ಮಂಡ್ಯ : ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ರೈತರ ಗೆಟಪ್‌ನಲ್ಲಿದ್ದು, ಮುಖ್ಯಮಂತ್ರಿ ಎಂಬ ಹಮ್ಮು-ಬಿಮ್ಮು ತೊರೆದು ರೈತರಲ್ಲಿ ಒಂದಾಗಿ ಭತ್ತದ ಪೈರನ್ನು ನಾಟಿ ಮಾಡುವ ಮೂಲಕ ತಾವು ಮಣ್ಣಿನ ಮಕ್ಕಳಂತೆ ಕಾಣಿಸಿಕೊಂಡರು.ಹೌದು, ಮುಖ್ಯಮಂತ್ರಿ ಕುಮಾರಸ್ವಾಮಿ ರೈತರಾಗಿ ಮಂ‌ಡ್ಯದ ಗದ್ದೆಯಲ್ಲಿ ರೈತರೊಂದಿಗೆ ಭತ್ತದ ಪೈರನ್ನು ನಾಟಿ ಮಾಡಿ ರೈತರ ಸಂಭ್ರಮವನ್ನು ಇಮ್ಮಡಿಗೊಳಿಸಿದರು.

ಮಂಡ್ಯ ಜಿಲ್ಲೆಯ ರೈತರು ಕಳೆದ ನಾಲ್ಕು ವರ್ಷಗಳಿಂದ ಸರಿಯಾಗಿ ಮಳೆಯಾಗದ ಕಾರಣ ಭತ್ತದ ಪೈರನ್ನು ನಾಟಿ ಮಾಡಿರಲಿಲ್ಲ. ಕಬ್ಬು ಬೆಳೆದು ಕೈ ಸುಟ್ಟು ಕೊಂಡಿದ್ದರು. ಈ ಬಾರಿ ವರುಣನ ಕೃಪೆಯಿಂದ ಉತ್ತಮ ಮಳೆಯಾಗಿದ್ದು ರೈತರ ಸಂತಸಕ್ಕೆ ಕಾರಣವಾಗಿದೆ.

ರೈತರ ಸಂತಸ ಸಂಭ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ವತಃ ಕೆಸರು ಗದ್ದೆಗೆ ಇಳಿದು ಭತ್ತದ ಪೈರು ನಾಟಿ ಮಾಡಿ ಮಣ್ಣಿನ ಮಕ್ಕಳ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು.ದೇಶದ ಇತಿಹಾಸದಲ್ಲೇ ಮುಖ್ಯಮಂತ್ರಿಯಾಗಿ ಕೆಸರು ಗದ್ದೆಗೆ ಇಳಿದು ಭತ್ತ ನಾಟಿ ಮಾಡಿದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಕುಮಾರಸ್ವಾಮಿ ಪಾತ್ರರಾದರು.

ಅಂಕು ಡೊಂಕಿನ ಮರ ಒಂಟಿಯ ಮರ ಕಚ್ಚಿದವರ ಬಾಯಿಗೆ ಪನ್ನೀರು ಸುರಿಸುವ ಮರ ಎಂದು ಒಗಟು ಹೇಳುತ್ತಿದ್ದಂತೆ ಮಂಡ್ಯ ರೈತರು ಥಟ್ ಅಂಥ ಉತ್ತರಿಸುತ್ತಾರೆ ಕಬ್ಬು ಎಂದು. ಸೋಂಬೇರಿ ಬೆಳೆ ಕಬ್ಬು ಬೆಳೆದು ಕೈ ಸುಟ್ಟುಕೊಂಡ ರೈತರು ಈ ಬಾರಿ ಸಾಕಷ್ಟು ಮಳೆ ಬಿದ್ದಿರುವುದರಿಂದ ಭತ್ತ ಬೆಳೆಯಲು ಮುಂದಾಗಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಮಳೆ ಇಲ್ಲದೆ ಕಂಗಾಲಾಗಿದ್ದ ಮಂಡ್ಯ ರೈತರು ಈಗ ಕಾವೇರಿ ಅಚ್ಚುಕಟ್ಟು ಪ್ರದೇಶದ ಜಲಾಶಯಗಳು ಭರ್ತಿ ಆಗಿರುವುದರಿಂದ ಭತ್ತದ ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ.

