ಉತ್ತರಕನ್ನಡ : ಗೋಸಂರಕ್ಷಣೆಗಾಗಿ ಕಳೆದ ಎರಡು ದಶಕಗಳಿಂದ ಅವಿರತವಾಗಿ ಶ್ರಮಿಸುತ್ತಿರುವ ರಾಘವೇಶ್ವರಭಾರತೀ ಶ್ರೀಗಳ 25ನೇ ಚಾತುರ್ಮಾಸ್ಯ ವ್ರತ ಈ ಬಾರಿ “ಗೋಸ್ವರ್ಗ ಚಾತುರ್ಮಾಸ್ಯ”ವಾಗಿ ಆಚರಿಸಲ್ಪಡುತ್ತಿದ್ದು, ಆಷಾಢ ಶುದ್ಧ ಹುಣ್ಣಿಮೆಯಿಂದ ಭಾದ್ರಪದ ಶುದ್ಧ ಹುಣ್ಣಿಮೆಯವರೆಗೆ (ಜುಲೈ 27 ರಿಂದ ಸೆಪ್ಟೆಂಬರ್ 25ರವರೆಗೆ) ಚಾತುರ್ಮಾಸ್ಯ ವ್ರತಾಚರಣೆ ನಡೆಯಲಿದ್ದು, ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಸಮೀಪದ ಶ್ರೀರಾಮದೇವ ಬಾನ್ಕುಳಿ ಮಠದಲ್ಲಿ ಲೋಕಾರ್ಪಣೆಗೊಂಡಿರುವ  ವಿಶ್ವದ ಪ್ರಪ್ರಥಮ ಗೋಸ್ವರ್ಗದಲ್ಲಿ 25ನೇ ಚಾತುರ್ಮಾಸ್ಯ ವ್ರತ ಕೈಗೊಳ್ಳುವುದು ವಿಶೇಷವಾಗಿದೆ.

ಚಾತುರ್ಮಾಸ್ಯದ ಅಂಗವಾಗಿ ಪ್ರತಿದಿನ ಕಾಮಧೇನು ಹವನ, ಶ್ರೀಕರಾರ್ಚಿತ ಪೂಜೆ, ಮಾತೆಯರಿಂದ ಭಜನೆ  ಮತ್ತು ಕುಂಕುಮಾರ್ಚನೆ, ನಡೆಯಲಿದ್ದು, ಗಣ್ಯ-ಮಾನ್ಯರಿಗೆ  ಸ್ವರ್ಗಸಮ್ಮಾನ ನಡೆಯಲಿದೆ. ಪ್ರತಿದಿನ ಮಧ್ಯಾಹ್ನ 12.30ಕ್ಕೆ ಶ್ರೀಗಳಿಂದ ಶ್ರೀಮದ್ಭಾಗವತ ಪ್ರವಚನ ಹಾಗೂ ಭಕ್ತಾದಿಗಳಿಗೆ ಮಂತ್ರಾಕ್ಷತೆ ಅನುಗ್ರಹ ನಡೆಯಲಿದ್ದು, ಸಂಜೆ ಗೋಗಂಗಾರತಿಯಂಥ ವಿಶಿಷ್ಟ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನವಾಗಲಿವೆ.

ಗೋವಿನ ಸಂರಕ್ಷ ಣೆ-ಸಂವರ್ಧನೆ, ಸಂಶೋಧನೆ ಎಂಬ ತತ್ವದಡಿ ‘ಗೋವು-ಲಕ್ಷ್ಮಿ’ ಎಂಬ ನೈಜತೆಯ ಸಾಧಿಸಿ, ಜನತೆಗೆ ತೋರಿಸಿ, ಜಗವು ಗೋವಿನತ್ತಸಾಗಿ ಸುಖ ಹೊಂದಲಿ ಎಂಬ ಸದಾಶಯದೊಂದಿಗೆ ಸಂಪನ್ನವಾಗಲಿರುವ “ಗೋಸ್ವರ್ಗ ಚಾತುರ್ಮಾಸ್ಯ”ವು ಜುಲೈ 27 ಕ್ಕೆ ಮಠೀಯ ಪದ್ಧತಿಯಂತೆ ವ್ಯಾಸಪೂಜೆಯೊಂದಿಗೆ ಶ್ರೀಗಳು ಚಾತುರ್ಮಾಸ್ಯ ವ್ರತಸಂಕಲ್ಪ ಕೈಗೊಳ್ಳುವುದರ ಮೂಲಕ ಶುಭಾರಂಭವಾಗಲಿದೆ. ಆಗಸ್ಟ್1 ರಿಂದ ಆಗಸ್ಟ್ 3ರ ವರೆಗೆ ಸ್ವರ್ಗಯಕ್ಷ ಸಂಭ್ರಮ ಕಾರ‍್ಯಕ್ರಮವಿದ್ದು, ಮೂರು ದಿನಗಳ ಕಾಲ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಅಲ್ಲದೇ, ಚಾತುರ್ಮಾಸ್ಯದ ಅವಧಿಯಲ್ಲಿ 10 ಯಕ್ಷ ಗಾನ ಪ್ರಸಂಗಗಳ ಪ್ರದರ್ಶನ ನಡೆಯಲಿದ್ದು, ನಾಡಿನ ಖ್ಯಾತ ಯಕ್ಷ ಕಲಾವಿದರು ಭಾಗವಹಿಸಲಿದ್ದಾರೆ.

ಆಗಸ್ಟ್ 8 ರಿಂದ ಆಗಸ್ಟ್ 12ರ ವರೆಗೆ ಸ್ವರ್ಗಸಂಗೀತ ಸಂಭ್ರಮ ಕಾರ‍್ಯಕ್ರಮವಿದ್ದು, ನಾದದ್ವೈತ, ಗೋಕುಲನಾದ, ಗೋನಾಧಸುಧಾ, ಸಾತ್ವಿಕ ಸಂಗೀತ, ಧೇನು-ನಾದ-ಅನುಸಂಧಾನ ಎಂಬ ಕಾರ‍್ಯಕ್ರಮದಡಿ ಪ್ರತಿದಿನವೂ ಖ್ಯಾತ ಸಂಗೀತ ಕಲಾವಿದರಿಂದ ಗಾಯನ ಕಾರ‍್ಯಕ್ರಮ ಇರಲಿದೆ.

ಸೆಪ್ಟೆಂಬರ್ 2ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ‍್ಯಕ್ರಮಗಳು ನಡೆಯಲಿದೆ. ಸೆಪ್ಟೆಂಬರ್ 2 ರಿಂದ ಸೆಪ್ಟೆಂಬರ್ 8ರ ವರೆಗೆ ಶ್ರೀಕೃಷ್ಣಕಥಾ ಕಾರ‍್ಯಕ್ರಮ ಆಯೋಜಿಸಲಾಗಿದ್ದು ಗಾಯನ, ವಾದನ, ನರ್ತನ, ಚಿತ್ರ, ರೂಪಕಗಳ ಸಂಯೋಜನೆಯೊಂದಿಗೆ ಶ್ರೀರಾಮಕಥಾ ಮಾದರಿಯಲ್ಲಿ ಸಂಪನ್ನಗೊಳ್ಳಲಿದೆ. ಸೆಪ್ಟೆಂಬರ್ 13ರ ಗಣೇಶ ಚತುರ್ಥಿ ದಿನದಂದು ವಿಶೇಷ ಪೂಜೆ, ಸೆಪ್ಟೆಂಬರ್ 25ರಂದು ಚಾತುರ್ಮಾಸ್ಯ ಪ್ರಶಸ್ತಿ ಪ್ರದಾನ ಹಾಗೂ ಸೀಮೋಲ್ಲಂಘನದೊಂದಿಗೆ ಚಾತುರ್ಮಾಸ್ಯ ಪೂರ್ಣಗೊಳ್ಳಲಿದೆ.

