ಬೆಂಗಳೂರು : ಧರ್ಮ, ಸಿದ್ಧಾಂತ ಅಥವಾ ಅಸಹಿಷ್ಣುತೆ ಮೂಲಕ ಭಾರತವನ್ನು ವ್ಯಾಖ್ಯಾನಿಸುವ ಯಾವುದೇ ಪ್ರಯತ್ನ ದೇಶದ ಅಸ್ತಿತ್ವವನ್ನೇ ದುರ್ಬಲಗೊಳಿಸುತ್ತದೆ. ಭಾರತದ ಆತ್ಮ ನೆಲೆಸಿರುವುದೇ ಬಹುತ್ವದಲ್ಲಿ. ದ್ವೇಷ ಮತ್ತು ಅಸಹನೆಯಿಂದ ಭಾರತದ ರಾಷ್ಟ್ರೀಯತೆ ನಾಶವಾಗಬಹುದು ಎಂಬ ಸೂಚ್ಯ ಎಚ್ಚರಿಕೆಯನ್ನು RSS ಮತ್ತು ಕಾಂಗ್ರೆಸ್ ಎರಡೂ ಸಿದ್ಧಾಂತವಾದಿಗಳಿಗೆ ಪ್ರಣಬ್​​ ನೀಡಿದ್ದಾರೆ.

ಓರ್ವ ಮಾಜಿ ರಾಷ್ಟ್ರಪತಿಗಳು ನೀಡಬೇಕಾದ ಸಂದೇಶವನ್ನೇ ಪ್ರಣಬ್ ನೀಡಿದ್ದು, ರಾಜಕೀಯ ಮಾಡದೇ ಅವರ ಭಾಷಣದ ತಿರುಳು ಏನು ಎಂಬುದನ್ನು ಎಡ ಮತ್ತು ಬಲ ಪಂಥಿಯರೂ ದೇಶದ ಹಿತದೃಷ್ಠಿಯಿಂದ ಕಂಡುಕೊಳ್ಳಲೇ ಬೇಕು ಎಂಬುದು ಸತ್ಯ ಸಂಗತಿ.

ಇನ್ನು ಸುಮಾರು 50 ವರ್ಷ ಕಾಲ ಜತೆಗಿದ್ದ ಕಾಂಗ್ರೆಸ್ ಪಕ್ಷ, ಮಗಳು ಶರ್ಮಿಷ್ಠಾ ಮತ್ತು ಇತರರ ತೀವ್ರ ಟೀಕೆಯ ನಡುವೆಯೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಕಾರ್ಯಕರ್ತರ ಮೂರು ವರ್ಷದ ತರಬೇತಿಯ ಸಮಾರೋಪ ಕಾರ್ಯಕ್ರಮದಲ್ಲಿ ಪ್ರಣಬ್​​​​ ಗುರುವಾರ ಭಾಗವಹಿಸಿ ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು ಎಂಬುದರಲ್ಲಿ ಎರಡು ಮಾತಿಲ್ಲ.

ಹಾಗೇ RSS ಕಾರ್ಯಕ್ರಮದಲ್ಲಿ ಪ್ರಣಬ್​​​ ಅವರ ಭಾಗವಹಿಸುವಿಕೆ ಬಗ್ಗೆ ನಡೆದ ಚರ್ಚೆ ಅರ್ಥಹೀನ. ಯಾಕೆಂದರೆ ಆರ್​​ಎಸ್​​ಎಸ್​​ಗೆ ಯಾರೂ ಹೊರಗಿನವರಲ್ಲ ಎಂದು ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ನೀಡಿ, ಸಂಘದ ಪರಿಕಲ್ಪನೆಯನ್ನು ಬೇರೆಡೆಗೆ ಕರೆದೊಯ್ಯುತ್ತಿರುವ ಉಗ್ರ ಹಿಂದೂವಾದಿಗಳಿಗೂ ಒಂದು ಉತ್ತಮ ಸಂದೇಶ ರವಾನಿಸಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಅವರಿಗೆ ಅರ್ಥವಾಗುತ್ತದೋ ಈ ಹೇಳಿಕೆಗೆ ಅವರ ನಿಲುವು ಏನೋ ಎಂಬುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆ… ಗೋರ್ಕಲ್ಲ ಮೇಲೆ ಮೆಳೆಯಾಗದಿರಲಿ ಎಂಬುದು ಎಲ್ಲರ ಆಶಯ.

