ಸ್ಥಳೀಯವಾಗಿ ಕಂಡಿದ್ದ, ನೊಂದಿದ್ದ ರೈತಾಪಿ ಕುಟುಂಬದಿಂದ ಬಂದಿದ್ದ ನ್ಯಾಮಗೌಡ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲೇಬೇಕೆಂದು ಪಣತೊಟ್ಟಿದ್ದರು.

ಅತ್ತ ಕೃಷ್ಣ ನದಿ ಹರಿಯುತ್ತಿತ್ತು. ನಾರಯಣಪುರ ಹೊರತುಪಡಿಸಿದರೆ ಉಳಿದಂತೆ ತನ್ನ ಪಾಡಿಗೆ ತಾನು ಹರಿದುಹೋಗುತ್ತಿತ್ತು. ಯಾವುದೇ ಪ್ರಯೋಜನವಾಗದೇ ರೈತಾಪಿ ವರ್ಗ ಕೊರಗುತ್ತಿತ್ತು. ಈ ಸಂದರ್ಭದಲ್ಲಿ   ವ್ಯರ್ಥವಾಗಿ ಹರಿಯುತ್ತಿದ್ದ ಕೃಷ್ಣ ನದಿಗೆ ಬ್ಯಾರೇಜ್ ಕಟ್ಟಿದ್ದರೆ ಹಲವು ಹಳ್ಳಿಗಳಿಗೆ ನಿರುಣಿಸಬಹುದಿತ್ತು. ಕಬ್ಬು ಬೆಳೆಗಾರರಿಗೆ ಅನುಕೂಲವಾಗುತ್ತದೆ ಎಂಬುದು ಅಲ್ಲಿನ ಜನರ ಬಹುಕಾಲದ ಆಸೆಯಾಗಿತ್ತು. ಈ ಬ್ಯಾರೇಜ್ ನಿರ್ಮಾಣಕ್ಕೆ  ವೆಚ್ಚವಾಗುತ್ತಿದ್ದ ಹಣ ಆವತ್ತಿನ ಕಾಲಕ್ಕೆ ಬರೋಬ್ಬರಿ 1 ಕೋಟಿ ರೂ. ಆ ವೇಳೆಗೆ ಸರ್ಕಾರದಲ್ಲಿ ಆ ಪ್ರಮಾಣದ ಹಣ ಎಲ್ಲಿತ್ತು…?  ಹಾಗೆಂದು ಸುಮ್ಮನೆ  ಕುಳಿತುಬಿಟ್ಟಿದ್ದರೆ ಜಮಖಂಡಿಯಲ್ಲಿ ಹಸಿರು ನಳನಳಿಸುತ್ತಿರಲಿಲ್ಲ, ರೈತರ ಮುಖದಲ್ಲಿ ನಗು ಇರುತ್ತಿರಲಿಲ್ಲ. ವಲಸೆ  ಹೋಗುವ ಮಾರಿಗೆ ಸಿಲುಕಿ ಜಮಖಂಡಿಯ ಹಲವು ಹಳ್ಳಿಗಳು ಜನರಿಲ್ಲದ ಮಹಾಳು ಕೊಂಪೆಯಾಗಿಬಿಡುತ್ತಿತ್ತು. ಇಂತಹ ಸ್ಥಿತಿಯಲ್ಲಿ  ರೋಲ್ ಮಾಡೆಲ್ ರಾಜಕಾರಣಿ, ರೈತಾಪಿಗಳ ಸಿದ್ದಣ್ಣ  ಶಾಸಕ  ಸಿದ್ದುನ್ಯಾಮಗೌಡ ಮಣ್ಣಿನ ಮಗನಾಗಿ ಕಣಕಣದಲ್ಲೂ  ಸಂಘಟನೆಯ ಅಂಶಗಳನ್ನು ಮೈಗೂಡಿಸಿಕೊಂಡು  ಕೃಷ್ಣಾ ನದಿಯ ಬ್ಯಾರೇಜ್ ಕಟ್ಟಲು ವೆಚ್ಚವಾಗುವ ಹಣವನ್ನು ಸಂದಾಯಿಸಲು ಮುಂದಾಗುತ್ತಾರೆ.