ರಾಷ್ಟ್ರೀಯ ಗವ್ಯ ಸಮ್ಮೇಳನ: ಚಾತುರ್ಮಾಸ್ಯದ ಅವಧಿಯಲ್ಲಿ ರಾಷ್ಟ್ರೀಯ ಗವ್ಯ ಸಮ್ಮೇಳನ ನಡೆಯಲಿದ್ದು, ರಾಷ್ಟ್ರಮಟ್ಟದ ಗೋವಿಜ್ಞನಿಗಳು ಹಾಗೂ ಸಂಶೋಧಕರು ಭಾಗವಹಿಸಲಿದ್ದಾರೆ. ಗವ್ಯೋತ್ಪನ್ನಗಳ ಕುರಿತು ಚರ್ಚೆ ನಡೆಯಲಿದ್ದು, ಗವ್ಯೋತ್ಪನ್ನಗಳ ಮಾರುಕಟ್ಟೆ, ಗವ್ಯಾಧಾರಿತ ಉತ್ಪನ್ನಗಳ ಸಂಶೋಧನೆ ಹಾಗೂ ಅಭಿವೃದ್ಧಿ ಹಾಗೂ ಬಳಕೆಯ ಕುರಿತು ವಿಚಾರ ಸಂಕಿರಣ ಬೆಳಕು ಚೆಲ್ಲಲಿದೆ.

ಪ್ರತಿವ್ಯಕ್ತಿ ಗೋಸ್ವರ್ಗದಲ್ಲಿ ಗಿಡ ನೆಡುವುದು : ಚಾತುರ್ಮಾಸ್ಯದ ಸಮಯದಲ್ಲಿ ಗೋಸ್ವರ್ಗಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ವ್ಯಕ್ತಿಯೂ ಒಂದೊಂದು ಗಿಡ ನಡಬೇಕು ಎಂಬುದು ಪೂಜ್ಯ ಶ್ರೀಗಳ ಆಶಯವಾಗಿದ್ದು, ಪ್ರತಿಯೊಬ್ಬರು ಒಂದೊಂದು ಗಿಡ ನಡೆಲು ಅವಕಾಶ ಕಲ್ಪಿಸಲಾಗಿದೆ. ಹೂವು – ಹಣ್ಣಿನ ಗಿಡಗಳು ಸೇರಿದಂತೆ ಪಶ್ಚಿಮಘಟ್ಟದ ವಿಶಿಷ್ಟ ಸಸ್ಯಸಂಕುಲವನ್ನು ಗೋಸ್ವರ್ಗದ ಪರಿಸರದಲ್ಲಿ ಬೆಳೆಸುವ ಯೋಜನೆ ರೂಪಿಸಲಾಗಿದೆ.

ಗೋಸ್ವರ್ಗ :

ಸಹ್ಯಾದ್ರಿ ಶೃಂಗದಲ್ಲಿ ರಾರಾಜಿಸುವ ರಮಣೀಯ ಪ್ರಕೃತಿಯ ನಡುವೆ ವಿಶ್ವದ ಏಕೈಕ ಹಾಗೂ ಮೊಟ್ಟಮೊದಲ ಗೋಸ್ವರ್ಗ ಕಂಗೊಳಿಸುತ್ತಿದೆ. ಹಸಿರು ಹೊದ್ದ ಊರು ಬಾನ್ಕುಳಿಯ ತಂಪು ಪರಿಸರದಲ್ಲಿ ಪುಟ್ಟ ಪುಟ್ಟ ಬೆಟ್ಟಗಳ ನಡುವೆ ಭತ್ತ ಬೆಳೆಯುವ ಬಯಲು, ಇದರ ಮಧ್ಯದಲ್ಲಿ ಪೂರ್ವಾಚಾರ್ಯರು ನಿರ್ಮಿಸಿದ ಪುಟ್ಟ ಪುಷ್ಕರಣಿ, ಗದ್ದೆಯಂಚಿನಲ್ಲಿ ಹರಿವ ಮಧುರ, ನಿರ್ಮಲ, ಶೀತಲ ಜಲದ ಕಿರುತೊರೆಯ ರಮ್ಯ ಮನೋಹರ ಪರಿಸರದಲ್ಲಿ ಗೋಸ್ವರ್ಗ ತಲೆ ಎತ್ತಿದೆ. ಸುಮರು 100 ಎಕರೆ ಪ್ರದೇಶದಲ್ಲಿ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರ ಪರಿಕಲ್ಪನೆ ಸಾಕಾರಗೊಂಡಿದ್ದು, ಸಹಸ್ರ ಗೋವುಗಳು ಸ್ವಚ್ಛಂದವಾಗಿ ವಿಹರಿಸುವ ಅವಕಾಶ ಕಲ್ಪಿಸಲಾಗಿದೆ.

