ತುರುವೇಕೆರೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಮಲವನ್ನು ಅರಳಿಸಬೇಕೆಂಬ ದಿಟ್ಟ ನಿರ್ಧಾರಕ್ಕೆ ಬಂದಿರುವ ನಿಷ್ಠಾವಂತ ಭಾರತೀಯ ಜನತಾ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬೈಕ್ ಜಾಥಾ ಮೂಲಕ ಪಕ್ಷದ ಪ್ರಚಾರ ಕಾರ್ಯ ಆರಂಭಿಸಿದರು. 

ದಂಡಿನಶಿವರ ಹೊನ್ನಮ್ಮದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ ಡಾ.ಚೌದ್ರಿ ನಾಗೇಶ್, ಕಳೆದ ೧೫ ವರ್ಷಗಳಿಂದ ಕ್ಷೇತ್ರದ ಮತದಾರರು ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುತ್ತಿದ್ದು ಮತದಾರರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ವಿಫಲರಾಗಿದ್ದಾರೆ. ಕ್ಷೇತ್ರ ಅಭಿವೃದ್ದಿಯಲ್ಲಿ ಹಿಂದುಳಿದಿದ್ದು ತುರುವೇಕೆರೆ ಪಟ್ಟಣದ ವಾಣಿಜ್ಯ ಸಂಕೀರ್ಣ ಕಾಮಗಾರಿ, ಒಳಚರಂಡಿ ಕಾಮಗಾರಿಗಳು ಅಪೂರ್ಣಗೊಂಡಿದೆ. ಶಾಸಕರು ತಮ್ಮ ಮಾತು ಕೇಳದ ಅಧಿಕಾರಿಗಳನ್ನು ವರ್ಗಾವಣೆ, ಅಮಾನತ್ತು ಶಿಕ್ಷೆಗೆ ಗುರಿಮಾಡಿ ಸರ್ವಾಧಿಕಾರಿ ಧೋರಣೆ ನಡೆಸುತ್ತಿದ್ದಾರೆ. ಇತಿಹಾಸದಲ್ಲಿ ಇಂತಹ ಶಾಸಕರನ್ನು ತಾಲ್ಲೂಕು ಕಂಡಿಲ್ಲ. ಶಾಸಕ ಎಂ.ಟಿ.ಕೃಷ್ಣಪ್ಪ ಕೆಲವು ದಿನದ ಹಿಂದೆ ರೌಡಿಯಂತೆ ವರ್ತಿಸಿರುವುದು ತಾಲ್ಲೂಕಿನ ದೌರ್ಬಾಗ್ಯಗಳಲ್ಲೊಂದಾಗಿದೆ ಎಂದ ಅವರು, ತಾಲ್ಲೂಕಿನ  ಆಡಳಿತ ಹದಗೆಟ್ಟಿದ್ದು ಕಮೀಷನ್ ದಂಧೆ ಹೆಚ್ಚಿದೆ. ಪೋಲೀಸ್ ಇಲಾಖೆ ಸತ್ತುಹೋಗಿದೆ. ಪೋಲೀಸರನ್ನು ಶಾಸಕರು ಅವಾಚ್ಯ ಶಬ್ದಗಳಿಂದ ನಿಂದಿಸಿದರೂ ಶಾಸಕರ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಪೋಲೀಸ್ ಇಲಾಖೆ ನಿಷ್ಕ್ರಿಯವಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.

ಈ ಹಿನ್ನೆಲೆಯಲ್ಲಿ ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಲ್ಲಿ  ಮನೆಮನೆಗೆ ತೆರಳಿ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡಿರುವ ಜನಪರ ಕಾರ್ಯಕ್ರಮಗಳು, ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತದ ಬಗ್ಗೆ ಜನರಿಗೆ ತಿಳಿಸಿ ಅಭಿವೃದ್ದಿ ಪರ ಚಿಂತನೆಯುಳ್ಳ ಬಿಜೆಪಿ ಪಕ್ಷಕ್ಕೆ ಮತ ನೀಡುವಂತೆ ಜನರ ಮನಃಪರಿವರ್ತನೆ ಮಾಡಬೇಕೆಂದ ಅವರು, ಮತದಾರರು ಕ್ಷೇತ್ರದ ಸಮಗ್ರ ಅಭಿವೃದ್ದಿಯ ದೃಷ್ಟಿಯಿಂದ ಸರ್ವಾಧಿಕಾರಿ ಜೆಡಿಎಸ್ ಶಾಸಕರನ್ನು ಮನೆಗೆ ಕಳಿಸಿ, ಬಿಜೆಪಿ ಅಭ್ಯರ್ಥಿಗೆ ಆರ್ಶೀವದಿಸಿ ಕ್ಷೇತ್ರದಲ್ಲಿ ಕಮಲ ಅರಳಿಸಬೇಕೆಂದರು.

