ತುರುವೇಕೆರೆ: ಹಗರಣ ನಡೆಸಿದ್ದಾರೆಂದು ಆರೋಪಿಸಿರುವ ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಪ್ರಸನ್ನಕುಮಾರ್ ದಾಖಲೆ ಬಹಿರಂಗಪಡಿಸಬೇಕೆಂದು ಪಿಕಾರ್ಡ್ ಬ್ಯಾಂಕ್ ಮಾಜಿ ನಿರ್ದೇಶಕ ಟಿ.ಎಸ್.ಬೋರೇಗೌಡ ಆಗ್ರಹಿಸಿದ್ದಾರೆ. ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಕಾರ್ಡ್ ಬ್ಯಾಂಕ್ ಚುನಾವಣೆಯಲ್ಲಿ 07 ಮಂದಿ ಜಯಗಳಿಸಿದ್ದೆವು. ಜನತೆ ಹಾಗೂ ಸಹಕಾರಿಗಳು ಇವರಿಗೆ ಅಧಿಕಾರ ನೀಡಿರಲಿಲ್ಲ. ಆದರೆ ಇವರು ನಿರ್ದೇಶಕರೊಬ್ಬರಿಗೆ ಆಮಿಷ ಒಡ್ಡಿ ಅವರಿಂದ ಅಡ್ಡಮತದಾನ ಮಾಡಿಸಿ ಅಧಿಕಾರಕ್ಕೆ ಬಂದರು ಎಂದು ಆರೋಪಿಸಿದರು.

ಅಧಿಕಾರಕ್ಕೆ ನಂತರ ನಮ್ಮನ್ನು ಕಡೆಗಣಿಸಿದರು. ಸಭೆಗೆ ಆಹ್ವಾನಿಸುತ್ತಲೇ ಇರಲಿಲ್ಲ, ಸಭೆಯಲ್ಲಿ ನಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡುತ್ತಿರಲಿಲ್ಲ. ನಮ್ಮ ಯಾವುದೇ ಅಭಿಪ್ರಾಯವನ್ನು ನಡಾವಳಿಯಲ್ಲಿ ದಾಖಲಿಸುತ್ತಿರಲಿಲ್ಲ. ಹೀಗಿರುವಾಗ ನಾವು ರಾಜೀನಾಮೆ ನೀಡುವುದು ಅನಿವಾರ್ಯವಾಗಿತ್ತು ಎಂದ ಅವರು, ಆಡಳಿತ ಮಂಡಳಿಗೆ ಕೋರಂ ಇಲ್ಲದ್ದರಿಂದ ಮಂಡಳಿಯನ್ನು ಅಮಾನತ್ತುಗೊಳಿಸಿ ಆಡಳಿತಾಧಿಕಾರಿಯನ್ನು 2018ರ ಮೇ 29ರಂದು ಜಂಟಿ ರಿಜಿಸ್ಟ್ರಾರ್ ನೇಮಕ ಮಾಡಿದರು. ನೇಮಕವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮಾಜಿ ಅಧ್ಯಕ್ಷ ಪ್ರಸನ್ನಕುಮಾರ್ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಆಡಳಿತ ಮಂಡಳಿಯಲ್ಲಿ ಕೋರಂ ಇಲ್ಲದಿರುವುದನ್ನು ಮನಗಂಡು ಅರ್ಜಿಯನ್ನು 2018 ರ ಜೂನ್ 07 ರಂದು ತಿರಸ್ಕರಿಸಿದೆ ಎಂದರು.

