ರಾಮನಗರ: ಕಳೆದ 32 ವರ್ಷಗಳ ಹಿಂದೆ ಕಣ್ವ ಜಲಾಶಯಕ್ಕೆ ಹರಿಯುವ ಸೀತನತೊರೆ ನದಿಗೆ ತಾಲ್ಲೂಕಿನ ಕೂಟಗಲ್ ಗ್ರಾಮದಲ್ಲಿ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಸೋಮವಾರ  ಕುಸಿದಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ಮಾಗಡಿ ತಾಲ್ಲೂಕಿನ ವೈ.ಜಿ.ಗುಡ್ಡ ಜಲಾಶಯದಿಂದ ಹೊರ ಬರುವ ನೀರು ಸೀತನತೊರೆಯಲ್ಲಿ ಹರಿಯುತ್ತಿದ್ದು, ಕಳೆದ ಮೂರು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ನೀರಿನ ಹರಿವು ಪ್ರಮಾಣ ಪ್ರಮಾಣ ಹೆಚ್ಚಾಗಿದೆ. ಇದಲ್ಲದೆ ಸೇತುವೆ ಅಕ್ಕಪಕ್ಕ ಹಾಗೂ ಸೀತನ ತೊರೆಯಲ್ಲಿ ಮರಳು ಗಣಿಗಾರಿಕೆ ನಡೆದು ಸೇತುವೆಯ ಅಕ್ಕಪಕ್ಕ ಮರಳು ತೆಗೆದ ಕಾರಣದಿಂದ ಮತ್ತು ಸೇತುವೆ ಪಕ್ಕದಲ್ಲಿ ಅವೈಜ್ಞಾನಿಕವಾಗಿ ತಡೆಗೋಡೆ ನಿರ್ಮಾಣ ಮಾಡಿರುವುದರಿಂದ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಅದು 1984-85ರಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಲೋಕೋಪಯೋಗಿ ಸಚಿವರಾಗಿದ್ದ ಅವಧಿಯಲ್ಲಿ ಕೂಟಗಲ್ – ಯರೇಹಳ್ಳಿ ಸೇತುವೆ ನಿರ್ಮಾಣ ಗೊಂಡಿದ್ದು, ಇದೀಗ ಈ ಸೇತುವೆ ಸ್ವಲ್ಪಮಟ್ಟಿಗೆ ಶಿಥಿಲಗೊಂಡಿತ್ತು ಎನ್ನಲಾಗುತ್ತಿದ್ದು, ಸೇತುವೆ ಕುಸಿದ ಸಂದರ್ಭದಲ್ಲಿ ಯಾವುದೇ ವಾಹನ ಸಂಚಾರ ಇಲ್ಲದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.


ಕೂಟಗಲ್ – ಯರೇಹಳ್ಳಿ ಸೇತುವೆಯ ರಸ್ತೆಯು ರಾಮನಗರ ಮತ್ತು ಮಾಗಡಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಈ ಸೇತುವೆ ಮೇಲೆ ಯರೇಹಳ್ಳಿ, ಅಂಕನಹಳ್ಳಿ, ಅಜ್ಜನಹಳ್ಳಿ, ಗವಿನಾಗಮಂಗಲ, ಹಾಗೂ ಮಾಗಡಿಗೆ ಈ ರಸ್ತೆಯಲ್ಲಿಯೇ ವಾಹನಗಳು ಸಂಚರಿಸುತ್ತವೆ. ಈಗ ಸೇತುವೆ ಕುಸಿದಿರುವುದರಿಂದ ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಸಮೀಪದ ಗ್ರಾಮಗಳ ಮೂಲಕ ಪರ್ಯಾಯವಾಗಿ ದ್ವಿಚಕ್ರ ವಾಹನಗಳು ಸಂಚರಿಸುತ್ತಿವೆ. ಬಸ್ ಗಳು, ಲಾರಿ, ಟ್ರಾಕ್ಟರ್ ಗಳು ಸಂಚಾರ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಶಾಲಾ – ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿ, ಸಿಬ್ಬಂದಿಗಳು ಹಾಗೂ ಜನಸಾಮಾನ್ಯರು ವಾಹನಗಳಲ್ಲಿ ರಾಮನಗರಕ್ಕೆ ತೆರಳಲು ತೊಂದರೆ ಉಂಟಾಗುತ್ತಿದ್ದು, ಕೂಡಲೇ ಪರ್ಯಾಯ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಶಾಸಕರು ಭೇಟಿ : ಕೂಟಗಲ್ – ಯರೇಹಳ್ಳಿ ಸಂಪರ್ಕ ಸೇತುವೆ ಕುಸಿದಿರುವ ವಿಚಾರ ತಿಳಿಯುತ್ತಿದ್ದಂತೆ ಮಾಗಡಿ ಕ್ಷೇತ್ರದ ಶಾಸಕ ಎ.ಮಂಜುನಾಥ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಸಕರ ಸೂಚನೆ ಮೇರೆಗೆ ಸೇತುವೆಯ ಎರಡು ಬದಿಯಲ್ಲಿ ಅವಘಡಗಳು ಸಂಭವಿಸದಂತೆ ತುರ್ತು ತಡೆಗೋಡೆ ನಿರ್ಮಾಣ ಮಾಡಲಾಗಿದೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಶಾಸಕ ಎ.