ಮಾಜಿ ರಾಷ್ಟ್ರಪತಿ ಪ್ರಣಬ್ ಭಾಷಣ :

ದೇಶಪ್ರೇಮ, ರಾಷ್ಟ್ರೀಯತೆ ಮತ್ತು ಬಹುತ್ವದ ಕುರಿತು ತಮ್ಮ ಅಭಿಪ್ರಾಯ ವಿವರಿಸಿದ ಅವರು, ಆಧುನಿಕ ಭಾರತದ ತಮ್ಮ ಪರಿಕಲ್ಪನೆಯನ್ನು ಹರವಿಟ್ಟರು. ಭಾರತದ ಬಹುತ್ವವನ್ನು ಸಂಭ್ರಮಿಸಬೇಕು’ ಎಂದು ಹೇಳಿದರಲ್ಲದೆ, ರಾಷ್ಟ್ರೀಯತೆ ಎಲ್ಲವನ್ನೂ ಒಳಗೊಳ್ಳಬೇಕು. ವಿಶ್ವವೇ ಕುಟುಂಬ ಎಂಬ ಪರಿಕಲ್ಪನೆಯಂತೆ ರಾಷ್ಟ್ರೀಯತೆಯಲ್ಲಿ ವಿಶ್ವಾತ್ಮಕ ಮನೋಭಾವ ಅಡಕವಾಗಿರಬೇಕು. ರಾಷ್ಟ್ರೀಯತೆ ಒಂದು ಭಾಷೆ ಒಂದು ಧರ್ಮಕ್ಕೆ ಸೀಮಿತವಾಗಬಾರದು ಎಂದು ಹೇಳಿದರು.

ಆರಂಭದಲ್ಲಿ ಭಾರತ, ಮುಕ್ತ ಸಮಾಜ ಹೊಂದಿತ್ತು. ಸಿಲ್ಕ್ ರೂಟ್‌ ಸಹಿತ ಎಲ್ಲ ಪ್ರಮುಖ ದಾರಿಗಳ ಮೂಲಕ ದೇಶಕ್ಕೆ ಸಂಪರ್ಕವಿತ್ತು. ವ್ಯಾಪಾರಿಗಳು ಮತ್ತು ಹಲವಾರು ಮಂದಿ ವಿದೇಶಿ ದಾಳಿಕೋರರು ಇಲ್ಲಿಗೆ ಆಗಮಿಸಿದ್ದರು. ಶತಮಾನಗಳ ಹಿಂದೆ ಆಗಮಿಸಿದ್ದ ವಿದೇಶಿ ಪ್ರವಾಸಿಗರು, ವಿವಿಧ ರೀತಿಯ ಆಡಳಿತ ವ್ಯವಸ್ಥೆ ಮತ್ತು ಉತ್ತಮ ಶಿಕ್ಷಣ ವ್ಯವಸ್ಥೆ ಹೊಂದಿದ್ದ ಬಗ್ಗೆ ದಾಖಲೆಗಳನ್ನು ನೀಡಿದ್ದಾರೆ ಎಂದು ಮಾಜಿ ರಾಷ್ಟ್ರಪತಿ ಹೇಳಿದರು. ಸದ್ಯದ ಪರಿಸ್ಥಿತಿಯಲ್ಲಿ ಹಿಂಸೆಗೆ ವಿದಾಯ ಹೇಳಿ ಎಲ್ಲರನ್ನೂ ಒಳಗೊಳ್ಳುವಂಥ ವ್ಯವಸ್ಥೆಯತ್ತ ಹೊರಳಿಕೊಳ್ಳಬೇಕಾಗಿದೆ. ಎಲ್ಲ ರೀತಿಯ ಹಿಂಸೆ ಮತ್ತು ಭೀತಿಯ ವಾತಾವರಣದಿಂದ ನಮ್ಮ ಸಾರ್ವಜನಿಕ ವ್ಯವಸ್ಥೆಯನ್ನು ದೂರ ಇರಿಸಿಕೊಳ್ಳಬೇಕಾಗಿದೆ ಎಂಬ ಮಾನವತಾವಾದದ ಸಂದೇಶ ಸಾರಿದ್ದಾರೆ.

