ಸಿನಿಟಾಕ್​ : ಕನ್ನಡ ಬೆಳ್ಳಿತೆರೆಯ ಹಾಸ್ಯರಾಜ ನರಸಿಂಹರಾಜು ನಿಧನರಾಗಿ ಆಗಲೇ ಭರ್ತಿ 40 ವರ್ಷ. ಈ 40 ವರ್ಷಗಳಲ್ಲಿ ಇಡಿಯ ಕರ್ನಾಟಕವನ್ನೇ ನಗೆಗಡಲಲ್ಲಿ ತೇಲಿಸಿದ ಒಬ್ಬ ನಗೆಗಾರನ ಕುಟುಂಬ ಈಗ ಹೇಗಿದೆ ಎನ್ನುವುದಷ್ಟೇ ಈ ಬರಹದ ಉದ್ದೇಶ. ಈ ಹಾಸ್ಯರಾಜನ ರಾಣಿ ಶಾರದಮ್ಮ ಮಾತನಾಡಿದ್ದಾರೆ.


ಇದಕ್ಕೂ ಮೊದಲು ನರಸಿಂಹರಾಜು ಅವರ ಕುಟುಂಬದ ಬಗ್ಗೆ ಒಂದು ಪುಟ್ಟ ವಿವರ : ನರಸಿಂಹರಾಜು ಅವರಿಗೆ ಒಟ್ಟು 9 ಜನ ಮಕ್ಕಳು. ಮೊದಲನೆಯವಳ ಹೆಸರು : ಧರ್ಮಾವತಿ, ಎರಡನೆಯವ : ಶ್ರೀಕಾಂತ್, ಮೂರನೆಯವಳು : ಕಲಾವತಿ, ನಾಲ್ಕನೆಯವಳು : ಚಂದ್ರಾವತಿ, ಐದನೆಯಾತ : ಲಕ್ಷ್ಮೀಕಾಂತ, ಆರನೆಯವ : ನರಹರಿರಾಜು, ಏಳನೆಯಾಕೆ : ಸುಧಾವತಿ, ಎಂಟನೆಯಾಕೆ : ಗಾಯತ್ರೀದೇವಿ. ಒಬ್ಬಾಕೆ ತೀರಿಕೊಂಡಿದ್ದಾಳೆ. ಸುಧಾವತಿಯೇ ಸುಧಾ ನರಸಿಂಹರಾಜು! ಹೆಂಡತಿ ಹೆಸರು : ಶಾರದಮ್ಮ, ಸದ್ಗ್ರಹಿಣಿ.


 ಶಾರದಮ್ಮನ  ಬಾಯಲ್ಲೇ ಕೇಳಿ ‘ನರಸಿಂಹ’ವತಾರ  …...
“ನಿಜ ಹೇಳಬೇಕೆಂದರೆ ಅವರದ್ದು ನಿಜವಾದ ಅರ್ಥದಲ್ಲಿ ನರಸಿಂಹಾವತಾರವೇ! ಅವರ ಹೆತ್ತವರು ಅದು ಹೇಗೆ ನರಸಿಂಹ ಎಂಬ ಹೆಸರಿಟ್ಟರೋ ಕಾಣೆ! ಹೆಸರಿಗೆ ತಕ್ಕುದಾದ ಸಿಟ್ಟು, ಸಿಡುಕು, ಕೋಪ, ತಾಪ. ಎದುರು ಮಾತಾಡಿದರೆ ಮುಗಿದೇ ಹೋಯಿತು. ಹೆಂಡತಿ ಮಕ್ಕಳನ್ನು ಎಷ್ಟು ಪ್ರೀತಿಸುತ್ತಿದ್ದರೋ ಸಿಟ್ಟು ಬಂದರೆ ಸಾಕ್ಷಾತ್ ನರಸಿಂಹಾವತಾರವೇ! ನಾನು ಅದೆಷ್ಟು ಏಟು ತಿಂದಿದ್ದೇನೋ ಆ ಪರಮಾತ್ಮನಿಗೇ ಗೊತ್ತು! ಮಕ್ಕಳು ತಪ್ಪು ಮಾಡಿದರೆ ಮನೆಗೆ ಸುತ್ತು ಹಾಕಿಸುತ್ತಾ ಹೊಡೆದದ್ದೂ ಇದೆ….
