ಬೆಂಗಳೂರು : ಜಗತ್ತಿನಲ್ಲಿ 7 ಸಾವಿರ ಭಾಷೆಗಳಿವೆ, ಆದರೆ ಆಯಾ ಭಾಷೆಗಳನ್ನು ಅರಿತವರ ಸಂಖ್ಯೆ ಕಡಿಮೆ. ಆದರೆ ಕಲೆಗೆ ಅದರದ್ದೇ ಆದ ಭಾಷೆಯಿದೆ.  ಚಿತ್ರ – ನಾದಗಳಿಂದ ಕೂಡಿದ ಕಲೆಯ ಭಾಷೆಯನ್ನು ಎಲ್ಲರೂ ಸುಲಭವಾಗಿ ಅರಿಯಬಹುದು ಎಂದು ಶತಾವಧಾನಿ ಆರ್ ಗಣೇಶ್ ಅಭಿಪ್ರಾಯಪಟ್ಟರು.

ಕರ್ನಾಟಕ ಲಲಿತ ಕಲಾ ಅಕಾಡೆಮಿ ಹಾಗೂ ಶ್ರೀಅಖಿಲ ಹವ್ಯಕ ಮಹಾಸಭೆಯ ಸಂಯುಕ್ತಾಶ್ರಯದಲ್ಲಿ ಹವ್ಯಕ ಭವನದಲ್ಲಿ 3 ದಿನಗಳ ಕಾಲ ನಡೆದ ‘ರಾಜ್ಯಮಟ್ಟದ ಚಿತ್ರಕಲಾಶಿಬಿರ ಹಾಗೂ ಪಾರಂಪರಿಕ ಕಲಾಮಂಡಲಗಳ ಶಿಬಿರ’ದ ಸಮಾರೋಪ ಸಭೆಯಲ್ಲಿ ಮಾತನಾಡಿದ  ಆರ್ ಗಣೇಶ್ ಅವರು, ನಮ್ಮ ಭಾರತೀಯತೆಯಲ್ಲಿ ಕಲೆಗಳಿಗೆ ವಿಶೇಷ ಸ್ಥಾನದಿದೆ. ಯಜ್ಞೋಪಯೋಗಿಯಾದ ಶುಲ್ಬಸೂತ್ರಗಳು ಕಲೆಗಳ ಉಗಮಕ್ಕೆ ಮೂಲ ಎನ್ನಬಹುದಾಗಿದೆ. ಯಜ್ಞಯಾಗಾದಿಗಳಲ್ಲಿ ಬಳಸುವ ಮಂಡಲಗಳು ಗಣಿತಶಾಸ್ತ್ರದ ಅಗಾಧತೆಯನ್ನು ಕಾಣಬಹುದಾಗಿದೆ. ಹೀಗೆ ನಮ್ಮ ಸಂಸ್ಕೃತಿಯಲ್ಲಿ ಕಲೆ ಹಾಸುಹೊಕ್ಕಾಗಿದೆ ಎಂದರು.

ನಮ್ಮ ಸಂಸ್ಕೃತಿಯಲ್ಲಿ  ಲೌಕಿಕ – ವೈದಿಕ ಎಂಬ ಭೇದವಿಲ್ಲ, ಕಲೆಗಳಲ್ಲಿ ಬೇಧಮಾಡುವುದು ಅವಿವೇಕತನ. ಆರಾಧನೆ ಇಲ್ಲದ ಕಲೆಯಿಲ್ಲ, ಕಲೆಯಿಲ್ಲದ ಆರಾಧನೆಯಿಲ್ಲ. ಹಾಗೆಯೇ ಕಲೆಯಲ್ಲಿ ಯಾವುದೇ ಲಿಂಗ – ಜಾತಿಯ ಭೇದವಿಲ್ಲದೆ ಎಲ್ಲರಿಗೂ ಕಲಿಯಲು ಅಧಿಕಾರವಿದೆ. ನೃತ್ಯಶಾಸ್ತ್ರದ ಜ್ಞಾನ ಇಲ್ಲದವನು ಉತ್ತಮ ಚಿತ್ರಕಾರ ಆಗಲಾರ, ನಾಟ್ಯ – ಸಂಗೀತ ಮುಂತಾದವುಗಳ ಅರಿವು ಇದ್ದರಷ್ಟೇ ಒಬ್ಬ ಪರಿಪೂರ್ಣ ಚಿತ್ರರಚನಾಕಾರ ಆಗಲು ಸಾಧ್ಯ ಎಂದು ಹೇಳಿದರು.