ಬಿಜೆಪಿ ಮಾಜಿ ಅಧ್ಯಕ್ಷ ಅರಳೀಕೆರೆ ರವಿಕುಮಾರ್ ಮಾತನಾಡಿ, ತುರುವೇಕೆರೆ ತಾಲ್ಲೂಕು ಅಭಿವೃದ್ದಿಯಾಗಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ೧೫ ವರ್ಷಗಳಿಂದ ಶಾಸಕರಾಗಿ ಕ್ಷೇತ್ರದ ಅಭಿವೃದ್ದಿಯನ್ನು ಕಡೆಗಣಿಸಿ ಗುತ್ತಿಗೆದಾರರ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ. ರೌಡಿ ಎಂಎಲ್‌ಎ ಆಗಿ ಸರ್ವಾಧಿಕಾರಿ ಧೋರಣೆಯಿಂದ ವರ್ತಿಸುತ್ತಿದ್ದಾರೆ. ಶಾಸಕರ ಅಟ್ಟಹಾಸಕ್ಕೆ ಕ್ಷೇತ್ರದ ಮತದಾರರು ಬ್ರೇಕ್ ಹಾಕಬೇಕಿದೆ ಎಂದರು.

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳೆಯರಿಗೆ, ಅಧಿಕಾರಿಗಳಿಗೆ, ಆರ್‌ಎಸ್‌ಎಸ್ ಹಿಂದೂ ಕಾರ್ಯಕರ್ತರಿಗೆ, ಸಾಹಿತಿಗಳಿಗೆ ರಕ್ಷಣೆ ಇಲ್ಲದಾಗಿದ್ದು ಇದೊಂದು ಕೊಲೆಗಡುಕ ಸರ್ಕಾರವಾಗಿದೆ ಎಂದ ಅವರು, ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಕಾರ್ಯವೈಖರಿಯನ್ನು ಇಡೀ ವಿಶ್ವವೇ ಮೆಚ್ಚಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದ್ದು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆ. ಈ ನಿಟ್ಟಿನಲ್ಲಿ ತುರುವೇಕೆರೆ ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ಕ್ಷೇತ್ರದ ಅಭಿವೃದ್ದಿಗೆ ಸಹಕಾರ ನೀಡಬೇಕೆಂದರು.

ಬಿಜೆಪಿ ಮುಖಂಡ ಎಂ.ಎಲ್.ಗೋವಿಂದರಾಜ್ ಗೌಡ ಮಾತನಾಡಿ, ಸ್ವಾತಂತ್ರ್ಯಾನಂತರ ೬೦ ವರ್ಷಗಳ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ಮಾಡದ ಸಾಧನೆಯನ್ನು ದೇಶದ ಅಭಿವೃದ್ದಿಯನ್ನು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇವಲ ೦೪ ವರ್ಷಗಳಲ್ಲಿ ಮಾಡಿ ವಿಶ್ವವೇ ಭಾರತದೆಡೆಗೆ ತಿರುಗಿ ನೋಡುವಂತೆ ಮಾಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸಿಎಂ ಸಿದ್ದರಾಮಯ್ಯನವರ ಭಾಗ್ಯಗಳ ಮೋಡಿಗೆ ಜನತೆ ಬಲಿಯಾಗುವುದಿಲ್ಲ. ಸಿದ್ದರಾಮಯ್ಯನವರು ಅಭಿವೃದ್ದಿ ಮಾಡಿದ್ದೇನೆಂಬ ಸುಳ್ಳುಗಳ ಸರಮಾಲೆಯನ್ನು ಜನತೆಗೆ ಹಾಕಿ ರಾಜ್ಯದ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ತಮಗೆ ಬೇಕಾದವರನ್ನು ಬೆಳೆಸಿಕೊಂಡು, ಬೇಡವಾದವರನ್ನು ತುಳಿಯುವ ಕೆಲಸಕ್ಕೆ ಸಿದ್ಧರಾಮಯ್ಯ ಮುಂದಾಗಿದ್ದಾರೆಂದು ಕಿಡಿಕಾರಿದರು.

ರೈತರ ಪರ ಕಾಳಜಿ ಇಲ್ಲದ ತಾಲ್ಲೂಕಿನ ಶಾಸಕ ಎಂ.ಟಿ.ಕೃಷ್ಣಪ್ಪ ಅವರು ಗುತ್ತಿಗೆದಾರರ ಪರವಾಗಿದ್ದಾರೆ. ತಾಲ್ಲೂಕಿನ ಅಭಿವೃದ್ದಿ ಕುಂಠಿತವಾಗಿದೆ. ರೌಡಿ ವರ್ತನೆಯ ಶಾಸಕರನ್ನು ಮನೆಗೆ ಕಳುಹಿಸುವ ಕೆಲಸವನ್ನು ಕ್ಷೇತ್ರದ ಮತದಾರರು ಮಾಡಬೇಕಿದೆ. ಅಭಿವೃದ್ದಿ ಪರವಾದ ಬಿಜೆಪಿಯನ್ನು ಬೆಂಬಲಿಸುವ ನಿರ್ಧಾರ ಕೈಗೊಳ್ಳಬೇಕಿದೆ ಎಂದರು. 