ಆಂದ್ರಪ್ರದೇಶದಲ್ಲಿ  ಹಿಂದೊಮ್ಮೆ ಗೋದಾವರಿ ಪ್ರಾಜೆಕ್ಟ್  ಪೂರ್ಣಗೊಳಿಸಲು ಅಲ್ಲಿನ ರೈತರು ತಾವೇ ತಾವಾಗಿ,ಚಂದಾ ನೀಡಿ ಗೋದಾವರಿ ಪ್ರಾಜೆಕ್ಟ್ ನಿರ್ಮಿಸಿದ್ದರು. ಬಾಗಲಕೋಟೆಯ ಜನರ ಮುಂದೆಯೂ ಸಿದ್ದುನ್ಯಾಮನಗೌಡರು, ಸರ್ಕಾರದ ಬಳಿ ಹಣ ಇಲ್ಲ, ನಮ್ಮ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳೋಣ ಎಂದು ಚೇತೋಹಾರಿ, ಪರಿಹಾರಕಾರಿ ಅಂಶಗಳೊಟ್ಟಿಗೆ  ತಮ್ಮ ಜೋಳಿಗೆಯನ್ನು ಮುಂದಿಟ್ಟರು.  ಬಾಗಲಕೋಟೆಯ ಚಿಕ್ಕಪಡಸಲಗಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನ ಸಿದ್ದುನ್ಯಾನಮಗೌಡರ ಹಿಂದೆ ಬೆನ್ನೆಲುಬಾಗಿ ನಿಂತರು. ಜೋಳಿಗೆ ಹಿಡಿದು ಸಿದ್ದುನ್ಯಾಮಗೌಡರು ಊರೂರು ಅಲೆದಾಡಿ ಹಣ ಸಂಗ್ರಹಿಸಿದರು. ಅವರು ಸಂಗ್ರಹಿಸಿದ ಆ ಒಂದು ಕೋಟಿ ರೂ ಆ ಕಾಲಕ್ಕೆ ಕಡಿಮೆ ಹಣ ಆಗಿರಲಿಲ್ಲ. ಅಷ್ಟೇ ಅಲ್ಲ, ಅವರ ಮಾತಿನ ಶೈಲಿಗೆ, ನಿಸ್ವಾರ್ಥಮಯ ಹೋರಾಟಕ್ಕೆ  ದಕಲ್ಲು, ಸಿಮೆಂಟ್ ಮರಳನ್ನು ದಾನವಾಗಿ ನೀಡಿದರು.  ಬ್ಯಾರೇಜ್ ಕಟ್ಟುವ ದೈಹಿಕ ಶ್ರಮಕ್ಕೆ ಯಾರು ಹಣ ಪಡೆಯಲಿಲ್ಲ. ಎಲ್ಲರ ಪರಿಶ್ರಮವನ್ನು ಒಗ್ಗೂಡಿಸಿ ಅಂದು ಸಿದ್ದುನ್ಯಾಮಗೌಡರು ಜಿಲ್ಲೆಯ ಹಳ್ಳಿಗಳ ಜಮೀನುಗಳಿಗೆ ನೀರುಣಿಸಿದರು. ರೈತರ ಮುಖದಲ್ಲಿ ನಗು ಅರಳುವಂತೆ  ಮಾಡಿದ್ದವರು. ಸಿದ್ದುನ್ಯಾಮಗೌಡರ ಈ ಕೈಂಕರ್ಯ ನಂತರ ಸಾಧನೆಯಾಗಿ ಹೊರಹೊಮ್ಮಿತು. ಈಗಲೂ ಜೀವಂತವಾಗಿ ಉಳಿದಿದೆ, ಆದರೆ ಸಾಧನೆಯ ಹರಿಕಾರ ನ್ಯಾಮನಗೌಡರು  ಮಾತ್ರ ನಮ್ಮೊಂದಿಗಿಲ್ಲ.

ಈ ಬ್ಯಾರೇಜ್ ಕಟ್ಟಿದ ನಂತರ ಕಲೆವೇ  ವರ್ಷಗಳಲ್ಲಿ ಚುನಾವಣೆ ಎದುರಾಗುತ್ತದೆ. ಬಾಗಲಕೋಟೆ ಲೋಕಸಭೆ ಕ್ಷೇತ್ರದಿಂದ  ರಾಮಕೃಷ್ಣ ಹೆಗಡೆ ಅವರು ಕಣಕ್ಕಿಳಿಯುತ್ತಾರೆ. ಇತ್ತ ಆಧುನಿಕ ಭಗೀರಥ ಸಿದ್ದುನ್ಯಾಮಗೌಡ ಸ್ಪರ್ಧಿಸುತ್ತಾರೆ. ಅಂದಿನ ಕಾಲಕ್ಕೆ ಹೆಗಡೆಯವರ ಪ್ರಭಾವದೆದುರು ಸಿದ್ದು ನ್ಯಾಮಗೌಡರು ಯಾವ ಲೆಕ್ಕಕ್ಕೂ ಇಲ್ಲದ ವ್ಯಕ್ತಿ. ಆದರೆ ಜನಮಾನಸದಲ್ಲಿ ಸಿದ್ದು ಭಗೀರಥನ ಪ್ರಯತ್ನ ಹಚ್ಚಹಸಿರಾಗಿ ಉಳಿದಿತ್ತು. ಜನರು ಚುನಾವಣೆಯ ಫಲಿತಾಂಶದಲ್ಲಿ ಗೌಡರಿಗೆ ಜೈ ಎಂದು ಘೋಷಿಸಿದ್ದರು.  ಆ ನಂತರ ಸರಸಿಂಹರಾವ್ ಸರ್ಕಾರದಲ್ಲಿ ಸಚಿವರು ಕೂಡ ಆದರು. ಆದರೆ ಕಾಲನ್ನ ಕರೆಗೆ ಸಿದ್ದು ನ್ಯಾಮಗೌಡರು ಬಾರದ ಲೋಕಕ್ಕೆ  ಹೊರಟಿದ್ದಾರೆ.

