ವಿಜಯಪುರ : ಮಿರಗಾ ಮೀನಾ ನುಂಗ್ರಿ..ಅಸ್ತಮಾದಿಂದ ಮುಕ್ತಿ ಹೊಂದ್ರಿ. ಮಿರಗಾ ದಿನ(ಜೂನ್ ಸಾಥ್(7)) ಇಲ್ಲಿ ನಾನಾ ರಾಜ್ಯದ ನೂರಾರು ಮಂದಿ ಸರದಿಯಲ್ಲಿ ನಿಲ್ತಾರೆ. ದೊಡ್ಡ ದೊಡ್ಡ ಬೊಗೋಣಿಯಲ್ಲಿ ಚಿಕ್ಕ ಮೀನುಗಳು ಒದ್ದಾಟ, ಮೀನು ಕೈಗೆತ್ತಿ ಅದರ ಬಾಯಲ್ಲಿ ಗುಳಿಗೆ ಇಟ್ಟು ಆಂ..ಅನ್ನು..ಅಂತಾ ಬಾಯಿಗೆ ಹಾಕಿದರೆ ಸಾಕು ತಂಪಿನ ಜಡ್ಡೆಲ್ಲ ಮಾಯ.

ಇದು ಭಾವಿಕಟ್ಟಿಯಲ್ಲಿ ಕಂಡ ದೃಶ್ಯ..ಭಾವಿಕಟ್ಟಿ ವೈದ್ಯ ಕುಟುಂಬದಿಂದ ಉಚಿತ ಔಷಧಿ ನೀಡುವ ವಾರ್ಷಿಕ ಕಾರ್ಯ ಈ ಬಾರಿ ಮೃಗಶಿರಾ ಮಳೆ ಆರಂಭದ ದಿನವಾದ ಶುಕ್ರವಾರ ಬೆಳಿಗ್ಗೆಯಿಂದಲೇ ಆರಂಭಗೊಂಡಿತ್ತು.

ಮಳೆಗಾಲ ಪ್ರಾರಂಭವಾದರೆ ಸಾಕು ಸಾಲುಗಟ್ಟಿ ರೋಗಗಳು ಹುಟ್ಟಿಕೊಳ್ಳುತ್ತವೆ. ಅಲ್ಲದೇ ತಂಪಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವೃದ್ಧರಾದಿಯಾಗಿ ಕಾಡುವ ಅಸ್ತಮಾ, ದಮ್ಮು-ಕೆಮ್ಮು ಸಹಿತ ಹಲವು ರೋಗಗಳು ಎಲ್ಲರನ್ನ ಕಾಡುತ್ತವೆ.

ಇಂತಹ ರೋಗಗಳಿಗೆ ಇಲ್ಲಿನ ಭಾವಿಕಟ್ಟಿ ವೈದ್ಯ ಕುಟುಂಬ ಉಚಿತವಾದ ಹಾಗೂ ಆಯುರ್ವೇದಿಕ ಪದ್ಧತಿಯ ಮೀನಿನ ಔಷಧೋಪಚಾರದ ಮೂಲಕ ಕಳೆದ ಅರ್ಧ ದಶಕಗಳಿಂದ ಮಾನವೀಯತೆಯ ಸೇವೆ ಮಾಡುತ್ತಿದೆ.

ಮುತ್ತಪ್ಪ ಶಿವಲಿಂಗಪ್ಪ ಪಾಟೀಲ(ಭಾವಿಕಟ್ಟಿ) ಅವರು ಎಳೆಯ ಮೀನುಗಳ ಬಾಯಲ್ಲಿ ಆಯುರ್ವೇದಿಕ ಪದ್ಧತಿಯಿಂದ ಸಿದ್ಧಪಡಿಸಿದ ಗುಳಿಗೆಗಳನ್ನು ಇಟ್ಟು  ಊಚಿತ ಔಷದೋಪಚಾರ ಮಾಡುವ ಮೂಲಕ ರೋಗದ ಬಳಲಿಕೆಯಿಂದ ಪಾರು ಮಾಡುವ ಕಾರ್ಯ ಇಂದಿಗೂ ಮುಂದುವರೆದಿದೆ.

