ತುರುವೇಕೆರೆ: ಗ್ರಾಮಕ್ಕೆ ತೆರಳಲು ಸರಿಯಾದ ರಸ್ತೆಯಿಲ್ಲ, ಗ್ರಾಮದಲ್ಲಿ ಮೂಲಸೌಕರ್ಯವಿಲ್ಲ, ಈ ಗ್ರಾಮದಲ್ಲಿ ವಾಸವಿದ್ದರೆ ಗಂಡು ಮಕ್ಕಳಿಗೆ ಹೆಣ್ಣು ಸಿಗುವುದಿಲ್ಲ, ಹೆಣ್ಣು ಮಕ್ಕಳಿಗೆ ಗಂಡು ಸಿಗುವುದಿಲ್ಲ ಎಂಬ ಕಾರಣದಿಂದ ಗ್ರಾಮದ ಸುಮಾರು 300ಕ್ಕೂ ಅಧಿಕ ಕುಟುಂಬದವರು ಆ ಗ್ರಾಮ ಬಿಟ್ಟು ಬೇರೆ ಸ್ಥಳದಲ್ಲಿ, ಪಟ್ಟಣದಲ್ಲಿ ತಮ್ಮ ಬದುಕನ್ನು ಕಂಡುಕೊಳ್ಳಲು ವಲಸೆ ಹೋಗಿದ್ದಾರೆ. ಆ ಗ್ರಾಮವೇ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಹರಕನಕಟ್ಟೆ.

ಗ್ರಾಮದ ಹೆಸರಿಗೆ ತಕ್ಕಂತೆ ಅಲ್ಲಿನ ಜನರ ಬದುಕು ಹರುಕುಮುರುಕಾಗಿದೆ. ಹಳ್ಳಿಕಾರ್ ಸಮುದಾಯದವರೇ ಅತಿ ಹೆಚ್ಚು ವಾಸವಿದ್ದ ಗ್ರಾಮ ಹರಕನಕಟ್ಟೆ. ಈ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಸುಮಾರು ೩೦೦ಕ್ಕೂ ಅಧಿಕ ಹಳ್ಳಿಕಾರ್ ಕುಟುಂಬಗಳು, ಒಂದೆರಡು ಮುಸಲ್ಮಾನ್ ಕುಟುಂಬಗಳು ಸಹೋದರತೆ, ಸಮನ್ವಯದಿಂದ ವಾಸವಾಗಿದ್ದವು. ಆದರೆ ಇಂದು ಈ ಗ್ರಾಮದಲ್ಲಿದ್ದ 300ಹಳ್ಳಿಕಾರ್ ಕುಟುಂಬದ ಪೈಕಿ ಕೇವಲ 8-10 ಕುಟುಂಬಗಳು ಗ್ರಾಮದಲ್ಲಿ ವಾಸವಿದ್ದಾರೆ. ಒಂದೆರಡಿದ್ದ ಮುಸಲ್ಮಾನ್ ಕುಟುಂಬ ಈಗ 30ಕ್ಕೂ ಅಧಿಕವಾಗಿದೆ. ಕಾರಣ ಗ್ರಾಮದಲ್ಲಿ ಮೂಲಸೌಕರ್ಯದ ಕೊರತೆ.