“ದಿನಕ್ಕೆ ನಾಲ್ಕು ಶಿಫ್ಟ್’ನಲ್ಲಿ ಕೆಲಸ ಮಾಡುತ್ತಿದ್ದರು. ವಿಪರೀತ ಎನಿಸುವಷ್ಟು ಟೆನ್ಷನ್. ಅವರಿಗೆ ಆಗ ಸ್ಟಾರ್ ವ್ಯಾಲ್ಯೂ ಏರಿತ್ತು. ಎಲ್ಲರಿಗೂ ಇವರು ಬೇಕಾಗಿದ್ದರು. ನಿರ್ಮಾಪಕರು ಮೊದಲು ಇವರ ಕಾಲ್’ಶೀಟ್ ಪಡೆದ ನಂತರವೇ ರಾಜಕುಮಾರ್ ಕಾಲ್’ಶೀಟ್ ಪಡೆಯುತ್ತಿದ್ದರು! ಆಗಿನ ದಿನಗಳಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟರೆಂದರೆ ಇವರೇ! ಆದರೆ ದುರಂತ ನೋಡಿ, ಕಮಿಟ್ ಆದ ದುಡ್ಡು ಕೈಗೆ ಬರುತ್ತಿರಲಿಲ್ಲ. ಸಿಗುತ್ತಿದ್ದ ದುಡ್ಡು ಕಮ್ಮಿ ಇರಬಹುದು ಆದರೆ ಹೆಸರು ಜಾಸ್ತಿ! ಮನೆಗೆ ಬಂದು ಹೋಗುತ್ತಿದ್ದ ನೆಂಟರ ಸಂಖ್ಯೆ ವಿಪರೀತ. ಈ ಕಡೆ ದುಡ್ಡು ಬಂದರೆ ಆ ಕಡೆ ಖರ್ಚಿಗೆ ದಾರಿ ಇರುತ್ತಿತ್ತು! ಇಷ್ಟು ಸಾಲದೆನ್ನುವಂತೆ ಅವರಿಗೆ ಹೆಂಡತಿ ಮಕ್ಕಳನ್ನು ಕಟ್ಟಿಕೊಂಡು ಊರೂರು ತಿರುಗುವ ಚಪಲ! ‘ಎಂಟರ್ ದಿ ಡ್ರ್ಯಾಗನ್’ ಸಿನೆಮಾವನ್ನು ಅದೆಷ್ಟು ಬಾರಿ ನೋಡಿದ್ದಾರೋ ಲೆಕ್ಕವಿಟ್ಟವರಿಲ್ಲ! ಆಗ ಜನಪ್ರಿಯತೆಯ ತುತ್ತ ತುದಿಯಲ್ಲಿದ್ದ ಅವರು ಎಲ್ಲರಂತೆ ನೇರವಾಗಿ ಚಿತ್ರಮಂದಿರಗಳಿಗೆ ಹೋಗುವಂತಿರಲಿಲ್ಲ.