ಕಳೆದ 50 ವರ್ಷಗಳಿಂದಲೂ ಅಂದಾನಗೌಡ ಪಾಟೀಲ(ಭಾವಿಕಟ್ಟಿ) ಹಾಗೂ ಸದ್ಯ ಅವರ ಪುತ್ರ ಸಂಗಮೇಶ ಪಾಟೀಲ್​​​​​​​ ಅವರು ಕುಟುಂಬದ ಪರಂಪರೆಯ ಪದ್ಧತಿಯಂತೆ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಗಿಡ ಮೂಲಿಕೆ ಹಾಗೂ  ಚೂರ್ಣ ತಯಾರಿಸಿ ಅದನ್ನು ಎಳೆಯ(ಚಿಕ್ಕ) ಮೀನಿನ ಬಾಯಿಯೊಳಗೆ ಹಾಕಿ, ಇತರ ಮೂರು ಗುಳಿಗೆಗಳನ್ನು ತಯಾರಿಸಿ ಎಲ್ಲ ರೀತಿಯ ಅಲರ್ಜಿ, ದೀರ್ಘ ಕಾಲದ ನೆಗಡಿ, ಕೆಮ್ಮು, ಉಬ್ಬಸ, ಅಸ್ತಮಾವುಳ್ಳ ರೋಗಿಗಳಿಗೆ ಔಷದೋಪಚಾರ ಮಾಡುವ ಮೂಲಕ ಸಾವಿರಾರು ರೋಗಿಗಳ ಪಾಲಿನ ಆಶಾಕಿರಣವಾಗಿದ್ದಾರೆ.

ಮೀನಿನ ಔಷಧಿ ಪಡೆದ ನಂತರ ನೀಡಿದ ಮೂರು ಆಯುರ್ವೇದಿಕ ಮಾತ್ರೆಗಳಲ್ಲಿ ಒಂದು ಮಾತ್ರೆಯನ್ನು ಆರಿದ್ರಾ ಮಳೆ ಆರಂಭವಾಗುವ ದಿನ, ಎರಡನೆ ಮಾತ್ರೆಯನ್ನು ಪುಷ್ಯ ಮಳೆ ಆರಂಭದ ದಿನ ಹಾಗೂ ಮೂರನೆ ಮಾತ್ರೆಯನ್ನು ಪುನರ್ವಸು ಮಳೆ ಪ್ರಾರಂಭದ ದಿನದಂದು ಕೊಡುತ್ತಾರೆ.

ಪ್ರತಿ ವರ್ಷ ಸಾವಿರಾರು ಜನ ಪರಿಣಾಮಕಾರಿಯಾದ ಉಚಿತ ಮೀನಿನ ಔಷದೋಪಚಾರವನ್ನು ಪಡೆದು ಗುಣಮುಖರಾಗಿದ್ದು ಕರ್ನಾಟಕದ ವಿವಿಧ ಜಿಲ್ಲೆಗಳು ಸೇರಿದಂತೆ ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದ ಸಾವಿರಾರು ರೋಗಿಗಳು ಆಗಮಿಸಿ  ಔಷದೋಪಚಾರವನ್ನು ಪಡೆದು ಗುಣಮಖರಾಗಿದ್ದಾರೆ. ಔಷಧೋಪಚಾರದ ಗುಣ ಖಂಡಿತ ಒಳ್ಳೆಯ ಆರೋಗ್ಯವನ್ನು ನಿರೂಪಿಸುತ್ತದೆ ಎಂದು ರೋಗಿಗಳೇ ಹೇಳುತ್ತಾರೆ. ಅಂತೆಯೇ ಶುಕ್ರವಾರ ಜಿಲ್ಲೆಯ ಹಾಗೂ ಹೊರ ರಾಜ್ಯದ ಸಾವಿರಾರು ರೋಗಿಗಳು ಭಾವಿಕಟ್ಟಿ ಕುಟುಂಬ ನೀಡುವ ಉಚಿತ ಮೀನಿನ ಔಷದೋಪಚಾರವನ್ನು ಪಡೆದರು.