ದ್ವೇಷದ ಮನೋಭಾವನೆ ರಾಷ್ಟ್ರೀಯತೆಯ ನಾಶಕ್ಕೆ ಕಾರಣವಾಗುತ್ತದೆ. ಅಸಹಿಷ್ಣುತೆ ನಮ್ಮ ರಾಷ್ಟ್ರೀಯ ಏಕತೆಗೆ ಧಕ್ಕೆ ತರುತ್ತದೆ. ಹಲವು ರಾಜವಂಶಗಳು, ಪ್ರಭಾವಶಾಲಿಯಾಗಿದ್ದ ರಾಜಕುಟುಂಬಗಳು ಭಾರತದ ಉತ್ತರ ಮತ್ತು ದಕ್ಷಿಣ ಭಾಗವನ್ನು ಆಳಿದ್ದವು. ನಮ್ಮ ದೇಶದ ರಾಷ್ಟ್ರೀಯ ಏಕತೆ ವಿಚಾರ ಹಲವು ರೀತಿಯ ಸಮೀಕರಣ ಮತ್ತು ಸಮ್ಮಿಲನದ ಬಳಿಕ ರೂಪುಗೊಂಡಿದೆ. ಹಲವು ರೀತಿಯ ಸಂಸ್ಕೃತಿಗಳು ಮತ್ತು ನಂಬಿಕೆ ನಮ್ಮ ವ್ಯವಸ್ಥೆಯ ವಿಶೇಷವೇ ಆಗಿದೆ. ರಾಷ್ಟ್ರೀಯತೆಯ ಬಗ್ಗೆ ದೇಶದ ಮೊಟ್ಟ ಮೊದಲ ಪ್ರಧಾನಿ ಜವಾಹರ್‌ಲಾಲ್‌ ನೆಹರೂ ಬರೆದ “ಡಿಸ್ಕವರಿ ಆಫ್ ಇಂಡಿಯಾ’ ಪುಸ್ತಕದಲ್ಲಿನ ಉಲ್ಲೇಖ ಪ್ರಸ್ತಾಪಿಸಿದ ಅವರು, ‘ಹಿಂದೂ, ಮುಸ್ಲಿಂ, ಸಿಕ್ಖ್ ಮತ್ತು ಭಾರತದ ಇತರ ಯಾವುದೇ ಗುಂಪಿಗೆ ಸೇರ್ಪಡೆಗೊಂಡವನು ತಾನು ಎಂಬ ಭಾವನೆಯಿಂದ ಹೊರಗೆ ಬಂದಾಗ ಮಾತ್ರ ರಾಷ್ಟ್ರೀಯತೆ ಎಂಬ ವಿಚಾರ ನಮ್ಮೆಲ್ಲರಲ್ಲಿ ಮೈಗೂಡುತ್ತದೆ’ ಎಂದು ಬರೆದಿದ್ದರು ಆ ರೀತಿಯ ಬದುಕು ಕಟ್ಟಿಕೊಳ್ಳಬೇಕು ನಾವು ಎಂದು ಅಭಿಪ್ರಾಯಪಟ್ಟರು.