ನಾನು ಅಧ್ಯಕ್ಷರಾಗಿದ್ದ 2015-16ರ ಅವಧಿಯಲ್ಲಿ6 ರಿಂದ 7 ಕೋಟಿ ರೂ ರೈತರಿಗೆ ಸಾಲ ದೊರಕಿಸಿದ್ದೇನೆ. ಬ್ಯಾಂಕ್‌ನ ಅಧ್ಯಕ್ಷರಾದವರು ಸಾಲವನ್ನು ಪಡೆಯುವಂತಿಲ್ಲ, ಸಾಲಕ್ಕೆ ಜಾಮೀನು ಹಾಕುವಂತಿಲ್ಲ ಎಂಬ ಯಾವುದೇ ಕಾನೂನುಗಳು ಇಲ್ಲ. ಅಂತಹ ಯಾವುದೇ ಕಾನೂನಿದ್ದರೆ ತೋರಿಸಲಿ. ಉದ್ಯಾನವನದ ಜಾಗಕ್ಕೆ ಸಾಲ ನೀಡಲು ಬರುವುದಿಲ್ಲ. ದಾಖಲೆಯಲ್ಲಿ ಉದ್ಯಾನವನ ಎಂದಿದ್ದರೆ ತೋರಿಸಲಿ. ಮಾಜಿ ಅಧ್ಯಕ್ಷರು ಸುಖಾಸುಮ್ಮನೆ ಆರೋಪ ಮಾಡುವ ಬದಲು ಹಗರಣ ನಡೆದಿದ್ದರೆ ದಾಖಲೆ ಸಮೇತ ಬಹಿರಂಗಪಡಿಸಲಿ, ಈ ಬಗ್ಗೆ ಸಾರ್ವಜನಿಕವಾಗಿ ಬಹಿರಂಗ ಚರ್ಚೆಗೂ ನಾವು ಸಿದ್ದರಿದ್ದೇವೆ ಎಂದರು.

ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಮೂಡಲಗಿರಿಯಪ್ಪ ಮಾತನಾಡಿ, ನಾನು ಬ್ಯಾಂಕ್‌ಗೆ ಯಾವುದೇ ರೀತಿಯಿಂದಲೂ ವಂಚಿಸಿಲ್ಲ. ನಾನು ಬ್ಯಾಂಕ್‌ಗೆ ಮೋಸ ಮಾಡಿದ್ದರೆ ನನ್ನನ್ನು ಜೈಲಿಗೆ ಕಳಿಸಲಿ ಎಂದು ಸವಾಲು ಹಾಕಿದರು.

ಅಧ್ಯಕ್ಷನಾಗಿದ್ದ 2103-15ರ ಅವಧಿಯಲ್ಲಿ ಸುಮಾರು 10 ಕೋಟಿಗೂ ಅಧಿಕ ಮೊತ್ತವನ್ನು ರೈತರಿಗೆ ಸಾಲ ದೊರಕಿಸಿಕೊಟ್ಟಿದ್ದೇನೆ. ಬ್ಯಾಂಕ್‌ಗೆ ಒಂದೂವರೆ ಕೋಟಿ ಠೇವಣಿ ಬರುವಂತೆ ಮಾಡಿದ್ದೇನೆ. ಆದರೆ ಬ್ಯಾಂಕ್ ನಿರ್ದೇಶಕ ಸ್ಥಾನದಿಂದ ನನ್ನನ್ನು ಹೊರದೂಡಬೇಕೆಂದು ಪಿತೂರಿ ನಡೆಸಿ ನನ್ನದಲ್ಲದ ತಪ್ಪುಗಳನ್ನು ನನ್ನ ಮೇಲೆ ಹೊರಿಸಿ ನಿರ್ದೇಶಕ ಸ್ಥಾನದಿಂದ ವಜಾಗೊಳ್ಳುವಂತೆ ಮಾಡಿದರು ಎಂದು ಆರೋಪಿಸಿದರು.

15 ತಿಂಗಳ ಕಾಲ ಅಧ್ಯಕ್ಷರಾಗಿದ್ದ ಪ್ರಸನ್ನಕುಮಾರ್ ಅವರು ಎಷ್ಟು ಮಂದಿ ರೈತರಿಗೆ ಸಾಲ ದೊರಕಿಸಿಕೊಟ್ಟಿದ್ದಾರೆ, ಬ್ಯಾಂಕ್‌ನ ಅಭಿವೃದ್ಧಿಗೆ ಅವರ ಕೊಡುಗೆ ಏನೆಂಬುದನ್ನು ಸಹಕಾರಿಗಳ, ಜನತೆಯ ಮುಂದೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ ಅವರು, ಲಾಭದಲ್ಲಿದ್ದ ಬ್ಯಾಂಕ್‌ನ್ನು ನಷ್ಟದೆಡೆಗೆ ಕೊಂಡೊಯ್ದಿದ್ದೇ ಪ್ರಸನ್ನಕುಮಾರ್ ಅವರ ಸಾಧನೆ ಎಂದು ವ್ಯಂಗ್ಯವಾಡಿದರು.

