ಬೆಂಗಳೂರು: ‘ಪಕ್ಷದ ಹೈಕಮಾಂಡ್ ಎಲ್ಲ ಶಾಸಕರ ಸಾಮರ್ಥ್ಯವನ್ನು ಅಳೆದು–ತೂಗಿಯೇ ಸಂಪುಟಕ್ಕೆ ಸೂಕ್ತರನ್ನು ಆಯ್ಕೆ ಮಾಡಿದೆ. ಅರ್ಹತೆ ಇಲ್ಲದಿದ್ದರೂ ಮಂತ್ರಿಗಿರಿ ಕೊಡುವುದಕ್ಕೆ ರಾಹುಲ್‌ ಗಾಂಧಿ ನನ್ನ ನೆಂಟನೇನಲ್ಲ…’ ಎಂದು ಜಮೀರ್​ ಸಿಡಿಮಿಡಿ ವ್ಯಕ್ತಪಡಿಸಿದ್ದಾರೆ.

‘ಅರ್ಹತೆ ಇಲ್ಲದವರನ್ನು ಸಚಿವರನ್ನಾಗಿ ಮಾಡಲಾಗಿದೆ’ ಎಂದು ಹೇಳಿಕೆ ನೀಡಿದ್ದ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್‌ ಸೇಠ್‌ ಅವರಿಗೆ, ಹಜ್ ಮತ್ತು ವಕ್ಫ್ ಖಾತೆ ಸಚಿವ ಜಮೀರ್ ಅಹಮದ್ ಖಾನ್ ಈ ಮೇಲಿನಂತೆ ತಿರುಗೇಟು ನೀಡಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಹೈಕಮಾಂಡ್ ಬೇಕಾಬಿಟ್ಟಿಯಾಗಿ ಖಾತೆಗಳನ್ನು ಹಂಚಿಲ್ಲ. ಸಂಪುಟ ರಚನೆಗೂ ಮೊದಲು ಹಲವು ತಂಡಗಳನ್ನು ರಚನೆ ಮಾಡಿ, ಯಾವ ಖಾತೆಗೆ ಯಾರು ಅರ್ಹರು ಎಂಬ ಬಗ್ಗೆ ಸಮೀಕ್ಷೆ ಮಾಡಿಸಿದೆ. ಆ ಸಮೀಕ್ಷೆಯ ವರದಿ ಆಧರಿಸಿ ಮಂತ್ರಿಗಿರಿ ಕೊಟ್ಟಿದೆ’ ಎಂದರು.

‘ಹೊರಗಿನಿಂದ ಬಂದ ಜಮೀರ್, ಚುನಾವಣೆಯಲ್ಲಿ ನನ್ನನ್ನೇ ಸೋಲಿಸಲು ಯತ್ನಿಸಿದ್ದ ಎಂದೂ ತನ್ವೀರ್ ಆರೋಪಿ
ಸಿದ್ದಾರೆ. ನಾನು ಅಂಥ ಕುತಂತ್ರ ಬುದ್ಧಿ ಪ್ರದರ್ಶಿಸಿದ್ದರೆ, ಇಷ್ಟು ದಿನ ಏಕೆ ಸುಮ್ಮನಿದ್ದಿರಿ ತನ್ವೀರ್. ಅವತ್ತೇ ಹೈಕ
ಮಾಂಡ್‌ಗೆ ದೂರು ಕೊಡಬಹುದಿತ್ತಲ್ಲ. ಚುನಾವಣೆ ಮುಗಿದು ಇಷ್ಟು ದಿನಗಳಾದ ನಂತರ, ಅದೂ ಸಚಿವ ಸ್ಥಾನ ಕೈತಪ್ಪಿದ ಬಳಿಕ ಏಕೆ ಈ ರೀತಿ ಹೇಳುತ್ತಿದ್ದೀರಿ’ ಎಂದು ಖಾರವಾಗಿ ಪ್ರಶ್ನಿಸಿದರು.

‘ತನ್ವೀರ್ ಕ್ಷೇತ್ರಕ್ಕೇ ಹೋಗಿ, ಅವರನ್ನು ಸೋಲಿಸುವಷ್ಟು ಶಕ್ತಿ ನನಗಿದೆಯೇ ಎಂಬ ಕುತೂಹಲ ಕಾಡುತ್ತಿದೆ. ಆದರೆ, ನನ್ನಲ್ಲಿ ಅಂತಹ ಸಾಮರ್ಥ್ಯವೂ ಇದೆ ಎಂಬುದನ್ನು ಅವರೇ ತೋರಿಸಿಕೊಟ್ಟಿದ್ದಾರೆ’ ಎಂದೂ ವ್ಯಂಗ್ಯವಾಡಿದರು.

ರೋಷನ್ ಮುನಿಸು :

ಹಜ್ ಮತ್ತು ವಕ್ಫ್‌ ಖಾತೆಯನ್ನು ಜಮೀರ್‌ಗೆ ಕೊಟ್ಟಿರುವುದಕ್ಕೆ ಮುನಿಸಿಕೊಂಡಿರುವ ಕಾಂಗ್ರೆಸ್‌ನ ಹಿರಿಯ ಶಾಸಕ ರೋಷನ್ ಬೇಗ್, ಜಮೀರ್ ಅವರಿಂದ ಖಾತೆ ವಾಪಸ್ ಪಡೆದು ಬೇರೆ ಯಾರಿಗಾದರೂ ಕೊಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಮೇಲೆ ಒತ್ತಡ ಹೇರಿದ್ದಾರೆ ಎಂದು ತಿಳಿದು ಬಂದಿದೆ.