GouSwargaChaturmasya_Kan

ಜಗತ್ಪ್ರಸಿದ್ಧ ಜೋಗ ಜಲಪಾತದಿಂದ ಸುಮಾರು 20 ಕಿಲೋಮೀಟರ್ ಅಂತರದಲ್ಲಿ ಈ ರಮ್ಯ ತಾಣವಿದ್ದು, ಗೋವುಗಳ ಮುಕ್ತ ಆಹಾರ- ವಿಹಾರಕ್ಕಾಗಿ ಒಂದು ಲಕ್ಷ ಚದರ ಅಡಿ ವಿಸ್ತೀರ್ಣದ ಭವ್ಯ ಗೋಧಾಮ, ಪ್ರವಾಸಿಗರನ್ನು ಕೈಬೀಸಿ ಕರೆಯಲು ಸಜ್ಜಾಗಿದೆ. ಗೋಸ್ವರ್ಗವನ್ನು ಸಮಗ್ರ ಗೋಸೌಖ್ಯ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗಿದ್ದು, ಗೋವಂಶದ ಸಹಜ ಹುಟ್ಟು, ಸಹಜ ಬದುಕಿಗೆ ಬೇಕಾದ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ. ಈ ವಿಶಿಷ್ಟ ಯೋಜನೆ, ಭಾರತೀಯ ಗೋವಂಶದ ಸಂರಕ್ಷಣೆ ಹಾಗೂ ಸಂವರ್ಧನೆಯಲ್ಲಿ ಹೊಸ ಮಾರ್ಗವನ್ನು ದೇಶಕ್ಕೆ ತೋರಿಸಿಕೊಡಲಿದೆ.

KrishnaKatha-Kalopasana

ಪಶ್ಚಿಮ ಘಟ್ಟದ ಎರಡು ಬೆಟ್ಟಗಳ ನಡುವಿನ ಹೊಲದಲ್ಲಿ ಗೋಸ್ವರ್ಗ ತಲೆ ಎತ್ತಿದ್ದು, ಗೋತೀರ್ಥ ಸರೋವರದ ಮಧ್ಯದ ಸಪ್ತಸಾನ್ನಿಧ್ಯ, ಆಸ್ತಿಕ ಭಕ್ತರಿಗೆ ವಿಶಿಷ್ಟ ಅನುಭವ ನೀಡಲಿದೆ. ಸರೋವರದ ಮಧ್ಯೆ ಶಿಲಾಮಂಟಪದಲ್ಲಿ ಜಲರೂಪದ ಸಪ್ತಸನ್ನಿಧಿ, ಸರೋವರದ ಸುತ್ತ ನಾಲ್ಕು ಗೋ ಪದ ವೇದಿಕೆಗಳು, ಗೋವುಗಳ ವಿಶ್ರಾಂತಿಗಾಗಿ 30 ಸಾವಿರ ಚದರ ಅಡಿಯ ಗೋವಿರಾಮ ಮಂಟಪ, ಸ್ವಚ್ಛಂದ ವಿಹಾರಕ್ಕೆ 70 ಸಾವಿರ ಚದರ ಅಡಿಯ ವಿಶಾಲ ಪ್ರದೇಶ, ಬೇಕೆನಿಸಿದಾಗ ಗೋವುಗಳಿಗೆ ಮೇವು ಒದಗಿಸುವ ಸದಾತೃಪ್ತಿ, ಜಲಪಾನಕ್ಕಾಗಿ ಸುಧಾಸಲಿಲ, ತೀರ್ಥಪಥ, ಪ್ರೇಕ್ಷಾಪಥ, ರಥಪಥ, ತೀರ್ಥಸ್ನಾನಕ್ಕಾಗಿ ಗೋಗಂಗಾ ಸ್ನಾನಘಟ್ಟ, ಗೋಪಾಲಕರ ವಸತಿಗಾಗಿ ಗೋಪಾಲ ಭವನ, ಪಶ್ಚಿಮ ಅಂಚಿನಲ್ಲಿ ಗೋಧಾರಾ ತೊರೆ, ತೊರೆಯ ತೀರದಲ್ಲಿ ಗೋವರ್ಧನ ಗಿರಿ, ಗಿರಿಯ ಮೇಲೆ ಕಂಗೊಳಿಸುವ ಗೋನಂದನ ಉದ್ಯಾನ, ಗಿರಿಯ ನೆತ್ತಿನಲ್ಲಿ ವೀಕ್ಷಾಗೋಪುರ, ಹಸಿಮೇವಿಗಾಗಿ ಮೇವು ಬೆಳೆಸುವ ಸುಗ್ರಾಸದಂಥ ವಿಶಿಷ್ಟ ಅಂಶಗಳು ಗೋಸ್ವರ್ಗಕ್ಕೆ ವಿಶೇಷ ಮೆರುಗು ನೀಡಿವೆ.