ಈ ಹಿನ್ನೆಲೆಯಲ್ಲಿ ರೈತರಿಗೆ ಕೃಷಿ ಬಗ್ಗೆ ಉತ್ತೇಜನ ನೀಡಲು ಸ್ವತಃ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರೇ ಪಾಂಡವಪುರ ತಾಲ್ಲೂಕು ಸೀತಾಪುರ ಗ್ರಾಮದ ಮಹದೇವಮ್ಮ ಅವರ 5 ಎಕರೆ ಜಮೀನಿನಲ್ಲಿ ನಾಟಿ ನೆಟ್ಟು ಕೃಷಿ ಬಗ್ಗೆ ರೈತರಿಗೆ ಪ್ರೋತ್ಸಾಹ ನೀಡಿದರು. 25 ಜೋಡಿ ಎತ್ತುಗಳು, 50 ಗಂಡಾಳು, ನೂರಕ್ಕೂ ಹೆಚ್ಚು ಮಹಿಳೆಯರು ಜಾನಪದ ಹಾಡು ಹಾಡುತ್ತಾ ಸಿಎಂಗೆ ಸಾಥ್ ನೀಡಿದರು. ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಈ ವೇಳೆ ಕೈ ಜೋಡಿಸಿದ್ದು ವಿಶೇಷವಾಗಿತ್ತು. ಎತ್ತುಗಳು, ಎತ್ತಿನ ಬಂಡಿಗಳನ್ನು ರಂಗುರಂಗಿನ ಬಣ್ಣಗಳಿಂದ ಶೃಂಗರಿಸಲಾಗಿತ್ತು. ತಲೆಗೆ ಟವಲ್ ಸುತ್ತಿಕೊಂಡು, ಮಂಡಿ ಎತ್ತರಕ್ಕೆ ಪಂಚೆ ಏರಿಸಿ ಕುಮಾರಣ್ಣ ನಾಟಿ ಪಾತಿ ಇಳಿದಾಗ ಬಂಗಾರದ ಮನುಷ್ಯ ಸಿನಿಮಾ ನೆನಪಿಗೆ ತರುವಂತಿತ್ತು.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸೀತಾಪುರ ಗ್ರಾಮದ ಮಹದೇವಮ್ಮ ಎಂಬ ರೈತ ಮಹಿಳೆಯ 5 ಎಕರೆ ಜಮೀನಿನಲ್ಲಿ ಮುಖ್ಯಮಂತ್ರಿಗಳ ಭತ್ತದ ಪೈರು ನಾಟಿಗೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಅದರಂತೆ ಮಧ್ಯಾಹ್ನ ಸೀತಾಪುರ ಗ್ರಾಮಕ್ಕೆ ಆಗಮಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಜತೆ ಸೇರಿಕೊಂಡು ಭತ್ತ ನಾಟಿ ಮಾಡಿ ಹೊಸ ಇತಿಹಾಸಕ್ಕೆ ಕಾರಣರಾದರು.

ಮುಖ್ಯಮಂತ್ರಿಗಳ ಜತೆ ಮೂರು ಮಂದಿ ರೈತ ಮಹಿಳೆಯರು, 50 ಮಂದಿ ರೈತರು ಭತ್ತ ನಾಟಿಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.  ಖುದ್ದು ನಾಡಿನ ದೊರೆಯೇ ಭತ್ತ ನಾಟಿಗೆ ಆಗಮಿಸಿದ್ದು ಮಣ್ಣಿನ ಮೊಗದಲ್ಲಿ ಸಂತಸ ಹೆಚ್ಚಾಗಲು ಕಾರಣವಾಯಿತು.

ಸುಮಾರು 2 ಗಂಟೆಗೂ ಹೆಚ್ಚು ಕಾಲ ಭತ್ತದ ಪೈರನ್ನು ನಾಟಿ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ನಂತರ ರೈತರ ಜತೆ ಆತ್ಮೀಯವಾಗಿ ಮಾತನಾಡಿ ಅವರ ಜತೆಯೇ ಮಧ್ಯಾಹ್ನ ಊಟ ಸಹ ಮಾಡಿದರು.  ಮಂಡ್ಯದ ರಾಗಿ ಮುದ್ದೆಯನ್ನು ರೈತರ ಜತೆ ಸವಿದು ಮುಖ್ಯಮಂತ್ರಿಗಳು ಸಂಭ್ರಮಿಸಿದರು.

ಮುಖ್ಯಮಂತ್ರಿಗಳ ಜತೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ನಾಟಿ ಕಾರ್ಯದಲ್ಲಿ ತೊಡಗಿಕೊಂಡರು.  ಭತ್ತದ ನಾಟಿಗಾಗಿ ತಮ್ಮ ಗ್ರಾಮಕ್ಕೆ ಆಗಮಿಸಿದ ಮುಖ್ಯಮಂತ್ರಿಗಳನ್ನು ಸಂಭ್ರಮದಿಂದ ಸ್ವಾಗತಿಸಿದ ರೈತರು ಎತ್ತಿನಗಾಡಿಯಲ್ಲಿ ಕೂರಿಸಿಕೊಂಡು ಮುಖ್ಯಮಂತ್ರಿಗಳ್ನು ಭತ್ತದ ಗದ್ದೆವರೆಗೂ ಎತ್ತಿನಗಾಡಿಯಲ್ಲೇ ಮೆರವಣಿಗೆಯಲ್ಲಿ ಕರೆತಂದರು.