‘ತಾನು ಮುಸ್ಲಿಂ ಸಮುದಾಯದ ನಾಯಕನೆಂದು ದೀರ್ಘಕಾಲದರೆಗೂ ಬಿಂಬಿಸಿಕೊಳ್ಳುವುದಕ್ಕೆ ಈ ಖಾತೆ ನೆರವಾಗುತ್ತದೆ. ಹೀಗಾಗಿ, ಮುಸ್ಲಿಂ ಮುಖಂಡರೆಲ್ಲ ಆ ಖಾತೆಗೆ ಪೈಪೋಟಿ ನಡೆಸುತ್ತಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ತನ್ವೀರ್ ಸೇಠ್‌ಗೆ ಹಜ್ ಖಾತೆ ನೀಡಲಾಗಿತ್ತು. ಆಗಲೂ ರೋಷನ್ ಬೇಗ್ ಅಸಮಾಧಾನ ವ್ಯಕ್ತಪಡಿಸಿ, ನಗರಾಭಿವೃದ್ಧಿಯ ಜತೆಗೆ ಹಜ್ ಖಾತೆಯನ್ನೂ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಈಗಲೂ ಆ ಖಾತೆ ವಿಚಾರದಲ್ಲಿ ತಗಾದೆ ತೆಗೆದಿದ್ದಾರೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಜಮೀರ್, ‘ರೋಷನ್ ಬೇಗ್‌ ಹಿರಿಯರು. ಸಚಿವ ಸ್ಥಾನ ಸಿಗತ್ತದೆಂದು ಆಸೆ ಇಟ್ಟುಕೊಂಡಿದ್ದರು. ಆಸೆ ಈಡೇರದಿದ್ದಾಗ ಸಹಜವಾಗಿಯೇ ಬೇಸರವಾಗಿದೆ. ಹೊಸಮುಖಗಳಿಗೇ ಅವಕಾಶ ಕೊಡಬೇಕು ಎಂದು ಹೈಕಮಾಂಡ್ ನಿರ್ಧರಿಸಿರುವ ಕಾರಣ, ಹಜ್ ಖಾತೆಯನ್ನು ನನ್ನಿಂದ ವಾಪಸ್ ಪಡೆದರೂ ರೋಷನ್ ಬೇಗ್ ಅವರಿಗೆ ಸಿಗುವುದಿಲ್ಲ. ಅದನ್ನು ಅವರೇ ಅರ್ಥ ಮಾಡಿಕೊಳ್ಳಬೇಕು’ ಎಂದು ಬೇಗ್ಗೆ ಟಾಂಗ್ ನೀಡಿದ್ದಾರೆ.

Please follow and like us:
0
http://bp9news.com/wp-content/uploads/2018/06/jameer-1.jpghttp://bp9news.com/wp-content/uploads/2018/06/jameer-1-150x150.jpgPolitical Bureauಪ್ರಮುಖರಾಜಕೀಯಬೆಂಗಳೂರು: ‘ಪಕ್ಷದ ಹೈಕಮಾಂಡ್ ಎಲ್ಲ ಶಾಸಕರ ಸಾಮರ್ಥ್ಯವನ್ನು ಅಳೆದು–ತೂಗಿಯೇ ಸಂಪುಟಕ್ಕೆ ಸೂಕ್ತರನ್ನು ಆಯ್ಕೆ ಮಾಡಿದೆ. ಅರ್ಹತೆ ಇಲ್ಲದಿದ್ದರೂ ಮಂತ್ರಿಗಿರಿ ಕೊಡುವುದಕ್ಕೆ ರಾಹುಲ್‌ ಗಾಂಧಿ ನನ್ನ ನೆಂಟನೇನಲ್ಲ...’ ಎಂದು ಜಮೀರ್​ ಸಿಡಿಮಿಡಿ ವ್ಯಕ್ತಪಡಿಸಿದ್ದಾರೆ. ‘ಅರ್ಹತೆ ಇಲ್ಲದವರನ್ನು ಸಚಿವರನ್ನಾಗಿ ಮಾಡಲಾಗಿದೆ’ ಎಂದು ಹೇಳಿಕೆ ನೀಡಿದ್ದ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್‌ ಸೇಠ್‌ ಅವರಿಗೆ, ಹಜ್ ಮತ್ತು ವಕ್ಫ್ ಖಾತೆ ಸಚಿವ ಜಮೀರ್ ಅಹಮದ್ ಖಾನ್ ಈ ಮೇಲಿನಂತೆ ತಿರುಗೇಟು ನೀಡಿದ್ದಾರೆ. ವಿಕಾಸಸೌಧದಲ್ಲಿ ಸುದ್ದಿಗಾರರ ಜತೆ...Kannada News Portal