ಉತ್ತಮ ವಿವಿಗಳು:

1,800 ವರ್ಷಗಳ ಕಾಲ ತಕ್ಷಶಿಲಾ, ನಳಂದಾ ಸೇರಿದಂತೆ ವಿಶ್ವಮಾನ್ಯ ವಿವಿಗಳು ಪ್ರಪಂಚದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳನ್ನು ಮತ್ತು ಸಂಶೋಧಕರನ್ನು ಆಹ್ವಾನಿಸುತ್ತಿದ್ದವು. ನಮ್ಮ ದೇಶದ ರಾಷ್ಟ್ರೀಯತೆ ಎಂಬ ವಿಚಾರ ಏಕತೆಯಿಂದ ಉಂಟಾಗಿದೆ. ಶತಮಾನಗಳಿಂದಲೂ ಕೂಡ ವಸುಧೈವ ಕುಟುಂಬಕಂ ಎಂಬ ತತ್ವದಲ್ಲಿ ನಂಬಿಕೆಯನ್ನು ಇರಿಸಿಕೊಂಡು ಬಂದಿದ್ದೇವೆ.

600 ವರ್ಷ ಮುಸ್ಲಿಂ ಆಡಳಿತ:

ದೇಶದ ಇತಿಹಾಸದತ್ತ ಗಮನ ಹರಿಸಿದ ಮುಖರ್ಜಿ, ಕ್ರಿಸ್ತಪೂರ್ವ ಆರನೇ ಶತಮಾನದಿಂದ 600 ವರ್ಷಗಳ ಕಾಲ ಮುಸ್ಲಿಂ ಅರಸರ ಆಳ್ವಿಕೆ ದೇಶದಲ್ಲಿತ್ತು. ಬಳಿಕ ಈಸ್ಟ್‌ ಇಂಡಿಯಾ ಕಂಪೆನಿ ಆಡಳಿತದ ನೇತೃತ್ವ ವಹಿಸಿಕೊಂಡಿತು. ಮೊದಲ ಸ್ವಾತಂತ್ರ್ಯ ಸಂಗ್ರಾಮದ ಬಳಿಕ ದೇಶದ ಆಡಳಿತ ರಾಣಿಯ ನೇತೃತ್ವಕ್ಕೆ ಸಿಕ್ಕಿತು. ಗಮನದಲ್ಲಿರಿಸಿಕೊಳ್ಳಬೇಕಾದ ಅಂಶವೇನೆಂದರೆ ಹಲವಾರು ಮಂದಿ ಆಡಳಿತಗಾರರು ಆಡಳಿತ ನಡೆಸಿದರೂ 5 ಸಾವಿರ ವರ್ಷಕ್ಕಿಂತಲೂ ಹೆಚ್ಚಿನ ಇತಿಹಾಸ ಇರುವ ನಮ್ಮ ನಾಗರಿಕತೆ ಯಥಾಸ್ಥಿತಿಯನ್ನು ಕಾಯ್ದುಕೊಂಡಿತ್ತು ಎಂದರು.

ಹಲವು ಧರ್ಮಗಳು:

ತ್ರಿಪುರಾದಿಂದ ದ್ವಾರಕೆಯವರೆಗೆ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನಮ್ಮ ದೇಶದಲ್ಲಿ ಹಲವಾರು ಧರ್ಮಗಳಿವೆ ಎಂದು ಹೇಳುವುದೇ ರೋಮಾಂಚನ. ಲೆಕ್ಕವಿಲ್ಲದಷ್ಟು ಧರ್ಮಗಳು, ಜಾತಿಗಳು ಒಂದೇ ಸಂವಿಧಾನದ ಅಡಿಯಲ್ಲಿವೆ ಎಂದು ಹೇಳಿಕೊಳ್ಳುವುದೇ ಹೆಗ್ಗಳಿಕೆ. 122 ಭಾಷೆಗಳು, 1,600 ನುಡಿಕಟ್ಟು, 7 ಪ್ರಮುಖ ಧರ್ಮಗಳು, ಮೂರು ಪ್ರಮುಖ ಜನಾಂಗಗಳು ಒಂದೇ ವ್ಯವಸ್ಥೆಯ ಅಡಿಯಲ್ಲಿ ಕೆಲಸ ಮಾಡುತ್ತಿವೆ. ಹೀಗಾಗಿಯೇ ಭಾರತೀಯ ಎಂದು ಕರೆಯಿಸಿಕೊಳ್ಳಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ವಿವಿಧ ಅಭಿಪ್ರಾಯಗಳು ಇರುತ್ತವೆ. ಅದನ್ನು ನಿರಾಕರಿಸಲಾಗದು ಎಂದಿದ್ದಾರೆ.

