ತುರುವೇಕೆರೆ: ಈ ಬಾರಿಯ ಚುನಾವಣೆಯಲ್ಲಿ ಎಂ.ಟಿ.ಕೃಷ್ಣಪ್ಪಗೆ ರೆಸ್ಟ್ ನೀಡಿ, ಜಯರಾಮ್‌ಗೆ ಮಸಾಲೆ ಅರೆಯಿರಿ. ಕ್ಷೇತ್ರದ ಅಭಿವೃದ್ದಿಯ ದೃಷ್ಟಿಯಿಂದ ನನ್ನ ಹಿರಿಯ ಸಹೋದರ ರಂಗಪ್ಪ ಟಿ.ಚೌದ್ರಿ ಅವರನ್ನು ಅತ್ಯಧಿಕ ಮತಗಳನ್ನು ನೀಡಿ ಆಶೀರ್ವಾದಿಸಿ ವಿಧಾನಸಭೆಗೆ ನನ್ನೊಂದಿಗೆ ಕಳುಹಿಸಿಕೊಡಿ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ತುರುವೇಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಂಗಪ್ಪ ಟಿ.ಚೌದ್ರಿ ಅವರ ಪರವಾಗಿ ರೋಡ್‌ಶೋ ಮೂಲಕ ಪ್ರಚಾರ ನಡೆಸಿ ಮಾತನಾಡಿ, ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದೀರಿ.ಅಭಿವೃದ್ಧಿ ಪರವಾದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದರೆ ನನ್ನ ಕ್ಷೇತ್ರ ಕನಕಪುರದಂತೆ ತುರುವೇಕೆರೆ ಕ್ಷೇತ್ರವನ್ನೂ ಅಭಿವೃದ್ಧಿ ಮಾಡುವ ಜವಾಬ್ದಾರಿ ನನ್ನದು. ರಂಗಪ್ಪ ಟಿ.ಚೌದ್ರಿ ನನ್ನ ಹಿರಿಯ ಅಣ್ಣನಿದ್ದಂತೆ. ಅಣ್ಣನ ಗೆಲುವು ನನ್ನ ಗೆಲುವು. ಜೆಡಿಎಸ್, ಬಿಜೆಪಿ ಪಕ್ಷದವರು ಹಣ ಕೊಟ್ಟರೆ ಪಡೆದುಕೊಳ್ಳಿ, ಆದರೆ ಮತವನ್ನು ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್‌ಗೆ ನೀಡಿ ಎಂದರು.

ಕುಮಾರಣ್ಣ ಸಾಕು ಬಿಡಣ್ಣ

ಕುಮಾರಣ್ಣ ನಿಮ್ಮನ್ನು ಮುಖ್ಯಮಂತ್ರಿ ಮಾಡಿದ್ದೇವೆ, ನಿಮ್ಮ ತಂದೆ ಹೆಚ್.ಡಿ.ದೇವೇಗೌಡರನ್ನು ಪ್ರಧಾನ ಮಂತ್ರಿ ಮಾಡಿದ್ದೇವೆ. ಸಾಕು ಬಿಡಣ್ಣ ಎಂದ ಅವರು, ಕುಮಾರಸ್ವಾಮಿ ಅವರು ಮಾತೆತ್ತಿದ್ದರೆ ನಾನು ಒಕ್ಕಲಿಗ ಎನ್ನುತ್ತಾರೆ. ನಾನು ಒಕ್ಕಲಿಗನಲ್ಲವೇ? ರಂಗಪ್ಪ ಟಿ.ಚೌದ್ರಿ ಒಕ್ಕಲಿಗರಲ್ಲವೇ? ಜೆಡಿಎಸ್, ಬಿಜೆಪಿಯವರು ಜಾತಿಯ ವಿಚಾರವನ್ನೆತ್ತಿ ರಾಜಕಾರಣ ಮಾಡ್ತಾರೆ. ಆದರೆ ಕಾಂಗ್ರೆಸ್‌ನಲ್ಲಿ ಎಲ್ಲಾ ಜಾತಿ, ಧರ್ಮ, ಸಮುದಾಯದವರೂ ಇದ್ದಾರೆ. ನಮ್ಮದು ಕಾಂಗ್ರೆಸ್ ಜಾತಿ. ಹೆಚ್.ಡಿ.ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಎಲ್ಲಾ ಸಮುದಾಯವರೂ ಮತ ನೀಡಿದ್ದರೂ ಒಕ್ಕಲಿಗ ಜಾತಿಯ ಬಲವನ್ನೇ ನಂಬಿದ್ದಾರೆ. ಕಾಂಗ್ರೆಸ್ ಪಕ್ಷ ಎಲ್ಲಾ ಜಾತಿ, ಜನಾಂಗದ ಅಭಿವೃದ್ಧಿಯ ಸಂಕಲ್ಪ ಮಾಡಿದ್ದೇವೆ, ಅದರಂತೆ ನಡೆದಿದ್ದೇವೆ ಎಂದರು.

