ತುರುವೇಕೆರೆ:ತಾಲೂಕಿನ ಜೀವನದಿಯೆಂದೇ ಪ್ರಸಿದ್ದವಾದ ಮಲ್ಲಾಘಟ್ಟ ಕೆರೆಯು ಮೈದುಂಬಿ ಹರಿಯುತ್ತಿದ್ದು ಶಾಸಕ ಎಂ.ಟಿ.ಕೃಷ್ಣಪ್ಪ, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಸಹಸ್ರಾರು ರೈತರೊಡಗೂಡಿ ಬಾಗಿನ ಅರ್ಪಿಸಿದರು.

ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಕಳೆದ ೩-೪ ವರ್ಷಗಳಿಂದ ಮಳೆಯಿಲ್ಲದೆ ಮತ್ತು ಜಿಲ್ಲಾ ಸಚಿವರ ಮಲತಾಯಿ ಧೋರಣೆಯಿಂದ ತುರುವೇಕೆರೆ ತಾಲ್ಲೂಕಿಗೆ ಹೇಮಾವತಿ ನೀರು ಹರಿಯದೆ ತಾಲೂಕಿನ ಕೆರೆಕಟ್ಟೆಗಳು ತುಂಬಿರಲಿಲ್ಲ. ಶಾಸಕನಾದರೂ ನೀರುಗಂಟಿಯಂತೆ ಕೆಲಸ ಮಾಡಿ ಕೆರೆಗೆ ನೀರು ತುಂಬಿಸಿ ನನ್ನ ನಂಬಿದ ರೈತರ ಹಿತ ಕಾಯುವಲ್ಲಿ ಯಶಸ್ವಿಯಾಗಿದ್ದೇನೆ. ಈ ಸಂತೋಷದಲ್ಲೇ ಮಲ್ಲಾಘಟ್ಟ ಕೆರೆಗೆ ಬಾಗಿನ ಅರ್ಪಿಸಿದ್ದೇನೆಂದರು.

ಮಲ್ಲಾಘಟ್ಟ ಕೆರೆ ಏರಿ ಕಾಮಗಾರಿ ಹಾಗೂ ಅಭಿವೃದ್ಧಿಗೆ ರಾಜ್ಯ ಸರ್ಕಾರ, ವಿಶ್ವ ಬ್ಯಾಂಕ್ ನೆರವಿನಿಂದ ೮ ಕೋಟಿ ರೂ ಒದಗಿಸಿ ಅಭಿವೃದ್ಧಿಪಡಿಸಲಾಗಿದೆ.ಮಲ್ಲಾಘಟ್ಟ ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕೆಂಬ ಕನಸಿದೆ. ಈ ಕೆರೆಯ ಬಳಿ ಜಗದ್ವಿಖ್ಯಾತ ಕೆ.ಆರ್.ಎಸ್.  ಉದ್ಯಾನವನದಂತೆ  ಉದ್ಯಾನವನ ನಿರ್ಮಿಸಿ ದೀಪಾಲಂಕಾರಗಳಿಂದ ಕಂಗೊಳಿಸುವಂತೆ ಮಾಡಲು ೨೫ ಕೋಟಿ ರೂ ಒದಗಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದರು.

ತಾಲೂಕಿನ ಬಹುತೇಕ ಕೆರೆಗಳು ತುಂಬಿ ಹರಿಯುತ್ತಿದ್ದು ರೈತರ‌ ಮೊಗದಲ್ಲಿ ಸಂತಸ ಮೂಡಿದೆ. ದಂಡಿನಶಿವರ ಹೋಬಳಿಯ ಸಂಪಿಗೆ, ಬೊಮ್ಮೇನಹಳ್ಳಿ, ಕುರುಬರಹಳ್ಳಿ ಕೊಪ್ಪ, ಹೊಸೂರು, ವೀರಸಾಗರ ಕೆರೆಗಳಿಗೆ ಬಾಗಿನ ಅರ್ಪಿಸಲಾಗಿದೆ. ದಬ್ಬೇಘಟ್ಟ, ಗೊಟ್ಟಿಕೆರೆ ಕೆರೆಗಳ ಏತ ನೀರಾವರಿ ಪೈಪ್ ಲೈನ್ ಕಾಮಗಾರಿಗೆ ಶಂಕುಸ್ಥಾಪನೆ ‌ನೆರವೇರಿಸಲಾಗಿದೆ. ಕಸಬಾ ಹೋಬಳಿಯ ಕಾಳಪ್ಪನ ಪಾಳ್ಯ, ನೀರಗುಂದ ಪಾಳ್ಯ, ಗೊಲ್ಲರಹಟ್ಟಿ ಕೆರೆಗಳಿಗೆ ಏತ ನೀರಾವರಿ ಮೂಲಕ ನೀರು ಹರಿಸಲು ಚಾಲನೆ ನೀಡಲಾಗಿದೆ ಎಂದರು.

ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ‌ಮಾತನಾಡಿ, ಕೆರೆ ಅಚ್ಚುಕಟ್ಟಿನ ೨೪ ಗ್ರಾಮದ ರೈತರು, ತುರುವೇಕೆರೆ ಪಟ್ಟಣದವರು ಕೆರೆಯ ನೀರನ್ನೇ ‌ನಂಬಿ ಜೀವನ ಸಾಗಿಸುತ್ತಿದ್ದರು. ಈ ವರ್ಷ ಕೆರೆ ತುಂಬದಿದ್ದರೆ ಲಕ್ಷಾಂತರ ಹೆಕ್ಟೇರ್ ಕೃಷಿ ಭೂಮಿ ನಾಶವಾಗುತ್ತಿತ್ತು. ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗುತ್ತಿತ್ತು. ಇದೀಗ ರೈತರ ಮೊಗದಲ್ಲಿ ಹರ್ಷ ತುಂಬಿದೆ ಎಂದರು.

ನಮ್ಮೊಂದಿಗೆ ಎನ್.ಬಿ.ಸಿ. ನಾಲೆ ೧೯ ನೇ ಕಿ.ಮೀ ಬಳಿ ರಾತ್ರಿಯಿಡೀ ಇದ್ದು ಕೆರೆಗೆ ನೀರು ಹರಿಸುವಲ್ಲಿ ಶ್ರಮಿಸಿದ ರೈತರ ಹೋರಾಟದ ಫಲವಾಗಿ ಮಲ್ಲಾಘಟ್ಟ ಕೆರೆ ತುಂಬಿದ್ದು ಅವರಿಗೆ ಅಭಿನಂದನೆಗಳನ್ನು ತಿಳಿಸಬೇಕೆಂದರು.

ಮಲ್ಲಾಘಟ್ಟ ಕೆರೆ ನೀರು ಹೋರಾಟ ಸಮಿತಿಯ ಡಾ.ನಂಜಪ್ಪ, ದೊಡ್ಡಾಘಟ್ಟ ಧರೀಶ್, ಜೆಡಿಎಸ್ ಅಧ್ಯಕ್ಷ ಸ್ವಾಮಿ, ಪಪಂ ಮಾಜಿ ಅಧ್ಯಕ್ಷೆ ನವ್ಯ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಫ್ರುಲ್ಲಾಖಾನ್, ಎಪಿಎಂಸಿ ಉಪಾಧ್ಯಕ್ಷೆ ಛಾಯಾ, ಗ್ರಾಪಂ ಮಾಜಿ ಅಧ್ಯಕ್ಷ ಮಲಸೀಮೆ ಶ್ರೀನಿವಾಸ ಗೌಡ, ಸೋಮೇನಹಳ್ಳಿ ಶಿವಾನಂದ್, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ರಾಜ್ಯ ಕಾರ್ಯದರ್ಶಿ ಎಂ.ಎನ್.ಚಂದ್ರೇಗೌಡ, ಗೊಟ್ಟಿಕೆರೆ ಕುಮಾರ್, ಟಿ.ಹೊಸಹಳ್ಳಿ ರಮೇಶ್, ಶಮಂತ, ಅಮಾಸಪ್ಪ ಸೇರಿದಂತೆ ಸಹಸ್ರಾರು ರೈತರು ಮಹಿಳೆಯರು, ಯುವಕರು ಉಪಸ್ಥಿತರಿದ್ದರು.

ವರದಿ: ಗಿರೀಶ್ ಭಟ್, ತುರುವೇಕೆರೆ

Please follow and like us:
0
BP9 News Bureauತುಮಕೂರುತುರುವೇಕೆರೆ:ತಾಲೂಕಿನ ಜೀವನದಿಯೆಂದೇ ಪ್ರಸಿದ್ದವಾದ ಮಲ್ಲಾಘಟ್ಟ ಕೆರೆಯು ಮೈದುಂಬಿ ಹರಿಯುತ್ತಿದ್ದು ಶಾಸಕ ಎಂ.ಟಿ.ಕೃಷ್ಣಪ್ಪ, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಸಹಸ್ರಾರು ರೈತರೊಡಗೂಡಿ ಬಾಗಿನ ಅರ್ಪಿಸಿದರು. ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಕಳೆದ ೩-೪ ವರ್ಷಗಳಿಂದ ಮಳೆಯಿಲ್ಲದೆ ಮತ್ತು ಜಿಲ್ಲಾ ಸಚಿವರ ಮಲತಾಯಿ ಧೋರಣೆಯಿಂದ ತುರುವೇಕೆರೆ ತಾಲ್ಲೂಕಿಗೆ ಹೇಮಾವತಿ ನೀರು ಹರಿಯದೆ ತಾಲೂಕಿನ ಕೆರೆಕಟ್ಟೆಗಳು ತುಂಬಿರಲಿಲ್ಲ. ಶಾಸಕನಾದರೂ ನೀರುಗಂಟಿಯಂತೆ ಕೆಲಸ ಮಾಡಿ ಕೆರೆಗೆ ನೀರು ತುಂಬಿಸಿ ನನ್ನ ನಂಬಿದ ರೈತರ...Kannada News Portal