ಈ ಉಚಿತ ಮೀನಿನ ಔಷದೋಪಚಾರವನ್ನು ಖಾಲಿ ಹೊಟ್ಟೆಯಲ್ಲಿ ಪಡೆಯಬೇಕು. ಔಷಧವನ್ನು ತಗೆದು ಕೊಳ್ಳುವ ಮುನ್ನ ರೋಗಿಗಳ ರೋಗದ ಪತ್ತೆ ಮಾಡುವುದರ ಜೊತೆಗೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದು ವೈದ್ಯರಾದ ಸಂಗಮೇಶ ಭಾವಿಕಟ್ಟಿ ಹೇಳುತ್ತಾರೆ.

ನಾ ಸಣ್ಣಾವಿದ್ದಾಗ ಇವರ ಮುತ್ಯಾ ಮೃಗಶಿರ ಮಳಿ ಹೂಡು ದಿನ ಔಷಧಿ ಕೊಡತಿದ್ದ. ಆಗ ಮಂದಿ ರಾತ್ರಿ ವಸ್ತಿ ಮಾಡಿ, ಮುಂಜಾನಿ ಪಾಳಿ ಹಚ್ಚಿ ಮೀನಿನ ಔಷಧಿ ತಗೋತಿದ್ದರು. ಆಗನಿಂದಲೂ ಈ ಔಷಧಿ ತಗೋಳ್ಳಾಕ ಮಿರಗಾ ದಿನ ಮಂದಿ ಬರ್ತಾರ. ದಮ್ಮು ಕೆಮ್ಮು ಇದ್ದವರಿಗೆ ಈ ಔಷಧಿ ಲಾಭ ಮಾಡೇತಿ. ಹಾಂಗಂತ ಇವತ್ತಿಗೂ ಮಂದಿ ಎಲ್ಲೆಲ್ಲಿಂದಲೋ ಬರ್ತಾರ ನಾವೂ ಬಂದೇವಿ ಎಂದು ಔಷಧಿ ಪಡೆಯಲು ಬಂದ  ಷಣ್ಮುಖಪ್ಪ  ಬಿರಾದಾರ ಹೇಳುತ್ತಾರೆ.

ವರದಿ : ರವಿಚಂದ್ರ ಮಲ್ಲೇದ ಸಿಂದಗಿ

Please follow and like us:
0
http://bp9news.com/wp-content/uploads/2018/06/Karnatakada-Miditha-28.jpeghttp://bp9news.com/wp-content/uploads/2018/06/Karnatakada-Miditha-28-150x150.jpegBP9 Bureauಅಂಕಣಪ್ರಮುಖವಿಜಯಪುರವಿಜಯಪುರ : ಮಿರಗಾ ಮೀನಾ ನುಂಗ್ರಿ..ಅಸ್ತಮಾದಿಂದ ಮುಕ್ತಿ ಹೊಂದ್ರಿ. ಮಿರಗಾ ದಿನ(ಜೂನ್ ಸಾಥ್(7)) ಇಲ್ಲಿ ನಾನಾ ರಾಜ್ಯದ ನೂರಾರು ಮಂದಿ ಸರದಿಯಲ್ಲಿ ನಿಲ್ತಾರೆ. ದೊಡ್ಡ ದೊಡ್ಡ ಬೊಗೋಣಿಯಲ್ಲಿ ಚಿಕ್ಕ ಮೀನುಗಳು ಒದ್ದಾಟ, ಮೀನು ಕೈಗೆತ್ತಿ ಅದರ ಬಾಯಲ್ಲಿ ಗುಳಿಗೆ ಇಟ್ಟು ಆಂ..ಅನ್ನು..ಅಂತಾ ಬಾಯಿಗೆ ಹಾಕಿದರೆ ಸಾಕು ತಂಪಿನ ಜಡ್ಡೆಲ್ಲ ಮಾಯ. ಇದು ಭಾವಿಕಟ್ಟಿಯಲ್ಲಿ ಕಂಡ ದೃಶ್ಯ..ಭಾವಿಕಟ್ಟಿ ವೈದ್ಯ ಕುಟುಂಬದಿಂದ ಉಚಿತ ಔಷಧಿ ನೀಡುವ ವಾರ್ಷಿಕ ಕಾರ್ಯ ಈ ಬಾರಿ ಮೃಗಶಿರಾ...Kannada News Portal