ಮಾಜಿ ನಿರ್ದೇಶಕ ಕೆಂಪರಾಜು ಮಾತನಾಡಿ, ನನ್ನ ಮೇಲೆ ಮಾಜಿ ಅಧ್ಯಕ್ಷರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು. ಬ್ಯಾಂಕ್‌ನಿಂದ ೪ಲಕ್ಷದಷ್ಟು ಸಾಲ ಪಡೆದಿದ್ದೇನೆ. ಆದರೆ ಮಾಜಿ ಅಧ್ಯಕ್ಷರು ಆರೋಪಿಸಿರುವಂತೆ ನಾನು 12ಲಕ್ಷ ಸಾಲ ಪಡೆದಿಲ್ಲ. 10ಲಕ್ಷದ ಮೇಲೆ ನನಗೆ ಸಾಲ ಬೇಡ ಎಂದು ಬ್ಯಾಂಕ್‌ಗೆ ಬರೆದುಕೊಟ್ಟಿದ್ದೇವೆ. ಆ ಪತ್ರ ಕಾರ್ಯದರ್ಶಿ ಬಳಿಯಿರಬೇಕು. ನನಗಿರುವುದು ೩ ಎಕರೆ ೧೯ ಗುಂಟೆ ಜಮೀನು ಮಾತ್ರ. ಇದನ್ನು ಅಡವಿಟ್ಟು 12ಲಕ್ಷ ಸಾಲ ಪಡೆಯಲು ಬರುವುದಿಲ್ಲ. 12ಲಕ್ಷ ಸಾಲ ಪಡೆದಿದ್ದರೆ ಸಾಲ ಮರುಪಾವತಿಗೆ ನೋಟೀಸ್ ಬರಬೇಕಿತ್ತು. ಇದುವರೆವಿಗೆ ಬ್ಯಾಂಕ್‌ನಿಂದ ಯಾವುದೇ ನೋಟೀಸ್ ಬಂದಿಲ್ಲ. ನಾನು 12ಲಕ್ಷ ರೂ ಸಾಲ ಪಡೆದಿರುವುದೇ ನಿಜವಾದರೆ ದಾಖಲೆ ತೋರಿಸಲಿ, ಅದಕ್ಕೆ ನಿಯಮದ ಪ್ರಕಾರ ಶೇ.14 ಬಡ್ಡಿ ಕಟ್ಟಲು ಸಿದ್ದನಿದ್ದೇನೆ ಎಂದರು. ಸುದ್ದಿಗೋಷ್ಠಿಯಲ್ಲಿ ಜೈಗಿರಿ ಸುಂದರ್ ಇದ್ದರು.

ವರದಿ : ಗಿರೀಶ್ ಕೆ ಭಟ್, ತುರುವೇಕೆರೆ

Please follow and like us:
0
http://bp9news.com/wp-content/uploads/2018/06/WhatsApp-Image-2018-06-12-at-7.00.50-PM-1024x484.jpeghttp://bp9news.com/wp-content/uploads/2018/06/WhatsApp-Image-2018-06-12-at-7.00.50-PM-150x150.jpegBP9 Bureauತುಮಕೂರುತುರುವೇಕೆರೆ: ಹಗರಣ ನಡೆಸಿದ್ದಾರೆಂದು ಆರೋಪಿಸಿರುವ ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಪ್ರಸನ್ನಕುಮಾರ್ ದಾಖಲೆ ಬಹಿರಂಗಪಡಿಸಬೇಕೆಂದು ಪಿಕಾರ್ಡ್ ಬ್ಯಾಂಕ್ ಮಾಜಿ ನಿರ್ದೇಶಕ ಟಿ.ಎಸ್.ಬೋರೇಗೌಡ ಆಗ್ರಹಿಸಿದ್ದಾರೆ. ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಕಾರ್ಡ್ ಬ್ಯಾಂಕ್ ಚುನಾವಣೆಯಲ್ಲಿ 07 ಮಂದಿ ಜಯಗಳಿಸಿದ್ದೆವು. ಜನತೆ ಹಾಗೂ ಸಹಕಾರಿಗಳು ಇವರಿಗೆ ಅಧಿಕಾರ ನೀಡಿರಲಿಲ್ಲ. ಆದರೆ ಇವರು ನಿರ್ದೇಶಕರೊಬ್ಬರಿಗೆ ಆಮಿಷ ಒಡ್ಡಿ ಅವರಿಂದ ಅಡ್ಡಮತದಾನ ಮಾಡಿಸಿ ಅಧಿಕಾರಕ್ಕೆ ಬಂದರು ಎಂದು ಆರೋಪಿಸಿದರು. ಅಧಿಕಾರಕ್ಕೆ ನಂತರ ನಮ್ಮನ್ನು ಕಡೆಗಣಿಸಿದರು....Kannada News Portal