ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡುವ ಕುರಿತಂತೆ ಹಿರಿಯರು ಮತ್ತು ಕಿರಿಯರ ನಡುವೆ ಪೈಪೋಟಿ ಆರಂಭವಾಗಿದೆ. ಹಿರಿಯ ನಾಯಕ ಎಚ್‌. ಕೆ.ಪಾಟೀಲ್‌ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಪರ ಹೈಕಮಾಂಡ್‌ ಮಟ್ಟದಲ್ಲಿ ಲಾಬಿ ನಡೆಯುತ್ತಿದೆ.

ಪಕ್ಷವನ್ನು ಸಮರ್ಥವಾಗಿ ಮುಂದುವರೆಸಿಕೊಂಡು ಹೋಗಲು ಹಿರಿಯ ನಾಯಕರಿಗೆ ಅಧ್ಯಕ್ಷಸ್ಥಾನ ನೀಡಬೇಕು ಎಂದು ಸಂಸದರು ಮತ್ತು ಕೆಲವು ಹಿರಿಯ ನಾಯಕರು ಹೈಕಮಾಂಡ್‌ ಮೇಲೆ ಒತ್ತಡ ಹೇರುತ್ತಿದ್ದಾರೆ. ಈಗಾಗಲೇ ಸಚಿವ ಸ್ಥಾನ ವಂಚಿತ ಅತೃಪ್ತ ಶಾಸಕರ ನಾಯಕತ್ವ ವಹಿಸಿಕೊಂಡಿರುವ ಎಚ್‌.ಕೆ.ಪಾಟೀಲ್‌ಗೆ ಅಧ್ಯಕ್ಷ ಸ್ಥಾನ ನೀಡುವಂತೆ ಎಐಸಿಸಿ ಪದಾಧಿಕಾರಿಗಳು ಹೈಕಮಾಂಡ್‌ ಮುಂದೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಸಚಿವ ಸಂಪುಟದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ ಎಂಬ ಕೂಗು ಕೇಳಿ ಬರುತ್ತಿದೆ. ಅಲ್ಲದೇ ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ, ಶಾಸಕಾಂಗ ಪಕ್ಷದ ನಾಯಕ, ಸಮನ್ವಯ ಸಮಿತಿ ನಾಯಕ ಹುದ್ದೆಗಳಲ್ಲಿ ದಕ್ಷಿಣ ಕರ್ನಾಟಕದವರೇ ಇರುವುದರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಉತ್ತರ ಕರ್ನಾಟಕ ಭಾಗಕ್ಕೆನೀಡದಿದ್ದರೆ, ಲೋಕಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹಿರಿಯ ಸಂಸದರು ಹೈಕಮಾಂಡ್ ಮುಂದೆ ವಾದ ಮಂಡಿಸಿದ್ದಾರೆ.

ಒಂದು ವೇಳೆ ಹೈದರಾಬಾದ್‌ ಕರ್ನಾಟಕಕ್ಕೆ ಆದ್ಯತೆ ನೀಡಬೇಕೆಂದರೆ ವೀರಶೈವ ಸಮಾಜದ ಈಶ್ವರ ಖಂಡ್ರೆ ಅವರನ್ನು ಪರಿಗಣಿಸಬಹುದು ಎಂಬ ಸಲಹೆಯೂ ವ್ಯಕ್ತವಾಗಿದೆ ಎನ್ನಲಾಗಿದೆ.

ಇನ್ನೊಂದೆಡೆ, ಸಚಿವ ಕೃಷ್ಣ ಬೈರೇಗೌಡ, ಪರಿಷತ್‌ ಸದಸ್ಯ ರಿಜ್ವಾನ್‌ ಅರ್ಷದ್‌ ಸೇರಿದಂತೆ ಅನೇಕ ಮುಖಂಡರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ದಿನೇಶ್‌ ಪರ ಲಾಬಿ ನಡೆಸಿದ್ದಾರೆ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರಿಗೂ ದಿನೇಶ್‌ ಗುಂಡೂವಾರ್‌ ಪರ ಒಲವಿದೆ ಎಂದು ಹೇಳಲಾಗಿದೆ.

ಮೌನವಾದ ಸಿದ್ದರಾಮಯ್ಯ:

ಕೆಪಿಸಿಸಿ ಅಧ್ಯಕ್ಷರ ನೇಮಕ ವಿಷಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮೌನ ವಹಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ವಿಧಾನ ಪರಿಷತ್‌ ಸದಸ್ಯ ಎಸ್‌.ಆರ್‌.ಪಾಟೀಲರನ್ನು ನೇಮಿಸಬೇಕೆಂದು ಸಿದ್ದರಾಮಯ್ಯನವರು ಹೈಕಮಾಂಡ್‌ ಮುಂದೆ ಲಾಬಿ ನಡೆಸಿದ್ದರು. ಆದರೆ, ಹೈಕಮಾಂಡ್‌ ಎಸ್‌.ಆರ್‌.ಪಾಟೀಲ್ ನೇಮಕಕ್ಕೆ ಆಸಕ್ತಿ ತೋರಿಲ್ಲ. ಈ ಕಾರಣಕ್ಕಾಗಿ ಯಾರನ್ನಾದರೂ ನೇಮಿಸಿಕೊಳ್ಳಲಿ ಎಂದು ಸುಮ್ಮನಾಗಿದ್ದಾರೆ ಎಂದು ತಿಳಿದು ಬಂದಿದೆ.