ಮಾಯಸಂದ್ರ ಹೋಬಳಿಯ ಈ ಕುಗ್ರಾಮದ ಗ್ರಾಮಸ್ಥರಿಗೆ ಕುಟುಂಬ ಸಮೇತ ವಲಸೆ ಹೋಗುವಂತಹ ದುಸ್ಥಿತಿಗೆ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ಚುನಾವಣಾ ಸಮಯದಲ್ಲಿ ಮತ ಕೇಳುವ ರಾಜಕಾರಣಿಗಳು ಚುನಾವಣೆಯಲ್ಲಿ ಜಯಗಳಿಸಿದ ನಂತರ ಜನರ ಕಷ್ಟಸುಖಗಳಿಗೆ ಸ್ಪಂದಿಸದ್ದರಿಂದ ಈ ರೀತಿಯಲ್ಲಿ ಜನಸಾಮಾನ್ಯರು ಸಂಕಟ ಅನುಭವಿಸುವಂತಾಗಿದೆ. ಹರಕನಕಟ್ಟೆ ಗ್ರಾಮಸ್ಥರು ಜನಪ್ರತಿನಿಧಿಗಳಲ್ಲಿ ಗ್ರಾಮಕ್ಕೆ ಕುಡಿಯುವ ನೀರು, ರಸ್ತೆ, ವಿದ್ಯುತ್, ಸ್ವಚ್ಛತೆ ಸೇರಿದಂತೆ ಮೂಲಸೌಕರ್ಯ ಒದಗಿಸುವಂತೆ ನೂರಾರು ಬಾರಿ ಮನವಿ ಮಾಡಿದ್ದರೂ ಯಾವುದೆ ಪ್ರಯೋಜನವಾಗದ ಕಾರಣ ಬೇಸತ್ತು ವಲಸೆ ಹೋಗಿದ್ದಾರೆ. ಕೇವಲ ಮೂಲಸೌಕರ್ಯದ ಕೊರತೆಯಾಗಿದ್ದರೆ ಗ್ರಾಮಸ್ಥರು ಹರಕನಕಟ್ಟೆಯಲ್ಲೇ ಜೀವನ ಸಾಗಿಸುತ್ತಿದ್ದರೇನೋ ಆದರೆ ಗ್ರಾಮದ ಕುಟುಂಬದ ಗಂಡು ಮಕ್ಕಳಿಗೆ ಹೆಣ್ಣು ಕೊಡಲು ಯಾರೂ ಬರುತ್ತಿರಲಿಲ್ಲ, ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಳ್ಳಲು ಯಾವ ಗಂಡು ಗ್ರಾಮಕ್ಕೆ ಬರುತ್ತಿರಲಿಲ್ಲ. ಇದು ಗ್ರಾಮಸ್ಥರು ಗ್ರಾಮ ಬಿಟ್ಟು ಹೊರಬರಲು ಮುಖ್ಯ ಕಾರಣವಾಗಿದೆ.
15 ಲಕ್ಷ ರೂ ವೆಚ್ಚದಲ್ಲಿ ಹರಕನಕಟ್ಟೆ ರಸ್ತೆ ಅಭಿವೃದ್ದಿಗೆ ಜಿಪಂ ಸದಸ್ಯೆ ಜಯಲಕ್ಷ್ಮಮ್ಮಜಯರಾಮ್ ಗುದ್ದಲಿ ಪೂಜೆ

ಮೂಲಸೌಕರ್ಯದಿಂದ ವಂಚಿತವಾಗಿ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಮಾಯಸಂದ್ರ ಹೋಬಳಿ ಹರಕನಕಟ್ಟೆ ಗ್ರಾಮಕ್ಕೆ ತೆರಳುವ ರಸ್ತೆಯನ್ನು ಉದ್ಯೋಗ ಖಾತರಿ ಯೋಜನೆಯಡಿ 15ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ದಿಪಡಿಸಲು ಜಿಪಂ ಸದಸ್ಯೆ ಜಯಲಕ್ಷ್ಮಮ್ಮಜಯರಾಮ್ ಗುದ್ದಲಿ ಪೂಜೆ ನೆರವೇರಿಸಿ, ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಗ್ರಾಮ ಹಿಂದೆ ಹೇಗಿತ್ತು, ಈಗ ಅಲ್ಲಿನ ಪರಿಸ್ಥಿತಿ ಹೇಗಿದೆ ಎಂಬುದನ್ನು ಕಣ್ಣಾರೆ ಕಂಡು ನೋವಾಗಿದೆ. ಚುನಾವಣೆಯಲ್ಲಿ ಮತ ನೀಡಿ ನನ್ನನ್ನು ಆರ್ಶೀವದಿಸಿರುವ ನಿಮ್ಮ ಜೀವನವೂ ಚೆನ್ನಾಗಿರಬೇಕೆಂಬುದು ನನ್ನ ಆಶಯ. ಆ ನಿಟ್ಟಿನಲ್ಲಿ ಗ್ರಾಮಕ್ಕೆ ಮೂಲಸೌಕರ್ಯ ಒದಗಿಸಿ ಇಲ್ಲಿನ ಜನರ ಬದುಕನ್ನು ಹಸನಾಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇನೆ. ಪ್ರಾರಂಭದಲ್ಲಿ ಗ್ರಾಮಕ್ಕೆ ಬರುವ ರಸ್ತೆಯನ್ನು ಉದ್ಯೋಗ ಖಾತರಿ ಯೋಜನೆಯಲ್ಲಿ 15 ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ದಿಪಡಿಸಲಾಗುವುದು. ನಂತರ ಹಂತಹಂತವಾಗಿ ಗ್ರಾಮವನ್ನು ಅಭಿವೃದ್ದಿ ಮಾಡಲಾಗುವುದೆಂದರು.