ಮುಖ ಕಾಣದಂತೆ ತಲೆ ತುಂಬಾ ಶಾಲು ಹೊದ್ದುಕೊಂಡು ಕಳ್ಳರಂತೆ ಹೋಗಬೇಕಾಗುತ್ತಿತ್ತು. ಜೊತೆಗೆ ಇಪ್ಪತ್ತನಾಲ್ಕೂ ಗಂಟೆ ಎಲೆಯಡಿಕೆ ಸೇವನೆ. ಕನ್ನಡಕ ಹಾಕಿ, ತುಟಿ ಕೆಂಪು ಮಾಡಿಕೊಂಡು ಹೊರಟರೆ ಸಿನೆಮಾ ಮುಗಿಯುವವರೆಗೆ ರೀಸಸ್’ಗೂ ಹೋಗುತ್ತಿರಲಿಲ್ಲ! ಹೋದರೆ ಅಲ್ಲೂ ಜನ ಮುಚ್ಚಿಕೊಂಡು ಬಿಡುತ್ತಿದ್ದರು. ಆಗ ಬನ್ನೇರುಘಟ್ಟ ರಸ್ತೆಯಲ್ಲೊಂದು ಡ್ರೈವ್’ಇನ್ ಥಿಯೇಟರಿತ್ತಲ್ಲಾ? ಪ್ರತಿ ವಾರವೋ ಅಲ್ಲಿಗೆ ಭೇಟಿ. ಫ್ಯಾಮಿಲಿ ಜೊತೆ ಕಾರಲ್ಲಿ ಕೂತು ಅಲ್ಲೇ ಊಟ, ಅಲ್ಲೇ ಕುರುಕಲು ತಿಂಡಿ ಸೇವನೆ. ಅಮಿತಾಬ್ ಬಚ್ಚನ್ ಅಂದರೆ ಪ್ರಾಣ. ಆತನ ಸಿನೆಮಾಗಳನ್ನು ಒಂದೂ ಬಿಡದೇ ನೋಡುತ್ತಿದ್ದರು. ಅಮಿತಾಬ್ ಅಭಿನಯಿಸಿದ ‘ಅಮರ್ ಅಕ್ಬರ್ ಆಂಟನಿ’ ಸಿನೆಮಾವನ್ನು ಅದೆಷ್ಟು ಸಾರಿ ನೋಡಿದ್ದಾರೋ ಲೆಕ್ಕವಿಟ್ಟವರ್ಯಾರು? ದೇವಾನಂದ್, ಸಂಜೀವಕುಮಾರ್, ಶಿವಾಜಿ ಗಣೇಶನ್ ಜೊತೆ ನಿಕಟ ಸಂಪರ್ಕವಿಟ್ಟುಕೊಂಡಿದ್ದರು. ಆದರೆ ಕನ್ನಡದಲ್ಲಿ ಆತ್ಮೀಯರು ಅಂತ ಯಾರೂ ಇರಲಿಲ್ಲ. ಬಾಲಣ್ಣಾ ಅಂದರೆ ಪ್ರಾಣ!


“ಪಗಡೆಯಾಟವೆಂದರೆ ಅವರಿಗೆ ಜೀವ. ಪಗಡೆಗೆ ಕೂತರೆ ಊಟ, ತಿಂಡಿಯ ನೆನಪಿರುತ್ತಿರಲಿಲ್ಲ. ಜೊತೆಗೆ ಎಲೆಯಡಿಕೆ, ಸಿಗರೇಟು! ನಮ್ಮ ಮದುವೆಯಾದಾಗ ಇವರು ನಾಟಕ ಕಂಪೆನಿಯಲ್ಲಿದ್ದರು. 1949ರಲ್ಲಿ ನಮ್ಮ ಮದುವೆಯಾಯಿತು. 1950ರಲ್ಲಿ ಇವರು ಗುಬ್ಬಿ ಕಂಪೆನಿ ಸೇರಿಕೊಂಡರು. ಆರೇಳು ವರ್ಷಗಳ ಅಗ್ರಿಮೆಂಟದು. ನಂತರ ಸಿನೆಮಾಗಳಲ್ಲಿ ಬಿಜಿಯಾದರು. ಆಗ ಇಡಿಯ ಉದ್ಯಮವೇ ಮದರಾಸಿನಲ್ಲಿದ್ದುದರಿಂದ ನಾವೂ ಅಲ್ಲಿಗೆ ಶಿಫ್ಟ್ ಆದೆವು. ಮದರಾಸಿನಲ್ಲೊಂದು ಮನೆಯಿತ್ತು. ದೊಡ್ಡ ಮಗಳ ಮದುವೆಗಾಗಿ ಅದನ್ನು