ಮಂಜುನಾಥ್,  ಹಳೆಯ ಸೇತುವೆಯಾಗಿರುವ ಕಾರಣ ನದಿಯಲ್ಲಿನ ನೀರಿನ ಪ್ರಮಾಣ ಹೆಚ್ಚಾಗಿದ್ದು, ಸೇತುವೆ ಕುಸಿದಿದೆ. ಕೂಡಲೇ ತಾತ್ಕಾಲಿಕ ಸೇತುವೆ ನಿರ್ಮಿಸಿ ಆನಂತರ ಹೊಸ ಸೇತುವೆ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು ಸ್ಥಳ ಪರಿಶೀಲನೆ ನಡೆಸಿ ನಾಳೆ ವರದಿ ನೀಡಲಿದ್ದು, ಆನಂತರ ಹೊಸ ಸೇತುವೆ ನಿರ್ಮಾಣಕ್ಕೆ ಬೇಕಾದ ಕ್ರಮ ಕೈಗೊಳ್ಳುತ್ತೇವೆ. ಅಲ್ಲಿವರೆಗೆ ಜನಸಾಮಾನ್ಯರ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಗೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಸೇತುವೆ ಶಿಥಿಲಗೊಂಡು ಕುಸಿದಿರುವುದರಿಂದ ವಾಹನಗಳು ಸಂಚರಿಸುವುದು ಅಪಾಯಕಾರಿ. ಹೀಗಾಗಿ ರಾಮನಗರದಿಂದ ಮಾಗಡಿಯತ್ತ ತೆರಳುವ ಪ್ರಯಾಣಿಕರನ್ನು ಸೇತುವೆ ಬಳಿ ಇಳಿಸುವುದು. ಸೇತುವೆಯ ಮತ್ತೊಂದು ಬದಿಯಿಂದ ಸಾರಿಗೆ ಬಸ್ಸಿನ ಸೌಲಭ್ಯ ಮುಂದುವರೆಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸ್ಥಳದಲ್ಲಿಯೆ ಸೂಚನೆ ನೀಡಿದ್ದೇನೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಇಇ ಪ್ರಕಾಶ್, ಎಇಇ ಎಚ್.ಎಲ್.ನಾಗೇಂದ್ರಪ್ಪ, ಎಇ ಕೃಷ್ಣಯ್ಯಶೆಟ್ಟಿ, ಸಾರಿಗೆ ಸಂಸ್ಥೆ ಡಿಟಿಒ ಪುರುಷೋತ್ತಮ್ , ಡಿಎಸ್ಐ ಸಂಜೀವ್ ಕುಮಾರ್,  ಸಹಾಯಕ ಸಂಚಾರ ನಿರೀಕ್ಷಕ ಶಂಕರ್,   ಎಇಇ ರಮೇಶ್, ತಾಪಂ ಸದಸ್ಯ ಜಗದೀಶ್, ಎಪಿಎಂಸಿ ಅಧ್ಯಕ್ಷ ಪುಟ್ಟರಾಮಯ್ಯ, ಗ್ರಾಪಂ ಸದಸ್ಯ ಮಂಚೇಗೌಡ, ಮುಖಂಡರಾದ ದೊಡ್ಡಗಂಗವಾಡಿ ಗೋಪಾಲ್, ಕೂಟಗಲ್ ಕೃಷ್ಣ, ಬಾನಂದೂರು ಶಶಿ ಮತ್ತಿತ್ತರರು ಹಾಜರಿದ್ದರು.

Please follow and like us:
0
http://bp9news.com/wp-content/uploads/2018/06/WhatsApp-Image-2018-06-18-at-6.45.00-PM-1000x1024.jpeghttp://bp9news.com/wp-content/uploads/2018/06/WhatsApp-Image-2018-06-18-at-6.45.00-PM-150x150.jpegBP9 Bureauಪ್ರಮುಖರಾಮನಗರರಾಮನಗರ: ಕಳೆದ 32 ವರ್ಷಗಳ ಹಿಂದೆ ಕಣ್ವ ಜಲಾಶಯಕ್ಕೆ ಹರಿಯುವ ಸೀತನತೊರೆ ನದಿಗೆ ತಾಲ್ಲೂಕಿನ ಕೂಟಗಲ್ ಗ್ರಾಮದಲ್ಲಿ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಸೋಮವಾರ  ಕುಸಿದಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಮಾಗಡಿ ತಾಲ್ಲೂಕಿನ ವೈ.ಜಿ.ಗುಡ್ಡ ಜಲಾಶಯದಿಂದ ಹೊರ ಬರುವ ನೀರು ಸೀತನತೊರೆಯಲ್ಲಿ ಹರಿಯುತ್ತಿದ್ದು, ಕಳೆದ ಮೂರು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ನೀರಿನ ಹರಿವು ಪ್ರಮಾಣ ಪ್ರಮಾಣ ಹೆಚ್ಚಾಗಿದೆ. ಇದಲ್ಲದೆ ಸೇತುವೆ ಅಕ್ಕಪಕ್ಕ ಹಾಗೂ ಸೀತನ ತೊರೆಯಲ್ಲಿ ಮರಳು ಗಣಿಗಾರಿಕೆ...Kannada News Portal