ಬೆಂಗಳೂರು :  ನಮ್ಮ ಧರ್ಮ ಸಂಸ್ಕೃತಿ ಇನ್ನೂ ಉಳಿದಿರುವುದು ದೇವಾಲಯಗಳಿಂದ ಮಾತ್ರ ಎಂದು ಪೇಜಾವರ ಶ್ರೀಗಳು ಹೇಳಿದರು. ಹೊಸನಗರ ಶ್ರೀ ರಾಮಚಂದ್ರಾಪುರಮಠದ ಪುಣ್ಯ ಭೂಮಿಯ ಶರಾವತಿ ನದಿ ತೀರದಲ್ಲಿ ಶ್ರೀಚಂದ್ರಮೌಳೀಶ್ವರ ದೇವಾಲಯದ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಲಶೋತ್ಸವದ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಎಲ್ಲ ಕಡೆ ದೇವರಿದ್ದಾನೆ ಎನ್ನುವ ನಮಗೆ ದೇವಾಲಯ ಏಕೆ ಬೇಕು ಎನ್ನುವ ಪ್ರಶ್ನೆ ಸಹಜವಾಗಿ ಮೂಡಬಹುದು. ಆದರೆ ಭಗವಂತ ಪ್ರಕಟವಾಗಲು ಇರುವ ತಾಣ ದೇವಾಲಯ, ದೇವಾಲಯವಿದ್ದರೆ ಅಲ್ಲಿ ಭಗವಂತನ ಸಾಕ್ಷಾತ್ಕಾರ. ಮಾತ್ರವಲ್ಲ ಜನರಲ್ಲಿಯೂ ಭಕ್ತಿ ಶ್ರದ್ದೆ ಮೂಡುವುದು ದೇವ ತಾಣದಲ್ಲಿಯೇ ಹೊರತು ಬೇರೆಲ್ಲಿಯೂ ಅಲ್ಲ ಹಾಗಾಗಿಯೇ ನಮ್ಮ ಧರ್ಮದಲ್ಲಿ ದೇವಾಲಯಕ್ಕೆ ವಿಶೇಷ ಸ್ಥಾನವಿದೆ, ಅದರಲ್ಲಿಯೂ ಹಿಂದೂ ಧರ್ಮದ ಭದ್ರಕೋಟೆ  ಎಂದರೆ ಅದು ದೇವಾಲಯ ಎಂದರು.

ಯಾವುದೇ ವ್ಯಕ್ತಿ ಸ್ವತ: ತನ್ನ ಸುಖಕ್ಕೆ ಕಷ್ಟಪಡುವುದಕ್ಕೆ ತಾಪ ಎನ್ನಲಾಗುತ್ತದೆ ಆದರೆ ಪರರ ಸುಖಕ್ಕಾಗಿ ತ್ಯಾಗ ಮಾಡುವ ಭಾವಕ್ಕೆ ತಪಸ್ಸು ಎನ್ನಲಾಗುತ್ತದೆ. ಪುರಾಣದ ಹಿನ್ನೆಲೆ ನೋಡಿದಾಗ ಪರಶಿವನು ದೇವತೆಗಳಿಗೆ ಕಷ್ಟ ಬಂದಾಗ ವಿಷವನ್ನೂ ತಾನೇ ಸ್ವೀಕರಿಸಿ ಕಷ್ಟ ಪರಿಹರಿಸಿದವ. ಹಿಂದೂ ದೇವಾಲಯಗಳ ಮೇಲೆ ಆಗಬಹುದಾದ ಅಪಚಾರವನ್ನು ತಡೆಯುವುದಕ್ಕೆ ಸಂತರು ಮತ್ತು ಸಮಾಜ ಒಂದಾಗಬೇಕಾದ ಅನಿವಾರ್ಯತೆ ಇಂದಿನ ಕಾಲಘಟ್ಟದಲ್ಲಿ ಬಂದೊದಗಿದೆ. ಹಾಗಾಗಿ ಹಿಂದೂ ಧರ್ಮಿಯರು ಜಾಗೃತರಾಗಬೇಕು ಎಂದರು.

ಜಗತ್ತಿನ ಎಲ್ಲ ಯತಿಗಳನ್ನು ಸಮಾನವಾಗಿ ಕಾಣುವ ಇತಿಹಾಸ ಹೊಂದಿರುವ ಮಠ ನಮ್ಮ ರಾಮಚಂದ್ರಾಪುರಮಠ. ಇಲ್ಲಿ ಮೇಲೆ ಕೆಳಗೆ ಎನ್ನುವ ತಾರತಮ್ಯ ಯಾವ ಯತಿಗಳಿಗೂ ಇಲ್ಲ  ಎಂದು  ರಾಘವೇಶ್ವರಭಾರತೀ ಶ್ರೀಗಳು ಹೇಳಿದರು.