ಬಿಜೆಪಿ ಕರ್ಮಕಾಂಡ ನೋಡಿ ಸಾಕಾಗಿದ್ದಾರೆ

ಬಿಜೆಪಿ ಸರ್ಕಾರದ ಅವಧಿಯಲ್ಲಿನ ಕರ್ಮಕಾಂಡ, ಭ್ರಷ್ಟಾಚಾರ, ಹಗರಣಗಳನ್ನು ನೋಡಿ ಜನತೆ ಸಾಕಾಗಿದ್ದಾರೆ. ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ಜನತೆ ಎಂದೂ ಬಯಸುವುದಿಲ್ಲ. ಕೊಟ್ಟ ಕುದುರೆಯನ್ನು ಏರಲಾಗದವನು ವೀರನೂ ಅಲ್ಲ, ಶೂರನೂ ಅಲ್ಲ ಎಂಬಂತೆ ಅಧಿಕಾರ ಕೊಟ್ಟಾಗ ಜನರ ಸೇವೆ ಮಾಡದೆ ಮತ್ತೆ ಅಧಿಕಾರ ಕೊಡಿ ಎನ್ನುವ ಯಡಿಯೂರಪ್ಪರನ್ನು ಜನತೆ ನಂಬುವುದಿಲ್ಲ. ಸೀರೆ, ಸೈಕಲ್ ಕೊಟ್ಟಿದ್ದನ್ನೇ ದೊಡ್ಡ ಸಾಧನೆ ಎಂದು ಬಿಂಬಿಸಿಕೊಂಡು ಬಿಜೆಪಿ ಅಧಿಕಾರ ಕೇಳುತ್ತಿದೆ. ಆದರೆ ಹಾಲಪ್ಪ, ರೇಣುಕಾಚಾರ್ಯ, ರಘುಪತಿ ಭಟ್‌ರ ಕಥೆಗಳು, ಸದನದಲ್ಲಿ ಬ್ಲೂಫಿಲಂ ನೋಡಿದ್ದು, ಇತಿಹಾಸದಲ್ಲೇ ಅಧಿಕಾರದಕ್ಕಾಗಿ ಕಿತ್ತಾಡಿ ೫ ವರ್ಷದಲ್ಲಿ ೩ ಮಂದಿ ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಎಲ್ಲವನ್ನೂ ರಾಜ್ಯದ ಜನತೆ ಕಂಡಿದ್ದು, ನಿಮ್ಮ ಸಹವಾಸ ಸಾಕು ಎಂದು ಮನೆಗೆ ಕಳಿಸಿದ್ದಾರೆ. ಆದರೂ ಮತ್ತೆ ಅಧಿಕಾರ ಕೊಡಿ ಎಂದು ಯಾವ ನೈತಿಕತೆಯಿಂದ ರಾಜ್ಯದ ಜನರ ಬಳಿ ಮತಯಾಚಿಸುತ್ತಿದ್ದೀರಿ ಎಂದು ವ್ಯಂಗ್ಯವಾಡಿದರು.

