ತುರುವೇಕೆರೆ: ವಿಧಾನಸಭಾ ಕ್ಷೇತ್ರದ ಮತಾಧಿಪತಿ ಯಾರು ಎಂಬ ಕುತೂಹಲಕ್ಕೆ ಮತದಾರ ಅಂತಿಮ ತೆರೆ ಎಳೆದಿದ್ದು, ಕ್ಷೇತ್ರದ ನೂತನ ಸಾರಥಿಯಾಗಿ ಎ.ಎಸ್.ಜಯರಾಮ್(ಮಸಾಲೆ ಜಯರಾಮ್) ಅವರನ್ನು ಆಯ್ಕೆ ಮಾಡಿದ್ದಾನೆ. ಆ ಮೂಲಕ 1999ರ ನಂತರ ಕ್ಷೇತ್ರದಲ್ಲಿ ಕಮಲ ಅರಳಿಸಿದ ಕೀರ್ತಿಗೆ ಮಸಾಲೆ ಜಯರಾಮ್ ಪಾತ್ರವಾಗಿದ್ದಾರೆ. ಮಸಾಲೆ ಜಯರಾಮ್ ಗೆಲುವಿನ ಮೂಲಕ ಹ್ಯಾಟ್ರಿಕ್ ಗೆಲುವನ್ನು ಸಾಧಿಸಿ ಕುಮಾರಸ್ವಾಮಿ ಸರ್ಕಾರದಲ್ಲಿ ಸಚಿವರಾಗುವ ಎಂ.ಟಿ.ಕೃಷ್ಣಪ್ಪ ಅವರ ಕನಸು ಭಗ್ನಗೊಂಡಿದೆ. ಜೆಡಿಎಸ್, ಬಿಜೆಪಿ ನಡುವಿನ ಸಮರದಲ್ಲಿ ಅಂತಿಮವಾಗಿ ಬಿಜೆಪಿ ಜಯಭೇರಿ ಬಾರಿಸಿದೆ.

ತುರುವೇಕೆರೆ ವಿಧಾನಸಭಾ ಕ್ಷೇತ್ರ ರಾಜಕೀಯವಾಗಿ ರಾಜ್ಯಮಟ್ಟದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದ ಕ್ಷೇತ್ರವಾಗಿದೆ. ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಕ್ಷೇತ್ರವನ್ನು ಜೆಡಿಎಸ್ ಭದ್ರಕೋಟೆಯಾಗಿಸುವಲ್ಲಿ ಎಂ.ಟಿ.ಕೃಷ್ಣಪ್ಪ ಶ್ರಮಿಸಿದ್ದರು. ಕಳೆದ 15 ವರ್ಷಗಳಿಂದ ಜೆಡಿಎಸ್ ಪಕ್ಷದ ತೆಕ್ಕೆಯಲ್ಲಿದ್ದ ಕ್ಷೇತ್ರದಲ್ಲಿ ಕಮಲ ಅರಳಿಸುವ ಮೂಲಕ ಮಸಾಲೆ ಜಯರಾಮ್ ಕ್ಷೇತ್ರವನ್ನು ಬಿಜೆಪಿಗೆ ಉಡುಗೊರೆಯಾಗಿ ನೀಡಿದ್ದಾರೆ. ಮೇ 12ರಂದು ನಡೆದ ಮತದಾನದಲ್ಲಿ ಶೇ.84.42 ರಷ್ಟು ಮತದಾನವಾಗಿತ್ತು. ಕ್ಷೇತ್ರದಲ್ಲಿನ 90824 ಪುರುಷರು, 90334 ಮಹಿಳೆಯರು, ೮ ಮಂದಿ ಇತರೆ ಒಟ್ಟು ೧೮೧೧೬೬ ಮತದಾರರ ಪೈಕಿ ೭೭೮೨೯ ಪುರುಷರು, ೭೫೧೨೮ ಮಹಿಳೆಯರು ಒಟ್ಟು ೧೫೨೯೫೭ಮಂದಿ ಮತ ಚಲಾಯಿಸಿದ್ದರು.