ನಾವೆಲ್ಲ ನಿಮಿತ್ತರು ಮಾತ್ರ ಅದರ ಸೃಷ್ಟಿಯನ್ನು ದೈವಶಕ್ತಿಯೇ ಮಾಡಿಕೊಳ್ಳುತ್ತದೆ. ಜಗತ್ತಿನಲ್ಲಿ ಮಂಗಲ ಕಾರ್ಯವಾಗುವುದಕ್ಕೂ ದೈವ ಸಂಕಲ್ಪಬೇಕು ಮತ್ತು ಅಮಂಗಲ ಕಾರ್ಯ ಘಟಿಸದಿರುವಂತೆ ನಿಯಂತ್ರಿಸುವುದೂ ಕೂಡ ದೈವ ಸಂಕಲ್ಪವೆ. ಒಂದು ಮಠ ಕೂಡ ಇದಕ್ಕೆ ಹೊರತಲ್ಲ. ಅದರ ಎಲ್ಲ ಒಳಿತು ಕಾರ್ಯಕ್ಕೆ ದೈವಶಕ್ತಿಯ ಪ್ರೇರಣೆ ಬೇಕು ಎಂದ ಅವರು ಮಹಾ ಕಾರ್ಯಗಳು ಕಾರ್ಯಾನುಷ್ಠಾನಗೊಳ್ಳುವಾಗ ಅವಿಸ್ಮರಣೀಯವಾದ ಹಲವು ಘಟನೆ ನಡೆಯುತ್ತದೆ ಆದರೆ ಅದನ್ನು ನೋಡುವ ಕಣ್ಣು ಮಾತ್ರ ಇದ್ದರೆ ಸಾಲದು ಅದರ ಜತೆಗೆ ಗಮನಿಸುವ ಮನಸ್ಸು ಕೂಡ ಇರಬೇಕು ಎಂದರು.

ಉಡುಪಿ ಬಾಳೆಕುದ್ರು ಶ್ರೀಶ್ರೀನೃಸಿಂಹಾಶ್ರಮ ಸ್ವಾಮೀಜಿ ಮಾತನಾಡಿ,  ಸಾತ್ವಿಕತನವನ್ನು ಮೈಗೂಡಿಸಿಕೊಂಡಿರುವ ಭಾರತೀಯರು ಇಂದು ಎಚ್ಚೆತ್ತುಕೊಳ್ಳುವ ಅಗತ್ಯವೂ ಇದೆ. ನಮ್ಮ ಆಡಳಿತ ನೀಡುವ ಸಾತ್ವಿಕರನ್ನು ಆಯ್ಕೆ ಮಾಡುವ ಜವಾಬ್ದಾರಿ ಕೂಡ ನಮ್ಮ ಮೇಲಿದೆ. ಮತದಾನದ ಕುರಿತು ನಿರ್ಲಕ್ಷವೂ, ಉದ್ದಟತನವೂ ಎರಡೂ ಬೇಡ.  ಅದು ನಮ್ಮ ಹೊಣೆ ಮುಂದಿನ ಒಳಿತು ಎಲ್ಲವನ್ನೂ ಒಳಗೊಂಡಿದೆ ಎಂದರು.

ಉತ್ತರ ಕಾಶಿಯ ಗೋತೀರ್ಥ ಕಪಿಲಾಶ್ರಮದ ಶ್ರೀ ರಾಮಚಂದ್ರ ಗುರೂಜಿ ಮಾತನಾಡಿ, ಮಂದಿರ ಕಟ್ಟುವುದು ಸುಲಭ ಆದರೆ ಭಕ್ತಿ ಕಟ್ಟುವುದು ಸುಲಭವಲ್ಲ ಅದು ಅತ್ಯಂತ ಕಠಿಣ. ಅದು ಹೃದಯ ಮಂದಿರದಲ್ಲಿ ಕಟ್ಟಬೇಕಿದೆ  ಆಗ ಮಾತ್ರ ಭಗವಂತನ ಅನುಗ್ರಹ ಸಾಧ್ಯ ಎಂದ ಅವರು, ಇಂದು ಸಂಸ್ಕೃತಿ, ಸಂಸ್ಕಾರ ಮತ್ತು ಸಂಸ್ಕೃತಿ ಮರೆತಿರುವ ಕಾರಣ ವಿಶ್ವ ಗುರುವಾಗಿದ್ದ ಭಾರತ ದೇಶ ಮತ್ತೆ ಹಿಂದುಳಿದಿದೆ. ಮತ್ತೆ ವಿಶ್ವ ಗುರುವಾಗಬೇಕಾದರೆ ಆ ಎಲ್ಲ ಮರೆತಿರುವ ವಿಷಯವನ್ನು ಸ್ವೀಕರಿಸಬೇಕು ಎಂದರು.