ಮಾರಿದರು. ಅವರಿರುವಷ್ಟೂ ಸಮಯ ನಮ್ಮನ್ನೆಲ್ಲಾ ಚೆನ್ನಾಗಿ ನೋಡಿಕೊಂಡರು. ಯಾವುದಕ್ಕೂ ಕಮ್ಮಿ ಮಾಡಲಿಲ್ಲ. ತೀರಿಕೊಂಡ ಮೇಲೂ ತೊಂದರೆಯಾಗದಂತೆ ಮಾಡಿದ್ದ ಸಾಲವನ್ನು ಮುಗಿಸಿಯೇ ಹೋದರು. ಅವರ ನೆನಪು ಸದಾ ಹಸಿರು. ಅವರು ಉಪಯೋಗಿಸುತ್ತಿದ್ದ ಟೆಲಿಫೋನ್ ಈಗಲೂ ನಮ್ಮ ಮನೆಯಲ್ಲಿದೆ! ವರ್ಷಕ್ಕೊಮ್ಮೆ’ಕಾರ್ಯ’ ಮಾಡ್ತೇವೆ. ಮುಖ್ಯವಾಗಿ ಅವರು ನಮ್ಮ ಜೊತೆಯಲ್ಲಿಲ್ಲ ಅಂತ ಯಾವತ್ತೂ ಅನಿಸಿಲ್ಲ. ಇಲ್ಲೇ ಇದ್ದಾರೆ, ಎಲ್ಲೋ ಶೂಟಿಂಗ್’ಗೆ ಹೋಗಿದ್ದಾರೆ ಎಂದೆನಿಸುತ್ತಿದೆ…’ – ಎಂದು ಹೇಳುತ್ತಾ ಶಾರದಮ್ಮ ಒಮ್ಮೆ ಮನೆಯ ಸುತ್ತ ನೋಡಿಕೊಂಡರು. ಅವರ ಕಣ್ಣುಗಳು ಅದೃಶ್ಯ ಬಾಳಸಂಗಾತಿಯನ್ನು ಹುಡುಕುತ್ತಿತ್ತೋ ಗೊತ್ತಿಲ್ಲ…

ವಿಶೇಷ ಲೇಖನ : ಗಣೇಶ ಕಾಸರಗೋಡು, ಹಿರಿಯ ಚಲನಚಿತ್ರ ವಿಮರ್ಶಕರು,ಸಾಹಿತಿ

Please follow and like us:
0
http://bp9news.com/wp-content/uploads/2018/11/unnamed.jpghttp://bp9news.com/wp-content/uploads/2018/11/unnamed-150x150.jpgBP9 Bureauಪ್ರಮುಖಸಿನಿಮಾಸಿನಿಟಾಕ್​ : ಕನ್ನಡ ಬೆಳ್ಳಿತೆರೆಯ ಹಾಸ್ಯರಾಜ ನರಸಿಂಹರಾಜು ನಿಧನರಾಗಿ ಆಗಲೇ ಭರ್ತಿ 40 ವರ್ಷ. ಈ 40 ವರ್ಷಗಳಲ್ಲಿ ಇಡಿಯ ಕರ್ನಾಟಕವನ್ನೇ ನಗೆಗಡಲಲ್ಲಿ ತೇಲಿಸಿದ ಒಬ್ಬ ನಗೆಗಾರನ ಕುಟುಂಬ ಈಗ ಹೇಗಿದೆ ಎನ್ನುವುದಷ್ಟೇ ಈ ಬರಹದ ಉದ್ದೇಶ. ಈ ಹಾಸ್ಯರಾಜನ ರಾಣಿ ಶಾರದಮ್ಮ ಮಾತನಾಡಿದ್ದಾರೆ. ಇದಕ್ಕೂ ಮೊದಲು ನರಸಿಂಹರಾಜು ಅವರ ಕುಟುಂಬದ ಬಗ್ಗೆ ಒಂದು ಪುಟ್ಟ ವಿವರ : ನರಸಿಂಹರಾಜು ಅವರಿಗೆ ಒಟ್ಟು 9 ಜನ ಮಕ್ಕಳು. ಮೊದಲನೆಯವಳ ಹೆಸರು :...Kannada News Portal