ಇಂದು ನಡೆದ ಮತ ಎಣಿಕೆ ಕಾರ್ಯದಲ್ಲಿ ಬಿಜೆಪಿಯ ಮಸಾಲೆ ಜಯರಾಮ್ ೬೦೭೧೦ ಮತ ಪಡೆಯುವ ಮೂಲಕ ತುರುವೇಕೆರೆ ಕ್ಷೇತ್ರದಲ್ಲಿ ೧೫ ವರ್ಷ ಶಾಸಕರಾಗಿದ್ದ ಎಂ.ಟಿ,.ಕೃಷ್ಣಪ್ಪ ಅವರನ್ನು ೨೦೪೯ಮತಗಳಿಂದ ಸೋಲಿಸಿ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಜೆಡಿಎಸ್‌ನ ಎಂ.ಟಿ.ಕೃಷ್ಣಪ್ಪ(೫೮೬೬೧), ಕಾಂಗ್ರೆಸ್‌ನ ರಂಗಪ್ಪ ಟಿ.ಚೌದ್ರಿ (೨೪೫೮೪), ಪಕ್ಷೇತರ ಅಭ್ಯರ್ಥಿಗಳಾದ ಎಂ.ನಾರಾಯಣಗೌಡ(೪೫೬೬), ಎಂ.ಡಿ.ರಮೇಶ್‌ಗೌಡ(೨೧೪೮), ಹೆಚ್.ಎಲ್.ಸಂಜೀವಯ್ಯ(೬೧೩), ಕಪನೀಗೌಡ(೩೯೩), ರಾಘವೇಂದ್ರ ಎಂ.ಜೆ. ಲಾಡ್ (೨೭೯), ಕೃಷ್ಣಪ್ಪ(೨೩೮), ಜಿ.ಎಸ್.ಬಸವಲಿಂಗಯ್ಯ(೧೯೮), ಬಿ.ಎಂ.ರಮೇಶ್(೧೯೫) ಮತಗಳನ್ನು ಪಡೆದಿದ್ದರೆ, ಹಾಗೂ ನೋಟಾಗೆ(೯೫೪) ಮತಗಳು ಬಿದ್ದಿವೆ.

ಹ್ಯಾಟ್ರಿಕ್‌ಗೆ ತೊಡರುಗಾಲದ ಎಂಎನ್‌ಜಿ, ಎಂಡಿಆರ್

ಜೆಡಿಎಸ್‌ನ ಎಂ.ಟಿ.ಕೃಷ್ಣಪ್ಪ ಅವರ ಹ್ಯಾಟ್ರಿಕ್ ಗೆಲುವಿನ ಆಸೆಗೆ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದ ಎಂ.ನಾರಾಯಣಗೌಡ ಹಾಗೂ ಎಂ.ಡಿ.ರಮೇಶ್‌ಗೌಡ ಅವರುಗಳು ತೊಡರುಗಾಲಾದರು ಎಂದೇ ಕ್ಷೇತ್ರದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಎಂ.ನಾರಾಯಣಗೌಡ(೪೫೬೬) ಹಾಗೂ ಎಂ.ಡಿ.ರಮೇಶ್‌ಗೌಡ(೨೧೪೮) ಸೇರಿ ಒಟ್ಟು ೬೧೭೪ ಮತಗಳನ್ನು ಪಡೆದಿದ್ದು ಎಂ.ಟಿ.ಕೃಷ್ಣಪ್ಪ ಅವರ ಗೆಲುವನ್ನು ಕಸಿದುಕೊಂಡಿದೆ ಎನ್ನಲಾಗಿದೆ. ಇಬ್ಬರ ಪೈಕಿ ಜೆಡಿಎಸ್ ಪಕ್ಷದಲ್ಲಿದ್ದ ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷರಾಗಿದ್ದ ಎಂ.ಡಿ.ರಮೇಶ್‌ಗೌಡರು ದಬ್ಬೇಘಟ್ಟ ಹೋಬಳಿಯಲ್ಲಿ ತಮ್ಮ ಪ್ರಭಾವ ಬೀರಿದ್ದು ಶಾಸಕರಿಗೆ ಹೋಗಬೇಕಿದ್ದ ಕೆಲವು ಮತಗಳನ್ನು ಕಸಿದುಕೊಂಡರೆ, ಎಂ.ನಾರಾಯಣಗೌಡರು ತಮ್ಮ ಹೋಬಳಿಯಾದ ಸಿ.ಎಸ್.ಪುರದಲ್ಲಿ ಜೆಡಿಎಸ್ ಮತಗಳ ಬುಟ್ಟಿಗೆ ಕೈ ಹಾಕಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಕ್ಷೇತ್ರಕ್ಕೆ ಗಗನಕುಸುಮವಾದ ಸಚಿವ ಸ್ಥಾನ