ಸಿಗಂದೂರು ಪ್ರಧಾನ ಆರ್ಚಕ ಶೇಷಗಿರಿ ಭಟ್, ಶ್ರೀಮಠದ ಸಿಇಒ ಕೆ.ಜಿ. ಭಟ್. ಮಹಾಮಂಡಲದ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಸಮಾಜದ ಹಿರಿಯ ಧುರೀಣ ಮತ್ತಿಕೊಪ್ಪ ಹರನಾಥ್ ರಾವ್, ಮಡಕೇರಿ ಪುರುಷೋತ್ತಮ ಮತ್ತಿತರರು ಇದ್ದರು.

ಇದಕ್ಕೂ ಮುನ್ನ ಬೆಳಗಿನ ಜಾವ 2.50 ಕ್ಕೆ ಸರಿಯಾಗಿ ಶರಾವತೀ ನದಿ ತೀರದಲ್ಲಿ ನೂತನವಾಗಿ ನಿರ್ಮಿಸಿರುವ ವಿಶಿಷ್ಟ ಗಜಪೃಷ್ಟಾಕೃತಿಯ ದೇವಾಲಯದಲ್ಲಿ ಶ್ರೀ ಚಂದ್ರಮೌಳೀಶ್ವರ ಪ್ರತಿಷ್ಠಾಪನೆ ನೆರವೇರಿತು. ಸಿಮೆಂಟ್ – ಕಬ್ಬಿಣ ಇತ್ಯಾದಿಗಳನ್ನು ಬಳಸದೇ ಪಾರಂಪರಿಕ ಪದ್ಧತಿಯಲ್ಲಿ ನಿರ್ಮಿಸಿರುವುದು ಈ ದೇವಾಲಯದ ವಿಶೇಷತೆಯಾಗಿದ್ದು, ದೇವಾಲಯದ ಸುತ್ತಲೂ ಸರೋವರ ಹಾಗೂ ಪಕ್ಕದಲ್ಲೇ ಶರಾವತೀ ನದಿ ದೇವಾಲಯದ ಮೆರುಗನ್ನು ಹೆಚ್ಚಿಸಲಿದೆ.

 

Please follow and like us:
0
http://bp9news.com/wp-content/uploads/2018/05/30171875_1294773490653739_7304888063708551760_o-1.jpghttp://bp9news.com/wp-content/uploads/2018/05/30171875_1294773490653739_7304888063708551760_o-1-150x150.jpgBP9 Bureauಉತ್ತರ ಕನ್ನಡಶಿವಮೊಗ್ಗಶ್ರೀ ರಾಮಚಂದ್ರಾಪುರ ಮಠ  ಬೆಂಗಳೂರು :  ನಮ್ಮ ಧರ್ಮ ಸಂಸ್ಕೃತಿ ಇನ್ನೂ ಉಳಿದಿರುವುದು ದೇವಾಲಯಗಳಿಂದ ಮಾತ್ರ ಎಂದು ಪೇಜಾವರ ಶ್ರೀಗಳು ಹೇಳಿದರು. ಹೊಸನಗರ ಶ್ರೀ ರಾಮಚಂದ್ರಾಪುರಮಠದ ಪುಣ್ಯ ಭೂಮಿಯ ಶರಾವತಿ ನದಿ ತೀರದಲ್ಲಿ ಶ್ರೀಚಂದ್ರಮೌಳೀಶ್ವರ ದೇವಾಲಯದ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಲಶೋತ್ಸವದ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಎಲ್ಲ ಕಡೆ ದೇವರಿದ್ದಾನೆ ಎನ್ನುವ ನಮಗೆ ದೇವಾಲಯ ಏಕೆ ಬೇಕು ಎನ್ನುವ ಪ್ರಶ್ನೆ ಸಹಜವಾಗಿ ಮೂಡಬಹುದು. ಆದರೆ ಭಗವಂತ ಪ್ರಕಟವಾಗಲು ಇರುವ ತಾಣ ದೇವಾಲಯ, ದೇವಾಲಯವಿದ್ದರೆ ಅಲ್ಲಿ ಭಗವಂತನ...Kannada News Portal