 

Please follow and like us:
0
http://bp9news.com/wp-content/uploads/2018/07/DSC09036-1.jpghttp://bp9news.com/wp-content/uploads/2018/07/DSC09036-1-150x150.jpgBP9 Bureauಆಧ್ಯಾತ್ಮಉತ್ತರ ಕನ್ನಡಪ್ರಮುಖಶ್ರೀ ರಾಮಚಂದ್ರಾಪುರ ಮಠ  ಉತ್ತರಕನ್ನಡ : ಗೋಸಂರಕ್ಷಣೆಗಾಗಿ ಕಳೆದ ಎರಡು ದಶಕಗಳಿಂದ ಅವಿರತವಾಗಿ ಶ್ರಮಿಸುತ್ತಿರುವ ರಾಘವೇಶ್ವರಭಾರತೀ ಶ್ರೀಗಳ 25ನೇ ಚಾತುರ್ಮಾಸ್ಯ ವ್ರತ ಈ ಬಾರಿ “ಗೋಸ್ವರ್ಗ ಚಾತುರ್ಮಾಸ್ಯ”ವಾಗಿ ಆಚರಿಸಲ್ಪಡುತ್ತಿದ್ದು, ಆಷಾಢ ಶುದ್ಧ ಹುಣ್ಣಿಮೆಯಿಂದ ಭಾದ್ರಪದ ಶುದ್ಧ ಹುಣ್ಣಿಮೆಯವರೆಗೆ (ಜುಲೈ 27 ರಿಂದ ಸೆಪ್ಟೆಂಬರ್ 25ರವರೆಗೆ) ಚಾತುರ್ಮಾಸ್ಯ ವ್ರತಾಚರಣೆ ನಡೆಯಲಿದ್ದು, ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಸಮೀಪದ ಶ್ರೀರಾಮದೇವ ಬಾನ್ಕುಳಿ ಮಠದಲ್ಲಿ ಲೋಕಾರ್ಪಣೆಗೊಂಡಿರುವ  ವಿಶ್ವದ ಪ್ರಪ್ರಥಮ ಗೋಸ್ವರ್ಗದಲ್ಲಿ 25ನೇ ಚಾತುರ್ಮಾಸ್ಯ ವ್ರತ ಕೈಗೊಳ್ಳುವುದು ವಿಶೇಷವಾಗಿದೆ. ಚಾತುರ್ಮಾಸ್ಯದ ಅಂಗವಾಗಿ ಪ್ರತಿದಿನ ಕಾಮಧೇನು ಹವನ, ಶ್ರೀಕರಾರ್ಚಿತ ಪೂಜೆ,...Kannada News Portal