ಜೆಡಿಎಸ್‌ನ ಎಂ.ಟಿ.ಕೃಷ್ಣಪ್ಪ ಈ ಬಾರಿ ಜಯಗಳಿಸಿದ್ದರೆ ಕುಮಾರಸ್ವಾಮಿ ಸರ್ಕಾರದಲ್ಲಿ ಸಚಿವರಾಗುತ್ತಾರೆಂದೇ ಕ್ಷೇತ್ರದ ಜನರು ಬಾವಿಸಿದ್ದರು. ಇದಕ್ಕೆ ತಕ್ಕಂತೆ ಕುಮಾರಸ್ವಾಮಿಯವರೂ ಎಂ.ಟಿ.ಕೃಷ್ಣಪ್ಪ ಅವರನ್ನು ಗೆಲ್ಲಿಸಿದರೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು. ಆದರೆ ಇದಾವುದೂ ಆಗಲಿಲ್ಲ. ಎಂ.ಟಿ.ಕೃಷ್ಣಪ್ಪ ಸೋತಿದ್ದು, ಕ್ಷೇತ್ರಕ್ಕೆ ಸಚಿವ ಸ್ಥಾನ ಗಗನಕುಸುಮವಾಗಿಯೇ ಉಳಿದಂತಾಗಿದೆ.

ಅಪ್ಪ, ಮಗ, ಮೊಮ್ಮಗ ಬಂದರೂ ಖುಲಾಯಿಸದ ಅದೃಷ್ಟ

ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ರಚನೆಗೆ ಪ್ರತಿ ಕ್ಷೇತ್ರವೂ ಮುಖ್ಯ ಎಂಬುದನ್ನು ಮನಗಂಡಿದ್ದ ಜೆಡಿಎಸ್ ನಾಯಕರು ಪ್ರತಿ ಚುನಾವಣೆಯಂತೆ ಈ ಬಾರಿಯೂ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಎಂ.ಟಿ.ಕೃಷ್ಣಪ್ಪ ಅವರ ಪರವಾಗಿ ಪ್ರಚಾರ ನಡೆಸಿದರು. ಈ ಬಾರಿಯ ವಿಶೇಷವೆಂದರೆ ಎಂ.ಟಿ.ಕೃಷ್ಣಪ್ಪ ಅವರ ಪರವಾಗಿ ಅಪ್ಪ ಹೆಚ್.ಡಿ.ದೇವೇಗೌಡರು ಸಿ.ಎಸ್.ಪುರ ಹಾಗೂ ದಬ್ಬೇಘಟ್ಟದಲ್ಲಿ, ಮಗ ಹೆಚ್.ಡಿ.ಕುಮಾರಸ್ವಾಮಿ, ಮೊಮ್ಮಗ ನಿಖಿಲ್ ಕುಮಾರಸ್ವಾಮಿ ತುರುವೇಕೆರೆಯಲ್ಲಿ ಪ್ರಚಾರ ನಡೆಸಿದರೂ ಎಂ.ಟಿ.ಕೃಷ್ಣಪ್ಪ ಅವರಿಗೆ ಅದೃಷ್ಟ ಕೈಕೊಟ್ಟಿತು. ನಾಲ್ಕನೇ ಬಾರಿ ಶಾಸಕರಾಗುವ, ಕುಮಾರಸ್ವಾಮಿ ಸರ್ಕಾರದಲ್ಲಿ ಸಚಿವರಾಗುವ ಕನಸು ಕನಸಾಗಿಯೇ ಉಳಿಯಿತು.