ಅರ್ಥ ವ್ಯವಸ್ಥೆ ಬೆಳೆಯುತ್ತಿದೆ:

ದೇಶದ ಅರ್ಥ ವ್ಯವಸ್ಥೆ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಅರ್ಥ ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದರೂ ಜಗತ್ತಿನ ಸಂತೋಷದ ರ್ಯಾಂ ಕಿಂಗ್‌ ವ್ಯವಸ್ಥೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಿಲ್ಲ ಎಂದರು. ಅದನ್ನು ಪುಷ್ಟೀಕರಿಸಲು ಜನರ ಸಂತೋಷವು ರಾಜನ ಸಂತೋಷದಲ್ಲಿ ಒಳಗೊಂಡಿದೆ’ ಎಂಬ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಉಲ್ಲೇಖಗೊಂಡ ಶ್ಲೋಕವನ್ನು ಪ್ರಸ್ತಾವಿಸಿದರು. ಒಂದು ದೇಶದಲ್ಲಿ ಜನರೇ ಎಲ್ಲಾ ಚಟುವಟಿಕೆಗಳ ಕೇಂದ್ರವಾಗಿರುತ್ತಾರೆ. ಅವರನ್ನು ವಿಭಜಿಸಲು ಯಾವುದೇ ಕ್ರಮ ಕೈಗೊಳ್ಳಬಾರದು. ದೇಶದ ಮುಖ್ಯ ಗುರಿ ಜನರನ್ನು ಒಟ್ಟು ಸೇರಿಸಿಕೊಳ್ಳುವುದು ಮತ್ತು ಬಡತನ, ತಾರತಮ್ಯ, ಕಾಯಿಲೆಗಳ ವಿರುದ್ಧ ಹೋರಾಟ ನಡೆಸುವುದಾಗಿರಬೇಕು ಎಂದು ಪ್ರಣಬ್​​​​ ಮುಖರ್ಜಿ ಹೇಳಿದರು. ಜೈಹಿಂದ್‌, ವಂದೇ ಮಾತರಂ ಎನ್ನುವ ಮೂಲಕ ಭಾಷಣ ಕೊನೆಗೊಳಿಸಿದರು.

ಭಾರತ ಮಾತೆಯ ಶ್ರೇಷ್ಠ ಪುತ್ರ:

ಐದು ದಶಕಗಳ ರಾಜಕೀಯ ಜೀವನದಲ್ಲಿ ಆರೆಸ್ಸೆಸ್‌ ನಿಲುವಿಗೆ ವ್ಯತಿರಿಕ್ತವಾದ ಧೋರಣೆ ಹೊಂದಿರುವ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ, ಆರ್‌ಎಸ್‌ಎಸ್‌ನ ಸಂಸ್ಥಾಪಕ ಮತ್ತು ಮೊದಲ ಸರಸಂಘ ಚಾಲಕ ಡಾ| ಕೇಶವ ಬಲಿರಾಮ್ ಹೆಡ್ಗೆವಾರ್‌ ಅವರನ್ನು ‘ಭಾರತ ಮಾತೆಯ ಶ್ರೇಷ್ಠ ಪುತ್ರ’ ಎಂದು ವ್ಯಾಖ್ಯಾನಿಸಿದರು.