ಇಡೀ ಸೀತಾಪುರ ಗ್ರಾಮದ ಮುಖ್ಯಮಂತ್ರಿಗಳ ಸ್ವಾಗತಕ್ಕಾಗಿ ಶೃಂಗಾರಗೊಂಡಿದ್ದು, ಗ್ರಾಮದ ಎತ್ತಿನಬಂಡಿ ಹಾಗೂ ಎತ್ತುಗಳನ್ನು ರಂಗು ರಂಗಿನ ಬಣ್ಣಗಳಿಂದ ಸಿಂಗರಿಸಲಾಗಿತ್ತು.  ಗ್ರಾಮಕ್ಕೆ ಆಗಮಿಸಿದ್ದಂತೆ ರೈತರಿಗೆ ಕೈ ಮುಗಿದು ಅವರೊಂದಿಗೆ ಬೆರೆತ ಮುಖ್ಯಮಂತ್ರಿ ಕುಮಾರಸ್ವಾಮಿ, ಗದ್ದೆಗೆ ಬಂದು ಪಂಚೆ ಹಾಕಿಕೊಂಡು, ತಲೆಗೆ ಟವಲ್ ಸುತ್ತಿಕೊಂಡು, ಹಾಕಿಕೊಂಡ ಪಂಚೆಯನ್ನು ಮಂಡಿಯವರೆಗೂ ಏರಿಸಿ ಸಾಧಾರಣ ರೈತ ಎಂಬಂತೆ ಭತ್ತದ ಪೈರು ನಾಟಿಯಲ್ಲಿ ತೊಡಗಿಕೊಂಡಿದ್ದು ವಿಶೇಷವಾಗಿತ್ತು.

 

ನಾಟಿ ಸಂದರ್ಭದಲ್ಲೂ ಮುಖ್ಯಮಂತ್ರಿಗಳು ರೈತರ ಜತೆ ಮಾತನಾಡುತ್ತಾ ಅವರ ಖುಷಿಗೆ ಕಾರಣರಾದರು. ಈ ನಾಟಿಯ ಸಂದರ್ಭದಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ರೈತರಿಗೆ ವಿಶ್ವಾಸ ಮೂಡಿಸುವ ಹಾಗೂ ಅವರ ಬದುಕಲ್ಲಿ ಆತ್ಮವಿಶ್ವಾಸ ಮೂಡಿಸುವಂತಹ ಮಾತುಗಳನ್ನು ಹೇಳುವ ಮೂಲಕ ರೈತರಲ್ಲಿ ಕೃಷಿಯ ಬಗ್ಗೆ ವಿಶ್ವಾಸ ಮೂಡಿಸುವ ಕೆಲಸವನ್ನು ಮಾಡಿದರು.

Please follow and like us:
0
http://bp9news.com/wp-content/uploads/2018/08/WhatsApp-Image-2018-08-11-at-3.16.21-PM.jpeghttp://bp9news.com/wp-content/uploads/2018/08/WhatsApp-Image-2018-08-11-at-3.16.21-PM-150x150.jpegBP9 Bureauಕೃಷಿಪ್ರಮುಖಮಂಡ್ಯಮೈಸೂರುರಾಜಕೀಯಮಂಡ್ಯ : ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ರೈತರ ಗೆಟಪ್‌ನಲ್ಲಿದ್ದು, ಮುಖ್ಯಮಂತ್ರಿ ಎಂಬ ಹಮ್ಮು-ಬಿಮ್ಮು ತೊರೆದು ರೈತರಲ್ಲಿ ಒಂದಾಗಿ ಭತ್ತದ ಪೈರನ್ನು ನಾಟಿ ಮಾಡುವ ಮೂಲಕ ತಾವು ಮಣ್ಣಿನ ಮಕ್ಕಳಂತೆ ಕಾಣಿಸಿಕೊಂಡರು.ಹೌದು, ಮುಖ್ಯಮಂತ್ರಿ ಕುಮಾರಸ್ವಾಮಿ ರೈತರಾಗಿ ಮಂ‌ಡ್ಯದ ಗದ್ದೆಯಲ್ಲಿ ರೈತರೊಂದಿಗೆ ಭತ್ತದ ಪೈರನ್ನು ನಾಟಿ ಮಾಡಿ ರೈತರ ಸಂಭ್ರಮವನ್ನು ಇಮ್ಮಡಿಗೊಳಿಸಿದರು. ಮಂಡ್ಯ ಜಿಲ್ಲೆಯ ರೈತರು ಕಳೆದ ನಾಲ್ಕು ವರ್ಷಗಳಿಂದ ಸರಿಯಾಗಿ ಮಳೆಯಾಗದ ಕಾರಣ ಭತ್ತದ ಪೈರನ್ನು ನಾಟಿ ಮಾಡಿರಲಿಲ್ಲ. ಕಬ್ಬು ಬೆಳೆದು...Kannada News Portal