ಬಿಜೆಪಿಯವರು ಪಕೋಡ ಮಾರಿಕೊಂಡಿರಲಿ

ಪ್ರಧಾನ ಮಂತ್ರಿಗಳೇ ಪ್ರತಿ ಬಾರಿ ತಮ್ಮ ಭಾಷಣದಲ್ಲಿ ಅಚ್ಛೇ ದಿನ್ ಬರುತ್ತೆ ಎಂದು ಹೇಳುತ್ತಲೇ ಇದ್ದೀರಿ, ಯಾವಾಗ ಬರುತ್ತೆ? ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರಕಿಸಿ ಎಂದರೆ ಪಕೋಡ ಮಾರಿ ಅಂತೀರಿ, ಜಿಎಸ್‌ಟಿ ಜಾರಿಗೆ ತಂದು ಸಣ್ಣಪುಟ್ಟ ವ್ಯಾಪಾರಸ್ಥರನ್ನು ಬೀದಿಗೆ ಬೀಳಿಸಿದ್ದೀರಿ, ನೋಟ್ ಬ್ಯಾನ್ ಮಾಡಿ ಬಡಕುಟುಂಬಗಳು ತಮ್ಮ ಕಷ್ಟಕಾಲಕ್ಕೆಂದು ಕೂಡಿಟ್ಟಿದ್ದ ಹಣಕ್ಕೆ ಬೆಲೆ ಇಲ್ಲದಂತೆ ಮಾಡಿದ್ದೀರಿ, ಇದೆಯಾ ನಿಮ್ಮ ಅಚ್ಛೇದಿನ್ ಎಂದು ಕಿಡಿಕಾರಿದ ಅವರು, ದೇಶದಲ್ಲಿ ಉದ್ಯೋಗ ಸೃಷ್ಠಿಸಲಾಗದೆ ನಿರುದ್ಯೋಗು ಯುವಕರಿಗೆ ಪಕೋಡ ಮಾರುವಂತೆ ಹೇಳಿದ ಬಿಜೆಪಿಯವರಿಗೆ ಯಾಕೆ ಮತ ಹಾಕಬೇಕೆಂದು ಜನರು ಚಿಂತಿಸಬೇಕಿದೆ. ಈ ಬಾರಿಯ ಚುನಾವಣೆಯಲ್ಲಿ ಪ್ರಧಾನಿ ಮೋದಿ ಹೇಳಿದಂತೆ ಯಡಿಯೂರಪ್ಪ, ಬಿಜೆಪಿ ನಾಯಕರು ಪಕೋಡ ಮಾರಿಕೊಂಡು ಇರಲಿ, ನಿಮ್ಮ ಪ್ರಗತಿಗಾಗಿ ನೂರಾರು ಭಾಗ್ಯ ಯೋಜನೆಗಳನ್ನು ಜಾರಿಗೊಳಿಸಿದ ಕಾಂಗ್ರೆಸ್‌ಗೆ ಮತ ನೀಡಿ ಆರ್ಶೀವದಿಸಿ ಎಂದರು.

ಬಿಎಸ್‌ವೈ, ಹೆಚ್‌ಡಿಕೆ ಸಿಎಂ ಆಗಲ್ಲ

ಮೇ ೧೨ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನರ ಆರ್ಶೀವಾದದಿಂದ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಯಡಿಯೂರಪ್ಪ ಮೇ ೧೭ರಂದು, ಕುಮಾರಸ್ವಾಮಿ ಮೇ ೧೮ರಂದು ಪ್ರಮಾಣವಚನ ಸ್ವೀಕರಿಸುತ್ತೇನೆಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಈ ಬಾರಿ ಜನತೆ ಅಭಿವೃದ್ದಿಪರವಾದ, ಜನಪರವಾದ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕೆಂದು ನಿರ್ಧರಿಸಿದ್ದಾರೆ. ಆದ್ದರಿಂದ ಬಿಎಸ್‌ವೈ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಹಗಲುಗನಸು ಎಂದರು.

ಆರ್ಶೀವದಿಸಿದರೆ ಮಾತ್ರ ನನ್ನ ಉಳಿವು

ಕಾಂಗ್ರೆಸ್ ಅಭ್ಯರ್ಥಿ ರಂಗಪ್ಪ ಟಿ.ಚೌದ್ರಿ ಮಾತನಾಡಿ, ಈ ಬಾರಿಯ ಚುನಾವಣೆ ನನ್ನ ಅಳಿವು, ಉಳಿವಿನ ಪ್ರಶ್ನೆ. ಕ್ಷೇತ್ರದ ಜನತೆ ಆರ್ಶೀವದಿಸಿದರೆ ಮಾತ್ರ ನನ್ನ ಉಳಿವು. ಕಳೆದ ೨೦ ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿರುವ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿರುವ ನನ್ನನ್ನು ಕಾಂಗ್ರೆಸ್ ಪಕ್ಷ ಗುರುತಿಸಿ ಟಿಕೆಟ್ ನೀಡಿ ಆರ್ಶೀವದಿಸಿದೆ. ಈಗ ಕ್ಷೇತ್ರದ ಮತದಾರರು ನಿಮ್ಮ ಸೇವೆ ಮಾಡುವುದಕ್ಕಾಗಿ ನನ್ನನ್ನು ಆರ್ಶೀವದಿಸಬೇಕೆಂದು ಕೋರಿದರು.