ಕಮಲ ಪಡೆಯ ಸಂಭ್ರಮಾಚಾರಣೆ

ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬರೋಬ್ಬರಿ ೧೯ ವರ್ಷಗಳ ನಂತರ ಕಮಲ ಅರಳಿದ್ದು, ಗೆಲುವಿನ ರೂವಾರಿ, ಕ್ಷೇತ್ರದ ನೂತನ ಶಾಸಕ ಮಸಾಲೆ ಜಯರಾಮ್ ಅವರ ಬೆಂಬಲಿಗರು ಪಟ್ಟಣದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಬಿಜೆಪಿಯ ಯುವ ಕಾರ್ಯಕರ್ತರು ಬೈಕ್‌ನಲ್ಲಿ ಬಿಜೆಪಿ ಬಾವುಟ ಹಿಡಿದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಿಜೆಪಿ ಪಕ್ಷ, ಬಿಜೆಪಿ ರಾಷ್ಟ್ರ, ರಾಜ್ಯ ನಾಯಕರು, ನೂತನ ಶಾಸಕ ಮಸಾಲೆ ಜಯರಾಮ್ ಪರ ಜಯಘೋಷಗಳನ್ನು ಹಾಕಿ ಸಂಭ್ರಮಿಸಿದರು.

ವರದಿಃ ಗಿರೀಶ್ ಕೆ ಭಟ್, ತುರುವೇಕೆರೆ

Please follow and like us:
0
http://bp9news.com/wp-content/uploads/2018/05/WhatsApp-Image-2018-05-15-at-5.20.16-PM-680x1024.jpeghttp://bp9news.com/wp-content/uploads/2018/05/WhatsApp-Image-2018-05-15-at-5.20.16-PM-150x150.jpegBP9 Bureauತುಮಕೂರುಪ್ರಮುಖರಾಜಕೀಯತುರುವೇಕೆರೆ: ವಿಧಾನಸಭಾ ಕ್ಷೇತ್ರದ ಮತಾಧಿಪತಿ ಯಾರು ಎಂಬ ಕುತೂಹಲಕ್ಕೆ ಮತದಾರ ಅಂತಿಮ ತೆರೆ ಎಳೆದಿದ್ದು, ಕ್ಷೇತ್ರದ ನೂತನ ಸಾರಥಿಯಾಗಿ ಎ.ಎಸ್.ಜಯರಾಮ್(ಮಸಾಲೆ ಜಯರಾಮ್) ಅವರನ್ನು ಆಯ್ಕೆ ಮಾಡಿದ್ದಾನೆ. ಆ ಮೂಲಕ 1999ರ ನಂತರ ಕ್ಷೇತ್ರದಲ್ಲಿ ಕಮಲ ಅರಳಿಸಿದ ಕೀರ್ತಿಗೆ ಮಸಾಲೆ ಜಯರಾಮ್ ಪಾತ್ರವಾಗಿದ್ದಾರೆ. ಮಸಾಲೆ ಜಯರಾಮ್ ಗೆಲುವಿನ ಮೂಲಕ ಹ್ಯಾಟ್ರಿಕ್ ಗೆಲುವನ್ನು ಸಾಧಿಸಿ ಕುಮಾರಸ್ವಾಮಿ ಸರ್ಕಾರದಲ್ಲಿ ಸಚಿವರಾಗುವ ಎಂ.ಟಿ.ಕೃಷ್ಣಪ್ಪ ಅವರ ಕನಸು ಭಗ್ನಗೊಂಡಿದೆ. ಜೆಡಿಎಸ್, ಬಿಜೆಪಿ ನಡುವಿನ ಸಮರದಲ್ಲಿ ಅಂತಿಮವಾಗಿ...Kannada News Portal