ಹೆಡ್ಗೆವಾರ್‌ ಜನಿಸಿದ ನಿವಾಸಕ್ಕೆ ಭೇಟಿ ನೀಡಿದ ಮುಖರ್ಜಿ, ‘ಭಾರತ ಮಾತೆಯ ಶ್ರೇಷ್ಠ ಸುಪುತ್ರನಿಗೆ ಗೌರವ ಮತ್ತು ಅಂತಿಮ ನಮನ ಸಲ್ಲಿಸಲು ನಾನು ಇಲ್ಲಿಗೆ ಇವತ್ತು ಆಗಮಿಸಿದ್ದೇನೆ’ ಎಂದು ಸಂದರ್ಶಕರ ಪುಸ್ತಕದಲ್ಲಿ ಬರೆದರು. ಆರೆಸೆಸ್ನ ಹಾಲಿ ಸರಸಂಘ ಸಂಚಾಲಕ ಮೋಹನ್‌ ಭಾಗವತ್‌ ಆತ್ಮೀಯವಾಗಿ ಬರಮಾಡಿಕೊಂಡು ಸ್ವಾಗತಿಸಿದರು. ಪ್ರಣಬ್​​ರ ಪೂರ್ವ ನಿಗದಿತ ಕಾರ್ಯಕ್ರಮ ಪಟ್ಟಿಯಲ್ಲಿ ಈ ಭೇಟಿ ಸೇರ್ಪಡೆಯಾಗಿರಲಿಲ್ಲ. ಕೊನೆಯ ಕ್ಷಣದಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಮುಖರ್ಜಿ ಜತೆಗೆ ನೇತಾಜಿ ಕುಟುಂಬ ಸದಸ್ಯರೂ ಇದ್ದರು. ಅಗಲ ಕಿರಿದಾದ ದಾರಿಯಲ್ಲಿ ಪ್ರಣಬ್​​​ ಮುಖರ್ಜಿ ನಡೆದುಕೊಂಡು ಹೋದರು. ಪಾದರಕ್ಷೆಗಳನ್ನು ಕಳಚಿ ಹೆಗ್ಗಡೇವಾರ್‌ ಅವರ ನಿವಾಸವನ್ನು ಮುಖರ್ಜಿ ಪ್ರವೇಶಿಸಿದ್ದು ಸೇರಿದಂತೆ ನಾಗ್ಪುರದಲ್ಲಿ ಗುರುವಾರ ನಡೆದ ತ್ರಿತೀಯ ಶಿಕ್ಷಾವರ್ಗ ಕಾರ್ಯಕ್ರಮ ಪ್ರಣಬ್​​​ ಆಗಮನದಿಂದ ಇತಿಹಾಸ ಪುಟಗಳಲ್ಲಿ ಮತ್ತಷ್ಟು ಚೆಂದ ಮಾಡಿ ಬರೆದಿಟ್ಟುಕೊಳ್ಳುವಂತಹ ಕ್ಷಣಗಳೇ ಎಂದು ಹೇಳಬಹುದು.

ಬಹುಮುಖ್ಯವಾಗಿ ಪ್ರಣಬ್ ಯಾವ ಕಾರಣಕ್ಕೆ ಆರ್ ಎಸ್ ಎಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದು ಎಂಬುದಕ್ಕೆ  ‘ದೇಶ, ದೇಶೀಯತೆ ಮತ್ತು ದೇಶಪ್ರೇಮದ ಬಗ್ಗೆ ನನ್ನ ಗ್ರಹಿಕೆಯನ್ನು ಹಂಚಿಕೊಳ್ಳುವುದಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ. ನಮ್ಮ ಸಾರ್ವಜನಿಕ ಸಂವಾದದಿಂದ ಎಲ್ಲಾ ರೀತಿಯ ಭಯ ಮತ್ತು ಹಿಂಸೆಯನ್ನು ತೊಡೆದು ಹಾಕಬೇಕು ಆ ಕಾರಣವಾಗಿ ಬಂದಿದ್ದೇನೆ ಎಂದಿದ್ದು ಮಾತ್ರ ಇಡೀ ಪ್ರಜಾಪ್ರಭುತ್ವದ ರಾಜಕಾರಣಿಗಳಿಗೆ ರೋಲ್ ಮಾಡಲ್ ಆಗಿ ನಿಲ್ಲುವಂತ ವ್ಯಖ್ಯಾನ.