ಪ್ರವಾಸಿ ಮಂದಿರದಿಂದ ಆರಂಭವಾದ ಜಾಥಾದಲ್ಲಿ ಹದಿನೈದು ಸಾವಿರಕ್ಕೂ ಅಧಿಕ ಮಂದಿ ಕಾರ್ಯಕರ್ತರು ಪಾಲ್ಗೊಂಡು ಕಾಂಗ್ರೆಸ್ ಪರ ಜಯಘೋಷ ಹಾಕಿದರು. ಕಾಂಗ್ರೆಸ್ ಪಕ್ಷದ ಯುವ ಕಾರ್ಯಕರ್ತರು ನೂರಾರು ಬೈಕ್‌ಗಳಲ್ಲಿ ಪಟ್ಟಣದ  ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು. ಪ್ರಚಾರ ಜಾಥಾದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಳೆ ಕೃಷ್ಣಪ್ಪ, ಮುಖಂಡರಾದ ಗಿರೀಶ್, ಎನ್.ಆರ್.ಜಯರಾಮ್, ಗೀತಾರಾಜಣ್ಣ, ಮಂಜುನಾಥ ಅದ್ದೆ, ಎಂ.ವಿಶ್ವೇಶ್ವರಯ್ಯ, ದಾನೀಗೌಡ, ಪ್ರಸನ್ನಕುಮಾರ್, ದಂಡಿನಶಿವರ ದೇವರಾಜ್, ಅರಳೀಕೆರೆ ರವಿಕುಮಾರ್, ಪ್ರವೀಣ್‌ಗೌಡ, ಯಜಮಾನ್ ಮಹೇಶ್, ಟಿ.ವಿ.ಶ್ರೀನಿವಾಸಮೂರ್ತಿ, ಗುಡ್ಡೇನಹಳ್ಳಿ ನಂಜುಂಡಪ್ಪ ಮುಂತಾದವರಿದ್ದರು.

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ

Please follow and like us:
0
http://bp9news.com/wp-content/uploads/2018/05/WhatsApp-Image-2018-05-09-at-6.26.46-PM-1024x627.jpeghttp://bp9news.com/wp-content/uploads/2018/05/WhatsApp-Image-2018-05-09-at-6.26.46-PM-150x150.jpegBP9 Bureauತುಮಕೂರುರಾಜಕೀಯತುರುವೇಕೆರೆ: ಈ ಬಾರಿಯ ಚುನಾವಣೆಯಲ್ಲಿ ಎಂ.ಟಿ.ಕೃಷ್ಣಪ್ಪಗೆ ರೆಸ್ಟ್ ನೀಡಿ, ಜಯರಾಮ್‌ಗೆ ಮಸಾಲೆ ಅರೆಯಿರಿ. ಕ್ಷೇತ್ರದ ಅಭಿವೃದ್ದಿಯ ದೃಷ್ಟಿಯಿಂದ ನನ್ನ ಹಿರಿಯ ಸಹೋದರ ರಂಗಪ್ಪ ಟಿ.ಚೌದ್ರಿ ಅವರನ್ನು ಅತ್ಯಧಿಕ ಮತಗಳನ್ನು ನೀಡಿ ಆಶೀರ್ವಾದಿಸಿ ವಿಧಾನಸಭೆಗೆ ನನ್ನೊಂದಿಗೆ ಕಳುಹಿಸಿಕೊಡಿ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು. ತುರುವೇಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಂಗಪ್ಪ ಟಿ.ಚೌದ್ರಿ ಅವರ ಪರವಾಗಿ ರೋಡ್‌ಶೋ ಮೂಲಕ ಪ್ರಚಾರ ನಡೆಸಿ ಮಾತನಾಡಿ, ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದೀರಿ.ಅಭಿವೃದ್ಧಿ ಪರವಾದ...Kannada News Portal