ಪಕ್ಷ ನಿಷ್ಠರಿಗೆ ನ್ಯಾಯ ಕೊಡಿಸುವ ಭರವಸೆ :

ಪಕ್ಷ ನಿಷ್ಠರು ಮತ್ತು ಉತ್ತಮ ಕೆಲಸ ಮಾಡುವವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವ ಬಗ್ಗೆ ಎಚ್‌.ಕೆ.ಪಾಟೀಲ್‌ ತಂಡಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದ್ದು, ಸಚಿವ ಸ್ಥಾನ ಸಿಗದೆ ಮುನಿಸಿಕೊಂಡಿದ್ದ ಎಚ್‌.ಕೆ. ಪಾಟೀಲರನ್ನು ದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸಿರುವ ರಾಹುಲ್‌, ಪ್ರಾದೇಶಿಕ ಅಸಮಾನತೆ ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಎಚ್‌.ಕೆ.ಪಾಟೀಲ್‌ ನೇರವಾಗಿ ರಾಹುಲ್‌ ಎದುರು ವಾದ ಮಂಡಿಸಿದ್ದಾರೆ. ಅಲ್ಲದೆ, ತಾವು ಗ್ರಾಮೀಣಾಭಿವೃದ್ಧಿ ಸಚಿವರಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ಕೈಗೊಂಡು ಕೇಂದ್ರ ಸರ್ಕಾರದಿಂದ ಅನೇಕ ಪ್ರಶಸ್ತಿಗಳನ್ನು ಪಡೆದಿರುವ ಬಗ್ಗೆಯೂ ರಾಹುಲ್‌ ಗಮನಕ್ಕೆ ತಂದರು ಎನ್ನಲಾಗಿದೆ.

ಇದೇ ವೇಳೆ, ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕ ಮಾಡುವ ಕುರಿತಂತೆಯೂ ಚರ್ಚೆ ನಡೆಸಿದ್ದು, ಒಂದು ವೇಳೆ ಅಧ್ಯಕ್ಷ ಸ್ಥಾನ ಜವಾಬ್ದಾರಿ ವಹಿಸಿದರೆ ನಿಭಾಯಿಸುವ ಬಗ್ಗೆ ಎಚ್‌.ಕೆ. ಪಾಟೀಲ್‌ ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಸಚಿವ ಸ್ಥಾನ ಸಿಗದೆ ತಮ್ಮೊಂದಿಗೆ ಗುರುತಿಸಿಕೊಂಡಿರುವ ಶಾಸಕರಿಗೆ ಸೂಕ್ತ ಸ್ಥಾನಮಾನ ನೀಡುವ ಬಗ್ಗೆಯೂ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Please follow and like us:
0
http://bp9news.com/wp-content/uploads/2018/06/nk0lNHdaijisi.jpghttp://bp9news.com/wp-content/uploads/2018/06/nk0lNHdaijisi-150x150.jpgPolitical Bureauಪ್ರಮುಖರಾಜಕೀಯರಾಷ್ಟ್ರೀಯRahul Gandhi's head is KPCC president : Siddaramaanna is silentಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡುವ ಕುರಿತಂತೆ ಹಿರಿಯರು ಮತ್ತು ಕಿರಿಯರ ನಡುವೆ ಪೈಪೋಟಿ ಆರಂಭವಾಗಿದೆ. ಹಿರಿಯ ನಾಯಕ ಎಚ್‌. ಕೆ.ಪಾಟೀಲ್‌ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಪರ ಹೈಕಮಾಂಡ್‌ ಮಟ್ಟದಲ್ಲಿ ಲಾಬಿ ನಡೆಯುತ್ತಿದೆ. ಪಕ್ಷವನ್ನು ಸಮರ್ಥವಾಗಿ ಮುಂದುವರೆಸಿಕೊಂಡು ಹೋಗಲು ಹಿರಿಯ ನಾಯಕರಿಗೆ ಅಧ್ಯಕ್ಷಸ್ಥಾನ ನೀಡಬೇಕು ಎಂದು ಸಂಸದರು ಮತ್ತು ಕೆಲವು ಹಿರಿಯ ನಾಯಕರು ಹೈಕಮಾಂಡ್‌ ಮೇಲೆ ಒತ್ತಡ ಹೇರುತ್ತಿದ್ದಾರೆ. ಈಗಾಗಲೇ ಸಚಿವ ಸ್ಥಾನ ವಂಚಿತ ಅತೃಪ್ತ ಶಾಸಕರ...Kannada News Portal