ಒಟ್ಟಾರೆ ಪ್ರಣಬ್​​​ ಉತ್ತಮ ಭಾಷಣವನ್ನೇ ಮಾಡಿದ್ದಾರೆ. ದೇಶ ಮೊದಲು ಎಂಬ ಸಂದೇಶ ನೀಡಿದ್ದಾರೆ. ಜನರ ಅಭ್ಯುದಯವೇ ಪ್ರಜಾಪ್ರಭುತ್ವದ ಆದ್ಯತೆ. ಅದು ಭಾರತದ ರಾಷ್ಟ್ರೀಯತೆ ಎನ್ನುವುದನ್ನು ಅವರು ವಿವರಿಸಿದ್ದಾರೆ. ಆದರೆ ಪ್ರರಬ್ ಅಷ್ಟೊಂದು ಒತ್ತಡದ ನಡುವೆಯೂ RSS ಕಾರ್ಯಕ್ರಮಕ್ಕೆ ಹೋಗಿ ಇಷ್ಟು ದೊಡ್ಡಮಟ್ಟದ ಪ್ರಜಾಪ್ರಭುತ್ವ ಮತ್ತು ಭಾರತದ  ಅತಃ ಸತ್ವದ ಬಗ್ಗೆ ಅವರ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಅವರ ಈ ಎಲ್ಲಾ ಅಭಿಪ್ರಾಯ ಬರಹಗಾರರ ಪದಗಳಲ್ಲಿ, ಪತ್ರಿಕೆಗಳ ಮುಖಪುಟದಲ್ಲಿ , RSS ಪುಸ್ತಕದಲ್ಲಿ ಇದ್ದರೆ ಸಾಲದು ಅದು ಎರಡೂ ಸಿದ್ಧಾಂತಿಗಳ ಸ್ಮೃತಿ ಪಟಲದಲ್ಲಿ ಉಳಿಯುವಂತಾಗ ಬೇಕು ಇಲ್ಲಾ, ಗೋರ್ಕಲ್ಲ ಮೇಲೆ ಮೆಳೆ ಸುರಿದಂತೆ ಎಂಬುದು ಸ್ಪಷ್ಟ.

ಲೇಖನ : PSV 

Please follow and like us:
0
http://bp9news.com/wp-content/uploads/2018/06/336506973-1.jpghttp://bp9news.com/wp-content/uploads/2018/06/336506973-1-150x150.jpgPolitical Bureauಅಂಕಣಪ್ರಮುಖರಾಜಕೀಯರಾಷ್ಟ್ರೀಯPranab speech should not be melted on Koru's stone !!!ಬೆಂಗಳೂರು : ಧರ್ಮ, ಸಿದ್ಧಾಂತ ಅಥವಾ ಅಸಹಿಷ್ಣುತೆ ಮೂಲಕ ಭಾರತವನ್ನು ವ್ಯಾಖ್ಯಾನಿಸುವ ಯಾವುದೇ ಪ್ರಯತ್ನ ದೇಶದ ಅಸ್ತಿತ್ವವನ್ನೇ ದುರ್ಬಲಗೊಳಿಸುತ್ತದೆ. ಭಾರತದ ಆತ್ಮ ನೆಲೆಸಿರುವುದೇ ಬಹುತ್ವದಲ್ಲಿ. ದ್ವೇಷ ಮತ್ತು ಅಸಹನೆಯಿಂದ ಭಾರತದ ರಾಷ್ಟ್ರೀಯತೆ ನಾಶವಾಗಬಹುದು ಎಂಬ ಸೂಚ್ಯ ಎಚ್ಚರಿಕೆಯನ್ನು RSS ಮತ್ತು ಕಾಂಗ್ರೆಸ್ ಎರಡೂ ಸಿದ್ಧಾಂತವಾದಿಗಳಿಗೆ ಪ್ರಣಬ್​​ ನೀಡಿದ್ದಾರೆ. ಓರ್ವ ಮಾಜಿ ರಾಷ್ಟ್ರಪತಿಗಳು ನೀಡಬೇಕಾದ ಸಂದೇಶವನ್ನೇ ಪ್ರಣಬ್ ನೀಡಿದ್ದು, ರಾಜಕೀಯ ಮಾಡದೇ ಅವರ ಭಾಷಣದ ತಿರುಳು ಏನು ಎಂಬುದನ್ನು ಎಡ ಮತ್ತು...Kannada News Portal