ರಸ್ತೆ ಅಭಿವೃದ್ದಿ ಕಾರ್ಯದಲ್ಲಿ ಜಿಪಂ ಸದಸ್ಯೆ ಜಯಲಕ್ಷ್ಮಮ್ಮಜಯರಾಮ್, ಜಿಪಂ ಮಾಜಿ ಸದಸ್ಯ ಎನ್.ಆರ್.ಜಯರಾಮ್, ತಾಪಂ ಸದಸ್ಯರಾದ ಟಿ.ಭೈರಪ್ಪ, ಮಂಜುನಾಥ್, ಮುಖಂಡ ಮಹಮದ್ ಗೌಸ್ ಹಾಗೂ ಹರಕನಕಟ್ಟೆ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ

Please follow and like us:
0
http://bp9news.com/wp-content/uploads/2018/11/WhatsApp-Image-2018-11-07-at-2.39.23-PM-1024x555.jpeghttp://bp9news.com/wp-content/uploads/2018/11/WhatsApp-Image-2018-11-07-at-2.39.23-PM-150x150.jpegBP9 Bureauತುಮಕೂರುಪ್ರಮುಖತುರುವೇಕೆರೆ: ಗ್ರಾಮಕ್ಕೆ ತೆರಳಲು ಸರಿಯಾದ ರಸ್ತೆಯಿಲ್ಲ, ಗ್ರಾಮದಲ್ಲಿ ಮೂಲಸೌಕರ್ಯವಿಲ್ಲ, ಈ ಗ್ರಾಮದಲ್ಲಿ ವಾಸವಿದ್ದರೆ ಗಂಡು ಮಕ್ಕಳಿಗೆ ಹೆಣ್ಣು ಸಿಗುವುದಿಲ್ಲ, ಹೆಣ್ಣು ಮಕ್ಕಳಿಗೆ ಗಂಡು ಸಿಗುವುದಿಲ್ಲ ಎಂಬ ಕಾರಣದಿಂದ ಗ್ರಾಮದ ಸುಮಾರು 300ಕ್ಕೂ ಅಧಿಕ ಕುಟುಂಬದವರು ಆ ಗ್ರಾಮ ಬಿಟ್ಟು ಬೇರೆ ಸ್ಥಳದಲ್ಲಿ, ಪಟ್ಟಣದಲ್ಲಿ ತಮ್ಮ ಬದುಕನ್ನು ಕಂಡುಕೊಳ್ಳಲು ವಲಸೆ ಹೋಗಿದ್ದಾರೆ. ಆ ಗ್ರಾಮವೇ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಹರಕನಕಟ್ಟೆ. ಗ್ರಾಮದ ಹೆಸರಿಗೆ ತಕ್ಕಂತೆ ಅಲ್ಲಿನ ಜನರ ಬದುಕು ಹರುಕುಮುರುಕಾಗಿದೆ. ಹಳ್ಳಿಕಾರ್...Kannada News Portal