ಆದರೆ ಪ್ರತಿಯೊಬ್ಬ ರಾಜಕಾರಣಿ  ತನ್ನ ಚಿರನಿದ್ರೆಯ ನಂತರವೂ ಜನ ಗುರುತಿಸಬಲ್ಲ ಒಂದಾದರರೂ ಕೆಲಸ  ಮಾಡಿದರೆ ಇತಿಹಾಸ ಪುಟಗಳಲ್ಲಿ ಮಹಾತ್ಮ, ಹುತಾತ್ಮ ಎಂಬ ಹೆಸರಿಗೆ ಪಾತ್ರರಾಗುತ್ತಾರೆ ಸಿದ್ದುನ್ಯಾಮಗೌಡರ ರೀತಿ. ಇಮದು ಸಿದ್ದು ನ್ಯಾಮಗೌಡರು ನಮ್ಮನ್ನಗಲಿದ್ದಾರೆ. ಆದರೆ ಕೃಷ್ಣಾ ನದಿಯ  ಬ್ಯಾರೇಜ್ ಈಗಲೂ, ಮುಂದೆಯೂ ನೀರುಣೀಸುವ ಕಾರ್ಯ ಮಾಡುತ್ತಲೇ ಇರುತ್ತದೆ. ಇಂತಹ ಸಾರ್ಥಕ ಕೆಲಸ ಮಾಡಿದ ಸಿದ್ದು ನ್ಯಾಮಗೌಡರು ಪ್ರಸ್ತುತ  ರಾಜಕಾರಣಿಗಳ  ಆದರ್ಶದಾಯಕ ವ್ಯಕ್ತಿ ಮತ್ತು ಶಕ್ತಿ ಎಂದಷ್ಟೇ ಹೇಳಬಹಗುದು. ಚಿರನಿದ್ರೆಗೆ ಜಾರಿರುವ ಭಗೀರಥ ಸಿದ್ದುನ್ಯಾಮಗೌಡರೇ ನಿಮಗಿದೋ ಶ್ರದ್ಧಾಂಜಲಿಯ  ಅರ್ಪಣೆ. ಮತ್ತೆ ಹುಟ್ಟಿ ಬನ್ನಿ……..

ಲೇಖನ : PSV 

Please follow and like us:
0
http://bp9news.com/wp-content/uploads/2018/05/ಸಿದ್ದು-ನ್ಯಾಮಗೌಡ.jpghttp://bp9news.com/wp-content/uploads/2018/05/ಸಿದ್ದು-ನ್ಯಾಮಗೌಡ-150x150.jpgPolitical Bureauಅಂಕಣಪ್ರಮುಖಬಾಗಲಕೋಟೆರಾಜಕೀಯModern Bhagiratha: This is the martial history of 'Barry Siddhu' !!!ಬೆಂಗಳೂರು  : ಕಾಲನ ಕರೆಗೆ ಓಗೊಟ್ಟು ಶಾಸಕ ಸಿದ್ದು ನ್ಯಾಮಗೌಡ ಬಾರದ  ಲೋಕಕ್ಕೆ ಪಯಣಿಸಿದ್ದಾರೆ. ಇಡೀ ಜಿಲ್ಲೆಯಲ್ಲಿ ಸೂತಕ ಮನೆ  ಮಾಡಿದೆ. ಎಲ್ಲೆಲ್ಲೂ ಸಿದ್ದು ನ್ಯಾಮನಗೌಡರ ಶ್ರದ್ಧಾಂಜಲಿ ಭಾವಚಿತ್ರಗಳೇ. ವಿಧಿಯ ಘೋರತೆಯ ಮುಂದೆ ಅಳಿಯದ ವ್ಯಕ್ತಿಗಳೇ ಇಲ್ಲ.  ಅಂತೆಯೇ  ಸಿದ್ದು ನ್ಯಾಮನಗೌಡರು ಇದೀಗ  ಬಾಗಲಕೋಟೆಯ ಸಮೀಪದ ತುಳಸಿಗಿರಿ ಬಳಿ ಭೀಕರ ಅಪಘಾತಕ್ಕೊಳಗಾಗಿ  ಮೃತಪಟ್ಟಿದ್ದಾರೆ. ಪತ್ನಿ ಮತ್ತು ಇಬ್ಬರು ಪುತ್ರರು, ಮೂವರು ಹೆಣ್ಣುಮಕ್ಕಳನ್ನು  ವಿಯೋಗಿಸಿರುವ  ಸಿದ್ದು ನ್ಯಾಮಗೌಡರು  ದೆಹಲಿಯಲ್ಲಿ ಸಚಿವ ಸ್ಥಾನಕ್ಕಾಗಿ...Kannada News Portal