ತುರುವೇಕೆರೆ ಶ್ರೀ ಸತ್ಯಗಣಪತಿ ಸ್ವಾಮಿಯವರಿಗೆ ಪೂಜೆ ಸಲ್ಲಿಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ನೂರಾರು ಬೈಕ್‌ಗಳಲ್ಲಿ ಮುನಿಯೂರು, ಶ್ರೀರಾಂಪುರ, ಕೊಂಡಜ್ಜಿ ಮಾರ್ಗವಾಗಿ ಬಿಜೆಪಿ ಪಕ್ಷದ ಪ್ರಚಾರ ನಡೆಸುತ್ತಾ ಸಂಪಿಗೆಗೆ ತೆರಳಿದರು. ಸಂಪಿಗೆಯಲ್ಲಿ ಶ್ರೀನಿವಾಸ ದೇವರಿಗೆ ಪೂಜೆ ಸಲ್ಲಿಸಿ ಬೈಕ್ ಜಾಥಾ ಮೂಲಕ ಪ್ರಚಾರ ನಡೆಸಿದ ಕಾರ್ಯಕರ್ತರು ದಂಡಿನಶಿವರಕ್ಕೆ ಬಂದು ಶ್ರೀ ಹೊನ್ನಾದೇವಿಗೆ ಪೂಜೆ ಸಲ್ಲಿಸಿ ದಂಡಿನಶಿವರ ಸಂತೆಯಲ್ಲಿದ್ದ ಜನರ ಬಳಿ ತೆರಳಿ ಬಿಜೆಪಿಗೆ ಮತ ನೀಡುವಂತೆ ಕೋರಿದರು. 

ಬಿಜೆಪಿ ಮಾಜಿ ಅಧ್ಯಕ್ಷರಾದ ಮಮತಾಅಶೋಕ್, ಟಿ.ಎಸ್.ಬೋರೇಗೌಡ, ಪಪಂ ಮಾಜಿ ಅಧ್ಯಕ್ಷೇ ನೇತ್ರಾವತಿರಂಗಸ್ವಾಮಿ, ಮುಖಂಡರಾದ ಅರೆಮಲ್ಲೇನಹಳ್ಳೀ ಹೇಮಚಂದ್ರ, ಗೊಪ್ಪೇನಹಳ್ಳಿ ಅಶೋಕ್, ಮಾವಿನಕೆರೆ ತ್ರಿಜಯ್, ಸೋಮೇನಹಳ್ಳಿ ಶಿವಕುಮಾರ್, ಸಂಪಿಗೆ ಶ್ರೀಧರ್, ಸಂಪಿಗೆ ಶ್ರೀನಿವಾಸ್, ಮಂಚೇನಹಳ್ಳೀ ಕೃಷ್ಣಮೂರ್ತಿ, ಪ್ರತಿಕ್ ಮಂಜು, ಕಲ್ಕೆರೆ ಬಸವಣ್ಣ, ಚಿಕ್ಕಮಲ್ಲಿಗೆರೆ ವಿರೂಪಾಕ್ಷ, ದಕ್ಷಿಣಾಮೂರ್ತಿ, ತರಮನಕೋಟೆ ರಾಜು, ಮೋಹನ್, ಕಿರಣ್, ಆನೆಮಳೆ ಕೃಷ್ಣಪ್ಪ, ನಂಜಪ್ಪ, ಪ್ರಭಣ್ಣ ಸೇರಿದಂತೆ ೨೦೦ಕ್ಕೂ ಅಧಿಕ ಬೈಕ್‌ಗಳಲ್ಲಿ ೪೦೦ಕ್ಕೂ ಅಧಿಕ ಕಾರ್ಯಕರ್ತರು ಬೈಕ್ ಜಾಥಾದಲ್ಲಿ ಪಾಲ್ಗೊಂಡಿದ್ದರು.

ವರದಿ: ಗಿರೀಶ್ ಭಟ್, ತುರುವೇಕೆರೆ

Please follow and like us:
0
http://bp9news.com/wp-content/uploads/2017/11/turuvekere-BJP-Protest.jpeghttp://bp9news.com/wp-content/uploads/2017/11/turuvekere-BJP-Protest-150x150.jpegBP9 News Bureauತುಮಕೂರುಪ್ರಮುಖತುರುವೇಕೆರೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಮಲವನ್ನು ಅರಳಿಸಬೇಕೆಂಬ ದಿಟ್ಟ ನಿರ್ಧಾರಕ್ಕೆ ಬಂದಿರುವ ನಿಷ್ಠಾವಂತ ಭಾರತೀಯ ಜನತಾ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬೈಕ್ ಜಾಥಾ ಮೂಲಕ ಪಕ್ಷದ ಪ್ರಚಾರ ಕಾರ್ಯ ಆರಂಭಿಸಿದರು.  ದಂಡಿನಶಿವರ ಹೊನ್ನಮ್ಮದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ ಡಾ.ಚೌದ್ರಿ ನಾಗೇಶ್, ಕಳೆದ ೧೫ ವರ್ಷಗಳಿಂದ ಕ್ಷೇತ್ರದ ಮತದಾರರು ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುತ್ತಿದ್ದು ಮತದಾರರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಜೆಡಿಎಸ್...Kannada News Portal