ಲಲಿತಕಲಾ ಅಕಡೆಮಿಯ ಡಾ. ಎಂ ಜೆ ಕಮಲಾಕ್ಷಿ ಮಾತನಾಡಿ, ಲಲಿತಕಲಾ ಅಕಾಡೆಮಿ ಅನೇಕ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅನೇಕ ಕಲಾಶಿಬಿರಗಳನ್ನು ಅಯೋಜಿಸುತ್ತಾ ಬಂದಿದೆ. ಕಳೆದ ಮೂರು ದಿನಗಳಿಂದ ಹವ್ಯಕ ಮಹಾಸಭೆಯ ಸಹಯೋಗದಲ್ಲಿ ಶಿಬಿರ ನಡೆಸುತ್ತಿರುವುದು ವಿಶೇಷ ಅನುಭವವನ್ನು ನೀಡಿದೆ, ಹವ್ಯಕ ಮಹಾಸಭೆ ಕಲೆಗೆ ನೀಡಿದ ಸಹಕಾರ ಮರೆಯಲಸಾಧ್ಯ ಎಂದರು.

ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ ಕಜೆ ಮಾತನಾಡಿ, ಪ್ರತಿಯೊಬ್ಬ ಮನುಷ್ಯನಲ್ಲಿಯೂ ಕಲೆ ಇರುತ್ತದೆ. ಕಲಾವಿದನ ಕಲೆಯನ್ನು ಕಣ್ಣಿನಿಂದ ಮಾತ್ರವಲ್ಲದೇ ಹೃದಯದಿಂದ ಕಂಡಾಗ ಅದು ಹೆಚ್ಚು ಅರ್ಥಗರ್ಭಿತವಾಗುತ್ತದೆ. ಲಲಿತಕಲಾ ಅಕಾಡೆಮಿ ಸಹಯೋಗದಲ್ಲಿ ಹವ್ಯಕ ಮಹಾಸಭೆಯಲ್ಲಿ ಇಂತಹ ಶಿಬಿರ ಸಂಪನ್ನವಾಗಿರುವುದು ಸಂತಸದ ವಿಚಾರ. ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯುವಂತಾಗಲಿ ಎಂದು ಆಶಿಸಿದರು.

ಶಿಲ್ಪಶಿಲಾ ಅಕಾಡೆಮಿಯ ಅಧ್ಯಕ್ಷರಾದ ಡಾ. ಕಳಾಚಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು, ಲಲಿತಕಲಾ ಅಕಾಡೆಮಿಯ ಸದಸ್ಯರು ಹಾಗೂ ಕಾರ್ಯಕ್ರಮದ ಸಂಚಾಲಕರಾದ ಜಿ.ಎಸ್ ಹೆಗಡೆ ಉಪಸ್ಥಿತರಿದ್ದು, ಧನ್ಯವಾದ ಸಮರ್ಪಿಸಿದರು. ಕಳೆದ ಮೂರುದಿನಗಳಿಂದ  ರಾಜ್ಯಮಟ್ಟದ ಚಿತ್ರಕಲಾಶಿಬಿರ ಹಾಗೂ ಪಾರಂಪರಿಕ ಕಲಾಮಂಡಲಗಳ ಶಿಬಿರಲ್ಲಿ ಹಲವು ಕಾರ್ಯಕರ್ಮಗಳು ನಡೆದವು, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಕಲಾವಿಧರು ಇದರ ಪ್ರಯೋಜನ ಪಡೆದರು.

 

Please follow and like us:
0
http://bp9news.com/wp-content/uploads/2018/04/DSC_0876-1.jpghttp://bp9news.com/wp-content/uploads/2018/04/DSC_0876-1-150x150.jpgBP9 Bureauಬೆಂಗಳೂರುಶ್ರೀ ರಾಮಚಂದ್ರಾಪುರ ಮಠ  ಬೆಂಗಳೂರು : ಜಗತ್ತಿನಲ್ಲಿ 7 ಸಾವಿರ ಭಾಷೆಗಳಿವೆ, ಆದರೆ ಆಯಾ ಭಾಷೆಗಳನ್ನು ಅರಿತವರ ಸಂಖ್ಯೆ ಕಡಿಮೆ. ಆದರೆ ಕಲೆಗೆ ಅದರದ್ದೇ ಆದ ಭಾಷೆಯಿದೆ.  ಚಿತ್ರ - ನಾದಗಳಿಂದ ಕೂಡಿದ ಕಲೆಯ ಭಾಷೆಯನ್ನು ಎಲ್ಲರೂ ಸುಲಭವಾಗಿ ಅರಿಯಬಹುದು ಎಂದು ಶತಾವಧಾನಿ ಆರ್ ಗಣೇಶ್ ಅಭಿಪ್ರಾಯಪಟ್ಟರು. ಕರ್ನಾಟಕ ಲಲಿತ ಕಲಾ ಅಕಾಡೆಮಿ ಹಾಗೂ ಶ್ರೀಅಖಿಲ ಹವ್ಯಕ ಮಹಾಸಭೆಯ ಸಂಯುಕ್ತಾಶ್ರಯದಲ್ಲಿ ಹವ್ಯಕ ಭವನದಲ್ಲಿ 3 ದಿನಗಳ ಕಾಲ ನಡೆದ 'ರಾಜ್ಯಮಟ್ಟದ ಚಿತ್ರಕಲಾಶಿಬಿರ ಹಾಗೂ ಪಾರಂಪರಿಕ ಕಲಾಮಂಡಲಗಳ...Kannada News Portal